ಟೊಕಿಯೊ, ಆ.7 (www.bengaluruwire.com):
ದೇಶದ ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾಪಟು ನೀರಜ್ ಚೋಪ್ರಾ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ವೈಯುಕ್ತಿಕ ವಿಭಾಗದಲ್ಲಿ ಒಲಂಪಿಕ್ಸ್ ನಲ್ಲಿ ಅಭಿನವ್ ಬಿಂದ್ರಾ ನಂತರ ಚಿನ್ನದ ಬೇಟೆಯಲ್ಲಿ ಗೆಲವು ಕಂಡಿದ್ದಾರೆ.
ನೀರಜ್, ಒಲಂಪಿಕ್ಸ್ ಟ್ರಾಕ್ ಹಾಗೂ ಫಿಲ್ಡ್ ವಿಭಾಗದಲ್ಲಿ ದೇಶದ 120 ವರ್ಷದ ಇತಿಹಾಸ ಹಾಗೂ ಸ್ವತಂತ್ರ ಭಾರತದ ಮೊದಲ ಅಥ್ಲೆಟ್ ಆಗಿದ್ದಾರೆ. ಆ ಮೂಲಕ ಭಾರತದ ಪದಕ ಪಟ್ಟಿಯಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚು ಪದಕ ಹೊಂದಿದಂತಾಗಿದೆ.
ಜಾವಲಿನ್ ಥ್ರೋ ವಿಭಾಗದಲ್ಲಿ 87.58 ಮೀಟರ್ ಎಸೆದು ತನ್ನ ಎರಡನೇ ಪ್ರಯತ್ನದಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿ ಒಲಂಪಿಕ್ಸ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. 1900 ಇಸವಿಯಲ್ಲಿ ಬ್ರಿಟಿಷ್- ಭಾರತೀಯ ಕ್ರೀಡಾಪಟು ನಾರ್ಮನ್ ಪ್ರಿಟ್ಚಾರ್ಡ್ ಪ್ಯಾರಿಸ್ ನಲ್ಲಿ ಟ್ರಾಕ್ ಹಾಗೂ ಫಿಲ್ಡ್ ವಿಭಾಗದಲ್ಲಿ ಎರಡು ಬೆಳ್ಳಿ ಪದಕ ಗೆದ್ದಿದ್ದರು.
ನೀರಜ್ ಚೋಪ್ರಾ ಗೆಲುವಿನೊಂದಿಗೆ ಟೊಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಪದಕಗಳ ಸಂಖ್ಯೆ ಏಳಕ್ಕೆ ಏರಿದಂತಾಗಿದೆ. 2012 ರಲ್ಲಿ ಲಂಡನ್ ಒಲಂಪಿಕ್ಸ್ ನಲ್ಲಿ ಒಟ್ಟು 6 ಪದಕಗಳನ್ನು ಗೆದ್ದಿದ್ದ ಭಾರತ ಈಗ ತನ್ನ ಸಾಮರ್ಥ್ಯವನ್ನು ಈ ಬಾರಿ ಉತ್ತಮ ಪಡಿಸಿಕೊಂಡಂತಾಗಿದೆ.
ಟೋಕಿಯೋ ಒಲಂಪಿಕ್ಸ್ ನಲ್ಲಿ ಚೋಪ್ರಾ ವೈಯುಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಆರನೇ ಅಥ್ಲೆಟ್ ಆಗಿದ್ದಾರೆ. ವೈಟ್ ಲಿಫ್ಟರ್ ಮೀರಾಬಾಯಿ ಚಾನು, ಶಟಲರ್ ಪಿ.ವಿ.ಸಿಂಧು, ಬಾಕ್ಸರ್ ಲವಲೀನ ಬೋರ್ಗಹೈನ್, ಕುಸ್ತಿಪಟು ರವಿಕುಮಾರ್ ದಹಿಯಾ ಹಾಗೂ ಬಜರಂಗ್ ಪುನಿಯಾ ವೈಯುಕ್ತಿಕ ವಿಭಾಗದಲ್ಲಿ ಪದಕಗಳಿಸಿದ್ದಾರೆ.
ಆಡಿದ ಮೊದಲ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರಾಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಟ್ವಿಟರ್ ಮೂಲಕ ಅಭಿನಂದಿಸಿದ್ದಾರೆ.