ಬೆಂಗಳೂರು, ಆ.7 (www.bengaluruwire.com):
ನಗರ ಜಿಲ್ಲಾಡಳಿತ ಶನಿವಾರ ಸರ್ಕಾರಿ ಕೆರೆ, ಗುಂಡುತೋಪು, ಗೋಮಾಳ, ಕಾಲುವೆ ಒತ್ತುವರಿ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಇಂದು 24 ಕೆರೆಗಳು ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಒತ್ತುವರಿ ಮಾಡಿಕೊಂಡಿದ್ದ 73.46 ಕೋಟಿ ರೂ. ಮೌಲ್ಯದ 47.13 ಎಕರೆ ಜಾಗದಲ್ಲಿದ್ದ ಒತ್ತುವರಿ ತೆರವು ಮಾಡಿ ಸರ್ಕಾರದ ವಶಕ್ಕೆ ಪಡೆಯಲಾಯ್ತು.
ಆ.7 ರ ಕಾರ್ಯಾಚರಣೆಯ ಪೈಕಿ ಬೆಂಗಳೂರು ದಕ್ಷಿಣ ಹುಲಿಮಂಗಲ ಸರ್ವೇ ನಂಬರ್ 156 ಸರಕಾರಿ ಗೋಮಾಳದಲ್ಲಿ 14.08 ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದ ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಎಂಜನಿಯರ್ ಹಫೀಜ್ ಎಂಬುವರು ಕಟ್ಟಿಕೊಂಡಿದ್ದ ಕಟ್ಟಡವನ್ನು ತೆರವುಗೊಳಿಸಿದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್ ನೇತೃತ್ವದಲ್ಲಿ ಬೆಳಗ್ಗೆಯೇ ನಗರ ಜಿಲ್ಲೆ ವ್ಯಾಪ್ತಿಯ 5 ತಾಲೂಕುಗಳಲ್ಲಿ ಉಪವಿಭಾಗಧಿಕಾರಿಗಳು, ತಹಸೀಲ್ದಾರ್ ಗಳು ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿ ಸರ್ಕಾರಿ ಒತ್ತುವರಿಯನ್ನು ತೆರವುಗಳಿಸಿದರು.
ಕಳೆದ ಶನಿವಾರ 58 ಕೆರೆಗಳಲ್ಲಿನ ಒತ್ತುವರಿ ಹಾಗೂ ಸರ್ಕಾರಿ ಗೋಮಾಳ ಸೇರಿದಂತೆ 141 ಎಕರೆ ಪ್ರದೇಶದಲ್ಲಿನ ಒತ್ತುವರಿಯನ್ನು ತೆರವು ಮಾಡಲಾಗಿತ್ತು. ಎರಡು ವಾರದಲ್ಲಿ ಒಟ್ಟಾರೆ 188.13 ಎಕರೆ ಸರ್ಕಾರಿ ಭೂಮಿಯನ್ನು ನಗರ ಜಿಲ್ಲಾಡಳಿತ ವಶಕ್ಕೆ ಪಡೆದಂತಾಗಿದೆ.
ಜಿಲ್ಲಾಡಳಿತದ ಸಿಬ್ಬಂದಿ ಕೇವಲ ಸರ್ಕಾರಿ ಜಮೀನಿನ ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆದರೆ ಸಾಲದು, ಅದನ್ನು ಕಾಂಪೌಂಡ್, ಮುಳ್ಳಿನ ತಂತಿ ಅಥವಾ ಬೇಲಿ ಹಾಕಿ ಭದ್ರಪಡಿಸಿ ಮರು ಒತ್ತುವರಿಯಾಗದಂತೆ ಜಾಗೃತೆ ವಹಿಸಬೇಕಿದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ವಿ.ಶಂಕರ್ ನೇತೃತ್ವದಲ್ಲಿ ಸರ್ಕಾರದಿಂದ ಕೈತಪ್ಪಿ ಹೋಗಿದ್ದ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು.
ಆದರೆ ಅವುಗಳು ಮತ್ತೆ ಭೂಬಾಕರ ಕೈ ಸೇರದಂತೆ ಹದ್ದುಬಸ್ತು ಮಾಡಿ ಸಂರಕ್ಷಣೆ ಮಾಡುವಲ್ಲಿ ವಿಫಲವಾಗಿತ್ತು. ಇದೇ ತಪ್ಪುಮರುಕಳಿಸದಂತೆ ಜಿಲ್ಲಾಧಿಕಾರಿ ಗಳು ಎಚ್ಚರವಹಿಸಬೇಕಿದೆ ಎಂದು ಪ್ರಜ್ಞ ನಾಗರೀಕರೀಕರ ಅಭಿಪ್ರಾಯವಾಗಿದೆ.