ಟೋಕಿಯೋ/ನವದೆಹಲಿ, ಆ.5 (www.bengaluruwire.com): ಭಾರತದ ಪುರುಷ ಹಾಕಿ ತಂಡ ಕೋವಿಡ್ ಸಂಕಷ್ಟದ ಮಧ್ಯೆ ದೇಶದ ಜನತೆಗೆ ಸಂತಸದ ಸುದ್ದಿ ನೀಡಿದ್ದಾರೆ. ನಾಲ್ಕು ದಶಕಗಳ ಬಳಿಕ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ದೇಶದ ಹಾಕಿ ತಂಡ ಇತಿಹಾಸ ನಿರ್ಮಿಸಿದ್ದು, ಕಂಚಿನ ಪದಕ ಗೆದ್ದಿದೆ.
41 ವರ್ಷಗಳ ಬಳಿಕ ಭಾರತಕ್ಕೆ ಪದಕ ಬಂದಿದ್ದು, ಹಾಕಿ ಆಟಗಾರರು, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಭಾರತದ ಪುರುಷರ ಹಾಕಿ ತಂಡ ಜರ್ಮನಿ ತಂಡವನ್ನು ಮಣಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗುರುವಾರ ನಡೆದ ಮೂರನೇ ಸ್ಥಾನಕ್ಕಾಗಿ ಹೋರಾಟದಲ್ಲಿ ಭಾರತ ತಂಡವು ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿ ಕಂಚಿನ ಪದಕ ಪಡೆದುಕೊಂಡಿದೆ.
ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಕಂಚು ಪದಕ ಗೆದ್ದ ಭಾರತದ ಹಾಕಿ ತಂಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಸಾಧನೆಯೊಂದಿಗೆ ಹಾಕಿ ತಂಡ ಇಡೀ ದೇಶದ, ವಿಶೇಷವಾಗಿ ನಮ್ಮ ಯುವ ಸಮೂಹದ ಗಮನವನ್ನು ತನ್ನತ್ತ ಸೆಳೆದಿರುವುದಾಗಿ ಹೇಳಿದ್ದಾರೆ.
ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು “ಐತಿಹಾಸಿಕ! ಇದು ಪ್ರತಿಯೊಬ್ಬ ಭಾರತೀಯನ ನೆನಪಿನಲ್ಲಿ ಉಳಿಯುವ ದಿನ. ಮನೆಗೆ ಕಂಚು ತಂದ ನಮ್ಮ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು. ಈ ಸಾಧನೆಯೊಂದಿಗೆ ಅವರು ಇಡೀ ದೇಶದ, ಅದರಲ್ಲೂ ವಿಶೇಷವಾಗಿ ನಮ್ಮ ಯುವ ಸಮೂಹದ ಗಮನವನ್ನು ಸೆರೆ ಹಿಡಿದಿದ್ದಾರೆ. ನಮ್ಮ ಹಾಕಿ ತಂಡದ ಬಗ್ಗೆ ಭಾರತ ಹೆಮ್ಮೆಪಡುತ್ತದೆ” ಎಂದಿದ್ದಾರೆ.
ಸರಣಿ ಗೋಲುಗಳ ನಡುವೆ ನಡೆದ ಪಂದ್ಯದಲ್ಲಿ ಜರ್ಮನಿ ತಂಡದ ಪ್ರಬಲ ಪ್ರತಿರೋಧದ ಹೊರತಾಗಿಯೂ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಒಲಂಪಿಕ್ಸ್ ಕಂಚು ಪಡೆಯಲು ನೆರವಾದರು.
ಈ ಹಿಂದೆ 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕ ಜಯಿಸಿತ್ತು. ಈಗ ನಾಲ್ಕು ದಶಕಗಳ ಬಳಿಕ ಮತ್ತೆ ಪದಕ ಗೆದ್ದ ಸಾಧನೆ ಮಾಡಿದೆ.