ಬೆಂಗಳೂರು, ಆ.5 (www.bengaluruwire.com): ವಿಪಕ್ಷ ನಾಯಕ ಸಿದ್ದರಾಮಯ್ಯ ಬಲಗೈ ಬಂಟ ಶಾಸಕ ಜಮೀರ್ ಅಹ್ಮದ್ ಮನೆ, ಕಚೇರಿ ಸೇರಿದಂತೆ ಅವರಿಗೆ ಸಂಬಂಧಿಸಿದ ಚರ-ಸ್ಥಿರಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಐಎಂಎ ಪ್ರಕರಣದ ಹಿನ್ನಲೆಯಲ್ಲಿ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಪ್ರಮುಖವಾಗಿ ಜಮೀರ್ ಅಹ್ಮದ್ ಇತ್ತೀಚೆಗಷ್ಟೆ ಕಂಟೊನ್ಮೆಂಟ್ ರೈಲ್ವೇ ಸ್ಟೇಷನ್ ಬಳಿಯ ಬಂಬೂ ಬಜಾರ್ ರಸ್ತೆಯಲ್ಲಿ ಹೊಸದಾಗಿ ಐಷಾರಾಮಿ ಬಂಗಲೆ ಕಟ್ಟಿಸಿದ್ದರು. ಇಡೀ ಮನೆಯ ಒಳಾಂಗಣ ಚಿನ್ನದ ಬಣ್ಣದಲ್ಲಿಯೇ ಕಟ್ಟಿಸಿದ್ದರು. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಹಣ ಕರ್ಚು ಮಾಡಿದ್ದರು ಎನ್ನಲಾಗಿದೆ.
ಬೆಳಗ್ಗೆ ಆರು ಗಂಟೆಗೆ ಜಮೀರ್ ಅಹ್ಮದ್ ಮತ್ತು ಅವರ ಮನೆಯವರು ಕಣ್ಣು ಬಿಡುವ ಮುಂಚೆಯೇ ಇಡಿ ಅಧಿಕಾರಿಗಳು ಅವರ ಮನೆಗೆ ಲಗ್ಗೆ ಇಟ್ಟಿದ್ದರು.
ಎರಡು ಖಾಸಗಿ ಕಾರಿನಲ್ಲಿ ಏಕಾ ಏಕಿ ಆಗಮಿಸಿದ ಇಡಿ ಅಧಿಕಾರಿಗಳು ಜಮೀರ್ ಅಹ್ಮದ್ ನಿವಾಸದಲ್ಲಿ ದಾಖಲೆ ಪರಿಶೀಲನೆ, ಆಸ್ತಿ- ಪಾಸ್ತಿ ದಾಖಲೆ, ವ್ಯವಹಾರಗಳ ಕುರಿತಂತೆ ಮನೆಯಲ್ಲಿರುವ ಶಾಸಕ ಜಮೀರ್ ಅಹ್ಮದ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್, ಸಿಆರ್ ಪಿಎಫ್ ಭದ್ರತೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಏಕಕಾಲಕ್ಕೆ ನಗರದ ಹಲವಡೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಟೀಮ್, ಹಲವು ಮಹತ್ವದ ದಾಖಲೆಗಳು ಪತ್ತೆ ಹಚ್ಚಿವೆ. ಕೆಲ ತಿಂಗಳ ಹಿಂದೆಯಷ್ಟೇ ಕೋಟಿ ಕೋಟಿ ಹಣ ಖರ್ಚು ಮಾಡಿ ಮಗಳ ಮದುವೆ ಮಾಡಿದ್ದರು. ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಣ ಹಂಚುವ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು.
ಜಮೀರ್ ಅಹ್ಮದ್ ಕೋಟ್ಯಾಂತರ ಖರ್ಚು ಮಾಡಿ ಭವ್ಯ ಬಂಗಲೆ ನಿರ್ಮಾಣ ಮಾಡಿದ್ದು, ಆ ಬಂಗಲೆಯ ವಿಡಿಯೋ ಕೂಡ ವೈರಲ್ ಆಗಿತ್ತು. ಇದೂ ಕೂಡ ಇಡಿ ದಾಳಿಯ ಕಾರಣಗಳಲ್ಲಿ ಒಂದು ಎನ್ನಲಾಗಿದೆ.