ಬೆಂಗಳೂರು, ಆ.4 (www.bengaluruwire.com) : ಅಂತೂ ಇಂತೂ ಬಿಜೆಪಿ ಆಡಳಿತದ ಪ್ರಸವ ವೇದನೆ ಮುಗಿದು ಹೊಸ ಸಚಿವ ಸಂಪುಟದ 29 ಸಚಿವರ ಟೀಮ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಬುಧವಾರ ಮತ್ತೆ ರಚನೆಯಾಗುತ್ತಿದೆ.
ರಾಜಭವನದಲ್ಲಿ ಸಿಎಂ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ ಒಂದು ವಾರದಲ್ಲಿ ಮತ್ತೆ ಹೊಸ ಸಚಿವರ ಗೌಪ್ಯತಾ ಪ್ರಮಾಣವಚನ ಕಾರ್ಯಕ್ರಮ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಸಮ್ಮುಖದಲ್ಲಿ ನಡೆಯಿತು. 29 ಶಾಸಕರು ರಾಜಭವನದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಹೈಕಮಾಂಡ್ ಈ ಬಾರಿ ಅಳೆದು ತೂಗಿ ಪ್ರಬಲ ಜಾತಿಗಳಿಗೆ ಮಣೆ ಹಾಕಿ ಬೊಮ್ಮಾಯಿ ಸರ್ಕಾರದಲ್ಲಿ 29 ಮಂದಿಗೆ ಸಚಿವರಾಗಿ ಅವಕಾಶ ನೀಡಿದೆ. ವರಿಷ್ಠರು ಅಂತಿಮ ಕ್ಷಣದವರೆಗೂ ಸಚಿವರ ಪಟ್ಟಿ ವಿಚಾರದಲ್ಲಿ ಗೌಪ್ಯತೆ ಕಾಯ್ದುಕೊಂಡಿತ್ತು. 8 ಮಂದಿ ಲಿಂಗಾಯಿತ ಶಾಸಕರು, 7 ಒಕ್ಕಲಿಗ, 7 ಹಿಂದುಳಿದ, 3 ಪರಿಶಿಷ್ಟ ಜಾತಿ,1 ಪರಿಶಿಷ್ಟ ಪಂಗಡ, 1 ರೆಡ್ಡಿ ಜನಾಂಗ, ಒಬ್ಬ ಮಹಿಳೆ ಹಾಗೂ ಇಬ್ಬರು ಬ್ರಾಹ್ಮಣ ಸಮುದಾಯಕ್ಕೆ ಮೀಸಲಾದವರನ್ನು ಆಯ್ಕೆ ಮಾಡಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇರವಾಗಿ ಕರೆ ಮಾಡಿ 29 ಜನರನ್ನು ಸಚಿವ ಸ್ಥಾನಕ್ಕೆ ಪ್ರಮಾಣ ವಚನಕ್ಕೆ ಆಹ್ವಾನ ನೀಡಿದ್ದರು. ಇಂದು ಪ್ರಮಾಣವಚನ ಸ್ವೀಕರಿಸಿದ ಶಾಸಕರ ಪಟ್ಟಿ ಈ ಕೆಳಕಂಡಂತಿದೆ :
• ಕೆ.ಎಸ್.ಈಶ್ವರಪ್ಪ – ಶಿವಮೊಗ್ಗ
• ಆರ್.ಅಶೋಕ್- ಪದ್ಮನಾಭ ನಗರ
• ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ
• ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು
• ಉಮೇಶ್ ಕತ್ತಿ- ಹುಕ್ಕೇರಿ
• ಎಸ್.ಟಿ.ಸೋಮಶೇಖರ್- ಯಶವಂತಪುರ
• ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
• ಬೈರತಿ ಬಸವರಾಜ – ಕೆ ಆರ್ ಪುರಂ
• ಮುರುಗೇಶ್ ನಿರಾಣಿ – ಬಿಳಿಗಿ
• ಶಿವರಾಂ ಹೆಬ್ಬಾರ್ – ಯಲ್ಲಾಪುರ
• ಶಶಿಕಲಾ ಜೊಲ್ಲೆ – ನಿಪ್ಪಾಣಿ
• ಕೆ.ಸಿ. ನಾರಾಯಣ್ ಗೌಡ – ಕೆ.ಆರ್ ಪೇಟೆ
• ಸುನೀಲ್ ಕುಮಾರ್ – ಕಾರ್ಕಳ
• ಅರಗ ಜ್ಞಾನೇಂದ್ರ – ತೀರ್ಥಹಳ್ಳಿ
• ಗೋವಿಂದ ಕಾರಜೋಳ – ಮುಧೋಳ
• ಮುನಿರತ್ನ- ಆರ್ ಆರ್ ನಗರ
• ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ
• ಗೋಪಾಲಯ್ಯ – ಮಹಾಲಕ್ಷ್ಮಿ ಲೇಔಟ್
• ಮಾಧುಸ್ವಾಮಿ – ಚಿಕ್ಕನಾಯಕನಹಳ್ಳಿ
• ಹಾಲಪ್ಪ ಆಚಾರ್ – ಯಲಬುರ್ಗಾ
• ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ
• ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ
• ಪ್ರಭು ಚೌವ್ಹಾಣ್ – ಔರಾದ್
• ವಿ ಸೋಮಣ್ಣ – ಗೋವಿಂದ್ ರಾಜನಗರ
• ಎಸ್ ಅಂಗಾರ — ಸುಳ್ಯ
• ಆನಂದ್ ಸಿಂಗ್ – ಹೊಸಪೇಟೆ
• ಸಿ ಸಿ ಪಾಟೀಲ್ – ನರಗುಂದ
• ಬಿ.ಸಿ. ನಾಗೇಶ್ – ತಿಪಟೂರು
• ಬಿ.ಸಿ.ಪಾಟೀಲ್ – ಹಿರೇಕೆರೂರು
ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ಯೋಗೇಶ್ವರ್
ಆರ್.ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಬಸವರಾಜ್ ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಸ್ಥಾನ ವಂಚಿತರಾಗಿದ್ದಾರೆ. ಇದಕ್ಕಿಂತ ಪ್ರಮುಖವಾಗಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರರಿಗೆ ಸಚಿವ ಸ್ಥಾನ ಕೊಡಿಸಲು ಬಿಎಸ್ ವೈ ಅಂತಿಮ ಕ್ಷಣದವರೆಗೆ ನಡೆಸಿದ ಪ್ರಯತ್ನ ಫಲ ಕೊಡಲಿಲ್ಲ.
ಹೀಗಾಗಿ ಬಿ.ಎಸ್.ಯಡಿಯೂರಪ್ಪ ಮುಂದೆ ಕೈಗೊಳ್ಳುವ ನಿರ್ಧಾರ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಬಿಜೆಪಿಯ ಶಶಿಕಲಾ ಜೊಲ್ಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನದಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭಕ್ಕೆ ಕಾರಿನಲ್ಲಿ ಆಗಮಿಸಲು ವಿಶೇಷವಾಗಿ ತಡೆರಹಿತ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕಾಂಗ್ರೆಸ್ – ಜೆಡಿಎಸ್ ದೋಸ್ತಿ ಸರ್ಕಾರವನ್ನು ಬೀಳಿಸಿದ ಬಿಜೆಪಿ ಸರ್ಕಾರದಲ್ಲಿ ಎರಡನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿ ತಂಡವೀಗ ಸಿದ್ಧವಾಗಿದೆ. ಕಳೆದ ಒಂದು ವಾರದಿಂದ ಏಕ ಸಚಿವ ಸಂಪುಟ ಜಾರಿಯಲ್ಲಿದ್ದು, ಇಂದು ಬೊಮ್ಮಾಯಿಯವರ ತಂಡಕ್ಕೆ 29 ಸಚಿವರು ಸೇರ್ಪಡೆಯಾಗಿದ್ದಾರೆ. ಸಂಪುಟ ಸರ್ಕಸ್ ಮುಗಿದಿದ್ದು, ರಾಜ್ಯದಲ್ಲಿನ ನೆರೆ, ಪ್ರವಾಹ, ಕೋವಿಡ್ 3ನೇ ಅಲೆಯ ನಿಯಂತ್ರಣ ಹಾಗೂ ಬಜೆಟ್ ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತು ಕೊಡುವ ಸವಾಲು ಬೊಮ್ಮಾಯಿ ಸರ್ಕಾರದ ಮುಂದಿದೆ.