ಬೆಂಗೂರು, ಜು.28 (www.bengaluruwire.com) : ರಾಜ್ಯದ 30ನೇ ನೂತನ ಮುಖ್ಯಮಂತ್ರಿಗಾಗಿ ಬಸವರಾಜ ಬೊಮ್ಮಾಯಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು. ನೂತನ ಸಿಎಂಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು. ದೇವರ ಹೆಸರಿನಲ್ಲಿ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಕ್ಕೆ ಅವಧಿ ಲೆಕ್ಕದಲ್ಲಿ 30ನೇ ಹಾಗೂ ವ್ಯಕ್ತಿ ಲೆಕ್ಕದಲ್ಲಿ 23ನೇ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರದ ಗದ್ದುಗೆ ಏರಿದರು.
ಸಮಾರಂಭ ನಡೆಯುವ ವೇದಿಕೆ ಮುಂಭಾಗದಲ್ಲಿ ಬಿಎಸ್ ಯಡಿಯೂರಪ್ಪ ಕುಳಿತಿದ್ದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಅರುಣ್ ಸಿಂಗ್, ನಳೀನ್ ಕುಮಾರ್ ಕಟೀಲ್, ಕಿಶನ್ ರೆಡ್ಡಿ, ಧರ್ಮೇಂದ್ರ ಪ್ರಧಾನ್, ವಿಜಯೇಂದ್ರ, ಈಶ್ವರಪ್ಪ, ಮುರುಗೇಶ್ ನಿರಾಣಿ ಮತ್ತಿತರರು ಭಾಗಿಯಾಗಿದ್ದರು. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಬೊಮ್ಮಾಯಿ, ಬಿಎಸ್ವೈ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ಅರವಿಂದ್ ಬೆಲ್ಲದ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಪದ ಗ್ರಹಣ ಸಮಾರಂಭದಿಂದ ದೂರ ಉಳಿದಿದ್ದರು. ನೂತನ ಮುಖ್ಯಮಂತ್ರಿ ಪದಗ್ರಹಣದ ಹಿನ್ನಲೆಯಲ್ಲಿ ರಾಜ ಭವನ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಆರು ಡಿಸಿಪಿ, ಎಸಿಪಿಗಳು, ಇನ್ಸ್ಪೆಕ್ಟರ್ ಗಳು ಸೇರಿದಂತೆ 500 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಪಾಸ್ ಇದ್ದವರಿಗೆ ಮಾತ್ರ ರಾಜ ಭವನದ ಒಳಗೆ ಪ್ರವೇಶ ನೀಡಲಾಗಿತ್ತು.
ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಮಾಡಿದ ಬಳಿಕ ಬಸವರಾಜ ಬೊಮ್ಮಾಯಿ, ರಾಜಭವನದಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ ಸಿಎಂ ಕಚೇರಿಯಲ್ಲಿ ಪೂಜಾಕಾರ್ಯ ನೆರವೇರಿಸಿದರು. ನಂತರ ಕಾನ್ಫರೆನ್ಸ್ ಹಾಲ್ ನಲ್ಲಿ ಅಧಿಕಾಗಳ ಜೊತೆ ಸಭೆ ನಡೆಸಿದ ಬಳಿಕ ವಿಧಾನ ಸೌಧದಲ್ಲೇ ಪತ್ರಿಕಾಗೋಷ್ಠಿ ನಡೆಸಿದರು.
ರೈತರ ಮಕ್ಕಳ ವಿಶೇಷ ವಿದ್ಯಾರ್ಥಿ ವೇತನ, ಸಂಧ್ಯಾ ಸುರಕ್ಷೆ ಪಿಂಚಣಿ ಹಾಗೂ ವಿಧವಾ ವೇತನ ಹೆಚ್ಚಳ ಘೋಷಣೆ :
ರೈತರ ಮಕ್ಕಳಿಗೆ ವಿಶೇಷ ವಿದ್ಯಾರ್ಥಿ ವೇತನ, ಹಿರಿಯ ನಾಗರೀಕರಿಗೆ ಸಂಧ್ಯಾ ಸುರಕ್ಷಾ ಯೋಜನೆಯ ಮಾಸಿಕ ನೀಡುವ ಹಣವನ್ನು 1,000 ರೂ. ರಿಂದ 1,200 ರೂ.ಗಳಿಗೆ ಹೆಚ್ಚಳ ಸೇರಿದಂತೆ ವಿವಿಧ ಭರ್ಜರಿ ಸಿಹಿಸುದ್ದಿಯನ್ನು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಈ ಕುರಿತಂತೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ, ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೊದಲ ಕಾರ್ಯ, ಕಡತಗಳಿಗೆ ಚುರುಕು ಮುಟ್ಟಿಸುವುದಾಗಿದೆ. ಆ ಕೆಲಸವನ್ನು ಮೊದಲು ಮಾಡುತ್ತಿದ್ದೇನೆ. ಆದಷ್ಟು ಬೇಗ ಬಾಕಿ ಕಡತಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜನಪರ ಕಾಳಜಿಯಿಂದ ಕೆಲಸ ಮಾಡೋ ಸಲುವಾಗಿ ಸಿಎಂ ಸ್ಥಾನಕ್ಕೆ ಬಂದಿದ್ದೇನೆ. ಇದರ ಮೊದಲ ಭಾಗವಾಗಿ ರೈತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷ ವಿದ್ಯಾರ್ಥಿ ವೇತನವನ್ನು ಘೋಷಣೆ ಮಾಡುತ್ತಿದ್ದೇನೆ.
ಹಿರಿಯ ನಾಗರೀಕರಿಗಾಗಿ ಇರುವ ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳಿಗೆ ಮಾಸಿಕ 1,000 ರೂ ದಿಂದ 1,200 ರೂ.ಗಳಿಗೆ ಹೆಚ್ಚಳ ಮಾಡುತ್ತಿದ್ದೇನೆ ಎಂದು ಘೋಷಿಸಿದರು.
ವಿಧವಾ ವೇತನ ಹಾಲಿ ಇರುವಂತ 500 ರೂ ಗಳನ್ನು 800ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಅಂಗವಿಕಲರ ವೇತನದಡಿಯಲ್ಲಿ ಶೇ.40 ರಿಂದ 75 ರಷ್ಟು ಅಂಗವಿಕಲರಿಗೆ 600 ರೂ ದಿಂದ 800ಕ್ಕೆ ಏರಿಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿರುವ 3.66 ಲಕ್ಷ ಅಂಗವಿಕಲರಿಗೆ ಇದರಿಂದ ಪ್ರಯೋಜನ ಆಗಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಜನಪರ ಆಡಳಿತ ನೀಡುವ ಗುರಿಯಿದೆ ; ನೂತನ ಸಿಎಂ
ಇದಕ್ಕೂ ಮುನ್ನ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಜನಪರ ಆಡಳಿತ ನೀಡುವ ಗುರಿ ಹೊಂದಿದ್ದೇವೆ. ಸರ್ಕಾರಕ್ಕೆ ಆರ್ಥಿಕ, ಸಾಮಾಜಿಕ ಸವಾಲುಗಳಿವೆ. ನಾನು ಎಲ್ಲಾ ಸಹದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಾಗಿ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುವುದಾಗಿ ಹೇಳಿದರು.
ಜನಪರ ಆಡಳಿತ ನೀಡಲು ಹಾಗೂ ರಾಜ್ಯಕ್ಕೆ ಎದುರಾಗಿರುವ ಸವಾಲುಗಳನ್ನು ಎಲ್ಲರ ನೆರವು ಪಡೆದು ಎದುರಿಸುತ್ತೇನೆ. ನಾನು ಮುಖ್ಯಮಂತ್ರಿ ಅಂತ ಒಬ್ಬಂಟಿಗನಾಗಿ ನಿರ್ಧಾರ ಕೈಗೊಳ್ಳದೆ, ಟೀಂ ವರ್ಕ್ ಮಾಡುತ್ತೇನೆ. ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.
ರಾಜ್ಯದ ಜನತೆಗೆ ನಾನು ಕೃತ್ಯಜ್ಞನಾಗಿರುತ್ತೇನೆ. ನರೇಂದ್ರ ಮೋದಿ ಅವರು ಅಪಾರವಾದ ನಂಬಿಕೆ, ವಿಶ್ವಾಸ ಇಟ್ಟು ಈ ಜವಾಬ್ದಾರಿ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ. ಕೋವಿಡ್ ಹಾಗೂ ಇತರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೇವೆ. ಕಷ್ಟದಲ್ಲಿ ಇರೋ ಜನರ ಕಣ್ಣೀರು ಒರೆಸುವ ಕೆಲಸ ಮಾಡ್ತೀವಿ ಎಂದರು.
ಸಿಎಂ ಮನೆಯಲ್ಲಿ ಹಬ್ಬದ ರೀತಿ ಸಂಭ್ರಮಾಚರಣೆ :
ಬೊಮ್ಮಾಯಿಯವರ ಬೆಂಗಳೂರಿನ ನಿವಾಸದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ತಮ್ಮ ನಿವಾಸಕ್ಕೆ ಆಗಮಿಸಿದಾಗ ಮನೆಯವರೆಲ್ಲ ಕೂಡಿ ಸಂಭ್ರಮ ಆಚರಿಸಿದರು. ಬೊಮ್ಮಾಯಿ ಅವರನ್ನು ಕುರಿತು ಮನೆಯವರೆಲ್ಲರೂ ಸೇರಿ ಪ್ರೀತಿಯಿಂದ, “ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ…” ಹಾಡು ಹಾಡಿದರು.
ದೆಹಲಿ ಬಿಜೆಪಿ ವರಿಷ್ಠರು – ನಾನಾ ಗಣ್ಯರಿಂದ ಶುಭ ಹಾರೈಕೆ
ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದ ಹಿನ್ನೆಲೆಯಲ್ಲಿ, ಬಸವರಾಜ ಬೊಮ್ಮಾಯಿಗೆ ಹೈಕಮಾಂಡ್ ನಾಯಕರು ಶುಭಾಶಯ ಕೋರಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್, ಪ್ರಹ್ಲಾದ್ ಜೋಷಿ ಸೇರಿದಂತೆ ಹಲವು ನಾಯಕರು ದೂರವಾಣಿ ಮೂಲಕ , ಕೆಲವರು ಟ್ವಿಟ್ ನಲ್ಲಿ ಶುಭ ಹಾರೈಸಿದ್ದಾರೆ.