ಬೆಂಗಳೂರು ( www.bengaluruwire.com ) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 53ನೆಯ ಮೇಯರ್ ಗೌತಮ್ ಕುಮಾರ್ ಅವಧಿಯಲ್ಲಿನ ಮೇಯರ್ ಫಂಡ್ ವಿವೇಚನಾ ಕೋಟಾದಲ್ಲಿ ನಗರದ ಪಾರ್ಕ್ ಅಭಿವೃದ್ಧಿಗಾಗಿ ಜಾಬ್ ಕೋಡ್ ಹಂಚಿಕೆಯಲ್ಲಿ ಕಮಿಷನ್ ಲಾಭಿ ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಗೌತಮ್ ಕುಮಾರ್ ಪಾಲಿಕೆಯ 15ನೇ ಅವಧಿಯ ಕೊನೆಯ ಮೇಯರ್ ಆಗಿದ್ದು, 1 ಅಕ್ಟೋಬರ್ 2019 ರಿಂದ ಸೆಪ್ಟೆಂಬರ್ 2020 ನೆಯ ಒಂದು ವರ್ಷದ ಅವಧಿವರೆಗೆ ಆ ಹುದ್ದೆಯಲ್ಲಿದ್ದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಪಾರ್ಕ್ ಅಭಿವೃದ್ಧಿ, ನಿರ್ವಹಣೆ, ಸೌಂದರ್ಯೀಕರಣ, ಉದ್ಯಾನವನಗಳಲ್ಲಿ ಆಟ ಹಾಗೂ ಜಿಮ್ ಉಪಕರಣ ಅಳವಡಿಕೆ, ಕೆರೆ ಪ್ರದೇಶದಲ್ಲಿನ ಪಾರ್ಕ್ ನಲ್ಲಿ ಲ್ಯಾಂಡ್ ಸ್ಕೇಪ್ ಗೊಳಿಸುವುದು, ರಸ್ತೆ ಮಧ್ಯದಲ್ಲಿನ ಮೀಡಿಯನ್ ಜಾಗದಲ್ಲಿ ಅಲಂಕಾರಿಕ ಹೂಗಿಡ ನೆಡುವ ಕಾಮಗಾರಿ ಬಗ್ಗೆ “ವಿಶೇಷ ಒಲವು” ಹೊಂದಿರುವುದು ಬೆಂಗಳೂರು ವೈರ್ ಗೆ ಮಾಹಿತಿ ಹಕ್ಕು ಕಾಯ್ದೆಯ ದಾಖಲೆಗಳಿಂದ ತಿಳಿದು ಬಂದಿದೆ.
ಬಿಬಿಎಂಪಿಯಲ್ಲಿ ತೋಟಗಾರಿಕೆ ಇಲಾಖೆಗೆ ಮೇಯರ್ ವಿವೇಚನಾ ಕೋಟಾದಡಿ ಬರೋಬ್ಬರಿ 53.97 ಕೋಟಿ ರೂ. ವೆಚ್ಚದ 138 ಕಾಮಗಾರಿಗಳಿಗೆ ಜಾಬ್ ಕೋಡ್ ಹಂಚಿಕೆ ಮಾಡಲಾಗಿದೆ. ಒಟ್ಟಾರೆ ಅನುದಾನದ ಮೊತ್ತದ ಲೆಕ್ಕದಲ್ಲಿ ತೋಟಗಾರಿಕೆ ಇಲಾಖೆಗೆ ಶೇ.20 ರಷ್ಟು ಅನುದಾನವನ್ನು ಮೇಯರ್ ಹಂಚಿಕೆ ಮಾಡಿದ್ದಾರೆ.
198 ವಾರ್ಡ್ ಗಳ ಪೈಕಿ 37 ವಾರ್ಡ್ ಗಳಿಗಷ್ಟೆ ಮೇಯರ್ ಫಂಡ್ :
ಇಲ್ಲಿ ಗಮನಿಸ ಬೇಕಾದ ಅಂಶ ಅಂದರೆ 53ನೆಯ ಮೇಯರ್ ಆಗಿದ್ದ ಗೌತಮ್ ಕುಮಾರ್ ಗೆ ಅವರ ಅವಧಿಯಲ್ಲಿ, ನಗರದಲ್ಲಿರುವ 198 ವಾರ್ಡ್ ಗಳಲ್ಲಿರುವ 1,348 ಪಾರ್ಕ್ ಗಳು ಕಣ್ಣಿಗೆ ಬಿದ್ದಿಲ್ಲ. ಕೇವಲ 8 ವಲಯಗಳಲ್ಲಿನ 37 ವಾರ್ಡ್ ಗಳ ಉದ್ಯಾನವನಗಳ ಅಭಿವೃದ್ಧಿ, ಪಾರ್ಕ್ ಸೌಂದರ್ಯೀಕರಣ, ಲ್ಯಾಂಡ್ ಸ್ಕೇಪಿಂಗ್, ರಸ್ತೆ ವಿಭಜಕದಲ್ಲಿ ಅಲಂಕಾರಿಕ ಹೂಗಿಡ ನೆಡುವ ಕಾಮಗಾರಿಗಳಷ್ಟೇ ಕಾಣಿಸಿದೆ.
ಈ ವಾರ್ಡ್ ಗಳ ಮೇಲೆ ಅದ್ಯಾಕೊ ಅಷ್ಟೊಂದು ಮಮಕಾರವೊ? ನಗರದಲ್ಲಿನ 8 ಜೋನ್ ಗಳಲ್ಲಿ ಒಟ್ಟಾರೆ ಇರುವ 1,348 ಪಾರ್ಕ್ ಗಳಲ್ಲಿ 1,112 ಪಾರ್ಕ್ ಗಳು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಕೇವಲ 236 ಪಾರ್ಕ್ ಗಳಿನ್ನು ಮಾತ್ರ ಅಭಿವೃದ್ಧಿಯಾಗಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ನೀಡಿರುವ ಅಧಿಕೃತ ದಾಖಲೆಯಲ್ಲಿ ತಿಳಿಸಲಾಗಿದೆ.
ಯಾಕೆ ಬಿಬಿಎಂಪಿ ವ್ಯಾಪ್ತಿಯಲ್ಲಿನ 161 ವಾರ್ಡ್ ಗಳಲ್ಲಿ ಪಾರ್ಕ್ ಗಳಿಲ್ಲವೇ? ಅಲ್ಲಿನ ಜನತೆ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟುವುದಿಲ್ಲವೇ? ಕೇವಲ 37 ವಾರ್ಡ್ ಗಳಲ್ಲಿರುವ ಪಾರ್ಕ್ ಗಳ ಮೇಲೇಕೆ ವಿಶೇಷ ಪ್ರೀತಿ ತೋರಿಸಲಾಗಿದೆ? ಜಾಬ್ ಕೋಡ್ ಹಂಚಿಕೆಯಲ್ಲೂ ಪ್ರಭಾವೀ ಕೌನ್ಸಿಲರ್, ಗುತ್ತಿಗೆದಾರರಿಗೆ ಮಣೆ ಹಾಕಿದ್ದಾರೆ ಎಂದು ಪಾಲಿಕೆ ಅಂಗಳದಲ್ಲಿ ಕೇಳಿಬಂದಿದೆ.
ತುಂಡು ಗುತ್ತಿಗೆಗಾಗಿ ಹರಿದು ಹಂಚಿರುವ ಮೇಯರ್ ಫಂಡ್….!
ಉದ್ಯಾನವನಗಳ ಅಭಿವೃದ್ಧಿಗೆ ಹಂಚಿಕೆಯಾದ 138 ಜಾಬ್ ಕೋಡ್ ಗಳ ಪೈಕಿ ತಲಾ 20 ಲಕ್ಷ ರೂ. ಗಳ 83 ಜಾಬ್ ಕೋಡ್ ನೀಡಲಾಗಿದೆ. 6 ಲಕ್ಷ ರೂ. ಮೊತ್ತದ ಜಾಬ್ ಕೋಡ್ ಕಾಮಗಾರಿಯಿಂದ ಹಿಡಿದು 5 ಕೋಟಿ ರೂ. ವರೆಗೆ ವಿವಿಧ ಮೌಲ್ಯದ ಜಾಬ್ ಕೋಡ್ ಗಳನ್ನು ಮೇಯರ್ ಗೌತಮ್ ಕುಮಾರ್ ತಮ್ಮ ಮೇಯರ್ ಫಂಡ್ ನಲ್ಲಿ ಹಂಚಿಕೆ ಮಾಡಿದ್ದಾರೆ.
ಒಂದೇ ಉದ್ಯಾನವನ, ಅಥವಾ ಒಂದು ಕೆರೆಯಲ್ಲಿನ ಉದ್ಯಾನವನದ ಒಂದು ಕೆಲಸಕ್ಕೆ ತುಂಡು ಗುತ್ತಿಗೆ ನೀಡಲು ಅನುಕೂಲವಾಗುವಂತೆ ಹಲವು ಕಾಮಗಾರಿಗಳ ಹೆಸರಿನಲ್ಲಿ ವಿವಿಧ ಜಾಬ್ ಕೋಡ್ ಗಳನ್ನು ಹಂಚಿಕೆ ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ಅಧಿಕೃತ ದಾಖಲೆಗಳಲ್ಲಿ ಕಂಡುಬರುತ್ತಿದೆ. ಇದನ್ನು ನೋಡಿದರೆ, ಕಮಿಷನ್ ಬೇಸಿಸ್ ಮೇಲೆ ಅನುದಾನ ಹಂಚಿಕೆ ಮಾಡಿ ಜಾಬ್ ಕೋಡ್ ನೀಡಿರುವ ಅನುಮಾನ ವ್ಯಕ್ತವಾಗುತ್ತಿದೆ.
“ಬೆಂಗಳೂರಿನಲ್ಲಿ 1,348 ಪಾರ್ಕ್ ಗಳಿದ್ದು, 1,112 ಪಾರ್ಕ್ ಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಆದರೂ 198 ವಾರ್ಡ್ ಗಳಲ್ಲಿ ಇನ್ನೂ ಅಭಿವೃದ್ಧಿಯಾಗದ 236 ಪಾರ್ಕ್ ಗಳಿದೆ. ಅದನ್ನೆಲ್ಲಾ ಬಿಟ್ಟು ಕೇವಲ 37 ವಾರ್ಡ್ ಗಳಿಗೆ 53.97 ಕೋಟಿ ರೂ. ಮೊತ್ತದ 138 ಕಾಮಗಾರಿಗಳ ಜಾಬ್ ಕೋಡ್ ತುಂಡು ಗುತ್ತಿಗೆ ಕೊಡಲಾಗಿದೆ. ಇದನ್ನು ನೋಡಿದರೆ ಇದು ಪಾರ್ಕ್ ಡೆವಲಪ್ ಮೆಂಟ್ ಅಲ್ಲ ರಾಜಕಾರಣಿಗಳ ಪಾಕೆಟ್ ಡೆವಲಪ್ ಮೆಂಟ್ ಆಗಿರೋದು ಕಂಡು ಬರುತ್ತಿದೆ. ಮೇಲ್ನೋಟಕ್ಕೆ ಜಾಬ್ ಕೋಡ್ ಹಂಚಿಕೆಯಲ್ಲಿ ಶೇ.100ರಷ್ಟು ಭ್ರಷ್ಟಾಚಾರ ನಡೆದಿರುವ ಶಂಕೆಯಿದೆ. ಈ ಬಗ್ಗೆ ನ್ಯಾಯಾಂಗ ತನಿಖೆಯ ಅಗತ್ಯವಿದೆ.”
– ಟಿ.ಜೆ.ಅಬ್ರಹಾಮ್, ಸಾಮಾಜಿಕ ಕಾರ್ಯಕರ್ತರು
ನಗರದಲ್ಲಿ ತೋಟಗಾರಿಗೆ ಕಾಮಗಾರಿಗಳಿಗಾಗಿ ಜಾಬ್ ಕೋಡ್ ಗಳು ಹಂಚಿಕೆಯಾದ ವಲಯಗಳು, ಆ ವಲಯದಲ್ಲಿನ ಕಾಮಗಾರಿಗಳು ಹಾಗೂ ಅವುಗಳ ಮೊತ್ತ ಈ ಕೆಳಕಂಡಂತಿದೆ :
ವಲಯಗಳು ಕಾಮಗಾರಿ ಜಾಬ್ ಕೋಡ್ ಮೊತ್ತ
1) ದಕ್ಷಿಣ ವಲಯ 60 14.81 ಕೋಟಿ ರೂ.
2) ರಾಜರಾಜೇಶ್ವರಿ ನಗರ 26 11.05 ಕೋಟಿ ರೂ.
3) ಬೊಮ್ಮನಹಳ್ಳಿ 10 10.58 ಕೋಟಿ ರೂ.
4) ಪೂರ್ವ 7 7.50 ಕೋಟಿ ರೂ.
5) ಮಹದೇವಪುರ 17 3.80 ಕೋಟಿ ರೂ.
6) ದಾಸರಹಳ್ಳಿ 6 3.50 ಕೋಟಿ ರೂ.
7) ಪಶ್ಚಿಮ 7 2 ಕೋಟಿ ರೂ.
8) ಯಲಹಂಕ 4 75 ಲಕ್ಷ ರೂ.
ಯಾವ ಜೋನ್ ಗಳಲ್ಲಿ ಎಷ್ಟೆಷ್ಟು ಅಭಿವೃದ್ಧಿ- ಅಭಿವೃದ್ಧಿಯಾಗದ ಪಾರ್ಕ್ ಗಳಿವೆ? :
ಬೆಂಗಳೂರಿನ ದಕ್ಷಿಣ ವಲಯದಲ್ಲಿ ಒಟ್ಟು 266 ಉದ್ಯಾನವನಗಳಿವೆ. ಆ ಪೈಕಿ 255 ಪಾರ್ಕ್ ಗಳು ಅಭಿವೃದ್ಧಿಯಾಗಿದೆ. ಕೇವಲ 11 ಪಾರ್ಕ್ ಗಳಷ್ಟೆ ಅಭಿವೃದ್ಧಿಹೊಂದಿಲ್ಲ. ಆದರೂ ದಕ್ಷಿಣ ವಲಯಕ್ಕೆ ಇಡೀ ಬೆಂಗಳೂರಿನಲ್ಲಿ ತೋಟಗಳ ಅಭಿವೃದ್ಧಿಗೆ ಬರೋಬ್ಬರಿ 60 ಕಾಮಗಾರಿಗಳನ್ನು ಕೈಗೊಳ್ಳಲು 14.81 ಕೋಟಿ ರೂ. ಮೊತ್ತದ ಜಾಬ್ ಕೋಡ್ ಗಳನ್ನು ಹಂಚಿಕೆ ಮಾಡಲಾಗಿದೆ. ಇನ್ನು ರಾಜರಾಜೇಶ್ವರಿ ನಗರ ವಲಯಗಳಲ್ಲಿ ಒಟ್ಟು 183 ಪಾರ್ಕ್ ಗಳಿದ್ದು, ಆ ಪೈಕಿ 113 ಪಾರ್ಕ್ ಗಳನ್ನು ಈಗಾಗಲೇ ಅಭಿವೃದ್ಧಿಯಾಗಿದೆ. 70 ಪಾರ್ಕ್ ಗಳಿನ್ನು ಅಭಿವೃದ್ಧಿಯಾಗಿಲ್ಲ. ಇಲ್ಲಿ 26 ಕಾಮಗಾರಿಗಳನ್ನು ಕೈಗೊಳ್ಳಲು 11.06 ಕೋಟಿ ರೂ. ಮೊತ್ತದ ಜಾಬ್ ಕೋಡ್ ಹಂಚಿಕೆ ಮಾಡಲಾಗಿದೆ.
ಬೊಮ್ಮನಹಳ್ಳಿಯಲ್ಲಿ ಒಟ್ಟು 169 ಉದ್ಯಾನವನಗಳಿದ್ದು, 120 ಪಾರ್ಕ್ ಗಳು ಅಭಿವೃದ್ಧಿಯಾಗಿದ್ದು, 49 ಅಭಿವೃದ್ಧಿಯಾಗಿಲ್ಲ. ಈ ವಲಯಕ್ಕೆ ಮೇಯರ್ ಗೌತಮ್ ಕುಮಾರ್, ಕೇವಲ 10 ಕಾಮಗಾರಿಗಳಿಗೆ 10.48 ಕೋಟಿ ರೂ. ತಮ್ಮ ಮೇಯರ್ ಫಂಡ್ ನಿಧಿಯಿಂದ ಜಾಬ್ ಕೋಡ್ ಹಂಚಿದ್ದಾರೆ. ಇನ್ನು ನಗರದಲ್ಲಿರೋ ವಿವಿಧ ಜೋನ್ ಗಳಲ್ಲಿನ ಉದ್ಯಾನವನಗಳ ಪೈಕಿ ಬೆಂಗಳೂರು ಪೂರ್ವ ಭಾಗದಲ್ಲಿ ಅತಿಹೆಚ್ಚು ಅಂದರೆ ಒಟ್ಟು 280 ಪಾರ್ಕ್ ಗಳಿದೆ. ಆದರೆ ಇಲ್ಲಿ ಈಗಾಗಲೇ ಬಹುತೇಕ ಅಂದರೆ 254 ಪಾರ್ಕ್ ಗಳು ಅಭಿವೃದ್ಧಿಯಾಗಿದೆ. ಕೇವಲ 26 ಉದ್ಯಾನವನಗಳು ಮಾತ್ರ ಅಭಿವೃದ್ಧಿಯಾಗಿಲ್ಲ. ಇಲ್ಲಿ 7 ಕಾಮಗಾರಿಗಳಿಗೆ 7.50 ಕೋಟಿ ರೂ. ಅನುದಾನದ ನೀಡಲಾಗಿದೆ.
ಇನ್ನು ಮಹದೇವಪುರ ವಲಯದಲ್ಲಿ ಕೇವಲ 46 ಪಾರ್ಕ್ ಗಳಷ್ಟೆ ಇದೆ. ಅದರಲ್ಲಿ 31 ಪಾರ್ಕ್ ಗಳನ್ನು ಈಗಾಗಲೇ ಬಿಬಿಎಂಪಿ ಅಭಿವೃದ್ಧಿಪಡಿಸಿದೆ. ಕೇವಲ 15 ಪಾರ್ಕ್ ಗಳು ಅಭಿವೃದ್ಧಿಯಾಗಬೇಕಿದೆ. ಈ ಜೋನ್ ನಲ್ಲಿ 17 ಕಾಮಗಾರಿಗಳಿಗೆ 3.80 ಕೋಟಿ ರೂ. ಮೊತ್ತದ ಜಾಬ್ ಕೋಡ್ ನೀಡಲಾಗಿದೆ.
ದಾಸರಹಳ್ಳಿ ವಲಯದಲ್ಲಿ ಒಟ್ಟಾರೆ 37 ಪಾರ್ಕ್ ಗಳಿದ್ದು, ಆ ಪೈಕಿ 29 ಪಾರ್ಕ್ ಗಳು ಅಭಿವೃದ್ಧಿಯಾಗಿದ್ದರೆ, ಕೇವಲ 8 ಪಾರ್ಕ್ ಗಳಿನ್ನು ಅಭಿವೃದ್ಧಿಯಾಗಿಲ್ಲ. ಈ ವಲಯದಲ್ಲಿ 6 ಕಾಮಗಾರಿಗಳಿಗಾಗಿ 3.50 ಕೋಟಿ ರೂ. ಜಾಬ್ ಕೋಡ್ ನೀಡಲಾಗಿದೆ. ಪಶ್ಚಿಮ ವಲಯದಲ್ಲಿ ಒಟ್ಟಾರೆ 228 ಪಾರ್ಕ್ ಗಳಿವೆ. ಅದರಲ್ಲಿ 208 ಪಾರ್ಕ್ ಗಳು ಈಗಾಗಲೇ ಅಭಿವೃದ್ಧಿಯಾಗಿದೆ. ಕೇವಲ 20 ಪಾರ್ಕ್ ಗಳಷ್ಟೆ ಇನ್ನೂ ಅಭಿವೃದ್ಧಿಯಾಗಿಲ್ಲ. ಈ ವಲಯದಲ್ಲಿ 7 ಕಾಮಗಾರಿಗಳನ್ನು ಕೈಗೊಳ್ಳಲು 2 ಕೋಟಿ ರೂ. ಮೌಲ್ಯದ ಮೇಯರ್ ಅನುದಾನವನ್ನು ಹಂಚಲಾಗಿದೆ.
ಇನ್ನು ಯಲಹಂಕ ವಲಯದಲ್ಲಿ ಒಟ್ಟಾರೆ 139 ಉದ್ಯಾನವನಗಳಿದೆ. ಅದರಲ್ಲಿ 102 ಪಾರ್ಕ್ ಗಳು ಈಗಾಗಲೇ ಅಭಿವೃದ್ಧಿಯಾಗಿದ್ದರೆ, ಕೇವಲ 37 ಪಾರ್ಕ್ ಗಳು ಮಾತ್ರ ಅಭಿವೃದ್ಧಿಯಾಗಿಲ್ಲ. ಇಲ್ಲಿನ ಪಾರ್ಕ್ ಗಳ ಅಭಿವೃದ್ಧಿಗಾಗಿ ಕೇವಲ 4 ಕಾಮಗಾರಿಗಳನ್ನು ನಡೆಸಲು 75 ಲಕ್ಷ ರೂ. ಮೊತ್ತದ ಜಾಬ್ ಕೋಡ್ ನೀಡಲಾಗಿದೆ.
“ಹಿಂದಿನ ಮೇಯರ್ ಗೌತಮ್ ಕುಮಾರ್ ಅವಧಿಯಲ್ಲಿ ತೋಟಗಾರಿಕೆ ಕಾಮಗಾರಿಗಳಿಗೆ ಮೇಯರ್ ಫಂಡ್ ಹಂಚಿಕೆಗಳು ಕಮಿಷನ್ ವ್ಯವಹಾರಕ್ಕಾಗಿ ಮಾಡಿದ ಹಂಚಿಕೆ ಎನ್ನುವುದು ಎದ್ದು ಕಾಣುತ್ತೆ. ಇಂತಹ ಕರ್ಚು- ವೆಚ್ಚಗಳ ಬಗ್ಗೆ ಆಡಿಟ್ ಮಾಡಬೇಕಿರುವ ಬಿಬಿಎಂಪಿ, ರಾಜ್ಯ ಲೆಕ್ಕಪರಿಶೋಧನಾ ಇಲಾಖೆ, ಲೋಕಾಯುಕ್ತ ಸಂಸ್ಥೆಗಳು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಸೋತಿವೆ. ಇಂದಲ್ಲ – ನಾಳೆ ಪ್ರಾಮಾಣಿಕ ಅಧಿಕಾರಿಗಳು ಅಥವಾ ರಾಜಕಾರಣಿಗಳು ಈ ಅಕ್ರಮದ ಬಗ್ಗೆ ತನಿಖೆ ನಡೆಸಿದರೆ ತಪ್ಪಿತಸ್ಥರು ಕಾನೂನು ಚೌಕಟ್ಟಿನಿಂದ ತಪ್ಪಿಸಿಕೊಳ್ಳಲಾಗದು.”
– ರವಿಕೃಷ್ಣಾ ರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
ಅತಿಹೆಚ್ಚು ಅನುದಾನ ಹಂಚಿಕೆಯಾದ ಕಾಮಗಾರಿಗಳು
ಬಿಬಿಎಂಪಿಯಲ್ಲಿ ತೋಟಗಾರಿಕೆ ಇಲಾಖೆಗೆ ಮೇಯರ್ ವಿವೇಚನಾ ಕೋಟಾದಡಿ ಬರೋಬ್ಬರಿ 53.97 ಕೋಟಿ ರೂ. ವೆಚ್ಚದ 138 ಕಾಮಗಾರಿಗಳಿಗೆ ಜಾಬ್ ಕೋಡ್ ಹಂಚಿಕೆಯಲ್ಲಿ ಅತಿಹೆಚ್ಚು ಹಣ ಹಂಚಿಕೆಯಾದ ವಾರ್ಡ್ ಅಥವಾ ಕಾಮಗಾರಿಗಳ ವಿವರ ಈ ರೀತಿಯಿದೆ :
ಎಚ್.ಎಸ್.ಆರ್.ಲೇಔಟ್ ವಾರ್ಡ್ (1,2 ಹಾಗೂ 3ನೇ ಸೆಕ್ಟರ್ ಪಾರ್ಕ್ ಗಳ ಅಭಿವೃದ್ಧಿಗೆ) – 6 ಕೋಟಿ ರೂ.
ಉಲ್ಲಾಳು ವಾರ್ಡ್ (ಒಂದೇ ಜಾಬ್ ಕೋಡ್ ನಲ್ಲಿ- ಕಲ್ಯಾಣಿ ಲೇಔಟ್, ಐಬಿ ಲೇಔಟ್, ಜ್ಞಾನಭಾರತಿ ಲೇಔಟ್ 1 ಮತ್ತು 2ನೇ ಬ್ಲಾಕ್ ಹಾಗೂ ಇತರೆ ಪಾರ್ಕ್ ಗಳ ಅಭಿವೃದ್ಧಿ) – 5 ಕೋಟಿ ರೂ.
ಜಯನಗರ ಮತ್ತು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ 6 ವಾರ್ಡ್ ಗಳ ವ್ಯಾಪ್ತಿಯ ಲಕ್ಷಣರಾವ್ ಪಾರ್ಕ್ ಗಳಲ್ಲಿ 11 ಕಾಮಗಾರಿಗಳಿಗೆ) – 4.61 ಕೋಟಿ ರೂ.
ರಾಧಾಕೃಷ್ಣ ದೇವಸ್ಥಾನ ವಾರ್ಡ್ (ಇಲ್ಲಿನ ಪಾರ್ಕ್ ಗಳ ಅಭಿವೃದ್ಧಿಗೆ- 11 ಕಾಮಗಾರಿಗಳಿಗೆ) – 2.90 ಕೋಟಿ ರೂ.
ಬಗಲಗುಂಟೆ ವಾರ್ಡ್ (ಬಗಲಗುಂಟೆ ಕೆರೆ ಉದ್ಯಾನವನ ಅಭಿವೃದ್ಧಿಗಾಗಿ – 4 ಕಾಮಗಾರಿಗಳಿಗೆ) – 2.10 ಕೋಟಿ ರೂ.
ನಾಯಂಡಹಳ್ಳಿ ವಾರ್ಡ್ (ವಿವಿಧ ಪಾರ್ಕ್ ಗಳ ಅಭಿವೃದ್ಧಿಗೆ- 4 ಕಾಮಗಾರಿ) – 2.05 ಕೋಟಿ ರೂ.
ವಿಜ್ಞಾನ ನಗರ ವಾರ್ಡ್ ( ವಿಭೂತಿಪುರ ಕೆರೆ ಲ್ಯಾಂಡ್ ಸ್ಕೇಪ್ ಅಭಿವೃದ್ಧಿಗಾಗಿ- 10 ಕಾಮಗಾರಿಗಳಿಗಾಗಿ) – 2 ಕೋಟಿ ರೂ.
ಜೆ.ಪಿ.ಪಾರ್ಕ್ ವಾರ್ಡ್ (ಜೆ.ಪಿ.ಪಾರ್ಕ್ ಉದ್ಯಾನವನ ಅಭಿವೃದ್ಧಿಗೆ – 7 ಕಾಮಗಾರಿಗಳಿಗಾಗಿ) – 1.25 ಕೋಟಿ ರೂ.
ದೊಮ್ಮಲೂರು ವಾರ್ಡ್ ( ವಾರ್ಡ್ ನಲ್ಲಿನ ಸಮಗ್ರ ಪಾರ್ಕ್ ಗಳ ಅಭಿವೃದ್ಧಿ – 1 ಕಾಮಗಾರಿ) 1 ಕೋಟಿ ರೂ.
ಉತ್ತರಹಳ್ಳಿ ವಾರ್ಡ್ (ಪಟ್ಟಾಲಮ್ಮ ಪಾರ್ಕ್ ಅಭಿವೃದ್ಧಿ- 3 ಕಾಮಗಾರಿಗಳಿಗಾಗಿ) – 60 ಲಕ್ಷ ರೂ.
ಕೋರಮಂಗಲ ವಾರ್ಡ್ (ನಾಡಪ್ರಭು ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿ ಸಮಾಧಿ ಸ್ಥಳವಿರುವ ಪಾರ್ಕ್ ಅಭಿವೃದ್ಧಿಗೆ- 3 ಕಾಮಗಾರಿಗಳಿಗಾಗಿ) 30 ಲಕ್ಷ ರೂ.
ಹಳೇ ಗಿಡ ಹೊಸ ಬಿಲ್ಲು :
ತೋಟಗಾರಿಕೆ ಕ್ಷೇತ್ರದಲ್ಲಿ ಗಿಡ ನೆಡದಿದ್ರೂ, ಗಿಡ ನೆಡಲಾಗಿದೆ ಅಥವಾ ನೆಟ್ಟ ಗಿಡ ಒಣಗಿ ಹೋಗಿಯೋ, ರೋಗಬಂದು ನಾಶವಾಗಿದೆ ಅಂತೆಲ್ಲ ಕಥೆ ಕಟ್ಟೋಕೆ ಸಖತ್ ಅವಕಾಶವಿದೆ. ಒಂದು ಕಾಮಗಾರಿಯನ್ನು ಸಣ್ಣ ಸಣ್ಣ ಕಾಮಗಾರಿಗಳಾಗಿ ವಿಂಗಡಿಸಿ ಸಣ್ಣ ಮೊತ್ತದ ಹಣ ಹಂಚಿಕೆ ಮಾಡಿ ಟೆಂಡರ್ ಕರೆದು ತುಂಡು ಗುತ್ತಿಗೆ ನೀಡಿದರೆ ಯಾರ ಕಣ್ಣಿಗೂ ಬೀಳುವುದಿಲ್ಲ. ಸಣ್ಣ ಕಾಮಗಾರಿ ಅಲ್ವಾ? ಎಂದು ನಿರ್ಲಕ್ಷ್ಯ ಮಾಡಿಯಾರು ಎಂಬುದು ಒಂದು ತರ್ಕ.
ಹೀಗಾಗಿ ಮೇಯರ್ ಫಂಡ್ ತೋಟಗಾರಿಕೆ ಇಲಾಖೆಯ 138 ಕಾಮಗಾರಿಗಳಲ್ಲಿ 83 ಕಾಮಗಾರಿಗಳ ತಲಾ ಮೊತ್ತ 20 ಲಕ್ಷ ರೂ. ಇರುವಂತೆ ಜಾಬ್ ಕೋಡ್ ಹಂಚಿಕೆ ಮಾಡಿರುವುದನ್ನು ಕಾಣಬುದು. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೇಯರ್ ಕಚೇರಿಯಲ್ಲಿ ಕಿಕ್ ಬ್ಯಾಕ್ ಪಡೆದಿರುವುದರ ಸಾಧ್ಯತೆಯಿದೆ.
ಹಿಂದೆಲ್ಲ ಒಂದು ಕಾಮಗಾರಿ ಮೊತ್ತ ಒಂದು ಕೋಟಿ ರೂ. ಒಳಗಿದ್ದರೆ ಬಿಬಿಎಂಪಿ ಕಮಿಷನರ್, 1 ರಿಂದ 3 ಕೋಟಿವರೆಗೆ ಸ್ಥಾಯಿ ಸಮಿತಿ, 3 ಕೋಟಿ ರೂ. ನಿಂದ 5 ಕೋಟಿ ರೂ. ತನಕ ಪಾಲಿಕೆ ಕೌನ್ಸಿಲ್ ಸಭೆ ಅನುಮೋದನೆ ಹಾಗೂ 5 ಕೋಟಿ ರೂ. ಮೇಲ್ಪಟ್ಟ ಕಾಮಗಾರಿಗೆ ಸರ್ಕಾರದಿಂದ ಒಪ್ಪಿಗೆ ಪಡೆಯಬೇಕಾಗುತ್ತದೆ. ಹೀಗಾಗಿ ಕಮಿಷನರ್ ಮಟ್ಟದಲ್ಲೇ ಕಾಮಗಾರಿ ಟೆಂಡರ್ ಒಪ್ಪಿಗೆ ಪಡೆದುಕೊಳ್ಳಬಹುದು ಎಂಬ ದೂರಾಲೋಚನೆಯೂ ಇಲ್ಲಿ ಕೆಲಸ ಮಾಡಿರುವುದನ್ನು ಅಲ್ಲಗಳೆಯುವಂತಿಲ್ಲ.
“ಬಿಬಿಎಂಪಿಯಲ್ಲಿ 1,348 ಪಾರ್ಕ್ ಗಳ ಆಡಿಟ್ ಮಾಡುವ ಅವಶ್ಯಕತೆಯಿದೆ. ಅದರಲ್ಲೂ ಪ್ರಮುಖವಾಗಿ ಹಿಂದಿನ ಮೇಯರ್ ಗೌತಮ್ ಅವಧಿಯಲ್ಲಿ ಮೇಯರ್ ಫಂಡ್ ಮೂಲಕ ಜಾಬ್ ಕೋಡ್ ಹಂಚಿಕೆ ಮಾಡಲಾದ 37 ವಾರ್ಡ್ ಗಳಲ್ಲಿನ ಪಾರ್ಕ್ ಗಳ ಸ್ಥಿತಿಗತಿ ಬಗ್ಗೆ ಕಾಮಗಾರಿ ಆಡಿಟ್, ಸೈಟ್ ಆಡಿಟ್, ಹಣಕಾಸು ಲೆಕ್ಕಪರಿಶೋಧನೆ ಹಾಗೂ ಎಷ್ಟು ಗಿಡಗಳಿದ್ದವು? ಎಷ್ಟು ಬೆಳೆದಿದೆ? ಎಷ್ಟು ನಾಶವಾಗಿದೆ? ಅಂತ ಪರಿಶೀಲನೆ ಆಗಬೇಕಿದೆ. ಯಾಕೆಂದ್ರೆ ಹಿಂದೆಲ್ಲ ಲಾಲ್ ಭಾಗ್ ನರ್ಸರಿ ಕೋ ಆಪರೇಟಿವ್ ಸೊಸೈಟಿ ಹೆಸರಲ್ಲಿ ಕೆಲಸ ಮಾಡದೆ ಬಿಲ್ ಮಾಡಿ ಹಣ ದುರುಪಯೋಗ ಮಾಡಿದ ಉದಾಹರಣೆಗಳಿವೆ. ಬಿಬಿಎಂಪಿಯ ಕೊನೆಯ ಮೇಯರ್ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾರ್ವಜನಿಕರು ಆರೋಪಿಸಿದ್ದಾರೆ. ಹೀಗಾಗಿ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಅಗತ್ಯವಿದೆ.”
– ಪಿ.ಆರ್.ರಮೇಶ್, ವಿಧಾನಪರಿಷತ್ ಸದಸ್ಯರು ಹಾಗೂ ಮಾಜಿ ಮೇಯರ್
ಕಾಮಗಾರಿ ನಡೆಸದೆ ಬಿಲ್ ಮಾಡುವ ಚಾಲಾಕಿ ಅಧಿಕಾರಿಗಳಿದ್ದಾರೆ :
ಒಂದೊಮ್ಮೆ ಕಾಮಗಾರಿ ನಡೆಸದೇ ಬಿಲ್ ಮಾಡಿದರೂ ಅದನ್ನು ಪರಿಶೀಲಿಸಬೇಕಾದ ತಾಂತ್ರಿಕ ನೈಪುಣ್ಯತೆ ತೋಟಗಾರಿಕೆ ಅಧಿಕಾರಿಗಳಿಗೆ ಬಿಟ್ಟು ಉಳಿದವರಿಗೆ ತಿಳಿಯೋದು ಕಷ್ಟ. ಯಾವ ಗಿಡಕ್ಕೆ ಎಷ್ಟು ಮಣ್ಣು, ಗೊಬ್ಬರ ಹಾಕಲಾಗಿದೆ? ಯಾವ ಮೆಟೀರಿಯಲ್ ಎಷ್ಟು ಹಣಕ್ಕೆ ಲಭ್ಯವಾಗುತ್ತೆ? ಇಲ್ಲಿ ಕೆಲಸ ನಡೆದಿದೆಯಾ ಇಲ್ಲವಾ? ಎಂಬಿತ್ಯಾದಿ ಮಾಹಿತಿಯನ್ನು ಗುತ್ತಿಗೆದಾರನೊಂದಿಗೆ ಶಾಮೀಲಾದ ತೋಟಗಾರಿಕೆ ಅಧಿಕಾರಿ ಹೇಗೆ ತಾನೆ ಬಿಟ್ಟುಕೊಡುತ್ತಾನೆ?
ಅಭಿವೃದ್ಧಿಯಾದ ಪಾರ್ಕ್ ಗಳಿಗೆ ಪದೇ ಪದೇ ಅನುದಾನ ಹಂಚಿಕೆ?
ಇಡೀ ಜಾಬ್ ಕೋಡ್ ಹಂಚಿಕೆ ಪ್ರಕ್ರಿಯೆಯನ್ನು ಗಮನಿಸಿದರೆ ಪ್ರಭಾವಿ ಕಾರ್ಪೊರೇಟರ್ ಗಳಿದ್ದ ವಾರ್ಡ್ ಗಳಲ್ಲಿ, ಬಲಶಾಲಿ ಗುತ್ತಿಗೆದಾರರ ಲಾಭಿಯಿದ್ದ ಕಡೆ ಅಭಿವೃದ್ಧಿಯಾದ ಪಾರ್ಕ್ ಗಳಿಗೆ ಪದೇ ಪದೇ ಮೇಯರ್ ಫಂಡ್ ಹಣ ಹಂಚಿಕೆಯಾಗಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಉದಾಹರಣೆಗೆ ಲಕ್ಷಣ್ ರಾವ್ ಬುಲೇವಾರ್ಡ್ ಹೆಸರಿನಲ್ಲಿ 2 ವಿಧಾನಸಭಾ ಕ್ಷೇತ್ರದ 6 ವಾರ್ಡ್ ವ್ಯಾಪ್ತಿಯಲ್ಲಿ 17 ಪಾರ್ಕ್ ಗಳಿದ್ದು ಅವುಗಳೆಲ್ಲ ಅಭಿವೃದ್ಧಿ ಹೊಂದಿದೆ ಉದ್ಯಾನವನಗಳಾಗಿದೆ. ಅದೇ ರೀತಿ ಕೋರಮಂಗಲದ ಲಕ್ಷ್ಮಿದೇವಿ ಪಾರ್ಕ್ ಈಗಾಗಲೇ ಬಿಬಿಎಂಪಿಯ ಅಭಿವೃದ್ಧಿ ಹೊಂದಿದ ಪಾರ್ಕ್ ಗಳ ಪಟ್ಟಿಯಲ್ಲಿದ್ದರೂ ಪದೇ ಪದೇ ಪಾರ್ಕ್ ಅಭಿವೃದ್ಧಿಗೆ ಹಣ ಮೀಸಲಿಡಲಾಗುತ್ತಿದೆ. ಇದೇ ರೀತಿ ಉತ್ತರಹಳ್ಳಿ ವಾರ್ಡ್ ನ ಪಟ್ಟಾಲಮ್ಮ ದೇವಸ್ಥಾನ ಪಾರ್ಕ್, ಎಚ್ಎಸ್ ಆರ್ ಬಡಾವಣೆ 1, 2 ಹಾಗೂ 3ನೇ ಸೆಕ್ಟರ್ ಪಾರ್ಕ್ ಗಳು ಪಾಲಿಕೆಯ ಅಭಿವೃದ್ಧಪಡಿಸಿದ ಪಾರ್ಕ್ ಪಟ್ಟಿಯಲ್ಲಿದ್ದರೂ ಮೇಯರ್ ಗೌತಮ್ ಕುಮಾರ್ ತಮ್ಮ ಮೇಯರ್ ಫಂಡ್ ನಲ್ಲಿ ಇವುಗಳಿಗೆ ಹಣ ಮೀಸಲಿಟ್ಟಿದ್ದಾರೆ.
ಒಟ್ಟಾರೆ 53ನೆಯ ಮೇಯರ್ ಅವಧಿಯಲ್ಲಿ ತೋಟಗಾರಿಕೆ ವಿಭಾಗಕ್ಕೆ ಮೇಯರ್ ಫಂಡ್ ಅನುದಾನದಡಿ ಹಂಚಿಕೆಯಾದ ಜಾಬ್ ಕೋಡ್ ಗಳ ಬಗ್ಗೆ ಸಮಗ್ರ ತನಿಖೆ ನಡೆದರೆ ಜಾಬ್ ಕೋಡ್ ಹಂಚಿಕೆಯಲ್ಲಿ ಪರ್ಸಂಟೇಜ್ ಕಿಕ್ ಬ್ಯಾಕ್ ಅವ್ಯವಹಾರ ಬೆಳಕಿಗೆ ಬರಲಿದೆ. ಈ ಬಗ್ಗೆ ಪಾಲಿಕೆ ಆಡಳಿತಾಧಿಕಾರಿ ಹಾಗೂ ಮುಖ್ಯ ಆಯುಕ್ತರು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರು, ಪ್ರಙ್ಞ ನಾಗರೀಕರು ಆಗ್ರಹಿಸಿದ್ದಾರೆ.