ಬೆಂಗಳೂರು, ಜು.26 ( www.bengaluruwire.com ) : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಿನಾಮೆ ಪ್ರಹಸನಕ್ಕೆ ಸೋಮವಾರ ಅಂತಿಮ ತೆರೆ ಬಿದ್ದಿದೆ. ಬಿಜೆಪಿ ಅಧಿಕಾರಕ್ಕೆ ಬಂದು ಸೋಮವಾರಕ್ಕೆ ಎರಡು ವರ್ಷ ಸಂದಿದ್ದು, ವಿಧಾನಸೌಧದಲ್ಲಿ ಸಾಧನಾ ಸಮಾವೇಶ ಕಾರ್ಯಕ್ರಮ ಮುಗಿಸಿದ ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲ ತಾವರ್ ಚೆಂದ್ ಗೆಹಲೋತ್ ಗೆ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದರು.
ಇದೇ ವೇಳೆ ರಾಜ್ಯಪಾಲ ತಾವರ್ ಚೆಂದ್ ಗೆಹಲೋತ್ ಮುಂದಿನ ಮುಖ್ಯಮಂತ್ರಿ ಆಯ್ಕೆಯಾಗುವ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಸೂಚನೆ ನೀಡಿದ್ದಾರೆ. ಬಿ.ಎಸ್.ವೈ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಹಿನ್ನಲೆಯಲ್ಲಿ ರಾಜಭವನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಚಿವ ಸಂಪುಟದ ಸಹದ್ಯೋಗಿಗಳು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆಯಲ್ಲಿದ್ದರು.
ರಾಜಭವನದಲ್ಲಿ ರಾಜ್ಯಪಾಲರಿಗೆ ರಾಜಿನಾಮೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಿನಾಮೆ ನೀಡಲು ಎರಡು ತಿಂಗಳ ಹಿಂದೆಯೇ ತೀರ್ಮಾನಿಸಿದ್ದೆ. ಸ್ವಯಂಪ್ರೇರಿತವಾಗಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೆನೆಯೇ ವಿನಃ ನನಗೆ ದೆಹಲಿ ಹೈಕಮಾಂಡ್ ನಿಂದ ಯಾವುದೇ ಒತ್ತಡ ಹೇರಿಲ್ಲ. ನನಗೆ ಪಕ್ಷವು 4 ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟಿದೆ. ಅದಕ್ಕೆ ಆಭಾರಿಯಾಗಿದ್ದೇನೆ. ಅಧಿಕಾರ ಬದಲಾವಣೆ ವಿಚಾರ ಬಂದಾಗ 500ಕ್ಕೂ ಅಧಿಕ ಸ್ವಾಮೀಜಿಗಳು ನನಗೆ ನೀಡಿರುವ ಬೆಂಬಲಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಬೇಡಿಕೆ ಇಟ್ಟಿಲ್ಲ. ಯಾರ ಹೆಸರನ್ನು ನಾನು ಹೈಕಮಾಂಡ್ ಗೆ ಸೂಚಿಸಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ. ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಲು ಕೆಲಸ ಮಾಡುತ್ತೇನೆ. ಮುಂದೆ ಬರುವ ಸಿಎಂಗೂ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.
ರಾಜಭವನದಿಂದ ನೇರವಾಗಿ ಕಾವೇರಿ ನಿವಾಸದಲ್ಲಿ ತಮ್ಮ ಆಪ್ತ ಬಳಗದ ಜೊತೆ ಮುಂದಿನ ನಡೆಯ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ಎಂ.ಟಿ.ಬಿ.ನಾಗರಾಜ್, ನಾರಾಯಣಗೌಡ, ಡಾ.ಕೆ.ಸುಧಾಕರ್, ಸಿಸಿ ಪಾಟೀಲ್, ಲಕ್ಷಣ್ ಸವದಿ, ಜೀವರಾಜ್, ರೇಣುಕಾಚಾರ್ಯ, ಎಸ್.ಆರ್.ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಇಂಗಿತವನ್ನು ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಹಿಂದಿನ ರಾಜಕೀಯ ದಿನಗಳನ್ನು ಮೆಲಕು ಹಾಕಿದ ಬಿ.ಎಸ್.ಯಡಿಯೂರಪ್ಪ, 75 ವರ್ಷ ಮೀರಿದ ವ್ಯಕ್ತಿಗೆ ಬಿಜೆಪಿಯಲ್ಲಿ ಅಧಿಕಾರ ನೀಡುವುದಿಲ್ಲ. ಆದರೂ ನನ್ನ ಮೇಲೆ ಹೈಕಮಾಂಡ್ ಗೆ ಇರುವ ಪ್ರೀತಿಯ ಕಾರಣದಿಂದ ಎರಡು ವರ್ಷಗಳ ಮುಖ್ಯಮಂತ್ರಿ ಆಗಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿದ್ದರು. ಇದಕ್ಕೆ ಪದಗಳಲ್ಲಿ ಧನ್ಯವಾದ ಹೇಳಲು ಸಾಲುತ್ತಿಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಇಲ್ಲದ ಸಂದರ್ಭದಲ್ಲಿ ನಾನು ಏಕಾಂಗಿಯಾಗಿ ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡಿದೆ. ನಾನು ಹಾಗೂ ಬೆಳ್ತಂಗಡಿಯ ವಸಂತ ಬಂಗೇರ ಅರು ವಿಧಾನಸಭೆಗೆ ಆಯ್ಕೆಯಾದಾಗ, ಅವರು ದಿಢೀರ್ ಎಂದು ಪಕ್ಷಕ್ಕೆ ಕೈಕೊಟ್ಟು ಹೊರ ನಡೆದರು. ಆ ಸಂದರ್ಭದಲ್ಲಿ ನಾನು ಎದೆಗುಂದದೆ, ಆತ್ಮವಿಶ್ವಾಸ ಕಳೆದು ಕೊಳ್ಳದೆ ಒಬ್ಬಂಟಿಗನಾಗಿ ಹೋರಾಟ ನಡೆಸಿದ ಫಲವಾಗಿ ಇಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇನೆ. ಈ ಹಿಂದೆ ನನ್ನ ಪಕ್ಷಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲು ಆಹ್ವಾನ ನೀಡಿದ್ದರು. ಆದರೆ ತಾವು ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆ ಬಲ ಪಡಿಸಲು ಆ ಅವಕಾಶವನ್ನು ಒಪ್ಪಲಿಲ್ಲ ಎಂದು ನುಡಿದ ಸಿಎಂ ಯಡಿಯೂರಪ್ಪ ಭಾವುಕರಾಗಿ ಮಾತುನುದ್ದಕ್ಕೂ ಗದ್ಗಿತರಾದರು.