ಬೆಂಗಳೂರು ( www.bengaluruwire.com ) : ಬೆಂಗಳೂರಿನ ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದ ಹಿಂಭಾಗ, ಜಲಮಂಡಳಿಯು ಕಳೆದ ಎರಡು ತಿಂಗಳ ಹಿಂದೆ ಕಾಮಗಾರಿಯೊಂದಕ್ಕೆ, ಸುಮಾರು 15 ಅಡಿಯಷ್ಟು ಉದ್ದದ ರಾಜಕಾಲುವೆ ಗೋಡೆಯನ್ನು ಒಡೆದು ಹಾಕಿತ್ತು. ಭಾನುವಾರ ರಾತ್ರಿ ಜೋರಾಗಿ ಸುರಿದ ಮಳೆಯ ಪರಿಣಾಮ ರಾಜಕಾಲುವೆ ನೀರಿನಮಟ್ಟ ಏರಿಕೆಯಾಗಿ ಅಪಾರ್ಟ್ ಮೆಂಟ್ ಆವರಣಕ್ಕೆ 3 ಅಡಿವರೆಗೆ ನೀರು ನುಗ್ಗಿತು. ಪರಿಣಾಮ ಹಲವು ವಾಹನಗಳು ನೀರಿನಲ್ಲಿ ಸಿಲುಕಿದವು. ಏಕಾಏಕಿ ಅಪಾರ್ಟ್ ಮೆಂಟ್ ಆವರಣಕ್ಕೆ ನೀರು ನುಗ್ಗಿದ ಪರಿಣಾಮ ಸ್ಥಳೀಯರು ಭಯಭೀತರಾಗಿದ್ದರು.
ರಾಜಕಾಲುವೆಯಲ್ಲಿ ಜಲಮಂಡಳಿ ಒಳಚರಂಡಿ ನೀರಿನ ಪೈಪ್ ಅಳವಡಿಸಲು ವಾಹನ ಹೋಗಲು ಅನುವಾಗುವಂತೆ ರಾಜಕಾಲುವೆ ಗೋಡೆ ಒಡೆದು ಹಾಕಿತ್ತು. ಆದರೆ ಕಾಮಗಾರಿ ಕೆಲಸದ ನಂತರ ಮರಳಿನ ಚೀಲ ಹಾಕದ ಪರಿಣಾಮ ಕಾಲುವೆ ನೀರು ಕ್ರೀಡಾಗ್ರಾಮಕ್ಕೆ ನುಗ್ಗಿದೆ. ಮುಂದೆ ಇದೇ ರೀತಿ ಪುನರಾವರ್ತನೆಯಾದರೆ ಎನ್ ಜಿವಿ ಗ್ರಾಮದ ನಿವಾಸಿಗಳು ಸಂಕಷ್ಠಕ್ಕೆ ಸಿಲುಕುವುದು ತಪ್ಪುವುದಿಲ್ಲ ಎಂದು ಸ್ಥಳೀಯ ನಾಗರೀಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜಲಮಂಡಳಿ ಅಧಿಕಾರಿಗಳು ಹಾಗೂ ಬಿಬಿಎಂಪಿ ಬೃಹತ್ ನೀರುಗಾಲುವೆ ಅಧಿಕಾರಿಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.