ಬೆಂಗಳೂರು ( www.bengaluruwire.com ) : ಜಕ್ಕೂರಿನ ವೈಮಾನಿಕ ತರಬೇತಿ ಶಾಲೆಯಲ್ಲಿ ಸರ್ಕಾರಕ್ಕೆ ಬಾಡಿಗೆವಪಾವತಿಸುವಂತೆ ನೋಟಿಸ್ ನೀಡಿದರೂ ಕಳೆದ 12 ವರ್ಷಗಳಿಂದ ಬಾಡಿಗೆ ನೀಡದ ಅಗ್ನಿ ಏರೋಸ್ಪೋರ್ಟ್ಸ್ ಸಂಸ್ಥೆಯ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸಂಸ್ಥೆಯ ಕಚೇರಿಗೆ ಶುಕ್ರವಾರ ಬೀಗಮುದ್ರೆ ಹಾಕಲಾಗಿದೆ.
ಅಗ್ನಿ ಏರೋಸ್ಪೋರ್ಟ್ಸ್ ಆಡ್ವೆಂಚರ್ ಬಾಡಿಗೆ ನೀಡದ ಕಾರಣ ನೋಟಿಸ್ ನೀಡಲಾಗಿತ್ತು. ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರು ಸಭೆ ನಡೆಸಿ, ತಕ್ಷಣ ಬಾಡಿಗೆ ವಸೂಲು ಮಾಡಬೇಕು ಇಲ್ಲವೇ ಆಸ್ತಿ ಮುಟ್ಟುಗೋಲು ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿ ಅಗ್ನಿ ಏರೋಸ್ಪೋರ್ಟ್ಸ್ ಗೆ ಲೀಸ್ ಕಮ್ ಬಾಡಿಗೆ ಆಧಾರದಲ್ಲಿ 80×120 ಅಡಿ ಹಳತೆಯ ಎರಡು ಹ್ಯಾಂಗರ್ ನಿವೇಶನ ನೀಡಲಾಗಿತ್ತು. ಆದರೆ 2008 ರಿಂದ ಈ ವರೆಗೆ ಸರಿಯಾಗಿ ಬಾಡಿಗೆ ನೀಡದೆ, ಏರೊಡ್ರಮ್ ಸ್ಥಳವನ್ನೂ ಒತ್ತುವರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅದರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
2008 ರಿಂದ ಇದುವರೆಗೆ ಅಗ್ನಿ ಏರೋಸ್ಪೋರ್ಟ್ಸ್ 1.50 ಕೋಟಿ ರೂ. ಬಾಡಿಗೆ ಬಾಕಿ ಹಣ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನುನಾತ್ಮಕವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೆ ಅಕ್ರಮವಾಗಿ ವೈಮಾನಿಕ ತರಬೇತಿ ಶಾಲೆಯ ನಿವೇಶವನ್ನು ಒತ್ತುವರಿ ಮಾಡಿಕೊಂಡಿದ್ದರು. ಸರ್ವೆ ನಡೆಸಿದ ಅಧಿಕಾರಿಗಳು, 24,143 ಚದರ್ ಅಡಿ ಜಾಗ ಒತ್ತುವರಿಯಾಗಿರುವುದನ್ನು ಗುರುತಿಸಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿರುವ ಎಲ್ಲ ಸಂಸ್ಥೆಗಳ ಬಾಡಿಗೆ ಬಾಕಿ ಹಣದ ವಿಚಾರವಾಗಿ ಮೂರ್ನಾಲ್ಕು ಸಭೆ ನಡೆಸಿದ್ದರು. ಸಚಿವರ ಸೂಚನೆಯಂತೆ ಅಧಿಕಾರಿಗಳು ಮೇಲಿಂದ ಮೇಲೆ ನೋಟಿಸ್ ನೀಡಿದ್ದರು. ಆದರೆ ಅಗ್ನಿ ಸಂಸ್ಥೆ ಮಾತ್ರ ಷರತ್ತು ಉಲ್ಲಂಘಿಸಿ ವರ್ತಿಸಿದೆ.
ಈ ಕಾರಣದಿಂದ ಸಚಿವರು ನೋಟಿಸ್ ಅವಧಿ ಮುಗಿದ ತಕ್ಷಣ ಕಾನೂನು ರೀತಿಯಲ್ಲಿ ಕ್ರಮ ಜರುಗಿಸುವಂತೆ ಸೂಚಿಸಿದ್ದರು. ಅಂತೆಯೇ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳು ಸರ್ವೆ ನಡೆಸಿ, ಸಚಿವರಿಗೆ ವರದಿ ನೀಡಿದ್ದರು, ಬಾಡಿಗೆ ಬಾಕಿ ಮತ್ತು ಅಕ್ರಮವಾಗಿ ನಿವೇಶನ ಒತ್ತುವರಿ ಕಾರಣ ಆಗಿ ಏರೋಸ್ಪೋರ್ಟ್ಸ್ ನ ಆಸ್ತಿಯನ್ನು ಮುಟ್ಟುಗೋಲು ಹಾಕಿ ಬೀಗ ಮುದ್ರೆ ಹಾಕಿದ್ದಾರೆ.
ಷರತ್ತಿನಂತೆ ನಡೆಯದಿದ್ದರೆ ಉಳಿದ ಸಂಸ್ಥೆಗಳ ಮೇಲು ಇದೇ ಕ್ರಮ- ಸಚಿವರ ಎಚ್ಚರಿಕೆ :
ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿರುವ ಎಲ್ಲ ಕಂಪೆನಿಗಳಿಗೂ ಈಗಾಗಲೆ ನೋಟಿಸ್ ನೀಡಲಾಗಿದೆ. ಉಳಿದ ಕಂಪೆನಿಗಳು ನೋಟಿಸ್‌ಗೆ ಉತ್ತರಿಸಿ ಅಲ್ಪ ಪ್ರಮಾಣದಲ್ಲಿ ಬಾಡಿಗೆಯನ್ನೂ ಪಾವತಿಸಿವೆ. ಆದರೆ ಸಂಪೂರ್ಣ ಬಾಡಿಗೆ ಹಣ ಪಾವತಿಸಬೇಕು. ನಿಯಮ ಉಲ್ಲಂಘನೆಯಾಗಿದ್ದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬೇಕು. ಇದಕ್ಕೆ 15 ದಿನಗಳ ಕಾಲಾವಕಾಶ ನೀಡಲಾಗಿದೆ, ಅಷ್ಟರೊಳಗೆ ಬಾಕಿ ಹಣ ಪಾವತಿಯಾಗದಿದ್ದಲ್ಲಿ ಎಲ್ಲ ಚಟುವಟಿಕೆ ಸ್ಥಗಿತಗೊಳಿಸಿ, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಉದ್ಧಟತನ ತೋರಿದ ಆಗ್ನಿ ವಿರೋಸೋರ್ಟ್ ಮೇಲೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗಿದೆ. ಇದು ಇತರ ಕಂಪೆನಿಗಳಿಗೆ ಎಚ್ಚರಿಕೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.
ಅಕ್ರಮಗಳ ಸರಮಾಲೆಯಾಗಿದ್ದ ಅಗ್ನಿ ಏರೋಸ್ಪೋರ್ಟ್ಸ್ :
ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿ ಸಕ್ಷಮ ಪ್ರಾಧಿಕಾರಗಳ ಅನುಮತಿ ಪಡೆಯದೆ ಅಗ್ನಿ ಏರೋಸ್ಪೋರ್ಟ್ಸ್ ತಮ್ಮ ಸಂಸ್ಥೆಯ ಕಚೇರಿಯನ್ನು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದರು. ಡಿಜಿಸಿಎ ನಿಯಮ ಉಲ್ಲಂಘಿಸಿ ವಾಣಿಜ್ಯ ಮಾದರಿಯಲ್ಲಿ ಅನಧಿಕೃತವಾಗಿ ಮೈಕ್ರೋಲೈಟ್ ವಿಮಾನಗಳಲ್ಲಿ ಸಾರ್ವಜನಿಕರಿಗೆ ಜಾಲಿ ರೈಡ್ ಆಯೋಜಿಸಿತ್ತಿದ್ದರು. ಇದರಿಂದ ವಾರ್ಷಿಕ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತಿದ್ದು, ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದೊಳಗೆ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ನೀಡಿದ್ದಾರೆ. ತಮ್ಮ ವಿಮಾನಗಳಲ್ಲಿ ಅಕ್ರಮ ಹಾರಾಟಕ್ಕೆ ಅವಕಾಶ ನೀಡಿ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವ ರೀತಿ ನಡೆದುಕೊಂಡಿದ್ದಾರೆ. ವೈಮಾನಿಕ ಉದ್ದೇಶಕ್ಕೆ ನೀಡಿದ್ದ ಹ್ಯಾಂಗರ್ ಸ್ಥಳಗಳನ್ನು ಅನಧಿಕೃತ ಚಟುವಟಿಕೆಗಳಿಗೆ ಬಳಸಿ ಬಾಡಿಗೆ ಷರತ್ತು ಉಲ್ಲಂಘಿಸಿದ್ದಾರೆ.
ಖಾಸಗಿ ವ್ಯಕ್ತಿಗಳ ವಿಮಾನ, ಮೈಕ್ರೋಲೈಟ್, ಪ್ಯಾರಾಮೋಟಾರ್ ಗ್ಲೈಡರ್ ಮತ್ತಿತರ ವೈಮಾನಿಕ ಉಪಕರಣಗಳನ್ನು ತಮ್ಮ ಹ್ಯಾಂಗರ್‌ನಲ್ಲಿ ಇಡಲು ಅವಕಾಶ ಕಲ್ಪಿಸಿ ಖಾಸಗಿ ವ್ಯಾಜ್ಯಗಳಿಗೆ ಅವಕಾಶ ನೀಡಿದ್ದಾರೆ ಎಂದು ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು.
ನಿವೇಶನ ರದ್ದು, ಬಾಕಿ ನೀಡುವವರೆಗೆ ಆಸ್ತಿ ಮುಟ್ಟುಗೋಲು :
ಅಗ್ನಿ ಏರೋಸ್ಪೋರ್ಟ್ಸ್ ಅಡ್ವೆಂಚರ್ ಅಕಾಡೆಮಿ ಸಂಸ್ಥೆಯು ನಿಯಮಗಳನ್ನೆಲ್ಲ ಉಲ್ಲಂಘಿಸಿ, ನೋಟಿಸ್‌ಗೂ ಉತ್ತರಿಸದೆ ಷರತ್ತಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಆದ್ದರಿಂದ ಸಂಸ್ಥೆಗೆ ಲೀಸ್ ಕಮ್ ಬಾಡಿಗೆ ಆಧಾರದಲ್ಲಿ ನೀಡಿದ್ದ 19,200 ಚದರ್ ಆಡಿ ನಿವೇಶನವನ್ನು ರದ್ದುಪಡಿಸಲಾಗಿದೆ. ಬಾಡಿಗೆ ಹಣವನ್ನು ಪಾವತಿಸುವವರೆಗೆ ಸಂಸ್ಥೆಯ ಎಲ್ಲ ಸ್ವತ್ತುಗಳನ್ನು ಯಥಾಸ್ಥಿತಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಂಸ್ಥೆಯ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.