ಬೆಂಗಳೂರು ( www.bengaluruwire.com ) : ಬೈಕ್ ಟ್ಯಾಕ್ಸಿ ಯೋಜನೆಗೆ ಅವಕಾಶ ನೀಡಬಾರದು ಹಾಗೂ ಓಲಾ ಸಂಸ್ಥೆ ನಿಯಮ ಉಲ್ಲಂಘಿಸುತ್ತಿದೆ ಎಂದು ಬಡ ಕಾರು ಚಾಲಕರ ಮೇಲೆ ದಂಡ ಹಾಕುವುದನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ಓಲಾ, ಕಾರ್ ಫಾರ್ ಶ್ಯೂರ್, ಊಬರ್ ಚಾಲಕರು ಮತ್ತು ಮಾಲೀಕರ ಸಂಘ ( ಒಟಿಯುಡಿಒಎ) ಗುರುವಾರ ಸಾರಿಗೆ ಇಲಾಖೆ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಡಬಲ್ ರೋಡ್ ನಿಂದ ಶಾಂತಿನಗರದ ಸಾರಿಗೆ ಇಲಾಖೆ ಕೇಂದ್ರ ಕಚೇರಿವರೆಗೆ ಆಟೊ ಮತ್ತು ಟ್ಯಾಕ್ಸಿ ಚಾಲಕರೊಂದಿಗೆ ಕಾಲ್ನಡಿಗೆ ಜಾಥಾದಲ್ಲಿ ತೆರಳಿ ಪ್ರತಿಭಟನೆ ನಡೆಸಿದ ಬಳಿಕ ಮಾತನಾಡಿದ ಒಟಿಯುಡಿಒಎ ಸಂಸ್ಥಾಪಕ ಅಧ್ಯಕ್ಷ ತನ್ವೀರ್ ಪಾಷ ಮಾತನಾಡಿದರು.
ಬೈಕ್ ಟ್ಯಾಕ್ಸಿ ಸೇವೆಗೆ ರಾಜ್ಯ ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶ ಇಲ್ಲದಿದ್ದರೂ ಸರ್ಕಾರ ಹೊಸದಾಗಿ ಆದೇಶ ಮಾಡಿ ಬೈಕ್ ಟ್ಯಾಕ್ಸಿ ಸೇವೆಗೆ ಅವಕಾಶ ನೀಡಲು ಮುಂದಾಗಿದ್ದು ಇದರಿಂದ ಲಕ್ಷಾಂತರ ಆಟೋ ಮತ್ತು ಟ್ಯಾಕ್ಸಿ ಚಾಲಕರು ಬೀದಿಗೆ ಬೀಳಲಿದ್ದಾರೆ. ಹಾಗಾಗಿ ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು ಎಂದು ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್ ಅವರಿಗೆ ಇದೇ ವೇಳೆ ಮನವಿ ಸಲ್ಲಿಸಿದರು.
ಕರೋನಾ ದಿಂದಾಗಿ ಈಗಾಗಲೇ ಕಾರು ಚಾಲಕರು ಬಾಡಿಗೆ ಇಲ್ಲದೆ ಆರ್ಥಿಕ ದುಸ್ಥಿತಿಗೆ ತಲುಪಿದ್ದಾರೆ. ಆದರೆ ಇತ್ತೀಚೆಗೆ ಸಾರಿಗೆ ಇಲಾಖೆ ವಿದ್ಯುತ್ ಬೈಕ್ ಟ್ಯಾಕ್ಸಿ ಕೈಪಿಡಿ ಬಿಡುಗಡೆ ಮಾಡಿದೆ. ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯಿಂದ ಬೈಕ್ ಕಂಪನಿಗಳು ಹಾಗೂ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಗಳಿಗೆ ಅನುಕೂಲವಾಗುತ್ತದೆ. ಆದರೆ ಈಗಾಗಲೇ ಬಾಡಿಗೆ ಇಲ್ಲದೆ ಸೊರಗಿರುವ ಓಲಾ, ಊಬರ್ ಕಾರು ಮತ್ತಿತರ ಕಾರು ಚಾಲಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ.
ಈ ಸರ್ಕಾರದ ನಡೆ ಬೈಕ್ ಸಂಸ್ಥೆ ಹಾಗೂ ಬೈಕ್ ಟ್ಯಾಕ್ಸಿ ಸಂಸ್ಥೆಗಳೊಂದಿಗೆ ಲಾಬಿ ನೆಡೆಸಿ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದೆ. ಕೂಡಲೇ ಈ ಯೋಜನೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಅತೀ ಶೀಘ್ರದಲ್ಲೆ ಆಟೋ ಮತ್ತು ಟ್ಯಾಕ್ಸಿ ಚಾಲಕರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅನ್ವರ್ ಪಾಷ ಸಾರಿಗೆ ಇಲಾಖೆಗೆ ಎಚ್ಚರಿಕೆ ನೀಡಿದರು.
ಓಲಾ ಸಂಸ್ಥೆ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂದು ಒಂದು ವಾರದಿಂದ ಅಮಾಯಕ ಚಾಲಕರ ವಾಹನಗಳನ್ನು ಹಿಡಿದು ಸಾರಿಗೆ ಅಧಿಕಾರಿಗಳು, ಪೊಲೀಸರು ದಂಡ ಹಾಕುತ್ತಿದ್ದಾರೆ.
ಸಾರಿಗೆ ನಿಯಮ ಉಲ್ಲಂಘಿಸುತ್ತಿರುವ ಓಲಾ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಅಮಾಯಕ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ನಿಲ್ಲಿಸಲಿ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷರು ಸಾರಿಗೆ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.