ಮೈಸೂರು ( www.bengaluruwire.com ) :
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ವಿಚಾರಕ್ಕೆ ಮುನ್ನಲೆಗೆ ಬರುತ್ತಿದ್ದಂತೆ ಹಲವು ಮಠಾಧೀಶರು ಅವರ ಬೆಂಬಲಕ್ಕೆ ನಿಂತಿರುವುದನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಠಿಣ ಶಬ್ದಗಳಲ್ಲಿ ಖಂಡಿಸಿದ್ದಾರೆ.
ನಗರದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪ ಬೆನ್ನಿಗೆ ನಿಂತ ಸ್ವಾಮೀಜಿಗಳು ಹಾಗೂ ಮಠಮಾನ್ಯಗಳ ನಡೆಯ ಬಗ್ಗೆ ಕಿಡಿಕಾರಿದರು.
ಮಠಮಾನ್ಯಗಳು ಸಾಮಾಜಿಕ ಭಾಗವಾಗಬೇಕು ಒಬ್ಬ ವ್ಯಕ್ತಿ ಅಥವಾ ಪಕ್ಷದ ಪರವಾಗಿ ನಿಲ್ಲಬಾರದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ಮಠಗಳನ್ನು ಛೇಡಿಸಿದಾಗ ಅದನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದ್ದೇನೆ.
ಧರ್ಮ ಮತ್ತು ರಾಜಕಾರಣ ಕೋವಿಡ್ ರೀತಿ ಅಂತರ ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ಭಾರತದ ಸಂವಿಧಾನದಲ್ಲಿ ಆಡಳಿತ ನಡೆಯಬೇಕೇ ಹೊರತು ಮಠದ ಸಂವಿಧಾನ ವಿಧಾನಸೌಧದ ಮೆಟ್ಟಿಲಾಗಬಾರದು ಎಂದು ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.
ಇದೇ ವೇಳೆ ಸಿಎಂ ಬದಲಾವಣೆಯ ಗಾಳಿ ವಿಚಾರವಾಗಿ ಮಾತನಾಡುತ್ತಿದ್ದ ವಿಶ್ವನಾಥ್, ಎರಡು ಬಾರಿ ನಿಮಗೆ ಸರಿಯಾದ ನಿರ್ಗಮನ ಆಗಲಿಲ್ಲ. ಈ ಬಾರಿಯು ಹಾಗೆ ಮಾಡಿಕೊಳ್ಳಬೇಡಿ. ಗೌರವಯುತವಾಗಿ ಸಿಎಂ ಸ್ಥಾನದಿಂದ ನಿರ್ಗಮಿಸಿ. ಮಠಾಧೀಶರು ಇದಕ್ಕೆ ಅಡ್ಡಗಾಲು ಹಾಕಬಾರದು ಎಂದು ಅವರು ಹೇಳಿದರು.
ಶ್ರೀ ಶಿವಕುಮಾರ್ ಸ್ವಾಮೀಜಿಯವರು ಉಳಿದ ಮಠಾಧೀಶರಿಗೆ ಆದರ್ಶಪ್ರಾಯ :
“ನಡೆದಾಡುವ ದೇವರು ಶಿವಕುಮಾರ್ ಶ್ರೀಗಳನ್ನ ನೋಡಿ ಮಠಾಧೀಶರು ಕಲಿಯಬೇಕಿದೆ. ಯಾವುದೇ ರಾಜಕೀಯಕ್ಕೆ ಅವರು ಆಸ್ಪದವೇ ನೀಡಲಿಲ್ಲ” ಎಂದು ಎಚ್.ವಿ ಕುಟುಕಿದರು.
ಸ್ವಯಂಕೃತ ಅಪರಾಧಿಂದ ನೀವೂ ಜೈಲು ಪಾಲಾದ್ರಿ.
ನಿಮ್ಮ ಕುಟುಂಬ ಮಾಡಿದ ತಪ್ಪಿಗೆ ಮುಖ್ಯಮಂತ್ರಿಯಾಗಿ ಜೈಲಿಗೆ ಹೋದ್ರಿ. ಇದಕ್ಕಾಗಿ ಬಿಜೆಪಿ ಪಕ್ಷ ನಿಮ್ಮನ್ನ 6 ವರ್ಷ ಉಚ್ಚಾಟನೆ ಮಾಡಿತ್ತು. ಆ ವೇಳೆ ಕೆಜಿಪಿ ಪಕ್ಷ ಕಟ್ಟಿದರಿ, ಈ ವೇಳೆ ಯಾರು ಬಂದರು? ಆಗ ಯಾವ ಮಠಾಧೀಶರು ನಿಮ್ಮ ಪರವಾಗಿ ನಿಂತರು ಹೇಳಿ? ಎಂದು ಪ್ರಶ್ನಿಸಿದರು.
ನಿಮ್ಮಿಂದ ಬಿಜೆಪಿಗೆ 104 ಸ್ಥಾನ ಬಂದಿಲ್ಲ- ಪ್ರಧಾನಮಂತ್ರಿ ಮೋದಿಯಿಂದ ಆ ಸ್ಥಾನಗಳು ಬಂದಿದೆ. ಮೋದಿಯವರು ನೀಡಿದ ಆಡಳಿತ ನೀವೂ ಕೊಡುತ್ತಿಲ್ಲ. ನಾವು 17 ಮಂದಿ ಬಿಜೆಪಿಗೆ ಬಂದಿದ್ದು ಎಲ್ಲರೂ ವೀರಶೈವ ಲಿಂಗಾಯತರಲ್ಲ.
ನಾವೆಲ್ಲರು ಕೂಡ ಬೇರೆ ಬೇರೆ ವರ್ಗದ ಜನರು ಎಂದು ಧರ್ಮಾಧಾರಿತ- ಜಾತಿ ರಾಜಕಾರಣ ಮಾಡುತ್ತಿರುವ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಯಡಿಯೂರಪ್ಪ ಸೇರಿ ಒಟ್ಟು ಎಂಟು ಮಂದಿ ಲಿಂಗಾಯತ ವೀರಶೈವ ಸಮುದಾಯದ ಮುಖ್ಯಮಂತ್ರಿ ಗಳಾಗಿದ್ದಾರೆ. 1989ರಲ್ಲಿ ವಿರೇಂದ್ರ ಪಾಟೀಲರನ್ನು ಇಳಿಸಿ ಬಂಗಾರಪ್ಪನವರನ್ನು ಮುಖ್ಯಮಂತ್ರಿ ಮಾಡಿದಾಗ ಯಾವ ಮಠಾಧೀಶರು ಸೊಲ್ಲೆತ್ತಲಿಲ್ಲ ಯಾಕೆ?
ಬಿಜೆಪಿಯಲ್ಲಿ ಹೈಕಮಾಂಡ್‌ಗಿಂತ ದೊಡ್ಡವರು ಯಾರು ಇಲ್ಲ. ಯಡಿಯೂರಪ್ಪನವರು ಬಂದು ಬಿಜೆಪಿ ಪಕ್ಷವನ್ನು ಕಟ್ಟಿಲ್ಲ. ಬಿಜೆಪಿ ಪಕ್ಷ ಕಟ್ಟಿದ್ದು ಎ.ಕೆ.ಸುಬ್ಬಯ್ಯ, ಶಂಕರಮೂರ್ತಿ ಯಂತಹವರು. ನೀವೂ 70ರ ದಶಕದಲ್ಲಿ ಮುನ್ಸಿಪಲ್ ಚುನಾವಣೆಗೆ ನಿಂತಿದ್ದರಿ. ಕೇವಲ ನೀವೊಬ್ಬರೆ ಪಕ್ಷ ಕಟ್ಟಿಲ್ಲ. ಎಲ್ಲರು ಸೇರಿ ಬಿಜೆಪಿ ಪಕ್ಷವನ್ನು ಕಟ್ಟಿದ್ದಾರೆ. ಹಾಗಾಗಿ ಬಿ.ಎಸ್.ಯಡಿಯೂರಪ್ಪ ಅವರ ಹಿತದೃಷ್ಟಿಯಿಂದ, ರಾಜ್ಯದ ಜನರ ಹಿತದೃಷ್ಟಿಯಿಂದ ಗೌರವಯುತ ನಿರ್ಗಮನವಾದರೆ ಒಳಿತು. ಇದಕ್ಕೆ ಮಠಾಧೀಶರು ತಡೆಯೊಡ್ಡುತ್ತಿರುವುದು ಸರಿಯಲ್ಲ ಎಂದು ಎಂಎಲ್‌ಸಿ ವಿಶ್ವನಾಥ್ ಆಕ್ಷೇಪಿಸಿದರು.
ಸಿಎಂ ಬಿಎಸ್ ವೈ ಉತ್ತರಾಧಿಕಾರಿ ವಿಚಾರದಲ್ಲಿ ಹಸ್ತಕ್ಷೇಪ ಬೇಡ :
ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಇಳಿದರೆ ಬಿಜೆಪಿ ಶೂನ್ಯ ಆಗುತ್ತೆ ಅಂತಾರೆ ಸ್ವಾಮಿಜಿಯೊಬ್ಬರು. ರಾಜ್ಯದಲ್ಲಿ ದಂಗೆ ಆಗುತ್ತೆ ಅಂತಾರೆ. ಯಾವ ದಂಗೆ ಆಗುತ್ತೆ ಸ್ವಾಮಿ ಮೊದಲು ಅದನ್ನ ಹೇಳಿ. ನಿಮ್ಮಲ್ಲಿ ಮಠಾಧೀಶರೊಬ್ಬರು ಮೃತಪಟ್ಟ ನಂತರ ನಿಮ್ಮ ಉತ್ತರಧಿಕಾರಿ ನೇಮಕದಲ್ಲಿ ನಾವು ಪ್ರಶ್ನೆ ಮಾಡುತ್ತೀವಾ?
ದಯಮಾಡಿ ಸ್ವಾಮೀಜಿಗಳು ಈ ವಿಷಯದಲ್ಲಿ ಏನು ಮಾತನಾಡದೆ ಸುಮ್ಮನಿರಬೇಕು. ಬಿಎಸ್ವೈ ಅವರ ಬಳಿಕ ನಾವುಗಳು ಕೂಡ ಉತ್ತರಾಧಿಕಾರಿಯಾಗಿರುತ್ತೇವೆ.
ಅಂದರೆ ಶಾಸಕರುಗಳು ಮುಂದಿನ ಉತ್ತರಾಧಿಕಾರಿ ಎಂದು ವಿಶ್ವನಾಥ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಿಎಂ ಯಾಕೆ ತುಟಿ ಬಿಚ್ಚುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ವಿಶ್ವನಾಥ್,
ಸಿಎಂ ಅವರು ಮೌನವಾಗಿದ್ದಾರೆ. ಮೌನವೇ ಆಭರಣ ಎಂದು ಸುಮ್ಮನಾಗಿದ್ದಾರೆ ಎಂದು ಹೇಳುತ್ತಾ
ಹಾಡಿನ ಮೂಲಕ ಸಿಎಂಗೆ ವ್ಯಂಗ್ಯವಾಡಿದರು.