ಬೆಂಗಳೂರು ( www.bengaluruwire.com ) : ಬೆಳ್ಳಂದೂರು ಹಾಗೂ ವರ್ತೂರು ಕೆರೆ ಪುನರುಜ್ಜೀವನ ಹಿನ್ನಲೆಯಲ್ಲಿ ಕೈಗೊಂಡಿರುವ ಈ ಎರಡು ಬೃಹತ್ ಕೆರೆಗಳ ಹೂಳೆತ್ತುವಿಕೆ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿರುವುದು ಆ ಭಾಗದ ಸಾರ್ವಜನಿಕರ ನಿದ್ದೆಗೆಡೆಸಿದೆ. ಕೋಟ್ಯಾಂತರ ರೂಪಾಯಿ ನಾಗರೀಕರ ತೆರಿಗೆ ಹಣ ಬಳಸಿ ಈ ಬೃಹತ್ ಕೆರೆಗಳ ಹೂಳೆತ್ತುವ ಯೋಜನೆಗೆ ಟೆಂಡರ್ ಆಗಿ ಎಂಟು ತಿಂಗಳಾಗುತ್ತಾ ಬಂದರೂ ಕಾಮಗಾರಿ ಯೋಜಿತ ವೇಗದಲ್ಲಿ ಸಾಗುತ್ತಿಲ್ಲ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳ್ಳಂದೂರು ಕೆರೆಯಲ್ಲಿ ಪ್ರತಿದಿನ ಕನಿಷ್ಠ 150 ರಿಂದ 200 ಟಿಪ್ಪರ್ ಲಾರಿಗಳನ್ನು ಬಳಸಿ ಹೂಳೆತ್ತಬೇಕು. ಆದ್ರೆ ಕಳೆದ 15-20 ದಿನಗಳಿಂದ ಟಿಪ್ಪರ್ ಲಾರಿಗಳ ಸಂಖ್ಯೆಯು 20 ಕ್ಕಿಂತ ಕಡಿಮೆಯಾಗಿದೆ. ಮಳೆಗಾಲಕ್ಕೆ ಮುಂಚೆ ಗರಿಷ್ಠ ಅಂದರೆ 35 ರಿಂದ 40 ಟಿಪ್ಪರ್ ಲಾರಿ ಬಳಕೆ ಮಾಡಲಾಗುತ್ತಿತ್ತು. ಸದ್ಯ ಹೂಳೆತ್ತಿ ಹತ್ತಿರದ ರಕ್ಷಣಾ ಇಲಾಖೆಯ ಬಂದೂಕು ತರಬೇತಿ ಕೇಂದ್ರದ 500 ಎಕರೆ ಪ್ರದೇಶ, ಮೈಲಸಂದ್ರ ಹಾಗೂ ವಿಠ್ಠಸಂದ್ರ ಕಲ್ಲು ಕ್ವಾರಿಗಳಿಗೆ ಹಾಕಲಾಗುತ್ತಿದೆ.
ಇನ್ನು ವರ್ತೂರು ಕೆರೆಯಲ್ಲಿಯೂ 150 ರಿಂದ 200 ಟಿಪ್ಪರ್ ಗಾಡಿಯನ್ನು ಪ್ರತಿದಿನ ಬಳಸಿಕೊಂಡು ಕೆರೆಯಲ್ಲಿನ ಮಣ್ಣನ್ನು ರೈತರ ಜಮೀನು, ತೋಟಗಳಿಗೆ ಸಾಗಿಸಿದರು ಟೆಂಡರ್ ಅವಧಿಗೆ ಮುಂಚೆಯೇ ಕಾರ್ಯ ಮುಗಿಸಿ, ಕೆರೆಯ ಅಭಿವೃದ್ಧಿಗಾಗಿ ಉಳಿದ ಯೋಜನೆಗಳನ್ನು ಅನುಷ್ಠಾನಗೊಳಿಸಬಹುದು. ಆದರೆ ಈ ಕೆರೆಯಲ್ಲಿಯೂ ಗುತ್ತಿಗೆದಾರರು ದಿನಂಪ್ರತಿ 25-30 ಟಿಪ್ಪರ್ ಲಾರಿ ಬಳಕೆ ಮಾಡಿ ಹೂಳನ್ನು ಸಾಗಾಣಿಕೆ ಮಾಡುತ್ತಿದ್ದಾರೆ. ಎರಡೂ ಕೆರೆಯಲ್ಲಿಯೂ ಕಾಮಗಾರಿ ಕುಂಟುತ್ತಾ ಸಾಗಿದೆ. ಈ ಪ್ರಮಾಣದಲ್ಲಿ ಹೂಳೆತ್ತಿ ಸಾಗಾಣಿಕೆ ಮಾಡಿದರೆ ಇನ್ನು ಯಾವ ಕಾಲಕ್ಕೆ ಕೆರೆಯಲ್ಲಿನ ಹೂಳೆನ್ನು ಸಂಪೂರ್ಣವಾಗಿ ಎತ್ತಿ ಕೆರೆ ಪುನರುಜ್ಜೀವನ ಮಾಡುವುದು ಎಂದು ಸ್ಥಳೀಯ ನಾಗರೀಕರು, ಪರಿಸರವಾದಿಗಳು ಪ್ರಶ್ನಿಸುತ್ತಿದ್ದಾರೆ.
“ಕಳೆದ ವರ್ಷದ ನವೆಂಬರ್ ನಲ್ಲಿ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳಲ್ಲಿನ ಹೂಳನ್ನು ಎತ್ತಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಟೆಂಡರ್ ಕರೆದು ಎರಡೂ ಕಂಪನಿಗಳಿಗೆ ಕಾರ್ಯಾದೇಶ ಪತ್ರ ನೀಡಿತ್ತು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ) ಆ ಎರಡು ಕೆರೆಗಳಲ್ಲಿನ ಹೂಳೆತ್ತಲು ಮಾರ್ಚ್ ಎರಡನೇ ವಾರದಲ್ಲಷ್ಟೇ ಅನುಮತಿ ನೀಡಿತ್ತು. ಅಲ್ಲಿಗೆ ಎರಡೂವರೆ ತಿಂಗಳು ಕೆಲಸ ತಡವಾಯಿತು. ಆ ಬಳಿಕ ಟೆಂಡರ್ ಪಡೆದ ಸಂಸ್ಥೆಗಳು ಕೋವಿಡ್ ಲಾಕ್ ಡೌನ್ ಸಂದರ್ಭವನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದರೆ ಕೆರೆ ಹೂಳೆತ್ತುವ ಕಾರ್ಯ ವೇಗವಾಗಿ ಮಾಡಬಹುದಿತ್ತು. ಮೇ ನಂತರ ಈ ಕಾರ್ಯ ಮತ್ತಷ್ಟು ನಿಧಾನವಾಗಿದೆ. ಎನ್ ಜಿಟಿ ಆದೇಶದಂತೆ ಹೂಳೆತ್ತುವ ಕೆಲಸ ನಡೆಯುತ್ತಿದೆ. ಆದರೆ ಪೂರ್ಣ ಸಾಮರ್ಥ್ಯದ ರೀತಿ ಕೆಲಸ ನಡೆಯುತ್ತಿಲ್ಲ.”
– ಎಂ.ಎನ್.ಜಗದೀಶ್ ರೆಡ್ಡಿ, ನಾಗರೀಕ ಸದಸ್ಯ, ಬೆಳ್ಳಂದೂರು- ವರ್ತೂರು ಕೆರೆಗಳ ಪುನಶ್ಚೇತನ ಸಮಿತಿ
ಕಾರ್ಯಾದೇಶ ಪತ್ರ ಸಿಕ್ಕರೂ ಹೂಳೆತ್ತಲು ಕೆಎಸ್ ಪಿಸಿಬಿ ತಡವಾಗಿ ಒಪ್ಪಿಗೆ ನೀಡಿತ್ತು :
ಟೆಂಡರ್ ಪ್ರಕಾರ ಬೆಳ್ಳಂದೂರು ಕೆರೆಯಲ್ಲಿನ ಹೂಳು ತೆಗೆಯುವ ಕಾಮಗಾರಿಯನ್ನು 36 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಆರ್ ಎಂವಿ ಎನ್ ಸ್ಟ್ರಕ್ಷನ್ ಕಂಪನಿಗೆ ಬಿಡಿಎ ಕಾರ್ಯಾದೇಶ ಪತ್ರ ನೀಡಿತ್ತು. ಅದೇ ರೀತಿ ವರ್ತೂರು ಕೆರೆ ಹೂಳೆತ್ತಲು ಸ್ಟಾರ್ ಇನ್ ಫ್ರಾ ಟೆಕ್ ಕಂಪನಿಗೆ ನವೆಂಬರ್ 2020 ರಿಂದ 18 ತಿಂಗಳ ಅವಧಿ ಕಾಲಾವಕಾಶ ನೀಡಿ ಕಾರ್ಯಾದೇಶ ಪತ್ರ ನೀಡಿತ್ತು.
916 ಎಕರೆ 17 ಗುಂಟೆ ವಿಸ್ತೀರ್ಣದ ಬೆಳ್ಳಂದೂರು ಕೆರೆಯಲ್ಲಿ ಬರೋಬ್ಬರಿ 25.33 ಲಕ್ಷ ಕ್ಯೂಬಿಕ್ ಮೀಟರ್ ನಷ್ಟು ಹೂಳಿರುವುದನ್ನು ಅಂದಾಜು ಮಾಡಲಾಗಿದೆ. ದೊಡ್ಡ ಪ್ರಮಾಣದ ಈ ಹೂಳನ್ನು ಎತ್ತಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 100.84 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಅದೇ ರೀತಿ 439 ಎಕರೆ 34 ಗುಂಟೆ ವಿಸ್ತೀರ್ಣದ ವರ್ತೂರು ಕೆರೆಯಲ್ಲಿ 12.28 ಲಕ್ಷ ಕ್ಯೂಬಿಕ್ ಮೀಟರ್ ನಷ್ಟು ಹೂಳೆತ್ತಲು 53.81 ಕೋಟಿ ರೂ. ಅನುದಾನ ನೀಡಲಾಗಿದೆ.
ಸಂಪೂರ್ಣವಾಗಿ ಮಾಲಿನ್ಯಗೊಂಡಿರುವ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಪುನರುಜ್ಜೀವನ ಕಾರ್ಯ ನಿಧಾನಗತಿ ಸಾಗುತ್ತಿರುವ ಬಗ್ಗೆ ಬಿಡಿಎ ಅಧ್ಯಕ್ಷರನ್ನು ಬೆಂಗಳೂರು ವೈರ್ ಸಂಪರ್ಕಿಸಿದಾಗ ಅವರು ಹೇಳಿದ್ದು ಹೀಗೆ ;
“ಬೆಳ್ಳಂದೂರು- ವರ್ತೂರು ಕೆರೆಯಲ್ಲಿನ ಹೂಳೆತ್ತುವ ಕಾರ್ಯ ಕುಂಟುತ್ತಾ ಸಾಗುತ್ತಿರುವ ಬಗ್ಗೆ ಗುತ್ತಿಗೆದಾರರನ್ನು ಕೆರೆದು ಮಾತನಾಡಿದ್ದೇವೆ. ಬೆಳ್ಳಂದೂರು ಕೆರೆ ಮಣ್ಣು ಎತ್ತಿ ಬೇರೆಡೆ ಸಾಗಿಸುವ ಗುತ್ತಿಗೆ ಕಾರ್ಯ ಕೈಗೆತ್ತಿಕೊಂಡಿರುವ ಸಂಸ್ಥೆಗೆ ಹೆಚ್ಚಿನ ಟಿಪ್ಪರ್ ಲಾರಿ ಬಳಸಿ ಹೂಳೆತ್ತಲು ಸೂಚಿಸಲಾಗಿದೆ. ಇಲ್ಲವಾದಲ್ಲಿ ಟೆಂಡರ್ ಅನ್ನು ಇತರೆ ಸಂಸ್ಥೆಗಳಿಗೆ ಉಪಗುತ್ತಿಗೆ ಕೊಡುವ ಎಚ್ಚರಿಕೆ ನೀಡಲಾಗಿದೆ. ಹರಳೂರು ಸಮೀಪ ಬೆಳ್ಳಂದೂರು ಹೂಳು ಹಾಕಲು ದೊಡ್ಡ ಕ್ವಾರಿಯನ್ನು ಗುರ್ತಿಸಲಾಗಿದೆ. ಈ ಕೆರೆಯ ಮೂರನೇ ಒಂದು ಭಾಗದಷ್ಟು ಹೂಳನ್ನು ಆ ಕ್ವಾರಿಯಲ್ಲಿ ತುಂಬಿಸಬಹುದೆಂದು ಅಂದಾಜಿಸಲಾಗಿದೆ. ವರ್ತೂರು ಕೆರೆ ಹೂಳನ್ನು ರೈತರು ತಮ್ಮ ತೋಟಕ್ಕೆ ಹಾಕಿಸಿಕೊಳ್ಳುತ್ತಿದ್ದಾರೆ. ಈ ಕೆರೆಯ ಹೂಳೆತ್ತುವ ಗುತ್ತಿಗೆದಾರರಿಗೆ ಹೆಚ್ಚು ವಾಹನಗಳನ್ನು ಬಳಕೆ ಮಾಡಿಕೊಳ್ಳಲು ಸೂಚಿಸಿದ್ದೇವೆ. ಅಂತಿಮ ಗಡುವಿಗೆ ಕಾಯದೆ ಅದಕ್ಕೆ ಪೂರ್ವದಲ್ಲಿಯೇ ಕೆಲಸ ಮುಗಿಸಲು ಹೇಳಿದ್ದೇವೆ.”
– ಎಸ್.ಆರ್.ವಿಶ್ವನಾಥ್, ಬಿಡಿಎ ಅಧ್ಯಕ್ಷರು
ಈತನಕ ಬೆಳ್ಳಂದೂರು- ವರ್ತೂರಿನ 3.22 ಲಕ್ಷ ಕ್ಯೂಬಿಕ್ ಮೀ. ಹೂಳು ಸಾಗಾಣಿಕೆ :
ಜುಲೈ 17ರ ಬಿಡಿಎನ ಅಧಿಕೃತ ಮಾಹಿತಿಯಂತೆ ಬೆಳ್ಳಂದೂರು ಕೆರೆಯಲ್ಲಿ ಈತನಕ 12.90 ಲಕ್ಷ ಕ್ಯೂಬಿಕ್ ಮೀಟರ್ ನಷ್ಟು ಹೂಳನ್ನು ಎತ್ತಿ ಸಂಗ್ರಹಿಸಿಡಲಾಗಿದೆ. ಆ ಪೈಕಿ 1.20 ಲಕ್ಷ ಕ್ಯೂಬಿಕ್ ಮೀಟರ್ ನಷ್ಟು ಹೂಳನ್ನು ರಕ್ಷಣಾ ಇಲಾಖೆಗೆ ಸೇರಿದ ಜಾಗಕ್ಕೆ ಹಾಗೂ ನಿಗಧಿಕ ಕ್ವಾರಿಗೆ ಸಾಗಿಸಲಾಗಿದೆ. ವರ್ತೂರು ಕೆರೆಯಲ್ಲಿನ 2.02 ಲಕ್ಷ ಕ್ಯೂಬಿಕ್ ಮೀಟರ್ ನಷ್ಟು ಕೃಷಿಗೆ ಬಳಕೆ ಮಾಡಲು ರೈತರ ಜಮೀನು ಹಾಗೂ ಕೆರೆ ಸುತ್ತಮುತ್ತಲ ಪ್ರದೇಶಗಳಿಗೆ ಸಾಗಾಣಿಕೆ ಮಾಡಲಾಗಿದೆ. ಎರಡೂ ಕೆರೆಗಳಲ್ಲಿ ಹೂಳೆತ್ತುವ ಹಾಗೂ ಆ ಹೂಳನ್ನು ಸಾಗಿಸುವ ಕೆಲಸ ಮಳೆಯಿಂದಾಗಿ ನಿಧಾನವಾಗುತ್ತಿದೆ ಎಂದು ಬಿಡಿಎ ಅಧಿಕಾರಿಗಳು ಖುದ್ದು ಒಪ್ಪಿಕೊಂಡಿದ್ದಾರೆ.
ಜುಲೈ 20 ರಿಂದ ಆಗಸ್ಟ್ 5ನೇ ತಾರೀಖಿನ ವರೆಗೆ ಬೆಳ್ಳಂದೂರಿನಿಂದ 30 ಸಾವಿರ ಕ್ಯೂಬಿಕ್ ಮೀಟರ್ ಹಾಗೂ ವರ್ತೂರು ಕೆರೆಯಿಂದ 20 ಸಾವಿರ ಕ್ಯೂಬಿಕ್ ಮೀಟರ್ ಹೂಳನ್ನು ಸಾಗಿಸಲಾಗುತ್ತದೆ ಎಂದು ಬಿಡಿಎ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದಾರೆ.
ಎರಡು ಕೆರೆಗಳ 34.39 ಲಕ್ಷ ಕ್ಯೂ.ಮೀ ಹೂಳು ತೆಗೆಯುವುದು ಬಾಕಿ :
ಬೆಳ್ಳಂದೂರು ಹಾಗೂ ವರ್ತೂರು ಕೆರೆಯಲ್ಲಿ ಸಂಗ್ರಹವಾಗಿರುವ ಬರೋಬ್ಬರಿ 37.61 ಲಕ್ಷ ಕ್ಯೂಬಿಕ್ ಮೀಟರ್ ನಷ್ಟು ತ್ಯಾಜ್ಯ ಹಾಗೂ ಹೂಳಿನ ಪೈಕಿ ಈಗಾಗಲೇ 3.22 ಲಕ್ಷ ಕ್ಯೂಬಿಕ್ ಮೀ. ಮಣ್ಣನ್ನು ತೆಗೆಯಲಾಗಿದೆ. ಉಳಿದ 34.39 ಲಕ್ಷ ಕ್ಯೂ.ಮೀ ಹೂಳನ್ನು ಹಂತ ಹಂತವಾಗಿ ಶೀಘ್ರದಲ್ಲೇ ತೆಗೆದು ಈ ಎರಡು ಕೆರೆಗಳನ್ನು ಪೂರ್ಣ ರೂಪದಲ್ಲಿ ಅಭಿವೃದ್ಧಿಪಡಿಸಿದ್ದೇ ಆದಲ್ಲಿ ಈ ಪ್ರದೇಶದ ಸುತ್ತಮುತ್ತಲ ಭೂಮಿಯಲ್ಲಿ ಅಂತರ್ಜಲ ಪ್ರಮಾಣದ ಏರಿಕೆ ಹಾಗೂ ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದು ಆ ಭಾಗದ ನಾಗರೀಕರು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಮುಂದಿನ ವಾರದಲ್ಲಿ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಹೂಳೆತ್ತುವ ಕಾಮಗಾರಿ ಪರಿಶೀಲನೆಗಾಗಿ ಖುದ್ದು ತೆರಳುವುದಾಗಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ಮಳೆ ಬರುವ ಮುಂಚೆ ಹೆಚ್ಚು ಟಿಪ್ಪರ್ ವಾಹನಗಳನ್ನು ದಿನಂಪ್ರತಿ ಬಳಸಿ ಹೂಳು ಸಾಗಾಣಿಕೆಗೆ ಯೋಜನೆ ರೂಪಿಸಿದ್ದರೆ, ಕಾಮಗಾರಿ ಈ ರೀತಿ ಕುಂಟುತ್ತಾ ಸಾಗುತ್ತಿರಲಿಲ್ಲ.