ಬೆಂಗಳೂರು ( www.bengaluruwire.com ) : ವಿದೇಶಗಳಲ್ಲಿರುವಂತೆ ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಶೀಘ್ರವಾಗಿ ಆಗಮಿಸಿ, ಸಾಕ್ಷ್ಯ ನಾಶವಾಗದಂತೆ ವೈಙ್ಞನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷ್ಮಾತಿ ಸೂಕ್ಷ್ಮ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು “ಅಪರಾಧ ಸನ್ನಿವೇಶ ತನಿಖಾಧಿಕಾರಿ” ಹುದ್ದೆಯನ್ನು ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಸೃಷ್ಟಿ ಮಾಡಲಾಗಿದೆ.
ಇದರಿಂದಾಗಿ ಕ್ಲಿಷ್ಟ ಅಪರಾಧ ಕೃತ್ಯಗಳನ್ನು ಆದಷ್ಟು ಶೀಘ್ರವಾಗಿ ಪರಿಹರಿಸಿ, ಅಪರಾಧಿಗಳನ್ನು ಹಿಡಿಯಲು ಸಾಧ್ಯವಾಗಲಿದೆ. ಪ್ರಥಮ ಹಂತದಲ್ಲಿ ಇಂತಹ 206 ಹುದ್ದೆಗಳನ್ನು ಸೃಷ್ಟಿ ಮಾಡಲಾಗುತ್ತಿದ್ದು, ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು, ಜು.13 ರ ಮಂಗಳವಾರ ಈ ಸಂಬಂಧ ಅಧಿಕೃತವಾಗಿ ಸರ್ಕಾರಿ ಆದೇಶವನ್ನು ಗೃಹ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಬಿ.ಎಸ್ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಅಪರಾಧ ಸನ್ನಿವೇಶ ತನಿಖಾಧಿಕಾರಿ (scene of crime officer) ಹುದ್ದೆಗಳ ಆದೇಶದ ಪ್ರತಿಯನ್ನು ನೀಡಿದರು . ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಅಪರಾಧ ಕೃತ್ಯಗಳ ತನಿಖೆಗೆ ಈ ರೀತಿ ಹೊಸ ಪೊಲೀಸ್ ಹುದ್ದೆಗಳನ್ನು ಸೃಷ್ಟಿ ಮಾಡಲಾಗಿದೆ.
“ಅಪರಾಧ ಸನ್ನಿವೇಶ ತನಿಖಾಧಿಕಾರಿ ಹೊಸ ಹುದ್ದೆ ಸೃಷ್ಟಸಿ ಅವರಿಗೆ ಗುಜರಾತ್ ನಲ್ಲಿರುವ ರಾಷ್ಟ್ರೀಯ ವಿಧಿ ವಿಙ್ಞನ ವಿಶ್ವವಿದ್ಯಾಲಯ ( NFSU ) ಹಾಗೂ ಹೈದರಾಬಾದ್ ನಲ್ಲಿನ ಕೇಂದ್ರೀಯ ವಿಧಿವಿಙ್ಞನ ಪ್ರಯೋಗಾಲಯ(CFSL )ದಲ್ಲಿ ಸೋಕೋ ಅಧಿಕಾರಿಗಳಿಗೆ ಒಂದು ವರ್ಷದ ವೈಙ್ಞನಿಕ ತರಬೇತಿ ನೀಡಲಾಗುತ್ತೆ. ಆನಂತರ ಅವರಿಗೆ ಪೋಸ್ಟಿಂಗ್ ನೀಡಲಾಗುತ್ತೆ. ಹೊಸ ವ್ಯವಸ್ಥೆಯಿಂದ ಅಪರಾಧಿಗಳ ಶೀಘ್ರ ಪತ್ತೆ ಮತ್ತು ಅಪರಾಧ ನಿಯಂತ್ರಣ ಸಾಧ್ಯ. ಈ ವ್ಯವಸ್ಥೆಯು ಪ್ರಮುಖವಾಗಿ ವಿದೇಶಗಳಲ್ಲಿ ಹೆಚ್ಚಾಗಿ ಇದೆ. 1961 ರಲ್ಲಿ ಲಂಡನ್ ನಲ್ಲಿ ಮೊದಲ ಬಾರಿಗೆ ಕ್ರೈಮ್ ಸೀನ್ ಆಫೀಸರ್ ಹುದ್ದೆ ಸೃಷ್ಟಿಯಾಗಿತ್ತು. ದೇಶದಲ್ಲಿಯೇ ಇದು ಮೊದಲ ಪ್ರಯತ್ನ.”
– ಪ್ರವೀಣ್ ಸೂದ್, ಪೊಲೀಸ್ ಮಹಾನಿರ್ದೇಶಕರು
ಅಪರಾಧ ಸನ್ನಿವೇಶ ತನಿಖಾಧಿಕಾರಿ (ಸೋಕೊ) ಹೇಗೆ ಕಾರ್ಯನಿರ್ವಹಿಸುತ್ತಾರೆ ?
ಯಾವುದಾದರೂ ಒಂದು ಅಪರಾಧ ಕೃತ್ಯ ನಡೆದ ತತಕ್ಷಣ ಘಟನಾ ಸ್ಥಳಕ್ಕೆ ಹೋಗಿ ಇಲ್ಲಿರುವಂತಹ ಸಾಕ್ಷ್ಯಾಧಾರಗಳನ್ನು ವೈಜ್ಞಾನಿಕವಾಗಿ, ಸುರಕ್ಷಿತವಾಗಿ ಸಂರಕ್ಷಣೆ ಮಾಡಲು ಈ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದುವರೆಗೆ ಈ ಕೆಲಸವನ್ನು ಸ್ಥಳೀಯ ಅಧಿಕಾರಿಗಳು ಮಾಡುತ್ತಿದ್ದರು.
ಮೊದಲ ಹಂತದಲ್ಲಿ ಗಂಭೀರ ಸ್ವರೂಪದ ಅಪರಾಧಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ದಲ್ಲಿ ವಿಶೇಷ ತರಬೇತಿ ಪಡೆದ ಈ ತಂಡ ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಮೊದಲು ಭೇಟಿ ನೀಡಲಿದೆ. ಆ ಸ್ಥಳದಲ್ಲಿನ ಎಲ್ಲ ಸಾಕ್ಷ್ಯಾಧಾರಗಳನ್ನು ಸಂರಕ್ಷಣೆ ಮಾಡುವುದು, ಆನಂತರ ಸಾಕ್ಷ್ಯಾಧಾರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡುವುದು. ಪೊಲೀಸ್ ತನಿಖಾಧಿಕಾರಿಗೆ ಆ ಸಾಕ್ಷ್ಯಾಧಾರಗಳನ್ನು ಒದಗಿಸುವುದು, ಸೇರಿದಂತೆ ಇತರ ಅವಶ್ಯ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ.
ಜಿಲ್ಲೆಗೊಂದು ಫೋರೆನ್ಸಿಕ್ ಮೊಬೈಲ್ ಲ್ಯಾಬ್ ವಾಹನ
ಅಪರಾಧ ನಡೆದ ಸ್ಥಳಕ್ಕೆ ಹಾಜರಾಗುವ ಸೋಕೊ ಅಧಿಕಾರಿಗಳು ಕೋವಿಡ್ ವೈದ್ಯಾಧಿಕಾರಿಗಳಂತೆ ಪಿಪಿಇ ಕಿಟ್ ಧರಿಸಿ, ಹೈಟೆಕ್ ಫೊರೆನ್ಸಿಕ್ ಉಪಕರಣವಿರುವ ಮೊಬೈಲ್ ಲ್ಯಾಬ್ ವಾಹನದಲ್ಲಿ ಆಗಮಿಸಿ, ಪೊಲೀಸ್ ತನಿಖಾಧಿಕಾರಿಗಳಿಂದ ಮಾಹಿತಿ ಪಡೆದು, ಅಪರಾಧ ಸ್ಥಳದಲ್ಲಿ ರಕ್ತದ ಕಲೆ, ಕೂದಲು, ಬೆರಳಚ್ಚು ಸೇರಿದಂತೆ ಮೊದಲಾದ ಸೂಕ್ಷ್ಮ ಮತ್ತು ಅಗತ್ಯ ಸಾಕ್ಷ್ಯಾಧಾರಗಳ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ವಿಧಿ ವಿಙ್ಞನ ಪ್ರಯೋಗಾಲಯಕ್ಕೆ ಕೊಂಡೊಯ್ದು ವಿಧಿ ವಿಙ್ಞನ ಪ್ರಯೋಗಾಲಯದ ವಿಙ್ಞನಿಗಳಿಗೆ ಹಸ್ತಾಂತರಿಸಲಿದ್ದಾರೆ. ಜಿಲ್ಲೆಗೆ ಒಂದರಂತೆ 5+1 ಮಂದಿ ಕೂರಬಹುದಾದ ಮೊಬೈಲ್ ಫೊರೆನ್ಸಿಕ್ ಲ್ಯಾಬ್ ವಾಹನಗಳನ್ನು ನೀಡಲು ಗೃಹ ಇಲಾಖೆ ನಿರ್ಧರಿಸಿದೆ. ಒಂದೊಂದು ವಾಹನಗಳಿಗೂ 45 ರಿಂದ 50 ಲಕ್ಷ ರೂ. ವೆಚ್ಚವಾಗಲಿದೆ.
ಜಿಲ್ಲೆಗೆ ಒಂದರಂತೆ ಸೋಕೋ ಯೂನಿಟ್ ಸ್ಥಾಪನೆ :
ಮೊದಲ ಹಂತದಲ್ಲಿ 206 ಅಪರಾಧ ಸನ್ನಿವೇಶ ತನಿಖಾಧಿಕಾರಿ ಹುದ್ದೆ ಸೃಷ್ಟಿಸಲಾಗುತ್ತಿದೆ. ಇದರಂತೆ ಬೆಂಗಳೂರಿನಂತಹ ದೊಡ್ಡ ನಗರಗಳಿಗೆ 20-25 ಸೋಕೋ ಅಧಿಕಾರಿಗಳನ್ನು, ಇತರ ಜಿಲ್ಲೆಗಳಲ್ಲಿ 4-5 ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾ ಮಟ್ಟದಲ್ಲಿ ತಲಾ ಒಂದೊಂದು ಸೋಕೊ ಯೂನಿಟ್ ಸ್ಥಾಪಿಸಲಾಗುತ್ತೆ. ಈ ಸೋಕೋ ಹುದ್ದೆಯು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ದರ್ಜೆಯ ಹುದ್ದೆಯಾಗಿದೆ. ಆದರೆ ಈ ಸೋಕೋ ಅಧಿಕಾರಿಗಳು ಪೋಲೀಸರಾಗಿರುವುದಿಲ್ಲ. ಬದಲಿಗೆ ವಿಧಿ ವಿಙ್ಞನ ಅಧಿಕಾರಿಗಳಾಗಿರುತ್ತಾರೆ. ವಾರ್ಷಿಕ ಈ ಅಧಿಕಾರಿಗಳ ಸಂಬಳ, ಸಾರಿಗೆ ಇತ್ಯಾದಿ ನಿರ್ವಹಣೆಗಾಗಿ ಗೃಹ ಇಲಾಖೆ 13 ಕೋಟಿ ರೂ. ವೆಚ್ಚ ಮಾಡಲಿದೆ.
ರಾಜ್ಯದಲ್ಲಿ ಈತನಕ ಯಾವ ರೀತಿ ವ್ಯವಸ್ಥೆಯಿತ್ತು?
ರಾಜ್ಯದಲ್ಲಿ ಅಪರಾಧ ಪ್ರಕರಣಗಳು ನಡೆದಾಗ ಅಥವಾ ಸಾಮಾನ್ಯ ಸಂದರ್ಭದಲ್ಲಿ ಪೊಲೀಸರೇ ನೇರವಾಗಿ ತೆರಳಿ ಕೊಲೆ ಮತ್ತಿತರ ಅಪರಾಧ ನಡೆದ ಸ್ಥಳದಲ್ಲಿ ಸ್ಥಳೀಯರ ಸಮಕ್ಷಮ ಪಂಚನಾಮೆ ನಡೆಸಿ, ಅಪರಾಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ವಿಧಿ ವಿಙ್ಞನ ಪ್ರಯೋಗಾಲಯಕ್ಕೆ ಹಸ್ತಾಂತರಿಸುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಪಿಪಿಇ ಕಿಟ್ ನಂತಹ ಧಿರಿಸು ಮತ್ತು ವೈಙ್ಞನಿಕ ಉಪಕರಣದಿಂದ ಸ್ಯಾಂಪಲ್ ಸಂಗ್ರಹಿಸುತ್ತಿರಲಿಲ್ಲ. ಇದರಿಂದ ಕೆಲವೊಂದು ಸೂಕ್ಷ್ಮ ಸಾಕ್ಷ್ಯಾಧಾರಗಳು ಸಿಗದೆ ಅಪರಾಧ ಕೃತ್ಯ ಯಶಸ್ವಿಯಾಗಿ ಭೇಧಿಸಲು ಸಾಧ್ಯವಾಗುತ್ತಿರಲಿಲ್ಲ. ಕೆಲವೊಮ್ಮೆ ಪಂಚನಾಮೆ ಸಂದರ್ಭ ಸಾಕ್ಷಿ ಹೇಳಿದವರು ಕೋರ್ಟಿಗೆ ಬರದ ಕಾರಣ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿತ್ತು.
ಇಡೀ ದೇಶದಲ್ಲಿ ಅಪರಾಧದ ಘಟನೆ ಬಳಿಕ ಸಾಕ್ಷಿ ಸಂಗ್ರಹಕ್ಕೆ ವೈಙ್ಞನಿಕವಾಗಿ ಸಾಕ್ಷ್ಯ ಸಂಗ್ರಹಕ್ಕೆ ಆದ್ಯತೆ ನೀಡಲಾಗುತ್ತಿರಲಿಲ್ಲ. ಘಟನೆ ನಡೆದ ಸ್ಥಳಕ್ಕೆ ಅನಗತ್ಯ ವ್ಯಕ್ತಿಗಳು, ಪೊಲೀಸರ ಅನವಶ್ಯಕ ಓಡಾಟಗಳು ನಡೆದು ಸೂಕ್ಷ ಸಾಕ್ಷ್ಯಾಧಾರಗಳು ನಾಶವಾಗುವ ಸಾಧ್ಯತೆ ಇರುತ್ತಿತ್ತು. ಈಗ ಹೊಸ ವ್ಯವಸ್ಥೆಯಲ್ಲಿ ವೈಙ್ಞನಿಕ ಪದ್ಧತಿ ಅನುಸರಿಸಿ ಸ್ಯಾಂಪಲ್ ಸಂಗ್ರಹಿಸಲಾಗುತ್ತದೆ.
ವಿಧಿ ವಿಙ್ಞನ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲು ನಿರ್ಧಾರ :
ಇನ್ನು ಮುಂದೆ ಕರ್ನಾಟಕದಲ್ಲಿ ವಿಧಿ ವಿಙ್ಞನ ವಿಭಾಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲು ಪೊಲೀಸ್ ಮಹಾ ನಿರ್ದೇಶಕರು ನಿರ್ಧರಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮಡಿವಾಳದಲ್ಲಿರುವ ರಾಜ್ಯದ ವಿಧಿ ವಿಙ್ಞನ ಪ್ರಯೋಗಾಲಯ ಅಭಿವೃದ್ಧಿಗೆ 30 ಕೋಟಿ ರೂ. ವೆಚ್ಚ ಮಾಡಿ ಅತ್ಯಾಧುನಿಕ ಉಪಕರಣಗಳನ್ನು ಖರೀದಿಸಿ ಅಳವಡಿಸಲಾಗಿದೆ. ಇದರಿಂದ ಕ್ಲಿಷ್ಟ ಅಪರಾಧ ಪ್ರಕರಣಗಳನ್ನು ಭೇಧಿಸಲು ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತಿದೆ. 7 ವರ್ಷಕ್ಕಿಂತ ಹೆಚ್ಚು ಕಾರಾಗೃಹ ವಾಸ ವಿಧಿಸುವಂತಹ ಅಪರಾಧ ಪ್ರಕರಣಗಳಲ್ಲಿ ಸೋಕೋ ಅಧಿಕಾರಿಗಳಿಂದ ಅಪರಾಧ ಸನ್ನಿವೇಶ ತನಿಖೆ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಇದೇ ವರ್ಷ ಬಳ್ಳಾರಿ ಮತ್ತು ಹುಬ್ಬಳ್ಳಿಯಲ್ಲಿ ನೂತನವಾಗಿ ವಿಧಿ ವಿಙ್ಞನ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.