ಬೆಂಗಳೂರು ( www.bengaluruwire.com ) : ಅಧಿಕ ಪೌಷ್ಟಿಕಾಂಶವುಳ್ಳ ಸಿದ್ದು ಹಲಸು ಮನೆಯಂಗಳ ಮತ್ತು ವಾಣಿಜ್ಯ ಕೃಷಿಗೆ ಸೂಕ್ತ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಾಗೂ, ತುಮಕೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಅಧಿಕಾರಿಗಳು, ಸಹಭಾಗಿ ಸಸ್ಯ ಅಭಿವೃದ್ದಿ ಕಾರ್ಯಕ್ರಮದ ಅಡಿ, ಸಿದ್ದು ಹಲಸು ತಳಿಯ ಸಸಿಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೋಮವಾರ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿಯ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಹಲಸಿನ ತಳಿಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ತುಮಕೂರು ಜಿಲ್ಲೆಯ ಚೇಳೂರು ಗ್ರಾಮ ಎಸ್.ಎಸ್.ಪರಮೇಶ್ ಎಂಬುವರ ತೋಟದಲ್ಲಿ ಈ ತಳಿಯನ್ನು ಗುರುತಿಸಿರುವುದು ಶ್ಲಾಘನೀಯ ಎಂದರು.
ಉಳಿದ ಹಲಸಿನ ತಳಿಗಳಿಗೆ ಹೋಲಿಸಿದರೆ ತಾಮ್ರ ಕೆಂಪು ಬಣ್ಣದ ಸಿದ್ದು ಹಲಸು ಅಧಿಕ ಪೌಷ್ಠಿಕಾಂಶಗಳ ಜೊತೆಗೆ ಔಷಧೀಯ ಗುಣಗಳನ್ನು ಹೊಂದಿದೆ. ದೇಶದಲ್ಲಿ ಲಭ್ಯವಿರುವ ಎಲ್ಲಾ ಹಲಸು ತಳಿಗಳ ಪೈಕಿ ಸಿದ್ದು ಹಲಸು ಶ್ರೇಷ್ಠ ಮತ್ತು ವಿಶಿಷ್ಟ ಎಂಬ ಮಾನ್ಯತೆ ಪಡೆದಿದೆ ಎಂದರು.
ಎಸ್.ಎಸ್ ಪರಮೇಶ್ ಅವರು ಕಳೆದ 2 ವರ್ಷಗಳಲ್ಲಿ 22 ಲಕ್ಷ ಆದಾಯವನ್ನು ಗಳಿಸಿದ್ದು, ಜೀವ ವೈವಿಧ್ಯತೆಯನ್ನು ಕಾಪಾಡುವುದರೊಂದಿಗೆ ರೈತರು ತಮ್ಮ ಆದಾಯವನ್ನೂ ದ್ವಿಗುಣಗೊಳಿಸಿಕೊಳ್ಳಬಹುದಾಗಿದೆ ಎಂದು ನಿರೂಪಿಸಿದ್ದಾರೆ.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಈವರೆಗೆ ಒಂದು ಲಕ್ಷ ಸಸಿಗಳನ್ನು ರಾಜ್ಯವೂ ಸೇರಿದಂತೆ ದೇಶದಾದ್ಯಂತ 31 ಸಾವಿರ ಕೃಷಿಕರಿಗೆ ವಿತರಿಸಲಾಗಿದೆ. ರಾಜ್ಯ ರೈತರು ಈ ವಿಶಿಷ್ಟ ಪ್ರಬೇಧದ ಹಲಸನ್ನು ಬೆಳೆಸುವ ಮೂಲಕ ಈ ತಳಿಯನ್ನು ಸಂರಕ್ಷಿಸುವುದಲ್ಲದೆ ಆರ್ಥಿಕ ಭದ್ರತೆಯನ್ನು ಕಂಡುಕೊಳ್ಳಬಹುದು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಶಿಕಾರಿಪುರದ ತಮ್ಮ ತೋಟದಲ್ಲಿಯೂ ಸಿದ್ದು ಹಲಸು ಸಸಿಗಳನ್ನು ಬೆಳೆಸಲು ಅವರು ಆಸಕ್ತಿ ತೋರಿದರು.
ಸಿದ್ದು ಹಲಸಿನ ವೈಶಿಷ್ಟ್ಯತೆಯೇನು?
ಭಾರತದಲ್ಲಿ ಸುಮಾರು 137 ಅಧಿಕ ತಳಿಯ ಹಲಸಿನ ಮರಗಳಿವೆ ಎನ್ನಲಾಗಿದೆ. ಆ ಪೈಕಿ ಸಿದ್ದು ಹಲಸಿನ ಹಣ್ಣುಗಳನ್ನ ಹಲಸಿನ ರಾಜ ಎಂದು ಕರೆಯಲಾಗುತ್ತದೆ, ಯಾಕಂದರೆ ಅದು ಅಷ್ಟು ಶ್ರೇಷ್ಠ ಹಲಸಿನ ಹಣ್ಣು.
ನಾಲ್ಕು ವರ್ಷಗಳ ಹಿಂದೆ ಸಿದ್ದು ಹಲಸಿನ ಹಣ್ಣನ್ನ ಪ್ರಯೋಗಕ್ಕೆ ಒಳಪಡಿಸಿದಾಗ ಅದರಲ್ಲಿ ಲಿಕೋಪಿನ್ ಹೆಚ್ಚಾಗಿರುವುದು ಗಮನಕ್ಕೆ ಬಂತು. 100 ಗ್ರಾಂ ಸಿದ್ದು ಹಲಸಿನ ಹಣ್ಣಿನಲ್ಲಿ 2 ಎಂ.ಜಿ. ಲಿಕೋಪಿನ್ ಇದೆ. ಆದರೆ ಬೇರೆ ತಳಿಗಳಲ್ಲಿ 0.2 ಮಾತ್ರ ಇರುತ್ತದೆ. ಇನ್ನು ಲಿಕೋಪಿನ್ ಅಂಶ ಹೃದಯ ಸಂಬಂದಿ ಖಾಯಿಲೆಗಳಿಗೆ ರಾಮಬಾಣವಾಗಿ ಕೆಲಸವನ್ನ ಮಾಡುತ್ತದೆ ಎಂದು ಹೇಳುತ್ತಾರೆ ಎಸ್.ಎಸ್.ಪರಮೇಶ್.
ದೇಹಕ್ಕೆ ಅತಿ ಅವಶ್ಯಕವಾದ ಆ್ಯಂಟಿ ಆಕ್ಸಿಡೆಂಟ್ಗಳು ಈ ಹಲಸಿನಲ್ಲಿ ಯಥೇಚ್ಛವಾಗಿವೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಪರಮೇಶ್ವರ್ ಅವರ ತಂದೆ 35 ವರ್ಷಗಳ ಹಿಂದೆ ಈ ಹಲಸಿನ ಗಿಡವನ್ನು ನೆಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್.ಬಸವರಾಜು, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಬಿ.ಎನ್.ಎಸ್ ಮೂರ್ತಿ, ತುಮಕೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಿ.ಹೆಚ್.ಇಎಸ್ . ಮುಖ್ಯಸ್ಥ . ಜಿ.ಕರುಣಾಕರನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.