ಭುವನೇಶ್ವರ ( www.bengaluruwire.com ) : ಭಾರತದ ಶಸ್ತಾಸ್ತ್ರದ ಬತ್ತಳಿಕೆಗೆ ಮತ್ತಷ್ಟು ಶಕ್ತಿ ಬಂದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ವಿಸ್ತರಿತ ಶ್ರೇಣಿಯ ಪಿನಾಕಾ ರಾಕೆಟ್ ನ ಪ್ರಾಯೋಗಿಕ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ.
ದೇಶೀಯವಾಗಿ ನಿರ್ಮಿಸಿದ ವಿಸ್ತರಿತ ಶ್ರೇಣಿಯ ದೂರಗಾಮಿ ಸಾಗುವ 122 ಎಂಎಂ ಸುತ್ತಳತೆಯ ಪಿನಾಕ ಕ್ಷಿಪಣಿಯನ್ನು ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್(ಎಂಬಿಆರ್ ಎಲ್) ನಿಂದ ಒಡಿಸಾದ ಚಾಂಡಿಪುರ ಕರಾವಳಿ ಪ್ರದೇಶದಲ್ಲಿ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್(ಐಟಿಆರ್) ಮೂಲಕ ಉಡಾಯಿಸಲಾಯಿತು.
15 ಅಡಿ ಉದ್ದದ ಪಿನಾಕ ರಾಕೆಟ್ 280 ಕೆಜಿ ತೂಕವಿದ್ದು, 100 ಕೆ.ಜಿ ವರೆಗೆ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಪಿನಾಕ ವಿಸ್ತ್ರತ ಶ್ರೇಣಿಯ ಕ್ಷಿಪಣಿ ವ್ಯವಸ್ಥೆಯಲ್ಲಿ ಒಟ್ಟು 25 ರಾಕೆಟ್ ಗಳಿದ್ದು, ವಿವಿಧ ಶ್ರೇಣಿಯ ಹಲವು ಗುರಿಗಳನ್ನು ಈ ರಾಕಟ್ ಗಳು ಹೊಡೆದುರುಳಿಸಿ ಪ್ರಾಯೋಗಿಕ ಪರೀಕ್ಷೆಯ ಎಲ್ಲಾ ಉದ್ದೇಶಗಳು ಈಡೇರಿದವು ಎಂದು ಡಿಆರ್ ಡಿಒ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮೂಲಕ ಪಿನಾಕ ರಾಕೆಟ್ ಒಟ್ಟು 45 ಕಿ.ಮೀ ದೂರದವರೆಗೆ ಸಾಗಿ ಶತ್ರುಗಳ ನೆಲೆಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದಂತಾಗಿದೆ.
25 ರಾಕೆಟ್ ಗಳು ವಿವಿಧ ಶ್ರೇಣಿಯ ಗುರಿಗಳನ್ನು ತಲುಪಿ ಸ್ಪೋಟವಾಗಿದ್ದನ್ನು ಟೆಲಿಮೆಟ್ರಿ, ರಾಡರ್ ಹಾಗೂ ಎಲೆಕ್ಟ್ರೊ ಆಪ್ಟಿಕಲ್ ಟ್ರಾಕಿಂಗ್ ಸಿಸ್ಟಮ್ ಮತ್ತಿತರ ಉಪಕರಣಗಳನ್ನು ಬಳಸಿ ಪಿನಾಕ ರಾಕೆಟ್ ಸಾಮರ್ಥ್ಯವನ್ನು ಪರಿಶೀಲನೆ ಮಾಡಲಾಗಿದೆ.
ಈ ಪಿನಾಕ ರಾಕೆಟ್ ವ್ಯವಸ್ಥೆಯನ್ನು ಪುಣೆ ಮೂಲದ ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಎಆರ್ ಡಿಇ) ಹಾಗೂ ಪ್ರಬಲ ಶಕ್ತಿ ವಸ್ತುಗಳ ಸಂಶೋಧನಾ ಪ್ರಯೋಗಾಲಯ ( ಎಚ್ ಇ ಎಮ್ ಆರ್ ಎಲ್)ಗಳು ಒಟ್ಟುಗೂಡಿ, ನಾಗಪುರದ ಎಕನಾಮಿಕ್ ಎಕ್ಸ್ ಪ್ಲೋಸಿವ್ ಎಂಬ ಸಂಸ್ಥೆಯ ಉತ್ಪಾದನೆಯ ಸಹಾಯ ಪಡೆದು ಜಂಟಿಯಾಗಿ ಅಭಿವೃದ್ಧಿಪಡಿಸಿದೆ.
ಹೆಚ್ಚಿನ ದೂರದ ಗುರಿಗಳನ್ನು ಈ ರಾಕೆಟ್ ಗಳು ತಲುಪುವ ನಿಟ್ಟಿನಲ್ಲಿ ಪಿನಾಕ ರಾಕೆಟ್ ಸಾಮರ್ಥ್ಯ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ನಡೆದ ಪರೀಕ್ಷಾರ್ಥ ರಾಕೆಟ್ ಉಡಾವಣಾ ಪ್ರಯೋಗಗಳು ನಡೆದಿದ್ದು, ಇವು ಯಶಸ್ವಿಯಾದ ಹಿನ್ನಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ತಂಡಗಳನ್ನು ಅಭಿನಂದಿಸಿದ್ದಾರೆ.