ಬೆಂಗಳೂರು (www.bengaluruwire.com) : ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್)ದ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ದ ಕನಕಪುರ ಘಟಕ ಇದೇ ಮೊದಲ ಬಾರಿಗೆ ಬಾಂಗ್ಲಾ ದೇಶಕ್ಕೆ 500 ಮೆಟ್ರಿಕ್ ಟನ್ ಕೆನೆ ರಹಿತ ಹಾಲಿನಪುಡಿ ರಫ್ತು ಮಾಡುತ್ತಿದೆ. ಮಂಗಳವಾರ ಈ ಸರಕನ್ನು ಹೊತ್ತ ಲಾರಿಗೆ ಬಮೂಲ್ ಅಧ್ಯಕ್ಷರು, ನಿರ್ದೇಶಕರು, ಕೆಎಂಎಫ್ ವ್ಯವಸ್ಥಾಪಕರು ಹಾಗೂ ಬಮೂಲ್ ಅಧಿಕಾರಿಗಳು ಹಸಿರು ನಿಶಾನೆ ತೋರಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು.
ಬಮೂಲ್ ಅಂಗ ಘಟಕವಾದ ಕನಕಪುರದಲ್ಲಿನ ಕಾಂಪ್ಲೆಕ್ಸ್ 2018ರಲ್ಲಿ ರಾಮನಗರ ಜಿಲ್ಲೆಯ, ಕನಕಪುರ ತಾಲೂಕಿನ ಶಿವನಹಳ್ಳಿಯಲ್ಲಿ ಲೋಕಾರ್ಪಣೆಗೊಂಡಿತು. ಈ ಘಟಕದಲ್ಲಿ ಪ್ರತಿದಿನ 7 ಲಕ್ಷ ಲೀಟರ್ ಹಾಲು ಸ್ವೀಕರಿಸಿ, ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.
ಈ ಡೈರಿಯಲ್ಲಿ ಪ್ರತಿನಿತ್ಯ 35 ಮೆಟ್ರಿಕ್ ಟನ್ ಹಾಲಿನಪುಡಿ, 35 ಮೆಟ್ರಿಕ್ ಟನ್ ಚೀಸ್, 50 ಸಾವಿರ ಕೆಜಿ ಮೊಸರು, 2 ಮೆಟ್ರಿಕ್ ಟನ್ ತುಪ್ಪ, 20 ಮೆಟ್ರಿಕ್ ಟನ್ ಬೆಣ್ಣೆಯನ್ನು ಉತ್ಪಾದಿಸುವ ಯಂತ್ರೋಪಕರಣವನ್ನು ಅಳವಡಿಸಲಾಗಿದೆ.
ಕೆಎಂಎಫ್ ಹಾಲು ಒಕ್ಕೂಟಗಳಲ್ಲಿ ಬಮೂಲ್ ಒಕ್ಕೂಟ ಅತಿ ಹೆಚ್ಚು ಹಾಲು ಸಂಗ್ರಹ, ಸಂಸ್ಕರಣೆ ಹಾಗೂ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಕೆಎಂಎಫ್ ಈಗಾಗಾಲೇ ಕೆನೆ ರಹಿತ ಹಾಲಿನಪುಡಿ, ಟೆಟ್ರಾ ಪ್ಯಾಕ್ ಗಳಲ್ಲಿ ಹಾಲು, ಬೆಣ್ಣೆ, ತುಪ್ಪವನ್ನು ಹೊರ ದೇಶಗಳಿಗೆ ರಫ್ತು ಮಾಡುತ್ತಿದೆ.
ಅಫ್ಘಾನಿಸ್ತಾನ, ಸಿಂಗಪುರ, ಬಾಂಗ್ಲಾದೇಶ,ಭೂತಾನ್, ಮದ್ಯಪ್ರಾಚ್ಯ ರಾಷ್ಟ್ರಗಳು, ಆಸ್ಟ್ರೇಲಿಯಾ ಹಾಗೂ ಅಮೆರಿಕ ದೇಶಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಯುಎಸ್ ನಲ್ಲಿ ನಂದಿನಿ ಒಂದು ಲೀಟರ್ ಟಿನ್ ಗಳಲ್ಲಿ ರಫ್ತು ಮಾಡುತ್ತಿರುವ ಉತ್ಪನ್ನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ನಂದಿನಿ ಸಿಹಿ ಉತ್ಪನ್ನ ಹಾಗೂ ಇತರ ಉತ್ಪನ್ನಗಳನ್ನು ರಫ್ತು ಮಾಡಲು ಆದ್ಯತೆ ನೀಡುವುದಾಗಿ ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.