ಇಷ್ಟು ದಿನ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿನ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಭೂಮಟ್ಟದಲ್ಲಿನ ವಿವಿಧ ಸಾಧನಗಳಿಂದ ಅಳೆಯಲಾಗುತ್ತಿತ್ತು.
ಆದರೀಗ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ನಿರ್ದಿಷ್ಟ ಭೂ ಪರಿಸರದಲ್ಲಿನ ಕಾರ್ಬನ್ ಡೈ ಆಕ್ಸೈಡ್ ಸಾಂದ್ರತೆಯನ್ನು ನಿಖರವಾಗಿ ಒಸಿಒ-3 ಎಂಬ ಉಪಕರಣದ ಮೂಲಕ ಬಾಹ್ಯಾಕಾಶ ಆಧಾರಿತ ನಕ್ಷೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಅದನ್ನು ತನ್ನ ಟ್ವಿಟರ್ ಖಾತೆ ಹಾಗೂ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಿದೆ.
ಆಕಾಶದಲ್ಲಿ ಭೂಮಿಯನ್ನು ಸುತ್ತುತ್ತಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ ನಾಸಾ ಅಭಿವೃದ್ಧಿಪಡಿಸಿದ ಕಾರ್ಬನ್ ವೀಕ್ಷಣಾ ಪರಿಭ್ರಮಣ (ಒಸಿಒ-3) ಉಪಕರಣವು ಬಾಹ್ಯಾಕಾಶದ ಮೇಲಿಂದ ಲಾಸ್ ಎಂಜಲೀಸ್ ಮೆಟ್ರೊಪಾಲಿಟನ್ ನಗರದ 50 ಚದರ ಕಿ.ಮೀ ವಿಸ್ತೀರ್ಣದಲ್ಲಿ ಮಾನವನ ಹಸ್ತಕ್ಷೇಪದಿಂದ ಉಂಟಾದ ಕಾರ್ಬನ್ ಡೈಆಕ್ಸೈಡ್ ಸಾಂದ್ರತೆಯನ್ನು ನಿಖರವಾಗಿ ಅಳೆದು ನಕ್ಷೆ ತಯಾರಿಸಿದೆ.
ಇತ್ತೀಚೆಗಷ್ಟೆ ನಾಸಾ ಸಂಸ್ಥೆ ಈ ಪ್ರದೇಶದ ಕಾರ್ಬನ್ ಡೈಆಕ್ಸೈಡ್ ಇರುವಿಕೆ ಹಾಗೂ ಹೊಸದಾಗಿ ಪರಿಸರಕ್ಕೆ ಸಂಚಯವಾಗುತ್ತಿರುವ ಪ್ರಕ್ರಿಯೆಯನ್ನು ಒಸಿಒ-3 ಉಪಕರಣದ ಆನಿಮೇಷನ್ ಮೂಲಕ ನಿಖರವಾಗಿ ಅಳೆದು ನಕ್ಷೆ ತಯಾರಿಸಿದೆ. ಈ ರೀತಿಯ ಆನಿಮೇಷನ್ ದತ್ತಾಂಶಗಳಿರುವ ನಕ್ಷೆಗಳು, ಮುಂದಿನ ದಿನಗಳಲ್ಲಿ ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್ ಅನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ನೀತಿ ನಿರೂಪಕರಿಗೆ ಸಹಾಯಕವಾಗಲಿದೆ ಎಂದು ನಾಸಾ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.
ಈ ವಾರದ ರಿಮೋಟ್ ಸೆನ್ಸಿಂಗ್ ಆಫ್ ಎನ್ವಾರ್ನಮೆಂಟ್ ಜರ್ನಲ್ ನಲ್ಲಿ ನಾಸಾದ ಒಸಿಒ-3 ಉಪಕರಣ ಸೆರೆಹಿಡಿದ ಇಂಗಾಲದ ಸಾಂದ್ರತೆಯ ಆನಿಮೇಷನ್ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ಒಸಿಒ-3 ಉಪಕರಣದಿಂದ ತಯಾರಿಸಲಾದ ಆನಿಮೇಷನ್ ಚಿತ್ರ ಹಾಗೂ ದೃಶ್ಯಗಳನ್ನು ನಾಸಾ ತನ್ನ ಅಧಿಕೃತ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಜನ ದಟ್ಟಣೆ ಹೆಚ್ಚಾಗಿರುವ ಲಾಸ್ ಏಂಜಲೀಸ್ ಮೆಟ್ರೊಪಾಲಿಟನ್ ಪ್ರದೇಶದಲ್ಲಿ ಆಕಾಶದ ಮೇಲಿಂದ ತೆಗೆದ ನಕ್ಷೆಯಲ್ಲಿ ಅತಿಹೆಚ್ಚು ಸಿಒ2 ಇರುವ ಪ್ರದೇಶವನ್ನು ಹಳದಿ ಬಣ್ಣದಿಂದ ಗುರ್ತಿಸಿದೆ.
ಅತಿ ಜನದಟ್ಟಣೆ ಪ್ರದೇಶ ಹಾಗೂ ಕೈಗಾರಿಕೆಗಳಿರುವ ಸ್ಥಳಗಳಲ್ಲಿ ಅತಿಹೆಚ್ಚು ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗುತ್ತಿರುವುದನ್ನು ಒಸಿಒ-3 ಉಪಕರಣದ ನಕ್ಷೆಯಲ್ಲಿ ಗುರ್ತಿಸಲಾಗಿದೆ. ಗಾಳಿಯಲ್ಲಿನ ಪ್ರತಿ ದಶಲಕ್ಷ ಅಣುಗಳ ಪೈಕಿ 5 ಅಣುಗಳು ಸಿಒ2 ಆಗಿರೋದನ್ನು ಹಳದಿ ಬಣ್ಣದ ಮೂಲಕ ನಾಸಾದ ಈ ಮ್ಯಾಪ್ ನಲ್ಲಿ ಗುರ್ತಿಸಲಾಗಿದೆ. ಈ ಕಾರ್ಬನ್ ಅಣುಗಳ ಇರುವಿಕೆಯ ಪ್ರಮಾಣ ಪ್ರತಿ ಎರಡು ವರ್ಷಗಳಿಗೊಮ್ಮೆ ಜಾಗತಿಕ ಸರಾಸರಿ ಪ್ರಮಾಣದ ಏರಿಕೆಗೆ ಸಮನಾಗಿದೆ ಎಂದು ನಾಸಾ ಹೇಳಿದೆ.
ಮ್ಯಾಪ್ ನಲ್ಲಿ ಹಳದಿ ಬಣ್ಣವಿರುವ ಸ್ಥಳದಲ್ಲಿ ಅತಿಹೆಚ್ಚು ಇಂಗಾಲ ಸಾಂದ್ರತೆಯನ್ನು ಗುರುತಿಸಲಾಗಿದೆ. ಆದರೆ ಇದೇ ಮ್ಯಾಪ್ ನಲ್ಲಿ ಲಾಸ್ ಏಂಜಲೀಸ್ ಉತ್ತರ ಬಲ ಭಾಗದಲ್ಲಿನ ಮರಭೂಮಿ ಪ್ರದೇಶ ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಅಲ್ಲಿ ಕಡಿಮೆ ಇಂಗಾಲದ ಪ್ರಮಾಣ ಕಂಡುಬಂದಿರುವುದನ್ನು ನಾಸಾ ಗುರ್ತಿಸಿದೆ.
ಶಕ್ತಿಗಾಗಿ ಪಳೆಯುಳಿಕೆ ಇಂಧನವನ್ನು ಹೆಚ್ಚಾಗಿ ಬಳಸುತ್ತಿರುವ ಕಾರಣದಿಂದ ಜಾಗತಿಕವಾಗಿ ಇಂಗಾಲದ ಡೈಆಕ್ಸೈಡ್, ವಾತಾವರಣದಲ್ಲಿ ಏರಿಕೆಯಾಗ್ತಿದೆ. ಶೇ.70 ಇಂಗಾಲದ ಉತ್ಪತ್ತಿ ನಗರಗಳಿಂದಲೇ ಆಗುತ್ತಿರುವುದು ದುರಂತ. ಆ ಕಾರಣಕ್ಕೆ ಕಾರ್ಬನ್ ಡೈ ಆಕ್ಸೈಡ್ ಅನ್ನು ನಿಖರವಾಗಿ ಅಳೆಯುವ ಸಾಧನದಿಂದ ಈಗಾಗಲೇ ಇಂಗಾಲ ನಿಯಂತ್ರಣಕ್ಕೆ ಕೈಗೊಂಡಿರುವ ನೀತಿಗಳ ಕ್ರಮಗಳ ಪರಿಣಾಮಕತೆ ತಿಳಿದು ಬರಲಿದೆ. ಇದರಿಂದ ಕಾರ್ಬನ್ ಡೈಆಕ್ಸೈಡ್ ಪರಿಣಾಮಕಾರಿ ನಿಯಂತ್ರಣಕ್ಕೆ ಸಹಾಯಕವಾಗಲಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಬಾಹ್ಯಾಕಾಶದಲ್ಲಿರುವ ಅಂತರಾಷ್ಟ್ರೀಯ ಸ್ಪೇಸ್ ಸೆಂಟರ್ ನಲ್ಲಿನ ಒಸಿಒ-3 ಉಪಕರಣದಲ್ಲಿ, ಒಟ್ಟು ಮೂರು ಸ್ಪೆಕ್ಟ್ರೋಮೀಟರ್ ಹಾಗೂ ದೂರದರ್ಶಕವನ್ನು ಅಳವಡಿಸಲಾಗಿದೆ. ಈ ಉಪಕರಣವು ಸ್ಪೇಸ್ ಸ್ಟೇಷನ್, ಕಕ್ಷೆಯಲ್ಲಿ ಸಾಗುತ್ತಿರುವಾಗ ಭೂಮಿ ಮೇಲಿನ ಅಷ್ಟೂ ನಗರಗಳನ್ನು ಸರಾಸರಿ ಮೂರು ದಿನಗಳಲ್ಲಿ ಚಿತ್ರೀಕರಿಸುತ್ತೆ.
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿನ ನಾಸಾದ ಜಟ್ ಪ್ರಪಲ್ಷನ್ ಪ್ರಯೋಗಾಲಯದ ಒಸಿಒ-3 ವಿಙ್ಞನಿಗಳ ತಂಡ, ಪ್ರತಿದಿನ ಭೂಮಿ ಮೇಲಿನ 40 ವಿವಿಧ ಸ್ಥಳಗಳಲ್ಲಿನ ಇಂಗಾಲದ ಪ್ರಮಾಣದ ಮಾಹಿತಿಯನ್ನು ಬಾಹ್ಯಾಕಾಶ ಮೇಲಿರುವ ಈ ಒಸಿಒ-3 ಉಪಕರಣದಿಂದ ದತ್ತಾಂಶ ಸಂಗ್ರಹಿಸಲಿದೆ. ಜಗತ್ತಿನಲ್ಲಿ ಅತಿಹೆಚ್ಚು ಕಾರ್ಬನ್ ಡೈಆಕ್ಸೈಡ್ ಉತ್ಪತ್ತಿಯಾಗುವ ನಗರಗಳನ್ನು ಕೇಂದ್ರೀಕರಿಸಿ ಈ ಪರೀಕ್ಷೆಗಳು ನಡೆಯಲಿದೆ.
ಭೂಮಿ ಮೇಲೆ ನೆಲಮಟ್ಟದಲ್ಲಿ ಪರಿಸರದಲ್ಲಿನ ಇಂಗಾಲವನ್ನು ಅಳೆಯಲಾಗುತ್ತೆ. ಅದೇನೊ ಸರಿ. ಆದರೆ ಉಪಗ್ರಹಗಳಿಂದ ಸಂಗ್ರಹಿಸುವ ಈ ಕುರಿತ ಮಾಹಿತಿ, ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಸಾಂದ್ರತೆ ಹಾಗೂ ವಿಸ್ತ್ರತ ಪ್ರದೇಶವನ್ನು ಒಳಗೊಂಡಿರುತ್ತದೆ.