ಬೆಂಗಳೂರು (www.bengaluruwire.com) : ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಶನಿವಾರ ತಾವರೆಕೆರೆಯ ಸ್ಮಶಾನದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಶವ ಸುಡುವ ಸಿಬ್ಬಂದಿಯೊಂದಿಗೆ ಬೆಳಗಿನ ಉಪಹಾರ ಸೇವಿಸಿದರು.
ಕೋವಿಡ್ ನಿಂದ ಮೃತರಾದವರ ಅಂತ್ಯಸಂಸ್ಕಾರ ನೆರವೇರಿಸುವ ಸ್ಮಶಾನದ ಶವ ಸುಡುವ ಕಂಪಾರ್ಟ್ ಮೆಂಟಗಳ ಪಕ್ಕದಲ್ಲೇ ಹಾಕಿದ್ದ ಟೆಂಟ್ ಕೆಳಗೆ ಕೂತು ತಿಂಡಿ ತಿಂದರು.
ಕೋವಿಡ್ ಶವ ಸುಡುವ ಸಿಬ್ಬಂದಿ ಜಿಲ್ಲಾಧಿಕಾರಿಗಳೇ ಸ್ವತಃ ಬಡಿಸಿದ ಉಪಹಾರ ಸೇವಿಸಿ ಸಂತಸಗೊಂಡರು. ಇದೇ ವೇಳೆ ಜಿಲ್ಲಾಧಿಕಾರಿಗಳು ಆ ಸಿಬ್ಬಂದಿಯ ಜೊತೆ ಕೆಲಹೊತ್ತು ಆತ್ಮೀಯವಾಗಿ ಅವರ ಕಷ್ಟ- ಸುಖ ವಿಚಾರಿಸಿದರು.
ಇದೇ ವೇಳೆ ರುದ್ರಭೂಮಿ ನೌಕರರ ಒಕ್ಕೂಟ ಸಂಸ್ಥಾಪಕ ಸುರೇಶ್ ಮಾತನಾಡಿ, ನಮ್ಮ ಜನಾಂಗದ ಬಗ್ಗೆ ಬೇಧ ಭಾವ ಮಾಡುವಾಗ ಒಬ್ಬ ಜಿಲ್ಲಾಧಿಕಾರಿಗಳು ನಮ್ಮೊಂದಿಗೆ ಕೂತು ಊಟ ಮಾಡಿದ್ದಲ್ಲದೆ, ಸ್ವತಃ ತಿಂಡಿ ಬಡಿಸಿದ್ದಾರೆ. ನಮ್ಮ ಕಷ್ಟ ಸುಖ ವಿಚಾರಿಸಿದ್ದಾರೆ. ಇದರಿಂದಾಗಿ ಸ್ಮಶಾನದಲ್ಲಿ ಶವ ಸುಡುವ ಸಿಬ್ಬಂದಿಗೆ ಬಹಳ ಸಂತೋಷವಾಗಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸ್ಮಶಾನದ ಖಾಲಿ ಸ್ಥಳದಲ್ಲಿ ಅರಳಿ ಸಸಿ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅರವತ್ತು ಜನ ಸಿಬ್ಬಂದಿಗೆ ದಿನಸಿ ಕಿಟ್ ಸಹ ವಿತರಿಸಿದರು.
ನಂತರ ಮಾತನಾಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಒಬ್ಬ ವ್ಯಕ್ತಿಗೆ ಏಳರಿಂದ ಎಂಟು ಮರವಿರಬೇಕು. ನಗರೀಕರಣದಿಂದಾಗಿ ನಾವಿಂದು ಸಾಕಷ್ಟು ಮರಗಳನ್ನು ಕಳೆದುಕೊಂಡಿದ್ದೇವೆ. ಬೆಂಗಳೂರಿನ ಹೊರಭಾಗದ ಖಾಲಿ ಸ್ಥಳಗಳಲ್ಲಿ ಹೆಚ್ಚು ಹೆಚ್ಚಾಗಿ ಸಸಿನೆಟ್ಟು ಹಸಿರೀಕರಣಕ್ಕೆ ಒತ್ತು ನೀಡುವಂತೆ ಕರೆ ನೀಡಿದರು.
ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಡಾ.ಶಿವಣ್ಣ, ತಹಸೀಲ್ದಾರ್ ಶಿವಪ್ಪ ಲಮಾಣಿ, ತಾಲೂಕು ಪಂಚಾಯ್ತಿ ಇಒ ನಾಗವೇಣಿ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.