ಬೆಂಗಳೂರು : ಜೀವನದಲ್ಲಿ ಕಂಡಿದ್ದ ಕನಸುಗಳಿಗೆ ಆಶ್ರಯ ನೀಡಿದ್ದ ಬೆಂಗಳೂರನ್ನು ಬೈದುಕೊಂಡು ಊರು ಖಾಲಿ ಮಾಡಿದವರಿಗೆ ಬಿಸಿ ಮುಟ್ಟಿಸುವ ಸಣ್ಣ ಪ್ರಯತ್ನವೇ ” ಡೋಂಟ್ ಬ್ಲೇಮ್ ಬೆಂಗಳೂರು”. ಅಂದರೆ ಬೆಂಗಳೂರನ್ನು ದೂಷಣೆ ಮಾಡಬೇಡಿ ಎಂದರ್ಥ.
ಕೊರೋನಾ ವಕ್ಕರಿಸಿತು, ಕಾಡಿತು, ಬದುಕು ಕಸಿದುಕೊಂಡಿತು.. ಒಪ್ಪತ್ತಿನ ಊಟಕ್ಕೆ ಸಂಕಷ್ಟ ತಂದಿತು… ಇದು ಕೊರೋನಾದ ಒಂದು ಮುಖ. ಆದರೆ ಇದೇ ಕಾರಣಕ್ಕೆ ಬೆಂಗಳೂರನ್ನು ತೊರೆದವರು ಹಲವು ಮಂದಿ. ರೋಗದ ಭಯಕ್ಕೆ ಸುರಕ್ಷಿತ ತಾಣ ಎಂದೂ ತಮ್ಮೂರಿಗೆ ಹೋದವರು ಬಾಯಿಗೆ ಬಂದಂತೆ ಬೈಯ್ದುಕೊಂಡ ರಾಜಧಾನಿಯನ್ನು ಬಿಟ್ಟು ಹೋಗಿದ್ದವರು. ಅಂತಹವರಿಗೆ ಹಾಡಿನೊಂದಿಗೆ ತಿಳಿ ಹೇಳುತ್ತಾ, ಕಾಲೆಳೆಯುತ್ತಾ ವಾಸ್ತವವನ್ನು ಕಟ್ಟಿಕೊಡುವ ಪ್ರಯತ್ನದೊಂದಿಗೆ “ಡೋಂಟ್ ಬ್ಲೇಮ್ ಬೆಂಗಳೂರು” ಹಾಡನ್ನು ರಚಿಸಲಾಗಿದೆ.
ಯುವ ಸಾಹಿತಿ ಎಂಜೆ ತಿಮ್ಮೇಗೌಡ ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯಿದ್ದು, ಅಶ್ವಿನ್ ಶರ್ಮಾ ಕಂಠದಲ್ಲಿ “ಡೋಂಟ್ ಬ್ಲೇಮ್ ಬೆಂಗಳೂರು” ಹಾಡು ಮೂಡಿಬಂದಿದೆ. ಹಾಡಿನ ವಿಡಿಯೋದಲ್ಲಿ ನಟ ವಸಿಷ್ಠ ಸಿಂಹ, ಅನಿರುದ್ಧ್, ನಟಿ ಪ್ರಣೀತಾ ಸುಭಾಷ್, ಸೋನುಗೌಡ, ಹರ್ಷಿಕಾ ಪೂಣಚ್ಚ, ರೂಪಿಕಾ, ಆರ್ ಜೆ ನೇತ್ರಾ, ಬಿಗ್ ಬಾಸ್ ಖ್ಯಾತಿಯ ಗೀತಾ ಭಟ್, ಗಾಯಕರಾದ ಅನುರಾಧಾ ಭಟ್, ಡಾ. ಶಮಿತಾ ಮಲ್ನಾಡ್, ಸಂತೋಷ್ ವೆಂಕಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
“ಡೋಂಟ್ ಬ್ಲೇಮ್ ಬೆಂಗಳೂರು” ಹಾಡು ನಾಳೆ ಸಂಜೆ 6 ಗಂಟೆಗೆ ಆರ್ ಜೆ ಸುನಿಲ್ ಪ್ರಾಂಕ್ ಕಾಲ್ ಯೂಟ್ಯೂಬ್ ಚಾನೆಲ್ ನಲ್ಲಿ ಲೋಕಾರ್ಪಣೆಗೆ ಸಿದ್ಧವಾಗಿದೆ. ಯುವ ಪ್ರತಿಭೆ ತಿಮ್ಮೇಗೌಡ ಸಾಹಿತ್ಯ-ಸಂಗೀತ- ಸಂಯೋಜನೆಯಲ್ಲಿ Don’t Blame Bengaluru’ ಹಾಡು ಯೂಟ್ಯೂಬ್ ನಲ್ಲಿ ತೆರೆಕಾಣಲಿದೆ. ಗಾಯಕ ಅಶ್ವಿನ್ ಶರ್ಮಾ ಹಾಡಿಗೆ ದನಿಯಾಗಿದ್ದಾರೆ. ಬೆಂಗಳೂರನ್ನು ಬೈದವರಿಗೆ ಹುಳಿ-ಉಪ್ಪು-ಖಾರ ಸೇರಸಿ ಬುದ್ಧಿ ಹೇಳುವ ಕೆಲಸ ಈ ಹಾಡಿನ ಮೂಲಕವಾಗಿದೆ.