ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಿರುಕುಳ ನೀಡಿದ್ದರಿಂದ ಬೇಸೆತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಗುರುವಾರ ತಿಳಿಸಿದ್ದಾರೆ.
ನಗರದಲ್ಲಿ ಸಂಜೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಶಿಲ್ಪಾನಾಗ್ ಅವರು, ಡಿಸಿ ವಿರುದ್ಧ ಹರಿಹಾಯ್ದಿದ್ದಾರಲ್ಲದೆ, ಇಂತಹ ಡಿಸಿ ಮೈಸೂರಿನಂತಹ ನಗರದಲ್ಲಿ ಇರಬಾರದು ಎಂದು ಕಿಡಿಕಾರಿದ್ದಾರೆ. ಜಿಲ್ಲಾಧಿಕಾರಿಗಳ ಈ ರೀತಿಯ ನಡೆಯಿಂದಾಗಿ ಮೈಸೂರಿನ ಮಾನ ಮರ್ಯಾದೆ ಬೀದಿಗೆ ಬಂದು ನಿಂತಿದೆ ಎಂದು ಟೀಕಿಸಿದರು.
ತಮ್ಮ ಮಾತಿನುದ್ದಕ್ಕೂ ಡಿಸಿ ನಡೆಯನ್ನು ಬೇಸರದಿಂದಲೇ ನುಡಿದರಲ್ಲದೆ, ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಮಾತ್ರವಲ್ಲ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು.
ಜಿಲ್ಲಾಡಳಿತದಿಂದ ನಮಗೆ ಯಾವುದೇ ಸಹಕಾರ ದೊರೆತಿಲ್ಲ. ಸಿಎಸ್‌ಆರ್ ಫಂಡ್‌ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು ಸಹನೆ ಇರುತ್ತೆ, ಸಹನೆ ಒಡೆದಾಗ ಏನು ಮಾಡಬೇಕು. ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ ?
ನನ್ನನ್ನು ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದೆ.
ಅವರ ಪ್ರತಿಷ್ಠೆಯಿಂದಾಗಿ ನಾವು ಮಾಡುವ ಕೆಲಸಕ್ಕೆ ಮನ್ನಣೆ ಸಿಗುತ್ತಿಲ್ಲ. ಪ್ರಾಥಮಿಕ ಹಂತದಿಂದಲೂ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೂ, ಸಿಟಿಯಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ, ಟೆಸ್ಟ್ ಸರಿಯಾಗಿ ನಡೆಯುತ್ತಿಲ್ಲ ಎಂಬ ಮಾತುಗಳು ಬರುತ್ತಿವೆ.
ಮೊನ್ನೆ ಒಂದು ದುಃಖದ ಸಂಗತಿ ಯಾಯಿತು.
3000 ಮೆಡಿಷನ್ ಕಿಟ್ ನ್ನು ಒಂದು ಸಂಸ್ಥೆ ನೀಡಿತು.
ಪಾಲಿಕೆ ಕಚೇರಿಯ ಬೀಗ ತೆಗೆದು ಪೊಲೀಸರನ್ನ ಕಳುಹಿಸಿ ಜಿಲ್ಲಾಡಳಿತ ಔಷಧಿ ತೆಗೆದುಕೊಳ್ಳಲಾಯಿತು.
ಒಬ್ಬ ಐಎಎಸ್ ಅಧಿಕಾರಿಯಿಂದ ಮತ್ತೊಬ್ಬ ಐಎಎಸ್ ಅಧಿಕಾರಿಗಳ ಮೇಲೆ ಈ ನಡೆ ಸರಿಯಿಲ್ಲ ಎಂದು ದೂರಿದರು.
ಜಿಲ್ಲಾಡಳಿತದ ಕೆಲವು ನಿರ್ಣಯ ಸಹಿಸಿಕೊಂಡು ಸಾಕಾಗಿದೆ. ನಮಗೆ ಯಾವುದೇ ಅನುಧಾನ ನೀಡಿಲ್ಲ, ಸಿ.ಎಸ್.ಆರ್ ನಿಧಿಯಿಂದ ಎಲ್ಲ ಕೆಲಸ ಮಾಡುತ್ತಿದ್ದೇವೆ. ಸಿ.ಎಸ್.ಆರ್ ನ ವಾಟ್ಸಾಪ್ ಗ್ರೂಪ್ ನಿಂದ ನನ್ನನ್ನು ತೆಗೆಯುವ ಕೆಲಸ ಆಗಿದೆ. ನಾನೂ ಸಹ ಸಾಕಷ್ಟು ಐಎಎಸ್ ಅಧಿಕಾರಿಗಳ ಜೊತೆ ಕೆಲಸ ಮಾಡಿದ್ದೇನೆ. ಆದರೆ ಈ ರೀತಿ ಎಂದೂ ಆಗಿಲ್ಲ.
ಪ್ರತಿ ದಿನ ಈ ಅವಮಾನ ಸಾಕಾಗಿದೆ. ಒಬ್ಬ ಅಧಿಕಾರಿಯಾಗಿ ಕೆಲಸ ಮಾಡಲು ಸಾಕಾಗಿದೆ. ಒಬ್ಬರ ದುರಾಹಂಕಾರದಿಂದ ಇಡೀ ನಗರವನ್ನು ಸುಡುವ ಕೆಲಸವಾಗುತ್ತಿದೆ. ಮೈಸೂರು ನಗರದಲ್ಲಿ ಜನರು, ಅಧಿಕಾರಿಗಳು ನಮಗೆ ಸಹಕಾರ ನೀಡುತ್ತಿದ್ದಾರೆ ಆದರೂ, ಜಿಲ್ಲಾಡಳಿತ ಸರಿಯಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ.
ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ನನಗೆ ಕೆಲಸ ಮಾಡುವ ಆಸಕ್ತಿಯೇ ಇಲ್ಲದಂತಾಗಿದೆ. ನಗರ ಪ್ರದೇಶಕ್ಕೆ ಒಂದು ಮಾನದಂಡ, ಗ್ರಾಮೀಣ ಪ್ರದೇಶಕ್ಕೆ ಒಂದು ಮಾನದಂಡ ಮಾಡಲಾಗಿದೆ. ಸೂಕ್ತವಾಗಿ ಕರೊನಾ ನಿರ್ವಹಣೆ ಮಾಡಿದರೂ, ಪಾಲಿಕೆ ಕೆಲಸ ಮಾಡುತ್ತಿಲ್ಲ ಎಂದು ಬಿಂಬಿಸಲಾಗುತ್ತಿದೆ.
ಸುಮ್ಮನೆ ಟಾರ್ಗೆಟ್ ಮಾಡಿದ ಪರಿಣಾಮ ನಮ್ಮ ಪಾಲಿಕೆ ಅಧಿಕಾರಿಗಳಿಗೆ ಟೀಕೆ ಉತ್ತರಗಳು ಬಂದಿದೆ.
ನಾನು 2016 ಬ್ಯಾಚ್, ಅವರು 2009ರ ಬ್ಯಾಚಿನವರು. ಅವರಿಗೆ ಯಾವತ್ತೂ ಮರ್ಯಾದೆ ಇಲ್ಲದೆ ನಡೆದುಕೊಂಡಿಲ್ಲ. ನಾನು ರಾಜೀನಾಮೆ ನೀಡಿ ನನ್ನ ಕೆಲಸ ನಾನು ನೋಡಿಕೊಳ್ಳುತ್ತೇನೆ.
ಮೈಸೂರು ಜನತೆಗೆ ಮುಂದಾದರೂ ಒಳ್ಳೆಯದಾಗಲಿ.
ಮುಂದೆ 3ನೇ ಅಲೆ ಇದೆ, ಮಕ್ಕಳ ಮೇಲೆ ಪರಿಣಾಮ ಬೀರಲಿದೆ.
ನಮ್ಮ ಅಧಿಕಾರಿಗಳಿಗೆ ಅವಮಾನವಾದರೆ ಅದನ್ನು ನಾನು ಸಹಿಸೋದಿಲ್ಲ. ಕೆಲವರನ್ನು ಹೋಗು , ಬಾ ಅಂತ ಮಾತನಾಡಿಸೋದು, ನಾನೇ ಜಿಲ್ಲಾಧಿಕಾರಿ, ನಾನೇ ಸುಪ್ರೀಂ ಅಂತ ಹೇಳೋದು ನಾಯಕತ್ವದ ಗುಣ ಅಲ್ಲ. ನಾನು ರಾಜೀನಾಮೆ ನೀಡಿದರೆ ಆಗಲಾದರೂ ನಮ್ಮ ಮೈಸೂರಿಗೆ ಒಳ್ಳೆಯದಾಗಲಿ. ನನ್ನಿಂದ ಮೈಸೂರು ಜನತೆಗೆ ತೊಂದರೆ ಆಗೋದು ಬೇಡ.
ಇನ್ನೂ ನಾನಾ ವಿಚಾರಗಳಿಂದಾದ ಬೇಸರದಿಂದ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇನೆ. ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಯಾವುದೇ ಅಧಿಕಾರಿಗೂ ಈ ರೀತಿಯ ಜಿಲ್ಲಾಧಿಕಾರಿ ಸಿಗದಿರಲಿ ಎಂದು ಪತ್ರ ಉಲ್ಲೇಖಿಸಿದ್ದೇನೆ ಎಂದು ಹೇಳಿದ್ದಾರೆ.
ಮಾನಸಿಕ ಕಿರುಕುಳ ನೀಡಿಲ್ಲವೆಂದು ಡಿಸಿ ಸಿಂಧೂರಿ ಸ್ಪಷ್ಟನೆ
ಇನ್ನೊಂದೆಡೆ ಐಎಎಸ್ ಅಧಿಕಾರಿ ಶಿಲ್ಪಾನಾಗ್ ಗೆ ತಾವು ಯಾವುದೇ ರೀತಿ ಕಿರುಕುಳ ನೀಡಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟಪಡಿಸಿದ್ದಾರೆ. ಶಿಲ್ಪ ನಾಗ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಎಲ್ಲೂ ಆ ರೀತಿ ಹೇಳಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಶಿಲ್ಪಾ ನಾಗ್ ಮಾಡಿರುವ ಆರೋಪಗಳಿಗೆ ಪ್ರತಿಯಾಗಿ, ಮೈಸೂರು ನಗರದಲ್ಲಿ ಕೋವಿಡ್ ವಿಷಯದಲ್ಲಿ ನಗರ ಪಾಲಿಕೆ ಆಯುಕ್ತೆಯಾಗಿ ಸೂಕ್ತ ರೀತಿ ಕೆಲಸ ಮಾಡಿಲ್ಲ ಎಂದು ರೋಹಿಣಿ ಹೇಳಿದ್ದಾರೆ.
ಸಿಎಸ್ ಆರ್ ನಿಧಿಯನ್ನು ಮೈಸೂರು ಜಿಲ್ಲೆ ತಾಲೂಕು, ಗ್ರಾಮೀಣ ಪ್ರದೇಶದಲ್ಲಿ ಬಳಸದೆ ಸಂಪೂರ್ಣವಾಗಿ ಮೈಸೂರು ನಗರಕ್ಕೆ ಬಳಸಿದ್ದು ತಪ್ಪು. ಆ ಬಗ್ಗೆ ಲೆಕ್ಕ ಕೇಳಿದರೆ ಈ ತನಕ ಶಿಲ್ಪ ನಾಗ್ ಕೊಟ್ಟಿಲ್ಲ ಎಂದು ಡಿಸಿ ರೋಹಿಣಿ ಕೌಂಟರ್ ಕೊಟ್ಟಿದ್ದಾರೆ.
ಇತ್ತೀಚೆಗೆ ಮೈಸೂರು ಜನಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆಡಳಿತ ವೈಖರಿ ಹಾಗೂ ನಡೆಯ ಬಗ್ಗೆ ಮುಖಂಡರು ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ತೀವ್ರ ತರಾಟೆ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಬಿಜೆಪಿ ಎಸ್.ಎ.ರಾಮದಾಸ್ ರಿಂದ ಶಿಲ್ಪಾನಾಗ್ ಪರ ಟ್ವೀಟ್
ಬಿಜೆಪಿ ಹಿರಿಯ ಮುಖಂಡ ಹಾಗೂ ಶಾಸಕ ಎಸ್.ಎ.ರಾಮದಾಸ್, ಶಿಲ್ಪನಾಗ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಇವರ ರಾಜೀನಾಮೆ ಪಡೆಯದಂತೆ ಪ್ರಧಾನಮಂತ್ರಿ ಜೊತೆ ಮಾತನಾಡಿದ್ದಾಗಿ ಹೇಳಿದ್ದಾರೆ. ಕೆಲವು ವಿಷಯಗಳಲ್ಲಿ ಬೇಸೆತ್ತು ರಾಜಿನಾಮೆ ನೀಡಿದ್ದಾರೆ. ಇಂತಹ ಅಧಿಕಾರಿ ಅವಶ್ಯಕತೆಯಿದೆ ಎಂದು ತಮ್ಮ ಟ್ವಿಟರ್ ನಲ್ಲಿ ತಿಳಿಸಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಗೆ ಈ ಕುರಿತು ಬರೆದ ಪತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ