ಬೆಂಗಳೂರು : ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಇಂದು ಕೇಂದ್ರ ಕಚೇರಿಯಲ್ಲಿ ಬೆಂಗಳೂರು ದಕ್ಷಿಣ ಹಾಗೂ ಉತ್ತರ ತಾಲೂಕು ತಹಸೀಲ್ದಾರ್ ಕಚೇರಿಗೆ ಹಠಾತ್ ಭೇಟಿ ನೀಡಿ ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿ ಪರಿಶೀಲನೆ ನಡೆಸಿದರು.
ಭೂ ಮಂಜೂರಾತಿ ಕುರಿತಂತೆ ವರ್ಷಗಳಿಂದ ವಿಲೇವಾರಿ ಮಾಡದೆ ಉಳಿಸಿಕೊಂಡ ಕಡತಗಳ ಬಗ್ಗೆ ವಿಚಾರಿಸಿದರು. ಕಡತ ವಿಲೇವಾರಿ ಸೂಕ್ತ ಕಾಲಾವಧಿಯಲ್ಲಿ ವಿಲೇವಾರಿ ಮಾಡದ ಬಗ್ಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಎರಡೂ ತಾಲೂಕು ಕಚೇರಿಗಳಲ್ಲಿ ಹಾಜರಾತಿ ಪುಸ್ತಕವನ್ನು ವಶಕ್ಕೆ ಪಡೆದು ಎಷ್ಟು ಮಂದಿ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿದರು.
ಕರೋನಾ ಸಂಕಷ್ಠ ಕಾಲದಲ್ಲಿ ಸಿಬ್ಬಂದಿ, ಕಡತ ವಿಲೇವಾರಿ ತಡವಾಗುತ್ತಿರುವ ಬಗ್ಗೆ ಕಾರಣ ನೀಡಿದರೂ ಆ ಉತ್ತರದಿಂದ ತೃಪ್ತರಾಗದ ಡಿಸಿ ಮಂಜುನಾಥ್ ತಾಲೂಕು ಕಚೇರಿಯಲ್ಲಿನ ಕೆಲವು ಕಡತಗಳನ್ನು ಪರಿಶೀಲನೆ ನಡೆಸಿದರು.
ಪ್ರಕರಣವೊಂದರಲ್ಲಿ 2003 ರಲ್ಲಿ ಭೂ ಮಂಜೂರಾತಿಗೆ ಸಲ್ಲಿಸಿದ ಅರ್ಜಿಯನ್ನು 2021 ಇಸವಿ ಆದರೂ ವಿಲೇವಾರಿ ಮಾಡಿಕೊಟ್ಟಿಲ್ಲ, ನಿಮ್ಮ ನಿಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಜಾಗ ಯಾಕೆ ನೀಡಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸರ್ಕಾರಿ ಜಾಗದ ಬಗ್ಗೆ ಸೂಕ್ತ ದಾಖಲೆಗಳನ್ನು ನಿರ್ವಹಣೆ ಮಾಡಬೇಕು. ಗ್ರಾಂಟ್ ರಿಜಿಸ್ಟರ್, ಸಾಗುವಳಿ ಚೀಟಿ, ಖಾತಾ ಮತ್ತಿತರ ದಾಖಲೆಗಳ ಬಗ್ಗೆ ಆಗಾಗ ಪರಿಶೀಲನೆ ನಡೆಸಬೇಕು ಎಂದು ತಾಕೀತು ಮಾಡಿದರು.
ಎಷ್ಟು ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರಾತಿ ಆಗಿದೆ? ಎಷ್ಟು ಮಂಜೂರಾತಿ ಬಾಕಿಯಿದೆ? ಇನ್ನೂ ಯಾಕೆ ಮಂಜೂರಾತಿ ಮಾಡಿಕೊಟ್ಟಿಲ್ಲ ತಿಳಿದುಕೊಳ್ಳಿ. ಹಳ್ಳಿಗಳಲ್ಲಿ ಹಸಿರು ವಲಯ ಎಂದರೇನು? ಎಷ್ಟು ವಿಸ್ತೀರ್ಣವಿದೆ ಎಂಬ ಮಾಹಿತಿಯಿದೆಯಾ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದರೆ, ಸಿಬ್ಬಂದಿ ಉತ್ತರಿಸಲು ತಡಬಡಾಯಿಸಿದರು.
ಬೆಂಗಳೂರು ತಾಲೂಕು ವ್ಯಾಪ್ತಿಯಲ್ಲಿರುವ ಗ್ರಾಮ ಲೆಕ್ಕಿಗರಿಗೆ ಹಲವು ವಿಷಯಗಳ ಬಗ್ಗೆ ಪ್ರಶ್ನಿಸಿದರು. ಆದರೆ ಅವುಗಳಿಗೆ ಸಮರ್ಪಕ ಉತ್ತರ ನೀಡುವಲ್ಲಿ ಸಿಬ್ಬಂದಿ ವಿಫಲರಾದರು. ಆಗ ಸಾಗುವಳಿ ಚೀಟಿ, ಭೂ ಮಂಜೂರಾತಿ, ಪೋಡಿ, ಗೋಮಾಳ ಜಮೀನು ಮತ್ತಿತರ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿಗಳು ತಮ್ಮ ಸಿಬ್ಬಂದಿಗೆ ಕೆಲಹೊತ್ತು ತಿಳಿ ಹೇಳುವ ಮೇಷ್ಟರಾದರು.