ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ “ಮಹಾರಾಜ” ಸೋಮವಾರ ನಿವೃತ್ತರಾಗಿದ್ದಾರೆ.
ಪ್ರಥಮ ಪ್ರಜೆಯಾದ ಮಹಾಪೌರರು, ಆಯುಕ್ತರೊಂದಿಗೆ ಸದಾ ಜೊತೆಗೆ ಇರುತ್ತಿದ್ದ ಮಹಾರಾಜ ನೆಂದೇ ಅನ್ವರ್ಥನಾಮದಿಂದ ಕರೆಯುತ್ತಿದ್ದ ದಫೇದಾರ್ ಧರ್ಮರಾಯ ತಮ್ಮಸುಧೀರ್ಘ 40 ವರ್ಷದ ಸೇವೆಯಿಂದ ಸೋಮವಾರ ನಿವೃತ್ತರಾದರು. ಅವರ ಮೇಲಧಿಕಾರಿಗಳು, ಸಹೋದ್ಯೋಗಿಗಳು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು.
ಕಿವಿಗೆ ಎರಡು ದಪ್ಪ ಓಲೆ, ಕತ್ತಿನಲ್ಲಿ ಹುರಿಯ ಹಗ್ಗದಂತಹ ಚಿನ್ನದ ಚೈನು, ಕೈ ಬೆರಳಲ್ಲಿ ದೊಡ್ಡ ಬಿಲ್ಲೆಯಂತಹ ಉಂಗುರ, ಗಾಂಭೀರ್ಯ ಮುಖ, ಕೆಲಸದ ಬಗ್ಗೆ ಸದಾ ಉತ್ಸಾಹವನ್ನು ತುಂಬಿಕೊಂಡಿದ್ದ ಧರ್ಮರಾಯ ಹೆಸರಿನಂತೆ ಹಲವರ ಪಾಲಿಗೆ ಧರ್ಮರಾಯನೇ ಆಗಿದ್ದರು.
1981ರಲ್ಲಿ ಆಗಿನ ಬೆಂಗಳೂರು ನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಬಂದವರಿಗೆ ನೀರು ಕೊಡುವ ಜವಾನರಾಗಿ ಕೆಲಸಕ್ಕೆ ಸೇರಿದ್ದರು. ಯಾವಾಗ ದಕ್ಷ ಅಧಿಕಾರಿ ಜಯರಾಜ್ ಪಾಲಿಕೆಗೆ ಬಂದರೋ ಆಗಲೇ ಧರ್ಮರಾಯ ಅವರನ್ನು ದಫೇದಾರ ಹುದ್ದೆ ನೀಡಿದರು.
ಕೆಲಸದಲ್ಲಿ ಶಿಸ್ತು – ನಿಷ್ಠೆ ಮೈಗೂಡಿಸಿಕೊಂಡಿದ್ದ ಧರ್ಮರಾಯ
ಕೆಲಸದಲ್ಲಿ ಶಿಸ್ತಿಗೆ ಹೆಸರಾಗಿದ್ದ ಜಯರಾಜ್ ದಫೇದಾರ್ ಧರ್ಮರಾಯರನ್ನು ಪ್ರೀತಿಯಿಂದ ಮಹಾರಾಜ್ ಅಂತಲೇ ಕರೆಯುತ್ತಿದ್ದರು. ಅಲ್ಲಂದ ಪಾಲಿಕೆಯಲ್ಲಿ “ಮಹಾರಾಜ” ನೆಂದೇ ಅನ್ವರ್ಥ ನಾಮದಿಂದ ಎಲ್ಲರೂ ಕರೆಯುತ್ತಿದ್ದರು.
ಈ ತನಕ ಪಾಲಿಕೆಯಲ್ಲಿ 20 ಆಯುಕ್ತರು ಹಾಗೂ ಐವರು ಮಹಾಪೌರರ ಬಳಿ ಶಿಷ್ಠಾಚಾರ ಪಾಲನೆ ಮಾಡುವ ದಫೇದಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಸದಾ ಆಯುಕ್ತರು ಅಥವಾ ಮಹಾಪೌರರ ಬಳಿಯಲ್ಲೇ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಕಾರಣ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಸದಸ್ಯರು ಅಥವಾ ಪಾಲಿಕೆ ನೌಕರರ ಪಿಂಚಣಿ, ಗೌರವ ಧನ ಇತರ ಸಮಸ್ಯೆ ಹೊತ್ತು ಬರುತ್ತಿದ್ದ ನೌಕರರ ಕೆಲಸಗಳನ್ನು ಸ್ವಯಂಪ್ರೇರಿತವಾಗಿ ಮಾಡಿಕೊಡುತ್ತಿದ್ದರು.
“ದಫೇದಾರ್ ಧರ್ಮರಾಯರನ್ನು ನಾನು 2009 ರಿಂದ ಬಲ್ಲೆ. ಅನೇಕ ಆಯುಕ್ತರು, ಮೇಯರ್ ಕೆಳಗೆ ಕೆಲಸ ಮಾಡಿದ ಅನುಭವ ಧರ್ಮರಾಯರಿಗಿದೆ. ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ಅವರು, ಹಲವು ಪಾಲಿಕೆ ನೌಕರರಿಗೆ ತಮ್ಮ ಕೈಲಾದ ಕೆಲಸ ಮಾಡಿಕೊಡುತ್ತಿದ್ದರು. ಅದು ಅವರ ದೊಡ್ಡ ಗುಣ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ.”
– ರಾಮೇಗೌಡ, ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿ
ಬೆಳ್ಳಿ ದಂಡ- ಸಮವಸ್ತ್ರ ಧರಿಸಿ ಗಂಟೆಗಟ್ಟಲೆ ನಿಲ್ಲುವ ಛಾತಿ
ದಫೇದಾರ್ ಸಮವಸ್ತ್ರ ಧರಿಸಿ ಬೆಳ್ಳಿಯ ದಂಡ ಹಿಡಿದು ಕೌನ್ಸಿಲ್ ಸಭೆಯಲ್ಲಿ ಮಹಾಪೌರರ ಆಸನದ ಹಿಂದೆ, ಕಲ್ಲಿನಂತೆ ಗಂಟೆ ಗಟ್ಟಲೆ ಕದಲದೆ ಅಛಲವಾಗಿ ನಿಂತಿರುತ್ತಿದ್ದರು. ಧರ್ಮರಾಯರ ನಿವೃತ್ತಿ ಬಳಿಕ ಪಾಲಿಕೆಯಲ್ಲಿ ಇದ್ದ ಎರಡು ದಫೇದಾರರ ಹುದ್ದೆಯೂ ಖಾಲಿಯಾದಂತಾಗಿದೆ.
40 ವರ್ಷದ ಸುಧೀರ್ಘ ಅವಧಿಯಲ್ಲಿ ಬೆಂಗಳೂರಿಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಹೀಗೆ ಯಾವುದೇ ಗಣ್ಯರು ಆಗಮಿಸಿದಾಗ ಶಿಷ್ಠಾಚಾರ ಪಾಲನೆಗಾಗಿ ಆಯುಕ್ತರು, ಮಹಾಪೌರರ ದಫೇದಾರರಾಗಿ ಜೊತೆಯಲ್ಲಿರುತ್ತಿದ್ದರು.
“ಮಂಜುನಾಥ್ ರೆಡ್ಡಿ ಮಹಾಪೌರರಾಗಿದ್ದಾಗ ಮೊದಲ ಬಾರಿಗೆ ಮೇಯರ್ ದಫೇದಾರನಾಗಿ ನೇಮಕ ಮಾಡಿದ್ದರು. ಅವರು ಅಧಿಕಾರ ವಹಿಸಿಕೊಂಡ 4-5 ತಿಂಗಳಲ್ಲಿ ಕೌನ್ಸಿಲ್ ಸಭೆ ನಡೆಯುತ್ತಿದ್ದಾಗ ಅಚಾನಕ್ಕಾಗಿ ವಿರೋಧ ಪಕ್ಷದವರು ವಿಷಯವೊಂದಕ್ಕೆ ಸಂಬಂಧಿಸಿದಂತೆ ಕೌನ್ಸಿಲ್ ಬಾವಿಗಿಳಿದು ಹಾಗೂ ಮೇಯರ್ ಕುಳಿತಿದ್ದ ಆಸನಕ್ಕೆ ನುಗ್ಗಿ ಗಲಾಟೆ ಮಾಡಿದರು. ಆ ಸಂದರ್ಭದಲ್ಲಿ ಬಹಳ ಕಷ್ಟಪಟ್ಟು ಮೇಯರ್ ಅವರನ್ನು ರಕ್ಷಣೆ ಮಾಡಿ ಸಭೆಯಿಂದ ಸುರಕ್ಷಿತವಾಗಿ ಹೊರಗೆ ಕರೆತಂದೆ. ಇದು ನನಗೆ ಮರೆಯಲಾಗದ ಘಟನೆ”
– ಧರ್ಮರಾಯ, ಬಿಬಿಎಂಪಿ ದಫೇದಾರ
ಸಮಯದ ಪರಿವೆ ಇಲ್ಲದಂತೆ ಕೆಲಸ ಮಾಡುತ್ತಿದ್ದ ಧರ್ಮರಾಯ, ತಮ್ಮ ಸುಧೀರ್ಘ ಸೇವಾ ಅವಧಿಯಲ್ಲಿ ಸಾಕಷ್ಟು ಆಯುಕ್ತರು, ಮೇಯರ್ ಗಳನ್ನು ಕಂಡಿದ್ದಾರೆ. ಅವರೆಲ್ಲರ ಪೈಕಿ ಆಯುಕ್ತರಾಗಿದ್ದ ಜಯರಾಜ್, ಶಂಕರಲಿಂಗೇಗೌಡ, ಸಿದ್ದಯ್ಯ, ಭರತ್ ಲಾಲ್ ಮೀನಾ, ಸುಬ್ರಹ್ಮಣ್ಯ ಅವರ ಕಾರ್ಯ ವೈಖರಿ ಇಷ್ಟವಾಗುತ್ತಿತ್ತು ಎಂದು ಹೇಳುತ್ತಾರೆ.
ಈ ತನಕ ಧರ್ಮರಾಯ ಅವರಿಗೆ ಬಿಬಿಎಂಪಿಯ ಕೆಂಪೇಗೌಡ ದಿನಾಚರಣೆಯಲ್ಲಿ ಹಾಗೂ 2006ರಲ್ಲಿ ರಾಜ್ಯಪಾಲರಿಂದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಉತ್ತಮ ನೌಕರ ಪ್ರಶಸ್ತಿ, ಕನಕದಾಸ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಧರ್ಮರಾಯನ ಸಹೋದರ ಕರಗ ಪೂಜಾರಿ :
ಒಟ್ಟು 9 ಮಂದಿ ಸಹೋದರ, ಸಹೋದರಿಯರು ಇರುವ ತುಂಬು ಕುಟುಂಬದಲ್ಲಿ ಜನಿಸಿದ ಧರ್ಮರಾಯ ವಹ್ನಿಕುಲ ಕ್ಷತ್ರಿಯ ಸಮುದಾಯದವರು. ಅವರ ತಮ್ಮ ಲೋಕೇಶ್ ಧರ್ಮರಾಯ ಸ್ವಾಮಿ ದೇವಸ್ಥಾನದ ಐತಿಹಾಸಿಕ ಕರಗವನ್ನು ಐದು ಬಾರಿ ಹೊತ್ತಿದ್ದಾರೆ.
ಒಟ್ಟಾರೆ ಪಾಲಿಕೆಯ ದಫೇರಾದರೂ ಧರ್ಮರಾಯ ಎಲ್ಲ ನೌಕರರ ಮನಸ್ಸನ್ನು ಗೆದ್ದ “ಮಹಾರಾಜ”ನಾಗಿದ್ದಂತೂ ಸತ್ಯ ಎಂಬ ಅಭಿಪ್ರಾಯ ಅವರ ಸಹದ್ಯೋಗಿಗಳದ್ದಾಗಿದೆ.