ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕರೋನಾ ರೌದ್ರ ತಾಂಡವ ಆಗುತ್ತಿದ್ದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಆಂತರಿಕ ವರ್ಗಾವಣೆ ಹೆಸರಿನಲ್ಲಿ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಅವಕಾಶ ಇಲ್ಲದಿದ್ದರೂ ಮುಖ್ಯ ಎಂಜಿನಿಯರ್ ಹಾಗೂ ಸೂಪರಿಂಟೆಂಡಿಗ್ ಎಂಜಿನಿಯರ್ ಗಳನ್ನು ವರ್ಗಾವಣೆ ಮಾಡಿರುವುದರ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ.
ಅಲ್ಲದೆ ಈ ಸಂಬಂಧ ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತ ವಿರುದ್ಧ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪಾಲಿಕೆ ಆಡಳಿತಾಧಿಕಾರಿಯಾಗಿರುವ ರಾಕೇಶ್ ಸಿಂಗ್ ಅವರಿಗೆ ಬೆಂಗಳೂರು ನಗರ ಜಿಲ್ಲೆ ದಕ್ಷಿಣದ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಮೇ.21ರಂದು ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.
“ಬಿಬಿಎಂಪಿಯ ವೃಂದ ಮತ್ತು ನೇಮಕಾತಿ ಹೊಸ ನಿಯಮಾವಳಿಯನ್ನು ಗಾಳಿಗೆ ತೂರಿ ಹಿರಿಯ ಅಧೀಕ್ಷಕ ಎಂಜಿನಿಯರ್ ಗಳನ್ನು ಹೊರತುಪಡಿಸಿ, ಕಿರಿಯ ಅಧಿಕಾರಿಗಳಿಗೆ ಮುಖ್ಯ ಅಭಿಯಂತರ ಹುದ್ದೆ ನೀಡಿರುವುದು ಸರಿಯಲ್ಲ. ಪಾಲಿಕೆ ಆಡಳಿತ ವಿಭಾಗದಿಂದ ಆಗಿರುವ ಪ್ರಮಾದವನ್ನು ಕೂಡಲೇ ಸರಿಪಡಿಸಿ, ಅರ್ಹತೆ ಹಾಗೂ ಸೇವಾ ಹಿರಿತನವಿರುವ ಸೂಪರಿಂಟೆಂಡಿಂಗ್ ಎಂಜಿನಿಯರ್ ಅವರನ್ನು ಮುಖ್ಯ ಅಭಿಯಂತರರ ಹುದ್ದೆಗೆ ನಿಯೋಜನೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.”
-ಎನ್.ಆರ್.ರಮೇಶ್, ಬೆಂಗಳೂರು ನಗರ ಜಿಲ್ಲೆ ದಕ್ಷಿಣದ ಬಿಜೆಪಿ ಅಧ್ಯಕ್ಷ ಹಾಗೂ ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ
ವರ್ಗಾವಣೆಯಾದವರು ಯಾರು?
ಬಿಬಿಎಂಪಿಯಲ್ಲಿ ಮುಖ್ಯ ಎಂಜಿನಿಯರ್ ಎನ್.ರಮೇಶ್ (ಯೋಜನೆ- ಕೇಂದ್ರ) ಅವರನ್ನು ಆಪ್ಟಿಕಲ್ ಫೈಬರ್ ಕೇಬಲ್ (ಒಎಎಫ್ ಸಿ) ವಿಭಾಗದ ಮುಖ್ಯ ಎಂಜಿನಿಯರ್ ಆಗಿ ಮೇ.19 ರಂದು ವರ್ಗಾಯಿಸಲಾಗಿತ್ತು. ಒಎಫ್ ಸಿ ಸಿಇ ಆಗಿ ಪ್ರಭಾಗಿ ಚೀಫ್ ಎಂಜಿನಿಯರ್ ಆಗಿದ್ದ ನರಸರಾಮರಾವ್ ಅವರನ್ನು ಸೂಪರಿಂಟೆಂಡಿಂಗ್ ಎಂಜಿನಿಯರ್ (ದಕ್ಷಿಣ) ಹುದ್ದೆಯಲ್ಲಿ ಮುಂದುವರೆಸಿ ಮುಖ್ಯ ಆಯುಕ್ತ ಗೌರವಗುಪ್ತ ಆದೇಶದ ಮೇರೆಗೆ ಆಡಳಿತ ವಿಭಾಗದ ಉಪ ಆಯುಕ್ತರು ಕಚೇರಿ ಆದೇಶ ಮಾಡಿದ್ದರು.
ಇನ್ನು ಸೂಪರಿಂಡೆಂಟಿಂಗ್ ಎಂಜಿನಿಯರ್ (ಯೋಜನೆ – ಕೇಂದ್ರ ) ಎಂ.ಲೋಕೇಶ್ ಅವರಿಗೆ ಹಾಲಿ ಕೆಲಸದ ಜೊತೆಗೆ ಹೆಚ್ಚುವರಿಯಾಗಿ ಕೇಂದ್ರ ಯೋಜನಾ ವಿಭಾಗದ ಚೀಫ್ ಎಂಜಿನಿಯರ್ ಆಗಿ ನೇಮಕ ಮಾಡಲಾಗಿತ್ತು. ಇನ್ನು ರಸ್ತೆ ಮೂಲಭೂತ ಸೌಕರ್ಯ ವಿಭಾಗದಲ್ಲಿ ಕಾರ್ಯನಿರ್ವಹಕ ಎಂಜಿನಿಯರ್ ಆಗಿದ್ದರೂ ಪ್ರಭಾರ ಸೂಪರಿಂಡೆಂಟಿಂಗ್ ಎಂಜಿಯರ್ ಕೆಲಸ ಮಾಡುತ್ತಿದ್ದ ಎಸ್.ವಿ.ರಾಜೇಶ್ ಗೆ ಬಿಬಿಎಂಪಿ ಚೀಫ್ ಕಮಿಷನರ್ ಬಂಪರ್ ಗಿಫ್ಟ್ ಕೊಟ್ಟಿದ್ದರು. ಪಶ್ಚಿಮ ವಲಯದ ಪ್ರಭಾರ ಮುಖ್ಯ ಎಂಜಿನಿಯರ್ ಆಗಿ ಹೆಚ್ಚುವರಿ ಹೊಣೆ ಹೊತ್ತಿದ್ದ ಎ.ಬಿ.ದೊಡ್ಡಯ್ಯನವರಿಗೆ ನೀಡಿದ್ದ ಆದೇಶವನ್ನು ರದ್ದುಪಡಿಸಿ ಆ ಜಾಗಕ್ಕೆ ಎಸ್.ವಿ.ರಾಜೇಶ್ ಅವರನ್ನು ನೇಮಿಸಿ ಆದೇಶಿಸಿದ್ದರು ಮುಖ್ಯ ಆಯುಕ್ತರು.
ಒತ್ತಡ ಹಿನ್ನಲೆಯಲ್ಲಿ ಎಸ್.ವಿ.ರಾಜೇಶ್ ವರ್ಗಾವಣೆ ಆದೇಶ ಏಕಾಏಕಿ ರದ್ದು… !!
ಹೀಗಾಗಿ ಎ.ಬಿ.ದೊಡ್ಡಯ್ಯ ಮುಖ್ಯ ಆಯುಕ್ತರ ಸುಪರ್ದಿಯಲ್ಲಿ ಬರುವ ತಾಂತ್ರಿಕ ಜಾಗೃತ ಕೋಶದ ಚೀಫ್ ಎಂಜಿನಿಯರ್ ಹುದ್ದೆಯಲ್ಲೇ ಮುಂದುವರೆದಿದ್ದಾರೆ. ಕೊನೆಗೆ ಈ ವಿಷಯ ಮುಖ್ಯಮಂತ್ರಿಗಳ ಗಮನಕ್ಕೆ ಬಂದು ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿಯ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ನಂತರ ಶುಕ್ರವಾರ ಸಂಜೆ ಪಾಲಿಕೆ ಆಡಳಿತ ವಿಭಾಗದಿಂದ ಪಶ್ಚಿವ ವಲಯ ಚೀಫ್ ಎಂಜಿನಿಯರ್ ಆಗಿ ವರ್ಗಾವಣೆಗೊಂಡಿದ್ದ ಎಸ್.ವಿ.ರಾಜೇಶ್ ಟ್ರಾನ್ಸ್ ಫರ್ ಆದೇಶವನ್ನು ಏಕಾ ಏಕಿ ರದ್ದು ಮಾಡಿದ್ದಾರೆ. ಆದರೆ ವೃಂದ ಮತ್ತು ನೇಮಕಾತಿ ನಿಯಮಾವಳಿ ಅನ್ವಯ ಉಳಿದ ಚೀಫ್ ಎಂಜಿನಿಯರ್ ಹಾಗೂ ಸೂಪರಿಟೆಂಡೆಂಟ್ ಎಂಜಿನಿಯರ್ ಗಳನ್ನು ಸರ್ಕಾರದ ಒಪ್ಪಿಗೆಯಿಲ್ಲದೆ ವರ್ಗಾವಣೆ ಮಾಡಿರುವುದನ್ನು ರದ್ದು ಮಾಡದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ಬಿಬಿಎಂಪಿ ವೃಂದ ಮತ್ತು ನೇಮಕಾತಿ ನಿಯಮ -2020 ಏನು ಹೇಳುತ್ತೆ?
ಈ ಹಿಂದೆ 1971ರಲ್ಲಿ ರೂಪಿಸಲಾಗಿದ್ದ ಪಾಲಿಕೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕಾರ ಮಾಡಿತ್ತು. ಅದರಂತೆ ಬಿಬಿಎಂಪಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮ 2020 ಅನ್ನು ರಾಜ್ಯ ಸರ್ಕಾರ 2020ರ ಮಾರ್ಚಿನಲ್ಲಿ ಜಾರಿಗೆ ತಂದಿತ್ತು. ಹೊಸ ನಿಯಮಾವಳಿ ಅನ್ವಯ ಎ- ದರ್ಜೆಯ ಅಧಿಕಾರಿಗಳ ಹಾಗೂ 74 ಸಾವಿರ ರೂಪಾಯಿಗಿಂತ ಹೆಚ್ಚು ಮೂಲ ವೇತನ ಹೊಂದಿರುವ ಅಧಿಕಾರಿಗಳ ನೇಮಕಾತಿ ಹಾಗೂ ವರ್ಗಾವಣೆಗೆ ಸಂಬಂಧಿಸಿದ ಅಧಿಕಾರವನ್ನು ಸರ್ಕಾರ ತನ್ನಲ್ಲೇ ಉಳಿಸಿಕೊಂಡಿತು. ಕೇವಲ ಬಿ, ಸಿ ದರ್ಜೆಯ ಅಧಿಕಾರಿಗಳನ್ನು ಹಾಗೂ ಡಿ ದರ್ಜೆಯ ಸಿಬ್ಬಂದಿಯನ್ನು ಮಾತ್ರ ಆಯುಕ್ತರು ಅಥವಾ ಅವರು ಸೂಚಿಸಿದ ಅಧಿಕಾರಿ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆ ನಿಯಮಾವಳಿವನ್ನು ಇಲ್ಲಿ ಸ್ಪಷ್ಟವಾಗಿ ಗಾಳಿಗೆ ತೂರಲಾಗಿದೆ.
“ಇಡೀ ದೇಶ ಕೋರನಾ ಸೋಂಕು ಬಂದು ಅತಂತ್ರ ಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ನಿಯಮಬಾಹಿರವಾಗಿ ಎಂಜಿನಿಯರ್ ಗಳನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ವರ್ಗಾವಣೆ ಮತ್ತು ಬಡ್ತಿ ಇವೆರಡೂ ಹಣ ಮಾಡುವ ದಾರಿ ಎಂಬುದು ಜಗಜ್ಜಾಹೀರಾಗಿದೆ. ರಾಜಕೀಯ ಹಸ್ತಕ್ಷೇಪವಿಲ್ಲದೆ ಬಿಬಿಎಂಪಿಯಲ್ಲಿ ಹಿರಿಯ ಅಧಿಕಾರಿಗಳನ್ನು ವರ್ಗ ಮಾಡೋದು ಅಷ್ಟು ಸುಲಭವಿಲ್ಲ. ಈ ವರ್ಗಾವಣೆಗಳಲ್ಲಿ ಲೇವಾದೇವಿ ವ್ಯವಹಾರ ನಡೆದಿರೋದು ಕಂಡುಬರುತ್ತಿದೆ. ಅನರ್ಹರನ್ನು ಉನ್ನತ ಹುದ್ದೆಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ. ಇದನ್ನು ಸ್ಪಷ್ಟವಾಗಿ ನಾನು ಖಂಡಿಸುತ್ತೇನೆ. ಕೂಡಲೇ ನಿಯಮಾವಳಿ ಪಾಲನೆಯಾಗಬೇಕು ಎಂದು ಬಿಬಿಎಂಪಿಯನ್ನು ಆಗ್ರಹಿಸುತ್ತೇನೆ.“
-ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
ಬಿಬಿಎಂಪಿಯ ವಿವಿಧ ಇಲಾಖೆಗಳಲ್ಲಿ ಈ ಕೆಳಕಂಡ ಹಿರಿಯ ಅಧಿಕಾರಿಗಳು, ಅಧೀಕ್ಷಕ ಎಂಜಿನಿಯರ್ ಗಳು ಹಾಗೂ ಕಾರ್ಯಪಾಲಕ ಎಂಜಿನಿಯರ್ ಗಳು ಕಾರ್ಯ ನಿರ್ವಹಿಸುತ್ತಿದ್ದು, ಸೇವಾ ಹಿರಿತನದ ಆಧಾರದಲ್ಲಿ ಜೇಷ್ಠತಾ ಕ್ರಮಾಂಕವು ಈ ರೀತಿ ಇದೆ :
ಅಧಿಕ್ಷಕ ಎಂಜಿನಿಯರ್ ಗಳು – ಕಾರ್ಯನಿರ್ವಹಿಸುತ್ತಿರುವ ವಲಯ/ ಇಲಾಖೆ
ಸುಗುಣ – ಪೂರ್ವ ವಲಯ, ನರಸ ರಾಮರಾವ್ – ಬೆಂಗಳೂರು ದಕ್ಷಿಣ, ಶಶಿಕುಮಾರ್ – ಬೊಮ್ಮನಹಳ್ಳಿ, ಬಸವರಾಜ ಕಬಾಡೆ – ಬೃಹತ್ ನೀರುಗಾಲುವೆ, ವಿಜಯ ಕುಮಾರ್ ಹರಿದಾಸ್ – ಯಲಹಂಕ, ಎಂ.ಲೋಕೇಶ್ – ಯೋಜನೆ ಕೇಂದ್ರ, ಸ್ವಯಂಪ್ರಭ – ಪಶ್ಚಿಮ, ಜೆ..ವಿಶ್ವನಾಥ್ – ದಾಸರಹಳ್ಳಿ
ಕಾರ್ಯಪಾಲಕ ಎಂಜಿನಿಯರ್ ಗಳು – ಕಾರ್ಯನಿರ್ವಹಿಸುತ್ತಿರುವ ಸ್ಥಳ
ಯಮುನ- ಕೆರೆಗಳು, ಕೆ.ವಿ.ರವಿ – ಕೆರೆಗಳು, ಬಿ.ಎಲ್.ನಾಗರಾಜ್ – ಬೃಹತ್ ನೀರುಗಾಲುವೆ ಮತ್ತು ಮಹದೇವಪುರ ಪ್ರಭಾರಿ ಚೀಫ್ ಎಂಜಿನಿಯರ್, ಎಸ್.ವಿ.ರಾಜೇಶ್ – ರಸ್ತೆ ಮೂಲಭೂತ ಸೌಕರ್ಯ (ಮೇ.21ರಂದು ಸಿಇ ಆಗಿ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಿದ ಆದೇಶ ರದ್ದಾಗಿದೆ).
ಘಟನೋತ್ತರ ಅನುಮೋದನೆ ನೆಪ ಕೊಟ್ಟ ಬಿಬಿಎಂಪಿ
ಸೇವಾ ಹಿರಿತನವಿರುವ ಇಷ್ಟೆಲ್ಲ ಸೂಪರಿಂಟೆಂಡಿಂಗ್ ಎಂಜಿನಿಯರ್ ಗಳಿದ್ದರೂ ಕಿರಿಯ ಎಂಜಿನಿಯರ್ ಗಳಿಗೆ ಚೀಫ್ ಇಂಜಿನಿಯರ್ ಪೋಸ್ಟ್ ದಯಪಾಲಿಸಿರುವುದಕ್ಕೆ ಹಿರಿಯ ಎಂಜಿನಿಯರ್ ಗಳಿಗೆ ಅಸಮಾಧಾನವಿದೆ. ಈ ನೂತನ ವೃಂದ ಮತ್ತು ನೇಮಕಾತಿ ನಿಯಮಾವಳಿಯಂತೆ ಸರ್ಕಾರದ ಒಪ್ಪಿಗೆಯಿಲ್ಲದೆ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದೇಕೆ ಎಂದು ಪಾಲಿಕೆಯ ಆಡಳಿತ ವಿಭಾಗದ ಅಧಿಕಾರಿಗಳನ್ನು ಈ ಬಗ್ಗೆ ಬೆಂಗಳೂರು ವೈರ್ ಪ್ರಶ್ನಿಸಿದಾಗ, ಚೀಫ್ ಎಂಜಿನಿಯರ್, ಸೂಪರಿಂಟೆಂಡಿಂಗ್ ಎಂಜನಿಯರ್ ಹಾಗೂ ಕಾರ್ಯನಿರ್ವಾಹಕ ಎಂಜನಿಯರ್ ಗಳನ್ನು ಸರ್ಕಾರದ ಘಟನೋತ್ತರ ಅನುಮೋದನೆ ನಿರೀಕ್ಷಿಸಿ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎಂದಷ್ಟೇ ಹೇಳಿ, ಮುಖ್ಯ ಆಯುಕ್ತರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಆದರೆ ಸರ್ಕಾರದಿಂದ ಘಟನೋತ್ತರ ಅನುಮೋದನೆ ಪಡೆಯಲು ಅವಕಾಶವಿದ್ದಿದ್ದರೆ, ಪಾಲಿಕೆ ಪಶ್ಚಿಮ ವಲಯದ ಚೀಫ್ ಎಂಜಿನಿಯರ್ ಹುದ್ದೆಗೆ ಮೇ.19 ರಂದು ನೇಮಕ ಮಾಡಲಾಗಿದ್ದ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಸ್.ವಿ.ರಾಜೇಶ್ ಅವರ ವರ್ಗಾವಣೆ ಆದೇಶವನ್ನೇಕೆ ಏಕಾ ಏಕಿ ಮೇ.21ರಂದು ರದ್ದು ಮಾಡಲಾಗಿದೆ? ಪಾಲಿಕೆಯ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.