ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಸಕ್ರಿಯ ಕರೋನಾ ಪಾಸಿಟಿವ್ ರೇಟ್ ಶೇಕಡ 34.23 ರಷ್ಟು ಏರಿಕೆಯಾಗಿದೆ. ಆದರೆ ಮನೆಯಲ್ಲೆ ಪ್ರತ್ಯೇಕ ವಾಸವಿದ್ದು ಕರೋನಾ ಸೋಂಕು ದೃಢರಾದ ಸೋಂಕಿತರಿಗೆ ಮಾತ್ರೆ, ಸ್ಯಾನಿಟೈಸರ್ ಮತ್ತಿತರ ವೈದ್ಯಕೀಯ ಔಷಧಿ ನೀಡುವ ಪ್ರಮಾಣ ಯಾವುದಕ್ಕೂ ಸಾಲದಾಗಿದೆ.
ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ಪ್ರಮಾಣ ನಗರದಲ್ಲಿ ಶೇಕಡ 90.02 ರಿಂದ 96.17ರಷ್ಟಿದೆ. ಸಾಮಾನ್ಯ ರೋಗಲಕ್ಷಣ ಇರುವ ಅಥವಾ ರೋಗಲಕ್ಷಣ ಇರದವರಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯುವವರಿಗೆ ಅಗತ್ಯವಾದ ಔಷಧಿ ಕಿಟ್ ಗಳನ್ನು ವಿತರಿಸುವಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ತೋರಿದಂತಿದೆ.
ಪ್ರಾಥಮಿಕ ಹಂತದಲ್ಲೇ ಹೋಮ್ ಐಸೊಲೇಷನ್ ನಲ್ಲಿರುವವರಿಗೆ ಸೂಕ್ತ ಔಷಧಿ ಪೂರೈಸಿ ಗುಣವಾದಲ್ಲಿ ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆ ಹಾಸಿಗೆ ಮೇಲಿನ ಒತ್ತಡ ಅಷ್ಟರಮಟ್ಟಿಗೆ ಕಡಿಮೆಯಾಗುತ್ತೆ.
ಈಗಿನ ಲೆಕ್ಕಾಚಾರದಂತೆ ನಗರದಲ್ಲಿ ಪ್ರತಿದಿನ ಸರಾಸರಿ 10,494 ಜನರು ಹೋಮ್ ಐಸೊಲೇಷನ್ ನಲ್ಲಿದ್ದಾರೆ. ಅವರಿಗೆ ಇದೇ ಪ್ರಮಾಣದಲ್ಲಿ ಹೋಮ್ ಐಸೊಲೇಷನ್ ಕಿಟ್ ವಿತರಿಸಬೇಕಿದೆ. ಆದರೆ ಬಿಬಿಎಂಪಿಯ 8 ವಲಯಗಳಲ್ಲಿ ಅರ್ಧಕ್ಕಿಂತ ಕಡಿಮೆ ಮೆಡಿಕಲ್ ಕಿಟ್ ಗಳನ್ನು ರೋಗಿಗಳಿಗೆ ಪೂರೈಸಲಾಗುತ್ತಿದೆ ಎಂಬ ದೂರುಗಳಿವೆ.
ಬಿಬಿಎಂಪಿಯು ವಾರ್ಡ್ ಮಟ್ಟದಲ್ಲಿ ಹೋಮ್ ಐಸೊಲೇಷನ್ ಕಿಟ್ ವಿತರಣೆಗೆ ತಲಾ ಎರಡು ತಂಡಗಳನ್ನು ರಚಿಸಿದೆ. ಪ್ರತಿ ತಂಡಕ್ಕೂ ಇಂತಿಷ್ಟು ಕಿಟ್ ವಿತರಣೆ ಮಾಡುವಂತೆ ಸೂಚಿಸಿದೆ. ಕೆಲವೊಮ್ಮೆ ಔಷಧಿಗಳ ಕೊರತೆ ಎದುರಾದರೆ ವಿಧಾನಸಭಾ ಕ್ಷೇತ್ರದ ಹಂತದಲ್ಲಿ ಸ್ಥಳೀಯವಾಗಿ ಖರೀದಿಸಲು ಪಾಲಿಕೆ ಮುಖ್ಯ ಆಯುಕ್ತರು ಅವಕಾಶ ಮಾಡಿಕೊಟ್ಟಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯಿಂದ ಕಳೆದ ಒಂದು ವಾರದಿಂದ ಹೋಮ್ ಐಸೊಲೇಷನ್ ಕಿಟ್ ವಲಯ ಮಟ್ಟದ ಕಚೇರಿಗಳಿಗೆ ಪೂರೈಕೆ ಆಗುತ್ತಿದೆ.
ಆದರೆ ಹೋಮ್ ಐಸೊಲೇಷನ್ ಇರುವ ಕರೋನಾ ಸೋಂಕಿತರಿಗೆ ಬೇಡಿಕೆಯಷ್ಟು ಔಷಧಿ ಕಿಟ್ ಪೂರೈಕೆಯಾಗುತ್ತಿಲ್ಲ. ಲೋಕಲ್ ನಲ್ಲಿ ಖರೀದಿ ಮಾಡಲು ಹೊರಟರೂ ತೀವ್ರ ಬೇಡಿಕೆ ಕಾರಣ ಐವರ್ ಮೆಕ್ಟಿನ್ 12 ಎಂಜಿ ಹಾಗೂ ಡಾಕ್ಸಿ ಸೈಕ್ಲಿನ್ 100 ಎಂಜಿ ಮಾತ್ರೆ ಪೂರೈಕೆ ಅಗತ್ಯ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ.
ಯಲಹಂಕ ವಲಯದಲ್ಲಿ ಐಸೊಲೇಷನ್ ಕಿಟ್ ವಿತರಣೆ ಬೇಡಿಕೆಯ ಶೇ.70 ರಷ್ಟು ಪೂರೈಕೆಯಾಗುತ್ತಿದೆ. ಸ್ಥಳೀಯವಾಗಿ ಮೆಡಿಕಲ್ ಶಾಪ್ ನಲ್ಲಿ ಮೂರು ದಿನಗಳ ಮುಂಚೆ ಹೋಮ್ ಐಸೊಲೇಷನ್ ಕಿಟ್ ಪೂರೈಕೆಗೆ ಹೇಳಿದರೂ, ದಿನಕ್ಕೆ ಒಂದು ಸಾವಿರ ಕಿಟ್ ಲಭ್ಯವಾಗುತ್ತಿಲ್ಲ. ಕೇಂದ್ರ ಕಚೇರಿಯಿಂದ ಈತನಕ ಒಂದು ಸಾವಿರ ಕಿಟ್ ಮಾತ್ರ ಬಂದಿದೆ ಎಂದು ಹೇಳುತ್ತಾರೆ ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು.
ಹೋಮ್ ಐಸೊಲೇಷನ್ ಕಿಟ್ ನಲ್ಲಿ ಏನೇನಿರಲಿದೆ?
ಐವರ್ ಮೆಕ್ಟಿನ್ 12 ಎಂಜಿ ಹಾಗೂ ಡಾಕ್ಸಿ ಸೈಕ್ಲಿನ್ 100 ಎಂಜಿ ಮಾತ್ರೆ, ಜಿಂಕ್ 50 ಎಂಜಿ, ವಿಟಮಿನ್ ಸಿ 500 ಎಂಜಿ, ಪಾರಾಸಿಟಮಾಲ್ 500 ಎಂಜಿ, ಸ್ಯಾನಿಟೈಜರ್ 100 ಎಂಎಲ್, ಮೂರು ಪದರದ ಮಾಸ್ಕ್ ( 10 ಮಾಸ್ಕ್) ಹೋಮ್ ಐಸೊಲೇಷನ್ ಕಿಟ್ ನಲ್ಲಿರಲಿದೆ.
ಕರೋನಾ ಪಾಸಿಟಿವ್ ರೇಟ್ – ಮರಣ ಪ್ರಮಾಣದಲ್ಲೂ ಏರಿಕೆ
ಒಂದೆಡೆ ಕರೋನಾ ಪಾಸಿಟಿವ್ ರೇಟ್ ಕಳೆದ 4 ವಾರಗಳಲ್ಲಿ ಶೇ.17.19 ರಿಂದ ಶೇ.34.23 ರಷ್ಟಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ ಕರೋನಾ ಸೋಂಕಿತರು ಮರಣ ಹೊಂದುತ್ತಿರುವವರ ಪ್ರಮಾಣ ಇದೇ ಅವಧಿಯಲ್ಲಿ ಶೇ.0.60 ರಿಂದ ಶೇ.1.34ಕ್ಕೆ ಏರಿಕೆಯಾಗಿದೆ.
ಕರೋನಾ ಲಸಿಕೆ ಕೊರತೆ
ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಪಡೆಯಲು 45 ವರ್ಷ ಮೇಲ್ಪಟ್ಟವರಿಂದ ಹೆಚ್ಚಿನ ಬೇಡಿಕೆಯಿದೆ. ಆದರೆ ಪೂರೈಕೆಯು ಆ ಮಟ್ಟದಲ್ಲಿಲ್ಲ. ಪಾಲಿಕೆ ಬಳಿ ಮೇ.18 ರಂತೆ ವಿವಿಧ ವಲಯ ಹಾಗೂ ಜಿಲ್ಲಾ ಔಷಧಾಗಾರದಲ್ಲಿ 1,290 ಕೋವ್ಯಾಕ್ಸಿನ್ ಹಾಗೂ 88,670 ಕೋವಿಶೀಲ್ಡ್ ಸಂಗ್ರಹವಿದೆ. ಮೇ.17 ರಂದು ಪಾಲಿಕೆ 8 ವಲಯಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 23,730 ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ.
ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಒಂದೆಡೆ ಲಾಕ್ ಡೌನ್ ಮಾಡಿದ್ದೇನೋ ಸರಿ. ಆದರೆ ಅದರ ಜೊತೆ ಜೊತೆಗೆ ಲಸಿಕೆ ನೀಡುವ ಸಾಮರ್ಥ್ಯ ವನ್ನು ಹೆಚ್ಚಿಸಿ ಕೊಂಡಿಲ್ಲ. ಇದು ಕರೋನ ಸೋಂಕು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಅಡ್ಡಿಯಾಗಿದೆ. ಈ ಬಗ್ಗೆ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತನೆ ನಡೆಸಿ ಕಾರ್ಯೋನ್ಮುಖವಾಗಬೇಕಿದೆ.