ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ್ ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಚೆಕ್ಕನ್ನು ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಹಕಾರ ಸಚಿವರು, ಕೋವಿಡ್ ಎರಡನೆಯ ಅಲೆ ರಾಜ್ಯದ ಜನರ ಮೇಲೆ ಬಹಳ ಗಂಭೀರ ಪರಿಣಾಮವನ್ನು ಬೀರುತ್ತಿದೆ. ಇದರ ನಿರ್ವಹಣೆ ಸರ್ಕಾರಗಳಿಗೂ ಒಂದು ಸವಾಲಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸಹಕಾರ ಸಂಸ್ಥೆಗಳು ಸರ್ಕಾರದ ನೆರವಿಗೆ ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಪೆಕ್ಸ್ ಬ್ಯಾಂಕ್ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದಂತೆ ಇತರ ಸಂಘ ಸಂಸ್ಥೆಗಳು, ಖಾಸಗಿ ಕಂಪನಿಗಳು ಮುಂದಾಗಿ ತಮ್ಮ ನೆರವಿನ ಹಸ್ತ ನೀಡಬೇಕಿದೆ. ಆ ಮೂಲಕ ಸಾರ್ವಜನಿಕ ಹಿತಾಸಕ್ತಿಗೆ ಇಂತಹ ಹಣ ಸದ್ಬಳಕೆಯಾಗಬೇಕು.
ತಾವು ಸಹ ಮೈಸೂರು ಮೃಗಾಲಯ ನಿರ್ವಹಣೆಗೆ ದಾನಿಗಳು ಅಗತ್ಯ ನೆರವು ನೀಡಬೇಕೆಂದು ಮಂಗಳವಾರವಷ್ಟೇ ಮೈಸೂರಿನಲ್ಲಿ ಮನವಿ ಮಾಡಿದ್ದೆ. ಹೀಗೆ ದಾನಿಗಳ ನೆರವಿನಿಂದ ಇಂತಹ ಮಹಾಮಾರಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಇದೇ ವೇಳೆ 1 ಲಕ್ಷ N-95 ಮಾಸ್ಕ್ ಅನ್ನು ಸಹ ಮುಖ್ಯಮಂತ್ರಿಗಳಿಗೆ ಅಪೆಕ್ಸ್ ಬ್ಯಾಂಕ್ ವತಿಯಿಂದ ನೀಡಲಾಯಿತು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕರಾದ ಬೆಳ್ಳಿಪ್ರಕಾಶ್, ಮಾರ್ಕೆಟಿಂಗ್ ಫೆಡರೇಶನ್ ಅಧ್ಯಕ್ಷರಾದ ರಾಜೇಂದ್ರ ಕುಮಾರ್, ಅಪೆಕ್ಸ್ ಬ್ಯಾಂಕ್ ಎಂಡಿ ಸಿ.ಎನ್.ದೇವರಾಜ್ ಸೇರಿದಂತೆ ಇನ್ನಿತರರು ಚೆಕ್ ಹಸ್ತಾಂತರ ಸಂದರ್ಭದಲ್ಲಿ ಉಪಸ್ಥಿತರಿದ್ದರು.