ಬೆಂಗಳೂರು : ಭಾರತೀಯ ಕರಾವಳಿ ಕಾವಲು ಪಡೆಯ ಸಾಗರ ಭದ್ರತೆಗಾಗಿ ಎಚ್ ಎ ಎಲ್ ನಿಂದ ಹಸ್ತಾಂತರಿಸಲಾದ ಧೃವ ಎಂಕೆ 3 ಎಂಆರ್ ಸರಣಿಯ ಸುಧಾರಿತ ಹಗುರ ಹೆಲಿಕಾಪ್ಟರ್, ಹಡಗಿನ ಮೇಲೆ ಇತ್ತೀಚೆಗೆ ಯಶಸ್ವಿ ಕಾರ್ಯಾಚರಣೆಯ ಪ್ರದರ್ಶನ ನೀಡಿತು.
ಚೆನ್ನೈ ಕರಾವಳಿ ಪ್ರದೇಶದ ಸಮುದ್ರದಲ್ಲಿ ಇತ್ತೀಚೆಗೆ ಧೃವ ಹೆಲಿಕಾಪ್ಟರ್ ನೌಕಾಪಡೆಯ ಡೆಕ್ (ಹಡಗಿನ ಸಮತಟ್ಟು ಸ್ಥಳ) ಮೇಲೆ ಇಳಿದು, ಅದರ ರೆಕ್ಕೆಗಳನ್ನು ಮಡಚುವ ಹಾಗೂ ಹಡಗಿನ ಆನ್ ಬೋರ್ಡ್ ಹ್ಯಾಂಗರ್ ನಲ್ಲಿ ಹೆಲಿಕಾಪ್ಟರ್ ಅನ್ನು ನಿಲ್ಲಿಸುವ ಪ್ರದರ್ಶನ ಯಶಸ್ವಿಯಾಗಿ ಪೂರೈಸಲಾಯಿತು.
ಕರಾವಳಿ ಕಾವಲು ಪಡೆಯ ನೆರವಿನಲ್ಲಿ ಈ ಪ್ರದರ್ಶನ ಏರ್ಪಡಿಲಾಗಿತ್ತು. ಇದೇ ಸಂದರ್ಭದಲ್ಲಿ ಹ್ಯಾಂಗರ್ ನಲ್ಲಿದ್ದಾಗ ಹಾಗೂ ಡೆಕ್ ಮೇಲಿದ್ದಾಗ ಈ ಸುಧಾರಿತ ಹೆಲಿಕಾಪ್ಟರ್ ನಿರ್ವಹಣೆ ಮಾಡುವ ವಿಧಾನ, ರನ್ನಿಂಗ್ ನಲ್ಲಿದ್ದಾಗ ಇಂಧನ ತುಂಬಿಸುವ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು.
ಎಚ್ ಎಎಲ್, ಭಾರತೀಯ ಕರಾವಳಿ ಕಾವಲು ಪಡೆಗೆ ಒಟ್ಟು 16 ಸುಧಾರಿತ ಹಗುರ ಧೃವ ಹೆಲಿಕಾಪ್ಟರ್ ಗಳನ್ನು ಉತ್ಪಾದಿಸಿ ಕೊಡುವ ಒಪ್ಪಂದ ಮಾಡಿಕೊಂಡಿದೆ. ಈ ಹೆಲಿಕಾಪ್ಟರ್ ನಲ್ಲಿ ಆಧುನಿಕ ಹಾಗೂ ವಿಶ್ವಾಸಾರ್ಹ ಶಕ್ತಿ ಎಂಜಿನ್ ಅಳವಡಿಸಲಾಗಿದ್ದು, ಸುಧಾರಿತ ಗ್ಲಾಸ್ ಕಾಕ್ ಪಿಟ್ ಅನ್ನು ಒಳಗೊಂಡಿದೆ ಎಂದು ಎಚ್ ಎಎಲ್ ತಿಳಿಸಿದೆ.
ಈ ಪ್ರದರ್ಶನ ತಾಲೀಮು, ಹಡಗಿನಲ್ಲಿ ಧೃವ ಹೆಲಿಕಾಪ್ಟರ್ ಅನ್ನು ಬಳಸಿ ಹೆಚ್ಚಿನ ಕಾರ್ಯಾಚರಣೆ ನಡೆಸಬಹುದೆಂದು ಧೃಢಪಟ್ಟಿದೆ. ಸಾಗರದಲ್ಲಿ ವಿಚಕ್ಷಣೆ, ಹುಡುಕುವ ಹಾಗೂ ರಕ್ಷಣಾ ಕಾರ್ಯ, ಸಮುದ್ರದಲ್ಲಿ ಇಂಧನ ಸೋರುವಿಕೆಯಿಂದಾಗುವ ಮಾಲಿನ್ಯ ತಡೆಗಟ್ಟುವಿಕೆ ಇನ್ನಿತರ ಕಾರ್ಯಗಳನ್ನು ಈ ಹೆಲಿಕಾಪ್ಟರ್ ನಿಂದ ಕೈಗೊಳ್ಳಲಾಗಿದೆ ಎಂದು ಎಚ್ ಎಎಲ್ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ಹೇಳಿದ್ದಾರೆ.
ಧೃವ ಹೆಲಿಕಾಪ್ಟರ್ ತನ್ನ ರೆಕ್ಕೆಗಳನ್ನು ಮಡಚುವ, ಮತ್ತಿತರ ಕಾರ್ಯಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿ ಕಾರ್ಯಾಚರಣೆಗೆ ಸನ್ನದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಧೃವ ಮಾರ್ಕ್ 3 ಎಮ್ ಆರ್ ಸರಣಿಯ ಹೆಲಿಕಾಪ್ಟರ್ ಅತ್ಯಾಧುನಿಕ ವಿಚಕ್ಷಣಾ ರಾಡರ್ ಅನ್ನು ಒಳಗೊಂಡಿದ್ದು, ಸಾಗರದಲ್ಲಿ 120 ನಾಟಿಕಲ್ ಮೈಲ್ಸ್ ದೂರದಲ್ಲಿನ ಹಡಗು ಹಾಗೂ ಬೋಟ್ ಗಳನ್ನು ಗುರ್ತಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ಭಾರತೀಯ ಕರಾವಳಿಯನ್ನು ಶತ್ರುಗಳ ಅಪಾಯದಿಂದ ರಕ್ಷಿಸಲು ಕರಾವಳಿ ಕಾವಲು ಪಡೆಗೆ ಸಾಧ್ಯವಾಗಲಿದೆ.
ಈ ಹೆಲಿಕಾಪ್ಟರ್ ನಲ್ಲಿ ಎಲೆಕ್ಟ್ರೊ- ಆಪ್ಟಿಕಲ್ ಸೆನ್ಸರ್ ಇದ್ದು, 30 ನಾಟಿಕಲ್ ಮೈಲ್ಸ್ ದೂರದಲ್ಲಿ ಚಲಿಸುತ್ತಿರುವ ಸಣ್ಣ ದೋಣಿಯ ಮೇಲೆ ಹದ್ದುಗಣ್ಣಿಡಲು ಸಾಧ್ಯವಾಗಲಿದೆ.