ಬೆಂಗಳೂರು : ಕರೋನಾ ಸೋಂಕಿನ ಎರಡನೆ ಅಲೆ ಹೆಚ್ಚಳದಿಂದ ಕೋವಿಡ್ ಲಸಿಕೆ ಹಾಕಿಸಲು ಬೇಡಿಕೆ ಹೆಚ್ಚಾಗಿದೆ. ಲಸಿಕಾ ಕೇಂದ್ರದಲ್ಲಿ ಕ್ಯೂ ಹೆಚ್ಚಾಗಿದೆ ವಿನಃ ಅದೇ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ.
ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ, ಏಪ್ರಿಲ್ 2 ರಂದು ಒಂದೇ ದಿನ ರಾಜ್ಯಾದ್ಯಂತ 1,35,140 ಮಂದಿ ಕೋವಿಡ್ ಲಸಿಕೆ ಪಡೆದಿದ್ದರು. ಯಾವಾಗ ಕೋವಿಡ್ ಎರಡನೇ ಅಲೆ ಒಂದೇ ಸಮನೆ ಏರಿಕೆಯಾಗ ತೊಡಗಿತೋ ಲಸಿಕೆ ಹಾಕಿಸುವವರ ಪ್ರಮಾಣ ಒಂದೇ ಸಮನೆ ಏರಿಕೆಯಾಗುತ್ತಿದೆ. ಏಪ್ರಿಲ್ 28 ರಂದು 1,96,217 ಜನರು ಕೋವಿಡ್ ಲಸಿಕೆ ಪಡೆದಿದ್ದಾರೆ. ಎಲ್ಲೆಡೆ ಈಗ ಬೇಡಿಕೆಯಷ್ಟು ಲಸಿಕೆ ಲಭಿಸದೆ ಕೊರತೆ ಕಂಡುಬಂದಿದೆ.
ರಾಜ್ಯಾದ್ಯಂತ ಏ.28 ರ ಬೆಳಗ್ಗೆ ಮಾಹಿತಿ ಪ್ರಕಾರ ಆರೋಗ್ಯ ಇಲಾಖೆಯ ಕೋಲ್ಡ್ ಸ್ಟೋರೇಜ್ ನಲ್ಲಿ ಒಟ್ಟು 4,37,000 ಡೋಸ್ ನಷ್ಟು ಕೋವಿಡ್ ಲಸಿಕೆ ಸ್ಟಾಕ್ ಲಭ್ಯವಿದೆ. ಆ ಪೈಕಿ ಕೋವಿಶೀಲ್ಡ್ 3,72,500 ಹಾಗೂ 64,500 ಕೋವ್ಯಾಕ್ಸಿನ್ ಸ್ಟಾಕ್ ನಲ್ಲಿದೆ. ಬುಧವಾರ ರಾತ್ರಿ ಮತ್ತೆ 4 ಲಕ್ಷ ಕೋವಿಶೀಲ್ಡ್ ಲಸಿಕೆ ಪೂರೈಕೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಲಸಿಕೆ ಸಂಗ್ರಹಕ್ಕಾಗಿ ಒಟ್ಟು 2,800 ಕೋಲ್ಡ್ ಚೈನ್ ಗಳಿದ್ದು, ನಾಗರೀಕರಿಗೆ ಲಸಿಕೆ ಹಾಕಲೆಂದು 8,899 ಲಸಿಕಾ ಕೇಂದ್ರಗಳಿವೆ. ಆದರೆ ಹೆಚ್ಚಿನ ಲಸಿಕಾ ಕೇಂದ್ರಗಳಲ್ಲಿ ಲಸಿಕೆಗಳು ಬೇಡಿಕೆಯಷ್ಟು ಪೂರೈಸಲಾಗುತ್ತಿಲ್ಲ.
ಒಂದು ಕಡೆ ಆಕ್ಸಿಜನ್ ಬೆಡ್ ಹಾಗೂ ಐಸಿಯು ಹಾಸಿಗೆಗಳ ಕೊರತೆ, ಅದರ ಪರಿಸ್ಥಿತಿಯನ್ನು ಕಂಡು ಭಯಭೀತರಾಗಿರುವ ಜನತೆ ಕೋವಿಡ್ ಲಸಿಕೆಗಳಿಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಎಡತಾಕುತ್ತಿದ್ದಾರೆ.
ಬೆಂಗಳೂರಿನ ಪರಿಸ್ಥಿತಿ ಈಗ ಹೇಗಿದೆ?
ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಒಂದೆಡೆ ಏರಿಕೆಯಾಗುತ್ತಿದ್ದರೆ ಕಳೆದ 10- 15 ದಿನದಿಂದ ಕೋವಿಡ್ ಲಸಿಕೆ ಪೂರೈಕೆಯಲ್ಲಿ ಇಳಿಕೆಯಾಗಿದೆ. ಮೊದಲು 1.5 ಲಕ್ಷದಿಂದ 2 ಲಕ್ಷ ಡೋಸ್ ತನಕ ಕೋವಿಡ್ ಔಷಧಿ ನೀಡಲಾಗುತ್ತಿತ್ತು. ಈಗ ನಗರಕ್ಕೆ 30 ರಿಂದ 50 ಸಾವಿರ ಡೋಸ್ ಲಸಿಕೆ ಮಾತ್ರ ರಾಜ್ಯ ಆರೋಗ್ಯ ಇಲಾಖೆ ಕೋಲ್ಡ್ ಚೈನ್ ನಿಂದ ಪೂರೈಕೆಯಾಗುತ್ತಿದೆ ಎಂದು ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಬೆಂಗಳೂರು ವೈರ್ ಗೆ ಲಭ್ಯವಾಗಿರುವ ಖಚಿತ ಮಾಹಿತಿ ಪ್ರಕಾರ ಬಿಬಿಎಂಪಿ ಬಳಿ ಏ.28 ರಂದು 8 ವಲಯಗಳಿಗೆ ಪೂರೈಸಲು ಒಟ್ಟು 37,522 ಡೋಸ್ ಲಸಿಕೆ ಮಾತ್ರ ಲಭ್ಯವಿತ್ತು. ಸರ್ಕಾರಿ ಆಸ್ಪತ್ರೆಗಳಿಗೆ 30,267 ಡೋಸ್ ಹಾಗೂ ಖಾಸಗಿ ಆಸ್ಪತ್ರೆಗಳಿಗೆ 7,255 ಡೋಸ್ ಹಂಚಿಕೆ ಮಾಡಲೆಂದು ಸಂಗ್ರಹಿಸಿಡಲಾಗಿತ್ತು.
ಬೆಂಗಳೂರಿನಲ್ಲಿ ಒಟ್ಟಾರೆ 165 ಕೋಲ್ಡ್ ಚೈನ್ ಯೂನಿಟ್ ಗಳಿವೆ. ಆ ಪೈಕಿ ಕೋವಿಡ್ ಲಸಿಕೆ ಪೂರೈಕೆಗೆಂದು 141 ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್ ಸಿ)ಗಳಿವೆ. ಪ್ರತಿಯೊಂದು ಪಿಎಚ್ ಸಿ ಕೇಂದ್ರಗಳಿಗೆ 30 ವಯಲ್ಸ್ (ಒಂದು ವಯಲ್ಸ್ ನಲ್ಲಿ 10 ಡೋಸ್) ಪೂರೈಕೆ ಮಾಡಲಾಗುತ್ತಿದೆ. ಹೀಗೆ ಬಂದ ಸ್ಟಾಕ್ ಗಳ ಪೈಕಿ ಪಿಎಚ್ ಸಿಗಳು ತಮ್ಮ ವ್ಯಾಪ್ತಿಯ ಆಸ್ಪತ್ರೆಗಳಿಗೆ 20-30 ಡೋಸ್ ಪೂರೈಸಬೇಕಿದೆ.
ಖಾಸಗಿ ದೊಡ್ಡ ಆಸ್ಪತ್ರೆಗಳಿಗೆ ಪ್ರತಿದಿನ ವಾಸಿನೇಷನ್ ಗಾಗಿ ಸರಾಸರಿ 300 ರಿಂದ 400 ದೂರವಾಣಿ ಕರೆ ಬರುತ್ತಿದೆ. ಖಾಸಗಿ ಆಸ್ಪತ್ರೆಗಳು ಪ್ರತಿದಿನ 2 ಸಾವಿರ ಡೋಸ್ ಪೂರೈಸಲು ಕೇಳುತ್ತಿವೆ. ಆದರೆ ಕನಿಷ್ಠ 20-30 ಡೋಸ್ ಸಿಕ್ಕರೆ ಹೆಚ್ಚೆಚ್ಚು. ಖಾಸಗಿ ಆಸ್ಪತ್ರೆಗಳಿಗೂ ಬೇಡಿಕೆಯಷ್ಟು ಲಸಿಕೆ ಪೂರೈಕೆಯಾಗುತ್ತಿಲ್ಲ ಎಂದು ದೂರುಗಳು ಕೇಳಿಬರುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಮೊದಲು ಪ್ರತಿದಿನ 1 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿತ್ತು. ಏಪ್ರಿಲ್ 28ರ ಆರೋಗ್ಯ ಇಲಾಖೆ ಮಾಹಿತಿಯಂತೆ 39,372 ಜನರಿಗೆ ಲಸಿಕೆ ನೀಡಿದ್ದಾಗಿ ತಿಳಿಸಿದೆ.
ಬೆಂಗಳೂರಿಗೆ ಪ್ರತಿದಿನ ಕನಿಷ್ಠ 1 ಲಕ್ಷ ಡೋಸ್ ನಷ್ಟು ಲಸಿಕೆ ಪೂರೈಸುವಂತೆ ಉನ್ನಧಿಕಾರಿಗಳ ಸಭೆಯಲ್ಲಿ ಬೇಡಿಕೆ ಸಲ್ಲಿಸಿದ್ದೇವೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ ಸರಾಸರಿ 40 ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಕೋವಿಡ್ ಸೋಂಕು ಏರಿಕೆಯಿಂದ ವಾಸಿನೇಷನ್ ಮಾಡಿಸಿಕೊಳ್ಳಲು ಕೋವಿನ್ ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಆ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗುತ್ತಿಲ್ಲ.
ರಾಜೇಂದ್ರ ಚೋಳನ್, ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ)
ಮೇ 1 ರಿಂದ 18 ವರ್ಷ ಮೇಲ್ಪಟ್ಟವರು ಕ್ಯೂನಲ್ಲಿ ಸೇರ್ಪಡೆ
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ 155 ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಿವೆ. ಆಸ್ಪತ್ರೆ ಮತ್ತಿತರ 350 ಕಡೆಗಳಲ್ಲಿ ಖಾಸಗಿ ಲಸಿಕಾ ಕೇಂದ್ರಗಳಿವೆ. ಈತನಕ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೋವಿಡ್ ಕಾರ್ಯಕರ್ತರು, 45 ವರ್ಷ ಮೇಲ್ಪಟ್ಟವರು ಹಾಗೂ 60 ಮೇಲ್ಪಟ್ಟವರಿಗೆ ಮಾತ್ರ ಕೋವಿಡ್ ಲಸಿಕೆ ನೀಡಲಾಗುತ್ತಿದೆ.
ಆದರೆ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೋವಿಡ್ ಲಸಿಕೆ ಉಚಿತವಾಗಿ ನೀಡುವುದಾಗಿ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದೆ. ಏಪ್ರಿಲ್ 28 ರ ಸಂಜೆ 4 ಗಂಟೆಯಿಂದ ಕೋವಿನ್ ಪೋರ್ಟಲ್ ನಲ್ಲಿ 18+ ವಯಸ್ಸಿನವರು ಲಸಿಕೆ ಪಡೆಯಲು ರಿಜಿಸ್ಟರ್ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲೆಡೆ ಬಿರುಸಿನಿಂದ ರಿಜಿಸ್ಟರ್ ಮಾಡುತ್ತಿದ್ದಾರೆ.
ಈ ಮಧ್ಯೆ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಈಗಾಗಲೇ 1 ಕೋಟಿ ಡೋಸ್ ವಾಕ್ಸಿನ್ ಗೆ ಬೇಡಿಕೆ ಇಟ್ಟಿರುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳುತ್ತಿದ್ದಾರೆ. ಆದರೆ ಈಗ ಸದ್ಯ ಪ್ರತಿದಿನ 2 ಲಕ್ಷ ಆಸುಪಾಸಿನಲ್ಲಿ ರಾಜ್ಯಾದ್ಯಂತ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಒಟ್ಟಾರೆ ಈತನಕ 92.40 ಲಕ್ಷ ಡೋಸ್ ನೀಡಿದ್ದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರು 3.2 ಕೋಟಿ ಇದ್ದಾರೆ. ಆ ಪೈಕಿ ಬೆಂಗಳೂರಿನಲ್ಲಿ 65 ರಿಂದ 70 ಲಕ್ಷ ಜನರಿದ್ದಾರೆಂದು ಆರೋಗ್ಯ ಇಲಾಖೆ ಲೆಕ್ಕ ಹಾಕಿದೆ. ಈಗ ಬೇಡಿಕೆಯಷ್ಟು ಲಸಿಕೆ ಪೂರೈಕೆಯಲ್ಲೇ ಕೊರತೆಯಿದ್ದು, ಆಸ್ಪತ್ರೆ ಕೋವಿಡ್ ಲಸಿಕಾ ಕೇಂದ್ರದ ಮುಂದೆ ಮಾರುದ್ದ ಲೈನ್ ಇದೆ. ಮೇ 1 ರಿಂದ ಮತ್ತಷ್ಟು ರಷ್ ಹೆಚ್ಚಾಗಿ ಬೇಡಿಕೆ ಇನ್ನಷ್ಟು ಏಕೆಯಾಗಲಿದೆ. ಇದನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ನಿರ್ವಹಿಸುವ ಸವಾಲು ಎದುರಾಗಿದೆ.