ಬೆಂಗಳೂರು : ರಾಜ್ಯದಲ್ಲಿ ಕರೋನಾ ಎರಡನೇ ಅಲೆಯಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿರೋದು ಸ್ಪಷ್ಟವಾಗಿದೆ. ಇದು ನಿಜಕ್ಕೂ ಅಲಾರಾಮಿಂಗ್ ಕಾಲ್.
ಸರ್ಕಾರ ಏನೇ ಅಂದರೂ ವಸ್ತುಸ್ಥಿತಿ ನೋಡುವುದಾದರೆ ವೈದ್ಯಕೀಯ ಆಮ್ಲಜನಕ ಪೂರೈಕೆ ಹಾಗೂ ತುರ್ತು ನಿಗಾ ಘಟಕ (ಐಸಿಯು) ಬೆಡ್ ಗಳ ಕೊರತೆ ಕರುನಾಡಿನ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಮಧ್ಯೆ ಸರ್ಕಾರ ಪರಿಸ್ಥಿತಿ ನಿಭಾಯಿಸುವ ಕೊನೆಯ ಅಸ್ತ್ರವಾಗಿ ಕಠಿಣ ಕ್ರಮಗಳ ಹೆಸರಿನಲ್ಲಿ ಮಂಗಳವಾರ ರಾತ್ರಿಯಿಂದ 14 ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡಿದೆ.
ರಾಜ್ಯಾದ್ಯಂತ ಕೋವಿಡ್ ರೋಗಿಗಳು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಏಪ್ರಿಲ್ 26ಕ್ಕೆ 1,492 ಆಗಿದ್ದರೆ, ಏಪ್ರಿಲ್ 26ಕ್ಕೆ ಒಂದೇ ದಿನದಲ್ಲಿ 323 ಹೆಚ್ಚಳವಾಗಿ 1,815 ಮಂದಿ ಸದ್ಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗಾಗಿ ಮೀಸಲಿಡಲಾದ ಐಸಿಯು ಬೆಡ್ ಗಳ ಸಂಖ್ಯೆ 2,036 ಆಗಿದೆ. ಆದರೆ ಏಪ್ರಿಲ್ 14ರಂದು ಐಸಿಯುವಿನಲ್ಲಿ ದಾಖಲಾದವರ ಪ್ರಮಾಣ 506 ಆಗಿದ್ದರೆ, ಕೇವಲ 13 ದಿನದಲ್ಲಿ (ಏ.26) ಇದರ ಸಂಖ್ಯೆ ಕ್ಷಿಪ್ರವಾಗಿ 1,815ಕ್ಕೆ ತಲುಪಿದೆ.
ಇದನ್ನು ಗಮನಿಸಿದರೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ತೆಲೆದೋರಿದ್ದು, ಮುಂದೆ ಪರಿಸ್ಥಿತಿ ಕೈಮೀರಿ ಹೋದರೆ ಆಶ್ಚರ್ಯವಿಲ್ಲ. ಕರ್ನಾಟಕದಲ್ಲಿ ಸೋಮವಾರದ ತನಕ ಒಟ್ಟಾರೆ 2,81,042 ಸಕ್ರಿಯ ಪ್ರಕರಣಗಳಿವೆ. ದಿನೇ ದಿನೇ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಈ ಬಗ್ಗೆ ಸರ್ಕಾರ ತುರ್ತು ಗಮನ ಹರಿಸಬೇಕು. ಹಾಗಾದರೆ ರಾಜ್ಯದಲ್ಲಿ ಒಟ್ಟಾರೆ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಹಾಸಿಗೆಗಳು, ಐಸಿಯು ವೆಂಟಿಲೇಟರ್ ಸಹಿತ ಬೆಡ್ಗಳ ಕಡೆ ನೋಡುವುದಾದರೆ ಈ ರೀತಿಯಿದೆ.
ಆಸ್ಪತ್ರೆಗಳ ವಿಧ ಹಾಸಿಗೆಗಳ ಸಂಖ್ಯೆ
ಆರೋಗ್ಯ ಇಲಾಖೆ ಅಡಿ ಆಸ್ಪತ್ರೆ 31,444
ಸರ್ಕಾರಿ ಮೆಡಿಕಲ್ ಕಾಲೇಜು 14,617
ಖಾಸಗಿ ಆಸ್ಪತ್ರೆಗಳು 38,600
ಖಾಸಗಿ ಮೆಡಿಕಲ್ ಕಾಲೇಜು ಹಾಸಿಗೆ 35,766
ಒಟ್ಟಾರೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 1,20,427 ಹಾಸಿಗೆಗಳಿವೆ ಅಂದಗಾಯಿತು. ಸರ್ಕಾರ ನೂತನ ನಿಯಮಾವಳಿಯಂತೆ ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಶೇ.50ರ ಬದಲಿಗೆ ಶೇ.75ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆಂದು ಮೀಸಲಿಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ 74,366 ಹಾಸಿಗೆಗಳ ಪೈಕಿ 55,774 ಬೆಡ್ ಗಳನ್ನು ಕೋವಿಡ್ ಚಿಕಿತ್ಸೆಗೆಂದು ಮೀಸಲಿಡಬೇಕು. ಆದರೆ ಈಗಾಗಲೇ ಶೇ.50ರಷ್ಟು ಹಾಸಿಗೆಗಳನ್ನು ನೀಡಲೆಂದು ಸರ್ಕಾರ ಈ ಹಿಂದೆ ಆದೇಶ ಹೊರಡಿಸಿದರೂ, ಹಲವು ಆಸ್ಪತ್ರೆಗಳು ಇನ್ನೂ ಅಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿಲ್ಲ. ಇದೀಗ ಸರ್ಕಾರ ಶೇ.75ರಷ್ಟು ಹಾಸಿಗೆ ಕೋವಿಡ್ ಚಿಕಿತ್ಸೆಗೆ ಮೀಸಲಿಡುವಂತೆ ಹೇಳಿದ್ದಕ್ಕೆ, ಖಾಸಗಿ ಆಸ್ಪತ್ರೆಗಳು ಪ್ರತಿರೋಧ ವ್ಯಕ್ತಪಡಿಸುತ್ತಿವೆ.
ಈ ಮಧ್ಯೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಏ.26ರಂದು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಖಾಸಗಿ ಆಸ್ಪತ್ರೆಗಳು ಶೇ.75ರಷ್ಟು ಹಾಸಿಗೆ ನೀಡಿದರೆ, ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ನಿಂದ ಸರ್ಕಾರ ಹಣ ಪಾವತಿಸಲಿದೆ ಎಂದು ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗಳು ಇದಕ್ಕೆ ಒಪ್ಪಿವೆ ಎಂದು ಹೇಳಿದ್ದಾರೆ. ಆದರೆ ಅವರ ಮನವೊಲಿಸಿ ಕೋವಿಡ್ ಚಿಕಿತ್ಸೆಗೆ ಕೋವಿಡೇತರ ಬೆಡ್ ಗಳನ್ನು ಪಡೆಯಲು ಕೆಲ ಕಾಲವಾದರೂ ಹಿಡಿಯುತ್ತೆ. ಆದರೆ ಕೋವಿಡ್ ಅಲೆ ಮಾತ್ರ ದಿನದಿಂದ ದಿನಕ್ಕೆ ಒಂದೇ ಸಮನೆ ಏರುತ್ತಿರುವುದು ಎಲ್ಲರಿಗೂ ತಲೆ ನೋವಾಗಿ ಪರಿಣಮಿಸಿದೆ.
ಇನ್ನು ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳು ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 2,108 ಬೆಡ್ ಗಳಿದ್ರೆ, ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಒಟ್ಟಾರೆ 1,662 ಹಾಸಿಗೆಗಳಿವೆ. ಒಟ್ಟಾರೆ ಲೆಕ್ಕಾ ಹಾಕಿದರೆ 3,770 ಐಸಿಯು ಬೆಡ್ ಗಳಿವೆ. ಆದ್ರೆ ಈ ಪೈಕಿ ಕೋವಿಡ್ ಸೋಂಕಿತರಿಗೆಂದು ಮೀಸಲಿಟ್ಟಿರುವುದು 2,036 ಬೆಡ್ ಗಳು ಮಾತ್ರ.
ಆಮ್ಲಜನಕ ಬೇಡಿಕೆಯಷ್ಟು ಪೂರೈಕೆಯಾಗುತ್ತಿದೆಯಾ?
ಇನ್ನು ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೋದಲ್ಲಿ ಬಂದಲ್ಲಿ ಮಾಧ್ಯಮಗಳಿಗೆ ತಿಳಿಸುತ್ತಿದ್ದಾರೆ. ಪ್ರಸ್ತುತ ರಾಜ್ಯಕ್ಕೆ ಪ್ರತಿದಿನಕ್ಕೆ ಕೇಂದ್ರದಿಂದ ಹಂಚಿಕೆಯಾಗಿರುವುದು 300 ಮೆಟ್ರಿಕ್ ಟನ್ ಆಮ್ಲಜನಕ. ಸದ್ಯ ರಾಜ್ಯಕ್ಕೆ 1,400 ಮೆಟ್ರಿಕ್ ಟನ್ ಆಮ್ಲಜನಕದ ಅವಶ್ಯಕತೆಯಿದೆ. ಇದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಕ್ಕೆ 800 ಮೆಟ್ರಿಕ್ ಟನ್ ಪ್ರತಿದಿನ ಪೂರೈಕೆಗೆ ಕೇಂದ್ರ ಅಸ್ತು ಎಂದಿದೆ ಎಂದು ಹೇಳುತ್ತಿದ್ದಾರೆ. ಆದರೆ ಪ್ರತಿದಿನ 800 ಮೆಟ್ರಿಕ್ ಟನ್ ಆಮ್ಲಜನಕ ಯಾವಾಗಿನಿಂದ ಪೂರೈಕೆ ಆಗುತ್ತೆ ಎಂಬ ಬಗ್ಗೆ ಸರ್ಕಾರದಿಂದ ಮಾಹಿತಿ ಲಭ್ಯವಾಗಿಲ್ಲ.
ಪ್ರತಿದಿನ ಕೋವಿಡ್ ಪರೀಕ್ಷೆ, ಐಸಿಯು ದಾಖಲಾದವರು, ಎಷ್ಟು ಜನ ಕೋವಿಡ್ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ ಇನ್ನಿತರ ಮಾಹಿತಿಗಳನ್ನು ಹಂಚಿಕೊಳ್ಳುವ ಆರೋಗ್ಯ ಇಲಾಖೆಗೆ ರಾಜ್ಯದಲ್ಲಿ ಪ್ರತಿದಿನ ಎಷ್ಟು ಆಮ್ಲಜನಕದ ಅಗತ್ಯವಿದೆ? ಎಷ್ಟು ಪೂರೈಕೆಯಾಗುತ್ತಿದೆ? ಎಂಬ ಬಗ್ಗೆ ಮಾತ್ರ ಮಾಹಿತಿ ಹಂಚಿಕೊಳ್ಳುತ್ತಿಲ್ಲ. ಮೆಡಿಕಲ್ ಆಕ್ಲಿಜನ್ ಹಾಗೂ ಕೋವಿಡ್ ಚಿಕಿತ್ಸೆಯಲ್ಲಿ ಪ್ರಮುಖವಾಗಿರುವ ರೆಮಿಡಿಸಿವಿರ್ ಇಂಜಕ್ಷನ್ ಪೂರೈಕೆ ಬಗ್ಗೆ ಉಸ್ತುವಾರಿ ವಹಿಸಿರುವ ಔಷಧಿ ನಿಯಂತ್ರಣ ಇಲಾಖೆ ಅಧಿಕಾರಿಗಳು ಈ ವಿಷಯದಲ್ಲಿ ಮೌನವಹಿಸಿದ್ದಾರೆ.
ರಾಜ್ಯದ ವೈದ್ಯಕೀಯ ಆಮ್ಲಜನಕ ಉತ್ಪಾದನೆ ವಿವರ
ರಾಜ್ಯದಲ್ಲಿ ಒಟ್ಟಾರೆ 7 ಕಡೆಗಳಲ್ಲಿ ಆಮ್ಲಜನಕ ಉತ್ಪಾದಿಸುವ ಸ್ಥಾವರಗಳಿವೆ. ಇವುಗಳ ಒಟ್ಟಾರೆ ಸ್ಥಾಪಿತ ಸಾಮರ್ಥ್ಯ 812 ಟನ್ ಗಳಾಗಿದೆ. ಆ ಸಂಸ್ಥೆಗಳ ಒಟ್ಟಾರೆ ಸಂಗ್ರಹ ಸಾಮರ್ಥ್ಯ 5,780 ಟನ್ ಗಳಾಗಿದೆ. ಇನ್ನು 57 ಆಕ್ಸಿಜನ್ ರಿಫಿಲಿಂಗ್ ಘಟಕಗಳಿವೆ. ಬಳ್ಳಾರಿಯಲ್ಲಿ ಜೆಎಸ್ ಡಬ್ಲ್ಯು ಇಂಡಸ್ಟ್ರಿಯಲ್ ಗ್ಯಾಸ್, ಬಳ್ಳಾರಿ ಆಕ್ಸಿಜನ್, ಏರ್ ವಾಟರ್ಸ್ ಇಂಡಿಯಾ, ಪ್ರಾಕ್ಸೇರ್ ಸ್ಥಾವರಗಳಿದ್ದರೆ, ಬೆಂಗಳೂರಿನಲ್ಲಿ ಭರೂಕ ಗ್ಯಾಸಸ್, ಯೂನಿವರ್ಸಲ್ ಏರ್ ಪ್ರಾಡೆಕ್ಟ್ಸ್ ಹಾಗೂ ಕೊಪ್ಪಳದಲ್ಲಿ ಪ್ರಾಕ್ಸೇರ್ ಮತ್ತೊಂದು ಘಟಕ ಕಾರ್ಯನಿರ್ವಹಿಸುತ್ತಿದೆ. ಆದರೆ ಗದಗ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೀದರ್, ಯಾದಗಿರಿ, ಚಾಮರಾಜನಗರ, ಕೊಡಗು, ಮಂಡ್ಯ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆಮ್ಲಜನಕ ಉತ್ಪಾದಿಸುವ ಕೈಗಾರಿಕೆಗಳಿಲ್ಲ.
ಔಷಧ ನಿಯಂತ್ರಣ ಇಲಾಖೆ ಏಪ್ರಿಲ್ 16ರಂದು ಸಿದ್ಧಪಡಿಸಿದ್ದ ಆಂತರಿಕ ಟಿಪ್ಪಣಿಯಲ್ಲಿ ರಾಜ್ಯದ ಆಮ್ಲಜನಕ ಉತ್ಪಾದನೆ ಸಾಮರ್ಥ್ಯ, ಆಮ್ಲಜನಕ ಸಹಿತದ ಹಾಸಿಗೆಗಳ ಸಂಖ್ಯೆ, ಆ ಹಾಸಿಗೆಗಳಿಗೆ ಪ್ರತಿದಿನ ಆಮ್ಲಜನಕದ ಅಗತ್ಯದ ವಿವರಗಳನ್ನು ಸಿದ್ದಪಡಿಸಿಕೊಂಡಿದೆ. ಅದರಲ್ಲಿ ರಾಜ್ಯಾದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ 48,175 ಆಮ್ಲಜನಕ ಸಹಿತದ ಹಾಸಿಗೆಗಳಿದ್ದು, ಅವುಗಳಿಗೆ ಪ್ರತಿದಿನ 1,239.17 ಟನ್ ಆಕ್ಸಿಜನ್ ಅಗತ್ಯವಿದೆ ಎಂದು ತಿಳಿಸಲಾಗಿದೆ. ಏಪ್ರಿಲ್ 14ರಂದು ಕರ್ನಾಟಕದಲ್ಲಿ 85,480 ಕೋವಿಡ್ ಪ್ರಕರಣಗಳು ಸಕ್ರಿಯವಾಗಿದ್ದು, ಆ ಪೈಕಿ ಶೇ.11.5 ಮಂದಿಗೆ ಆಕ್ಸಿಜನ್ ಬೆಡ್ ಅಗತ್ಯವಿತ್ತು. ಅಂದರೆ 9830 ಮಂದಿಯಲ್ಲಿ 9,535 ರೋಗಿಗಳಿಗೆ ಜನರಲ್ ಆಕ್ಸಿಜನ್ ಹಾಗೂ 295 ಮಂದಿಗೆ ಐಸಿಯು ಬೆಡ್ ಅಗತ್ಯವಿತ್ತು. ಆಕ್ಸಿಜನೇಟೆಡ್ ಬೆಡ್ ನಲ್ಲಿರುವ ಪ್ರತಿ ರೋಗಿಗೆ ಪ್ರತಿ ನಿಮಿಷಕ್ಕೆ 10 ಲೀಟರ್ ಆಮ್ಲಜನಕ ಅಗತ್ಯವಿದೆ. ಆದರೆ ಐಸಿಯು ನಲ್ಲಿರುವ ರೋಗಿಗೆ ಪ್ರತಿ ನಿಮಿಷಕ್ಕೆ 24 ಲೀಟರ್ ಆಕ್ಲಿಜನ್ ಅಗತ್ಯವಾಗಿರುತ್ತೆ. ಈ ಎರಡೂ ಬಗೆಯ ರೋಗಿಗಳು ಒಟ್ಟಾರೆ 197.2 ಟನ್ ಆಮ್ಲಜನಕ ಬಳಸಿದ್ದಾರೆಂದು ಟಿಪ್ಪಣಿಯಲ್ಲಿ ತಿಳಿಸಲಾಗಿತ್ತು.
ಪ್ರತಿದಿನ 600 ಟನ್ ವೈದ್ಯಕೀಯ ಆಮ್ಲಜನಕ ಬೇಡಿಕೆ ?
ಇದೀಗ ಏಪ್ರಿಲ್ 26ರಂತೆ ರಾಜ್ಯಾದ್ಯಂತ 2,81,042 ಕೋವಿಡ್ ಪ್ರಕರಣಗಳು ಸಕ್ರಿಯವಾಗಿದೆ. ಇವುಗಳ ಪೈಕಿ ಶೇ.11.5ರಷ್ಟು ಮಂದಿಗೆ ಆಕ್ಸಿಜನ್ ಸಹಿತ ಬೆಡ್ ಗಳ ಅವಶ್ಯಕತೆಯಿದೆ ಎಂದು ಲೆಕ್ಕಹಾಕಿದರೂ ಒಟ್ಟು 32,319 ರೋಗಿಗಳಿಗೆ ಆಮ್ಲಜನಕ ಅಗತ್ಯವಿದೆ. ಈಗ ಸರ್ಕಾರ ನೀಡಿರುವ ಮಾಹಿತಿಯಂತೆ 1,815 ಮಂದಿ ಐಸಿಯುವಿನಲ್ಲಿದ್ದಾರೆ. ಏಪ್ರಿಲ್ 14ರ ಪರಿಸ್ಥಿತಿಗೆ ಹೋಲಿಸಿದರೆ ಆಕ್ಸಿಜನ್ ಬೇಡಿಕೆ 3 ಪಟ್ಟು ಹೆಚ್ಚಾಗಿರುವುದು ಇದರಿಂದ ತಿಳಿದು ಬರುತ್ತೆ. ಅಂದಾಜು 600 ಟನ್ ನಷ್ಟು ವೈದ್ಯಕೀಯ ಆಮ್ಲಜನಕಕ್ಕೆ ಬೇಡಿಕೆಯಿರುವುದು ಇದರಿಂದ ಕಂಡು ಬರುತ್ತದೆ.
ಪ್ರತಿದಿನ 100 ಟನ್ ಆಮ್ಲಜನಕದ ಕೊರತೆ ?
ಆದರೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭಾನುವಾರ ಮಾಧ್ಯಮಗಳಿಗೆ, ಕಳೆದ ಬಾರಿ ಕೋವಿಡ್ ಸಂದರ್ಭದಲ್ಲಿ 300 ರಿಂದ 500 ಟನ್ ವೈದ್ಯಕೀಯ ಆಮ್ಲಜನಕ ಪೂರೈಸಲಾಗಿತ್ತು. ಆದರೆ ಈಗ 500 ಟನ್ ಆಕ್ಸಿಜನ್ ಬಳಕೆಯಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಸರ್ಕಾರದ ಸಚಿವರು ನೀಡಿರುವ ಹೇಳಿಕೆಗೂ ವಾಸ್ತವಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆಸ್ಪತ್ರೆಗಳು, ಮನೆಗಳಿಗೆ ಆಕ್ಸಿಜನ್ ಸಿಲೆಂಡರ್ ಪೂರೈಸುವಂತೆ ಔಷಧ ನಿಯಂತ್ರಣ ಇಲಾಖೆಯ ಆಕ್ಸಿಜನ್ ಸಹಾಯವಾಣಿಗೆ ಬೆಳಗ್ಗೆಯಿಂದ ರಾತ್ರಿವರೆಗೂ ನಿರಂತರ ಕರೆ ಬರುತ್ತಿದೆ. ಇರುವ 10 ಲೈನ್ ಗಳು ಸಾಕಾಗುತ್ತಿಲ್ಲ ಎಂದರೆ ಪರಿಸ್ಥಿತಿ ಯಾವ ಮಟ್ಟಿಗೆ ಹೋಗಿದೆ ಎಂಬುದು ವೇದ್ಯವಾಗುತ್ತೆ.
ರಾಜ್ಯ ಸರ್ಕಾರ ಆಮ್ಲಜನಕವನ್ನು ಸ್ಥಾವರದಿಂದ ತರಿಸಿಕೊಳ್ಳುವುದು ದೊಡ್ಡದಲ್ಲ, ಅದನ್ನು ಬೇಡಿಕೆಗೆ ತಕ್ಕಂತೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಯಶಸ್ವಿಯಾಗಿ, ತುರ್ತಾಗಿ ಮತ್ತು ಕೊರತೆಯಾಗದಂತೆ ಪೂರೈಸುವುದು ದೊಡ್ಡ ಸವಾಲಾಗಿದೆ.