ಬೆಂಗಳೂರು : ಕೋವೀಡ್ ಸೋಂಕಿನಿಂದ ಮೃತಪಡುತ್ತಿರುವವರ ಪ್ರಮಾಣ ದಿನೇ ದಿನೇ ಒಂದೇ ಸಮನೆ ಏರಿಕೆಯಾಗ್ತಿದೆ. ಮಾರ್ಚ್ 22ರಂದು ದಿನವೊಂದಕ್ಕೆ ಕೋವಿಡ್ ನಿಂದ ಸಾವನ್ನಪ್ಪುವವರ ಪ್ರಮಾಣ 4 ಇದ್ದಿದ್ದು ಏಪ್ರಿಲ್ 22ರ ವೇಳೆಗೆ 68ಕ್ಕೆ ಏರಿಕೆಯಾಗಿದೆ. ಒಂದೇ ತಿಂಗಳಲ್ಲಿ ಸಾವಿನ ನಾಗಾಲೋಟ 897ಕ್ಕೆ ಏರಿಕೆಯಾಗಿದೆ.
ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿನ 12 ವಿದ್ಯುತ್ ಚಿತಾಗಾರದ ಮೇಲಿನ ಒತ್ತಡ ತಗ್ಗಿಸಲು ಬೆಂಗಳೂರು ಜಿಲ್ಲಾಡಳಿತ ತಾವರೆಕೆರೆ ಬಳಿಯ ಕುರುಬರಹಳ್ಳಿ ಗ್ರಾಮದಲ್ಲಿ 4 ಎಕರೆ ಸರ್ಕಾರಿ ಜಾಗದಲ್ಲಿ ಹಾಗೂ ದಾಸನಪುರ ಹೋಬಳಿಯ ಗಿಡ್ಡೇನಹಳ್ಳಿ ಸರ್ಕಾರಿ ಭೂಮಿಯಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದವರನ್ನು ಸುಡಲು ಅಗತ್ಯ ಮೂಲಭೂತ ಸೌಕರ್ಯವನ್ನು ತುರ್ತಾಗಿ ಕಲ್ಪಿಸುತ್ತಿದೆ. ಆ ಪೈಕಿ ತಾವರೆಕೆರೆ ಗ್ರಾಮದಲ್ಲಿನ ಸ್ಮಶಾನ ಶನಿವಾರ ಅಥವಾ ಭಾನುವಾರದಿಂದ ಅಂತ್ಯಸಂಸ್ಕಾರ ನಡೆಸಲು ಸಿದ್ಧವಾಗಲಿದೆ.
ಈಗಾಗಲೇ ತಾವರೆಕೆರೆ ಬಳಿಯ ಕುರುಬರಹಳ್ಳಿ ಗ್ರಾಮ ಈ ಸರ್ಕಾರಿ ಭೂಮಿಯಲ್ಲಿ ದೊಡ್ಡ ಮಟ್ಟದಲ್ಲಿ ಕಟ್ಟಿಗೆಗಳನ್ನು ಸಂಗ್ರಹಿಸಿಡಲಾಗಿದೆ. ಈ ಸ್ಮಶಾನಕ್ಕೆ ಬಂದು ಹೋಗಲು ರಸ್ತೆ, ಮೃತದೇಹವನ್ನಿಟ್ಟು ಸುಡಲು ಅನುವಾಗುವಂತೆ ಮೇಲ್ಚಾವಣಿ, ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬರುವವರಿಗೆ ಪಿಪಿಇ ಕಿಟ್ ಹಾಗೂ ಅಗತ್ಯ ಧಾರ್ಮಿಕ ಕ್ರಿಯೆ ನಡೆಸಲು ಅವಕಾಶ ಕಲ್ಪಿಸಲಾಗುತ್ತಿದೆ. ಈಗಾಗಲೇ ಜಿಲ್ಲಾಡಳಿತದಿಂದ ಬೋರ್ ವೆಲ್ ಅನ್ನು ಈ ಉದ್ದೇಶಕ್ಕಾಗಿ ಕೊರೆಸಲಾಗಿದೆ. ಈ ಜಾಗದಲ್ಲಿ ಏಕ ಕಾಲಕ್ಕೆ 20 ರಿಂದ 25 ಮೃತ ದೇಹಗಳನ್ನು ಕಟ್ಟಿಗೆಗಳಿಂದ ಸುಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.
ಅದೇ ರೀತಿ ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹೋಬಳಿಯ ಗಿಡೇಡನಹಳ್ಳಿ ಸರ್ವೆ ನಂಬರ್ 80ರಲ್ಲಿ ಸರ್ಕಾರಿ ಕರಾಬು ಭೂಮಿ 80 ಎಕರೆ ಜಾಗವಿದ್ದು, ಆ ಪೈಕಿ 4 ಎಕರೆ ಜಾಗದಲ್ಲಿ ಕಟ್ಟಿಗೆಯಿಂದ ಸುಡುವ ಸ್ಮಶಾನ ನಿರ್ಮಿಸಲು ಈಗಾಗಲೇ ಭರದಿಂದ ಕೆಲಸ ಆರಂಭವಾಗಿದ್ದು, ಮೂರ್ನಾಲ್ಕು ದಿನಗಳಲ್ಲಿ ಈ ಸ್ಮಶಾನವೂ ಕೋವಿಡ್ ನಿಂದ ಸಾವನ್ನಪ್ಪಿದವರ ಶವ ಸಂಸ್ಕಾರಕ್ಕೆ ಲಭ್ಯವಾಗಲಿದೆ.
ನಗರದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿರುವುದನ್ನು ಗಮನಿಸಿದ ಬೆಂಗಳೂರು ನಗರ ಜಿಲ್ಲಾಡಳಿತ 4 ತಾಲ್ಲೂಕುಗಳಲ್ಲಿನ 10 ಸ್ಥಳಗಳಲ್ಲಿರುವ 24.16 ಎಕರೆ ಸರ್ಕಾರಿ ಜಮೀನಿನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಾರ್ವಜನಿಕ ಸ್ಮಶಾನ ಹಾಗೂ ವಿದ್ಯುತ್ ಚಿತಾಗಾರ ನಿರ್ಮಾಣ ಉದ್ದೇಶಕ್ಕಾಗಿ ಒಂದು ವಾರದ ಹಿಂದೆ ಹಸ್ತಾಂತರಿಸಿದೆ. ಈ ಪೈಕಿ ಗಿಡ್ಡೇನಹಳ್ಳಿಯಲ್ಲಿ ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲು ಸ್ಮಶಾನ ಸಿದ್ದವಾಗುತ್ತಿದೆ. ಶನಿವಾರ ಅಥವಾ ಭಾನುವಾರ ಕುರುಬರಹಳ್ಳಿಯಲ್ಲಿ ಸಾಮೂಹಿಕ ಅಂತ್ಯ ಸಂಸ್ಕಾರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
– ಜೆ.ಮಂಜುನಾಥ್, ಬೆಂಗಳೂರು ನಗರ ಜಿಲ್ಲಾಧಿಕಾರಿ
ಬೆಂಗಳೂರು ಜಿಲ್ಲಾಡಳಿತ ನೀಡಿರುವ 24 ಎಕರೆಗಳ ಪೈಕಿ ಕುರುಬರಹಳ್ಳಿ ಹಾಗೂ ಗಿಡ್ಡೇನಹಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಸ್ಮಶಾನಗಳನ್ನು ಯಾರು ನಿರ್ವಹಣೆ ಮಾಡಬೇಕು? ಯಾರು ಸ್ಮಶಾನದ ಉಸ್ತುವಾರಿ ವಹಿಸಬೇಕು? ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದ ಬಳಿಕ ಅವುಗಳ ಸ್ವಚ್ಛತೆ ಯಾರು ಮಾಡಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ನಗರ ಜಿಲ್ಲಾಡಳಿತ ನೀಡಿದ ಕೆಲವು ಸಣ್ಣ ಜಾಗಗಳನ್ನು ಪಾಲಿಕೆ ಬೇರೆ ಉದ್ದೇಶಗಳಿಗೆ ಬಳಸಲಿದೆ.
– ಗೌರವಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ
ಈ ಹಿಂದೆ ಪಾಲಿಕೆ ವ್ಯಾಪ್ತಿಯಲ್ಲಿರುವ 7 ವಿದ್ಯುತ್ ಚಿತಾಗಾರಗಳಲ್ಲಿ ಆಂಬುಲೆನ್ಸ್ ಗಳಲ್ಲಿ ತರಲಾಗುತ್ತಿರುವ ಕೋವಿಡ್ ನಿಂದ ಮೃತಪಟ್ಟವರ ಮೃತದೇಹಗಳ ಅಂತ್ಯಸಂಸ್ಕಾರ ಮಾಡಲು ಮಾರುದ್ದ ಕ್ಯೂ ನಿಲ್ಲುವ ಪ್ರಮಾಣ ಹೆಚ್ಚಾಗುತ್ತಿದ್ದು, ಅಂತ್ಯ ಸಂಸ್ಕಾರಕ್ಕೆ ತಗಲುವ ಸಮಯ ಹೆಚ್ಚಾಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಏ.21ರಂದು ಬಿಬಿಎಂಪಿ ಮುಖ್ಯ ಆಯುಕ್ತರು 7ರ ಬದಲು ಪಾಲಿಕೆಯ 12 ವಿದ್ಯುತ್ ಚಿತಾಗಾರಗಳಲ್ಲಿ ಸಾಮಾನ್ಯ ಶವಗಳಲ್ಲದೆ, ಕೋವಿಡ್ ನಿಂದ ಮೃತಪಟ್ಟವರ ಶವಗಳನ್ನು ಅಂತ್ಯ ಸಂಸ್ಕಾರ ನಡೆಸಲು ಆದೇಶಿಸಿದ್ದರು.
ಸೆಂಟ್ರಲ್ ಕಂಟ್ರೂಲ್ ರೂಮ್ ಮೂಲಕ ವಿದ್ಯುತ್ ಚಿತಾಗಾರಗಳ ನಿಯಂತ್ರಣ
12 ವಿದ್ಯುತ್ ಚಿತಾಗಾರಗಳ ಮೇಲಿನ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಲು ಸೆಂಟ್ರಲ್ ಕಂಟ್ರೋಲ್ ರೂಮ್ ಮೂಲಕ ಅರ್ಧಗಂಟೆಗೊಮ್ಮೆ ಪರಿಸ್ಥಿತಿ ಅವಲೋಕಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿನಿಂದ ಮೃತಪಡುವವರ ಶವವನ್ನು ಯಾವ ವಿದ್ಯುತ್ ಚಿತಾಗಾರಕ್ಕೆ ಕೊಂಡೊಯ್ಯಬೇಕು ಎಂಬುದನ್ನು ಕೇಂದ್ರೀಯ ನಿಯಂತ್ರಣ ಕೊಠಡಿಯಿಂದಲೇ ಪಾಲಿಕೆಯ ಶವಸಾಗಿಸುವ ವಾಹನದ ಚಾಲಕರಿಗೆ ಅಥವಾ ಖಾಸಗಿ ಆಂಬುಲೆನ್ಸ್ ಚಾಲಕರಿಗೆ ಮಾಹಿತಿ ರವಾನಿಸಲಾಗುತ್ತದೆ. ಈ ವಾಹನದ ಜೊತೆ ಕೋವಿಡ್ ನಿಯಮಾವಳಿ ಅನ್ವಯ ಅಂತ್ಯ ಸಂಸ್ಕಾರ ನಡೆಸಲು ನರ್ಸ್ ಒಬ್ಬರನ್ನು ಜೊತೆಗೆ ಕಳುಹಿಸಲಾಗುತ್ತೆ. ಇದರಿಂದ ವಿದ್ಯುತ್ ಚಿತಾಗಾರಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ ಮೆಂಟ್ ಸಿಸ್ಟಮ್ (ಸಿಎಚ್ ಬಿಎಮ್ಎಸ್) ಹಾಗೂ ವಿದ್ಯುತ್ ಚಿತಾಗಾರಗಳ ಉಸ್ತುವಾರಿ ವಹಿಸಿರುವ ವಿಶೇಷ ಆಯುಕ್ತ ರಂದೀಪ್ ಹೇಳಿದ್ದಾರೆ.
ಸಾರ್ವಜನಿಕರು ಕರೋನಾ ಸೋಂಕಿನಿಂದ ಆಸ್ಪತ್ರೆ ಅಥವಾ ಮನೆಯಲ್ಲಿ ಮೃತರಾದವರನ್ನು ಉಚಿತವಾಗಿ ವಿದ್ಯುತ್ ಚಿತಾಗಾರಕ್ಕೆ ಸಾಗಿಸಲು 080-22493202 ಅಥವಾ 080-22493203, ಮೊಬೈಲ್ ಅಥವಾ ವಾಟ್ಸಪ್ ಮೂಲಕ 8792162736 ನಂಬರ್ ಬಿಬಿಎಂಪಿ ಸಹಾಯವಾಣಿಗೆ ಬೆಳಗ್ಗೆ 7 ರಿಂದ ರಾತ್ರಿ 10ರ ವರೆಗೆ ಕರೆ ಮಾಡಬಹುದು.
ಪಾಲಿಕೆಯಲ್ಲಿನ 12 ವಿದ್ಯುತ್ ಚಿತಾಗಾರಗಳಲ್ಲಿ ಹೆಣ ಸುಡುವ ಒಟ್ಟು 24 ಯಂತ್ರಗಳ ಪೈಕಿ ಒಂದು ಯಂತ್ರ ದುರಸ್ಥಿತಿಯಲ್ಲಿದೆ. ಒಂದು ಹೆಣ ಸುಡಲು ಒಂದು ಯಂತ್ರಕ್ಕೆ 1 ಗಂಟೆಯೆಂದರೂ 10 ಗಂಟೆಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ಶವಗಳನ್ನು ಅಂತ್ಯಕ್ರಿಯೆ ಮಾಡಬಹುದಾಗಿದೆ. ಹೀಗಾಗಿ ಇಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಪಾಲಿಕೆಯು 12 ಚಿತಾಗಾರಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ.
ಬೆಂಗಳೂರು ಗ್ರಾಮಾಂತರ, ರಾಜಧಾನಿಯ ಸುತ್ತಮುತ್ತಲ ಜಿಲ್ಲೆಗಳ ಕೋವಿಡ್ ನಿಂದ ಮೃತಪಟ್ಟ ಮೃತದೇಹಗಳನ್ನು ಇಲ್ಲಿಗೆ ತರಲಾಗುತ್ತಿದೆ. ಹೀಗಾಗಿ ಒತ್ತಡ ಹೆಚ್ಚಾಗಿದೆ. ನಗರದ ಹೊರವಲವಯದಲ್ಲಿರುವ ಕುರುಬರಹಳ್ಳಿ ಹಾಗೂ ಗಿಡ್ಡೇನಹಳ್ಳಿಯಲ್ಲಿ ಸಾಮೂಹಿಕ ಶವಸಂಸ್ಕಾರಕ್ಕೆ ಸ್ಮಶಾನ ಸಿದ್ದವಾದರೆ ಬೆಂಗಳೂರಿನ ಹೊರಗಿನಿಂದ ಬರುವ ಶವಗಳನ್ನು ಆ ಸ್ಥಳದಲ್ಲಿ ದಫನ್ ಮಾಡಬಹುದು. ಇದರಿಂದ ಪಾಲಿಕೆ ವ್ಯಾಪ್ತಿಯಲ್ಲಿನ ಚಿತಾಗಾರದ ಮೇಲಿನ ಒತ್ತಡ ಕಡಿಮೆಯಾಗಲಿದೆ.
ಕೋವಿಡ್ ಸೋಂಕಿನ ಎರಡನೇ ಅಲೆಯಿಂದ ಮೃತಪಡುತ್ತಿರುವ ಅಂಕಿಸಂಖ್ಯೆಯನ್ನು ವಿಶ್ಲೇಷಿಸಿದಾಗ ಬೆಂಗಳೂರಿನ, ಕಳೆದ ವರ್ಷದ ಅಕ್ಟೋಬರ್ ತಿಂಗಳಿನ (897) ಅಂಕಿ- ಸಂಖ್ಯೆಯನ್ನು ಏಪ್ರಿಲ್ ಅಂತ್ಯಕ್ಕೆ ಮುನ್ನವೇ ಮುಟ್ಟುವ ಸಾಧ್ಯತೆಯಿದೆ. ನಗರದಲ್ಲಿ ಈ ತಿಂಗಳಿನ 22ರ ತಾರೀಖಿನವರೆಗೆ ಒಟ್ಟಾರೆ 820 ಜನರು ಇಹಲೋಕ ತ್ಯಜಿಸಿರುವುದು ಬಿಬಿಎಂಪಿ ವರದಿಯಿಂದ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ನಾಗರೀಕರು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಸುರಕ್ಷಿತವಾಗಿರಬೇಕೆನ್ನುವುದು ಬೆಂಗಳೂರು ವೈರ್ ಕಾಳಜಿ.