ಬೆಂಗಳೂರು : ವೈದ್ಯಕೀಯ ಆಮ್ಲಜನಕ ಹಾಗೂ ರೆಮಿಡಿಸಿವಿರ್ ಇಂಜಕ್ಷನ್ ಪೂರೈಕೆಯಲ್ಲಿನ ವ್ಯತ್ಯಯ ತಪ್ಪಿಸಲು ರಿಯಲ್ ಟೈಮ್‌ನಲ್ಲಿ ಅವುಗಳ ಪೂರೈಕೆ ಬಗ್ಗೆ ಮಾಹಿತಿ ಒದಗಿಸಲು ಹಾಗೂ ಕ್ರಮ ಕೈಗೊಳ್ಳಲು ರಾಜ್ಯ ಔಷಧ ನಿಯಂತ್ರಣ ಇಲಾಖೆ ಬುಧವಾರದಿಂದ (ಏ.21) ಸಹಾಯ ಕೇಂದ್ರ ಆರಂಭಿಸಿದೆ.
ಬೆಂಗಳೂರಿನ ಔಷಧ ನಿಯಂತ್ರಣ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಈ ಸಹಾಯಕೇಂದ್ರ ತೆರೆದಿದ್ದು 8951755722 ನಂಬರ್ ಗೆ ಮೆಡಿಕಲ್ ಆಕ್ಸಿಜನ್ ಮತ್ತು ರೆಮ್ಡಿಸಿವಿರ್ ಇಂಜಕ್ಷನ್ ಕೊರತೆ ಆದಾಗ ಸಾರ್ವಜನಿಕರು ಕರೆ ಮಾಡಿ ತಿಳಿಸಬಹುದು. ಒಂದು ಬಾರಿಗೆ ಏಕ ಕಾಲಕ್ಕೆ 10 ಮಂದಿಯ ಕರೆ ಸ್ವೀಕರಿಸುವಂತೆ ವ್ಯವಸ್ಥೆ ಮಾಡಲಾಗಿದೆ.
ಒಂದು ಪಾಳಿಯಲ್ಲಿ ತಲಾ 15 ಜನರಂತೆ ಮೂರು ಪಾಳಿಯಲ್ಲಿ 45 ಜನರನ್ನು ಈ ಕಾಲ್ ಸೆಂಟರ್ ನಲ್ಲಿ ನಿಯೋಜಿಸಲಾಗಿದೆ. ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಾಲ್ ಸೆಂಟರ್ ನಲ್ಲಿನ ಸಿಬ್ಬಂದಿ, ಸಂಬಂಧಿಸಿದವರಿಗೆ ರಿಯಲ್ ಟೈಮ್ ಆಧಾರದಲ್ಲಿ ಮಾಹಿತಿ ರವಾನಿಸಿ ಆಸ್ಪತ್ರೆಗಳಿಗೆ ಅಗತ್ಯವಾದ ಆಕ್ಸಿಜನ್ ಮತ್ತು ರೆಮ್ಡಿಸಿವಿರ್ ಇಂಜಕ್ಷನ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲು ನೆರವಾಗಲಿದ್ದಾರೆ.
ಕರೋನಾ ಸೋಂಕಿತರ ಸಂಖ್ಯೆಯಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಜ್ಯಗಳಲ್ಲಿ ಕರ್ನಾಟಕ 3 ನೇ ಸ್ಥಾನ ಪಡೆದಿದೆ. ದಿನೇ ದಿನೇ ತುರ್ತು ನಿಗಾ ಘಟಕಗಳಲ್ಲಿ (ಐಸಿಯು) ಚಿಕಿತ್ಸೆ ಪಡೆಯುವವರ ಸಂಖ್ಯೆ ಜಾಸ್ತಿಯಾಗಿದೆ. ರಾಜ್ಯದಲ್ಲಿ (ಏ.21ಕ್ಕೆ) 1,76,188 ಕೋವಿಡ್ ಸಕ್ರಿಯ ಪ್ರಕರಣಗಳಿವೆ.
ಏ.21ರ ಸರ್ಕಾರ ವರದಿ ಪ್ರಕಾರ ಒಟ್ಟಾರೆ 904 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುವವರಿಗೆ ವೈದ್ಯಕೀಯ ಆಮ್ಲಜನಕ ಅತ್ಯಗತ್ಯವಾಗಿರುತ್ತದೆ. ಅದೇ ರೀತಿ ಕೋವಿಡ್ ಚಿಕಿತ್ಸೆಗೆ ರೆಮಿಡಿಸಿವಿರ್ ಇಂಜಕ್ಷನ್ ಕೂಡ ಅವಶ್ಯವಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕ ಹಾಗೂ ರೆಮಿಡಿಸಿವಿರ್ ಇಂಜಕ್ಷನ್ ಪೂರೈಕೆಯಲ್ಲಿ ವ್ಯತ್ಯಯವಿಲ್ಲ. 30 ಹಾಸಿಗೆಗಳಿಗಿಂತ ಕಡಿಮೆ ಹಾಸಿಗೆಗಳಿರುವ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡದಂತೆ ಸೂಚಿಸಲಾಗಿದೆ. ಸದ್ಯದಲ್ಲೆ ಅಧಿಕೃತ ಸರ್ಕಾರಿ ಆದೇಶ ಬರಲಿದೆ. ಆ ಆಸ್ಪತ್ರೆಗಳಲ್ಲಿ ಕೋವಿಡೇತರ ರೋಗಿಗಳು ಚಿಕಿತ್ಸೆ ಪಡೆಯಬಹುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
“ರಾಜ್ಯದಲ್ಲಿ 8 ಕಂಪನಿಗಳು ವೈದ್ಯಕೀಯ ಆಮ್ಲಜನಕ ಉತ್ಪಾದನೆ ಮಾಡುತ್ತಿವೆ. ನಮ್ಮಲ್ಲಿ ಪ್ರತಿದಿನ 812 ಮೆಟ್ರಿಕ್ ಟನ್ ಗಳಷ್ಟು ಆಮ್ಲಜನಕ ಉತ್ಪಾದನೆ ಮಾಡಲಾಗುತ್ತಿದೆ. ಪ್ರತಿದಿನ 350 ಮೆಟ್ರಿಕ್ ಟನ್ ಗಳಷ್ಟು ರಾಜ್ಯದಲ್ಲಿ ಕರ್ಚಾಗುತ್ತಿದೆ. ಬಳ್ಳಾರಿಯಲ್ಲಿನ ಜಿಂದಾಲ್ ಕಂಪನಿಯೊಂದೇ ದೊಡ್ಡ ಮಟ್ಟದಲ್ಲಿ ಮೆಡಿಕಲ್ ಆಕ್ಸಿಜನ್ ಪೂರೈಸುತ್ತಿದೆ.”
– ಡಾ.ತ್ರಿಲೋಕಚಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತ
ಆದರೆ ಇನ್ನೊಂದೆಡೆ ರಾಜ್ಯದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಹಾಗೂ ರೆಮಿಡಿಸಿವಿರ್ ಇಂಜಕ್ಷನ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಬೇಡಿಕೆಯಷ್ಟು ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ದೂರುತ್ತಿವೆ.
“ಬೆಂಗಳೂರಿನಲ್ಲಿ ಒಟ್ಟು 450 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಶನಿವಾರವಷ್ಟೆ (ಏ.17) ಖಾಸಗಿ ಆಸ್ಪತ್ರೆಗಳಿಗೆ ಬೇಡಿಕೆಯಷ್ಟು ವೈದ್ಯಕೀಯ ಆಮ್ಲಜನಕ ಪೂರೈಸುವಂತೆ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿತ್ತು. ಆಗ ಆಕ್ಸಿಜನ್ ಪೂರೈಕೆಯಲ್ಲಿ ಶೇ.50ರಷ್ಟು ಕೊರತೆಯಿತ್ತು. ಆದರೆ ಈಗ ಶೇ.40 ರಷ್ಟು ಪೂರೈಕೆಯಲ್ಲಿ ಕೊರತೆಯಿದೆ”.
– ಡಾ.ಎಚ್.ಎಂ.ಪ್ರಸನ್ನ, ಅಧ್ಯಕ್ಷ, ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಅಸೋಸಿಯೇಷನ್ (ಫಾನಾ)
ಶೇ.30ರಷ್ಟು ರೆಮಿಡಿಸಿವರ್ ಕೊರತೆ
ಕೋವಿಡ್ ಚಿಕಿತ್ಸೆಯಲ್ಲಿ ಪ್ರಮುಖವಾಗಿರುವ ರೆಮಿಡಿಸಿವರ್ ಇಂಜಕ್ಷನ್ ಪೂರೈಕೆ ಕಳೆದ ಗುರುವಾರ (ಏ.15) ಶೇ.70ರಷ್ಟು ಕೊರತೆಯಿತ್ತು. ಆದರೀಗ ಪರಿಸ್ಥಿತಿ ಕೊಂಚ ಸುಧಾರಿಸಿ ಶೇ.30ರಷ್ಟು ಕೊರತೆ ಇದೆ. ಸರ್ಕಾರದಿಂದ ಇನ್ನೂ ಈ ಲಸಿಕೆ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತಿಲ್ಲ. ಖಾಸಗಿ ಸಂಸ್ಥೆಗಳಿಂದ ಪಡೆಯಲಾಗುತ್ತಿದೆ ಎಂದು ಅವರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲೇ ಈ ಪರಿಸ್ಥಿತಿ ಇದ್ದರೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಮತ್ತು ರೆಮಿಡಿಸಿವಿರ್ ಕೊರತೆ ಗುರುತರವಾಗಿದೆ ಎಂದು ಡಾ.ಪ್ರಸನ್ನ ಬೆಂಗಳೂರು ವೈರ್ ಗೆ ಹೇಳಿದ್ದಾರೆ.
ಆರೋಗ್ಯ ಮಿತ್ರರನ್ನು ತೆಗೆದು ಹಾಕಿದ್ದೆ ಬೆಡ್ ಸಮಸ್ಯೆಗೆ ಕಾರಣ
ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಹಾಗೂ ಸೂಕ್ತ ಕೋವಿಡ್ ರೋಗಿಗಳಿಗೆ ಹಾಸಿಗೆಗಳ ಹಂಚಿಕೆ ಕುರಿತಂತೆ ಸರ್ಕಾರದ ವಾರ್ ರೂಮ್ ಹಾಗೂ ಖಾಸಗಿ ಆಸ್ಪತ್ರೆಗಳ ಮಧ್ಯೆ ಕೊಂಡಿಯಾಗಿ ಪ್ರತಿ ಕೋವಿಡ್ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಈ ಹಿಂದೆ ಕೋವಿಡ್-19 ಮೊದಲ ಅಲೆಯಿದ್ದಾಗ ಆರೋಗ್ಯ ಮಿತ್ರರನ್ನು ಹೊರಗುತ್ತಿಗೆ ಮೇಲೆ ನೇಮಕ ಮಾಡಲಾಗಿತ್ತು. ಆದರೆ ಆನಂತರ ನವೆಂಬರ್ ನಲ್ಲಿ ಕೋವಿಡ್ ಪ್ರಕರಣ ಕಡಿಮೆಯಾದ ಕಾರಣಕ್ಕೆ ಸರ್ಕಾರ ಅವರನ್ನು ತೆಗೆದು ಹಾಕಿತು.
ಸರ್ಕಾರ ಕೂಡಲೇ 450 ಆರೋಗ್ಯ ಮಿತ್ರರನ್ನು ನೇಮಕ ಮಾಡಿದರೆ ಅಗತ್ಯವಿರುವ ಕೋವಿಡ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗಲು ಅನುಕೂಲವಾಗುತ್ತದೆ. ಆರೋಗ್ಯ ರಕ್ಷಣೆಗಾಗಿ ಕೋಟ್ಯಾಂತರ ರೂ. ಕರ್ಚು ಮಾಡುವ ಸರ್ಕಾರಕ್ಕೆ ಆರೋಗ್ಯ ಮಿತ್ರರಿಗೆ ಇಂತಹ ಕರೋನಾ ಸಂಕಷ್ಠ ಕಾಲದಲ್ಲಿ ವೇತನ ನೀಡಿ ನಿಯೋಜಿಸಿದರೆ ಬೆಡ್ ಇಲ್ಲದೆ ಕರೋನಾ ಸೋಂಕಿತರು ಪರದಾಡುವುದು ತಪ್ಪುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು 10 ದಿನಗಳಾದರೂ ಯಾವ ಪ್ರಯೋಜನ ಆಗಿಲ್ಲ ಎಂದು ಫಾನಾ ಅಧ್ಯಕ್ಷ ಡಾ.ಎಚ್.ಎಂ.ಪ್ರಸನ್ನ ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ
ಕೋವಿಡ್ ಪಾಸಿಟಿವ್ ಬಂದವರು ಸರ್ಕಾರದ ಆಪ್ತಮಿತ್ರ ಸಹಾಯವಾಣಿಗೆ 14410, ರಾಜ್ಯದ ಕೋವಿಡ್ ಎಮರ್ಜೆನ್ಸಿ ಹೆಲ್ಪ್ ಲೈನ್ 104, ರಾಷ್ಟ್ರೀಯ ಆರೋಗ್ಯ ಸಹಾಯವಾಣಿ 1075, ಬೆಂಗಳೂರಿನವರಾದರೆ 1912 ಹೆಲ್ಪ್ ಲೈನ್ ಗೆ ಮೊಬೈಲ್ ಅಥವಾ ಲ್ಯಾಂಡ್ ಲೈನ್ ನಿಂದ ಕರೆ ಮಾಡಿ ಕೋವಿಡ್ ಸೋಂಕು ಸಂಬಂಧಿತ ಮಾಹಿತಿ ಮತ್ತು ಸಹಾಯ ಪಡೆಯಬಹುದಾಗಿದೆ.
https://covidhelplinebangalore.com/covid-19-beds-availability/ ಈ ಲಿಂಕ್ ಕ್ಲಿಕ್ ಮಾಡಿದರೆ ಬೆಂಗಳೂರಿನ ಕೋವಿಡ್ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ರಿಯಲ್ ಟೈಮ್ ಆಧಾರದಲ್ಲಿ ಹಾಸಿಗೆಗಳ ಲಭ್ಯತೆ ಬಗ್ಗೆ ಮಾಹಿತಿ ಸಿಗಲಿದೆ.