ಬೆಂಗಳೂರು : ಪಾಲಿಕೆ ವತಿಯಿಂದ ಹೆಚ್ಚು ಹೆಚ್ಚು ಟೆಸ್ಟಿಂಗ್ ಮಾಡಲಾಗುತ್ತಿದೆ. ಇದರ ಜೊತೆಗೆ ಲಸಿಕೆ ನೀಡುವ 500 ಸೈಟ್ ಗಳನ್ನು ಒಂದು ಸಾವಿರಕ್ಕೆ ಹೆಚ್ಚಿಸಲು ಕ್ರಮವಹಿಸಿ, ಪ್ರತಿ ದಿನ 1 ಲಕ್ಷ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ತಿಳಿಸಿದ್ದಾರೆ.
ನಗರದ ಆಡುಗೋಡಿ ಔಷಧಾಲಯಕ್ಕೆ ಶನಿವಾರ ಬೆಳಗ್ಗೆ ಭೇಟಿ ನೀಡಿ, ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ನೀಡುವ ಪ್ರಕ್ರಿಯೆ, ಎಷ್ಟು ಮಂದಿ ಲಸಿಕೆ ಪಡೆಯುತ್ತಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ಕೋವಿಡ್ ಲಸಿಕೆ ನೀಡಲು ಈಗಿರುವ ಸೈಟ್ ಗಳ ಜೊತೆಗೆ ಹೆಚ್ಚುವರಿಯಾಗಿ ಅಗತ್ಯವಿರುವ ಕಡೆ ಲಸಿಕಾ ಕೇಂದ್ರಗಳನ್ನು ತೆರೆದು ಹೆಚ್ಚು ವ್ಯಾಕ್ಸಿನೇಷನ್ ನೀಡಲು ಪಾಲಿಕೆ ಸಿದ್ದವಿದೆ ಎಂದು ಹೇಳಿದರು.
ಲಸಿಕೆ ಪಡೆಯುವವರಿಗೆ ಅವಶ್ಯಕವಿರುವ ಕಡೆ ವಾಹನಗಳ ವ್ಯವಸ್ಥೆಯನ್ನು ಅಯಾ ವಲಯ ಆಯುಕ್ತರ ಮಟ್ಟದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.
ಬಾಷ್ ಸಂಸ್ಥೆ ಸಹಭಾಗಿತ್ವದಲ್ಲಿ ಕೋವಿಡ್ ಆರೈಕೆ ಕೇಂದ್ರ :
ಬಾಷ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಿದ್ದು, ಅದನ್ನು ಪಾಲಿಕೆಗೆ ಪಡೆಯಲಿದೆ. ಈ ಸಂಬಂಧ ಬಾಷ್ ಸಂಸ್ಥೆ ಹಾಗೂ ಪಾಲಿಕೆ ಜೊತೆ ಚರ್ಚೆ ನಡೆಯುತ್ತಿದ್ದು, ಕೋವಿಡ್ ಆರೈಕೆ ಕೇಂದ್ರ ಪ್ರಾರಂಭಿಸಲು ಇನ್ನೆರಡು ದಿನದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು.
ನಗರದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲಾ ವಲಯಗಳಲ್ಲಿ ಸುಮಾರು 50 ಹಾಸಿಗೆ ಸಾಮರ್ಥ್ಯದ ತಲಾ 2 ಅಥವಾ 3 ಕೋವಿಡ್ ಆರೈಕೆ ಕೇಂದ್ರಗಳನ್ನು ಶೀಘ್ರವಾಗಿ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಸಣ್ಣ-ಸಣ್ಣ ಪ್ರಮಾಣದ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ಮನೆಯಲ್ಲಿ ಪ್ರತ್ಯೇಕವಾಗಿರಲು ಸಾಧ್ಯವಾಗದಂತಹ ಸೋಂಕಿತ ವ್ಯಕ್ತಿಗಳನ್ನು ಆರೈಕೆ ಕೇಂದ್ರಗಳಲ್ಲಿರಿಸಿ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗವುದು ಎಂದು ಹೇಳಿದರು.
ಕೋವಿಡ್ ಟೆಸ್ಟಿಂಗ್ ಕಾರ್ಯ ವೀಕ್ಷಣೆ :
ಮುಖ್ಯ ಆಯುಕ್ತರು, ಕೋರಮಂಗಲದ ಫೋರಂ ಮಾಲ್ ಹತ್ತಿರವಿರುವ ಅಕ್ರೊಪೊಲಿಸ್ ಅಪಾಟ್೯ಮೆಂಟ್ ನಲ್ಲಿ ಟೆಸ್ಟಿಂಗ್ ಮಾಡುತ್ತಿರುವ ಕಾರ್ಯವನ್ನು ವೀಕ್ಷಿಸಿದರು. ಜೊತೆಗೆ ಅಪಾಟ್೯ಮೆಂಟ್ ನ ಪದಾಧಿಕಾರಿಗಳೊಂದಿಗೆ ಮಾತನಾಡಿ ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಕೋರಿದರು.
ಸ್ವಾಬ್ ಕಲೆಕ್ಟರ್ ಸಿಬ್ಬಂದಿ ಅಮಾನತು:
ಯಲಹಂಕ ವಲಯದ ಕೊಡಿಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಟೆಸ್ಟಿಂಗ್ ಮಾಡದೆ ಟೆಸ್ಟಿಂಗ್ ಸಾಮಗ್ರಿಗಳನ್ನು ಭರ್ತಿ ಮಾಡುತ್ತಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ ಆಧಾರದ ಮೇಲೆ 2 ಸ್ವಾಬ್ ಕಲೆಕ್ಟರ್‌ಗಳನ್ನು ಅಮಾನತು ಮಾಡಲಾಗಿರುತ್ತದೆ. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳನ್ನು ನಿರೀಕ್ಷಣಾ ವಿಚಾರಣೆ ಬಳಿಕ ಕಡ್ಡಾಯವಾಗಿ ಅಮಾನತುಗೊಳಿಸಲು ಕ್ರಮವಹಿಸಲಾಗುವುದು ಎಂದು ಗೌರವಗುಪ್ತ ಹೇಳಿದರು.
15 ದಿನದಲ್ಲಿ ದಕ್ಷಿಣ ವಲಯದಲ್ಲಿ 5 ಲಕ್ಷ ಲಸಿಕೆ ನೀಡಿಕೆ
ಮತ್ತೊಂದೆಡೆ ಬಿಬಿಎಂಪಿಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಕೋವಿಡ್ ಸಂಬಂಧಿಸಿದಂತೆ ಕಂದಾಯ ಸಚಿವ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ದಕ್ಷಿಣ ವಲಯದ ಎಲ್ಲಾ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರು ಇದರಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ ಮಾತನಾಡಿದ ಆರ್.ಅಶೋಕ್, ದಕ್ಷಿಣ ವಲಯದಲ್ಲಿ 45 ವರ್ಷ ಮೇಲ್ಪಟ್ಟವರು ಸುಮಾರು 7.50 ಲಕ್ಷ ಮಂದಿಯಿದ್ದು, ಈಗಾಗಲೇ 2 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಉಳಿದವರಿಗೆ 10- 15 ದಿನಗಳಲ್ಲಿ ಲಸಿಕೆ ನೀಡುವ ಗುರಿಯಿದೆ. ಪಾಲಿಕೆ, ಖಾಸಗಿ ಆಸ್ಪತ್ರೆ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗ, ಸ್ವಯಂಸೇವಕರು ಹಾಗೂ ಎನ್.ಜಿ.ಒ ಗಳ ಸಹಯೋಗದೊಂದಿಗೆ ಲಸಿಕೆ ನೀಡುವ ಗುರಿ ತಲುಪಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಲಸಿಕೆ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕಿದೆ. ತಮ್ಮ ಆಸ್ಪತ್ರೆ ಯಲ್ಲಿ ಯಾವುದೇ ಸಾರ್ವಜನಿಕರು ದಾಖಲಾತಿಗೆ ಆಗಮಿಸಿದರೆ, ತಕ್ಷಣ ವೈದ್ಯೋಪಚಾರ ನೀಡಿ. ಹಾಸಿಗೆ ಇಲ್ಲವೆಂದು ಬೇರೆ ಆಸ್ಪತ್ರೆಗೆ ರೆಫರ್ ಮಾಡುವುದು ಬೇಡ. ತದನಂತರ ಸರ್ಕಾರದ ಬೆಡ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಸಂರ್ಪಕಿಸಿ ತಮ್ಮ ತೀರ್ಮಾನವನ್ನು ತಿಳಿಸಿ ಎಂದು ಖಾಸಗಿ ಆಸ್ಪತ್ರೆಯ ಮಾಲೀಕರಿಗೆ ತಿಳಿ ಹೇಳಿದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ನಗರದಲ್ಲಿ ಹಿಂದುಳಿದಿರುವ ಪ್ರದೇಶಗಳು, ಕೊಳಗೇರಿ ಪ್ರದೇಶಗಳಲ್ಲಿ ಹೆಚ್ಚು ಲಸಿಕೆ ತೆಗೆದುಕೊಳ್ಳುತ್ತಿಲ್ಲ. ಈ ಸಂಬಂಧ ಲಸಿಕೆ ಪಡೆಯುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು. ಆಟೋರಿಕ್ಷಾಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಅದೇ ರೀತಿ ಸಭೆಯಲ್ಲಿ ಹಾಜರಿದ್ದ ವಿಜಯನಗರ, ಬಸವನಗುಡಿ, ಚಿಕ್ಕಪೇಟೆ ಕ್ಷೇತ್ರ ಹಾಗೂ ದಕ್ಷಿಣ ವಲಯದ ಎಲ್ಲಾ ಶಾಸಕರುಗಳು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರ ಹಾಗೂ ಲಸಿಕಾ ಕೇಂದ್ರಗಳನ್ನು ತೆರೆಯಲು ಸಹಕರಿಸುವುದಾಗಿ ಭರವಸೆ ನೀಡಿದರು.