ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ (ಎಂಇಜಿ) ಯೋಧ ಸುಬೇದಾರ್ ವಿಷ್ಣು ಶರವಣನ್ 2021 ರಲ್ಲಿ ನಡೆಯುವ ಟೊಕಿಯೋ- 2020 ಒಲಂಪಿಕ್ಸ್ ಲೇಸರ್ ಸ್ಟಾಂಡರ್ಡ್ ವಿಭಾಗದಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಿದ್ದಾರೆ.
ವಿಷ್ಣು ಈತನಕದ ಕ್ರೀಡಾ ಇತಿಹಾಸವನ್ನು ಗಮನಸಿದರೆ ಭಾರತಕ್ಕೆ ಒಲಂಪಿಕ್ಸ್ ನಲ್ಲಿ ಪದಕ ತಂದು ಕೊಡುವ ನಿರೀಕ್ಷೆ ಹೆಚ್ಚಿಸಿದೆ. ಟೊಕಿಯೊ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆಯಲು ವಿಷ್ಣು, ಯೂರೋಪ್ ನ ಮಾಲ್ಟಾದಲ್ಲಿನ ಸೈಲ್ ಕೋಚ್ ಅಕಾಡೆಮಿಯಲ್ಲಿ ವೈಯುಕ್ತಿಕ ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ತರಬೇತಿ ಪಡೆದಿದ್ದಾರೆ.
ಅಲ್ಲದೆ ಏಪ್ರಿಲ್ 1 ರಿಂದ 8 ರ ತನಕ ಓಮನ್ ನ ಮುಸಾನ್ ನಲ್ಲಿ ನಡೆದ (ಏಷ್ಯನ್ ಮತ್ತು ಆಫ್ರಿಕ ಒಲಂಪಿಕ್ ಕ್ವಾಲಿಫೈಯರ್ ಇವೆಂಟ್) ಮುಸಾನ್ ಸೈಲಿಂಗ್ ಚಾಂಪಿಯನ್ ಶಿಪ್‌ನಲ್ಲಿ, ಒಲಂಪಿಕ್ಸ್ ಅರ್ಹತೆ ಪಡೆಯಲು ಸುಬೇದಾರ್ ವಿಷ್ಣು ಇದರಲ್ಲಿ ಪಾಲ್ಗೊಂಡಿದ್ದರು.
ಸುಬೇದಾರ್ ವಿಷ್ಣು ಶರವಣನ್ 2015ರಲ್ಲಿ ಎಂಇಜಿ ಮತ್ತು ಕೇಂದ್ರದ ಬಾಲಕರ ಕ್ರೀಡಾ ಸಂಸ್ಥೆಯಲ್ಲಿ ಬಾಯ್ಸ್ ಸ್ಪೋರ್ಟ್ಸ್ ಕೆಡೆಟ್ ಆಗಿ ನೋಂದಾಯಿಸಿಕೊಂಡಿದ್ದರು. ಶರವಣನ್ ತಂದೆ ಮದ್ರಾಸ್ ಸ್ಯಾಪರ್ಸ್ ನಲ್ಲಿ ನಾವಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶರವಣನ್ ಅವರ ದೃಢಸಂಕಲ್ಪ ಹಾಗೂ ಎಂಇಜಿ ಸಂಸ್ಥೆಯ ಬೆಂಬಲದಿಂದಾಗಿ ಎಂಇಜಿಗೆ ಸೇರ್ಪಡೆಯಾದ ಕೆಲವು ಸಮಯದಲ್ಲೇ ಇವರು ಜ್ಯೂನಿಯರ್ ನ್ಯಾಷನಲ್ ಹಾಗೂ ರಾಷ್ಟ್ರೀಯ ಯುವ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಹಾಂಗ್ ಕಾಂಗ್ ಸೈಲಿಂಗ್ ವೀಕ್ -2016 ರ ವೈಯುಕ್ತಿಕವಾಗಿ ಸ್ಪರ್ಧಿಸಿ ಲೇಸರ್ ಕ್ಲಾಸ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ಹಂತ ಹಂತವಾಗಿ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಾ ಸಾಗಿದರು. ಸುಬೇದಾರ್ ಶರವಣನ್ ಟಾಪ್-3 ಆಗಿ ಗುರಿ ತಲುಪುವ 13 ಮಂದಿ ಸ್ಪರ್ಧಿಗಳೊಂದಿಗೆ ಈತನಕ 30 ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದಾರೆ.
ಇದಲ್ಲದೆ ಹಿರಿಯರ ಹಾಗೂ ಯುವ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಆಡಿ ಎಲ್ಲ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಸುಬೇದಾರ್ ಅತ್ಯುತ್ತಮ ಪ್ರದರ್ಶನದಿಂದಾಗಿ 2017ರಲ್ಲಿ ಎಂಇಜಿಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (ನಯಿಬ್ ಸುಬೇದಾರ್) ಆದರು.
2018ರಲ್ಲಿ ಹಿರಿಯರ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗಳಿಸಿದರು. ಇದಾದ ಬಳಿಕ ಅವರು ಹಲವು ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. 2019 ರಲ್ಲಿ ಯೂರೋಪ್ ನ ಕ್ರೊಯೆಷಿಯಾದಲ್ಲಿ ನಡೆದ ಲೇಸರ್ ಯೂತ್ ವಿಭಾಗದ 21ರ ವಯೋಮಾನದ ಒಳಗಿನವರ ವರ್ಲ್ಡ್ ಸೈಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅಂಡರ್-21 ಚಾಂಪಿಯನ್ ಶಿಪ್ ನಲ್ಲಿ 41 ದೇಶಗಳ ಒಟ್ಟು 144 ನಾವಿಕರು ಸ್ಪರ್ಧಿಸಿದ್ದರು.