ಬೆಂಗಳೂರು : ಬೆಂಗಳೂರಿನ ಸೆರಗಿನ ಅಂಚಿನಲ್ಲಿರುವ ಕಂಬೀಪುರ ಹಳ್ಳಿ ಅಕ್ಷರಶಃ ಜಲ ಮತ್ತು ವಾಯುಮಾಲಿನ್ಯದ ಹೆಡ್ ಕ್ವಾಟರ್ ಆದಂತಾಗಿದೆ.
ಅಲ್ಲಿನ ಅನಧಿಕೃತ ಪ್ಲಾಸ್ಟಿಕ್ ಕೈಗಾರಿಕೆಗಳಿಂದ ವೃಷಭಾವತಿ ನದಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ವಾಸಿಸುವ ಜನರು ಶ್ವಾಸಕೋಶ ತೊಂದರೆಯಿಂದ ಬಳಲಿ ಬಳಲಿ ಹೈರಾಣಾಗಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕು ಕುಂಬಲಗೋಡು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಂಬಿಪುರದಲ್ಲಿ 10 ಸಾವಿರ ಜನಸಂಖ್ಯೆಯಿದೆ. ಇಂತಹ ಪ್ರದೇಶದಲ್ಲಿ ಅವ್ಯಾಹತವಾಗಿ ತ್ಯಾಜ್ಯ ಪ್ಲಾಸ್ಟಿಕ್ ಗಳನ್ನು ಬೇರ್ಪಡಿಸುವ, ಪುನರ್ಬಳಕೆ ಮಾಡುವ, ಪ್ಲಾಸ್ಟಿಕ್ ಕರಗಿಸುವುದು, ಡೈಯಿಂಗ್ ಮಾಡಲಾಗುತ್ತಿದೆ. ಹಾಗೂ ಅಕ್ರಮವಾಗಿ ಸುಡಲಾಗುತ್ತಿದೆ. ನಂತರ ಆ ಸುಟ್ಟ ತ್ಯಾಜ್ಯವನ್ನು ನದಿಗೆ ಸುರಿಯಲಾಗುತ್ತಿದೆ.
ಈ ಬಗ್ಗೆ ಕಳೆದ 2 ವರ್ಷಗಳಿಂದ ಗುಡ್ ಅರ್ಥ್ ಮಲ್ಹಾರ್ ನಿವಾಸಿಗಳ ಒಕ್ಕೂಟ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಪರಿಸರ ಇಲಾಖೆ, ಗ್ರಾಮಪಂಚಾಯ್ತಿ, ಕುಂಬಲಗೋಡು ಪೊಲೀಸ್ ಠಾಣೆ, ತಾಲೂಕು ಪಂಚಾಯ್ತಿಗೆ ದೂರು ನೀಡಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕ್ರಮ ಪ್ಲಾಸ್ಟಿಕ್ ಸುಡುವಿಕೆ, ರಾಸಾಯನಿಕ ಫ್ಯಾಕ್ಟರಿಗಳು ವೃಷಭಾವತಿ ನದಿಗೆ ತ್ಯಾಜ್ಯ ಸುರಿಯುವುದು, ನದಿ ಮೀಸಲು ಪ್ರದೇಶ ಒತ್ತುವರಿ ಮಾಡುವ ಕೆಲಸ ಮುಂದುವರೆದಿದೆ.
ಹೀಗಾಗಿ ಮಳೆಗಾಲದ ಸಮಯದಲ್ಲಿ ವೃಷಭಾವತಿ ನದಿ ಪಾತ್ರದಲ್ಲಿ ಒತ್ತುವರಿ ಸಮಸ್ಯೆಯಿಂದ ನೀರು ಸರಾಗವಾಗಿ ಹರಿಯದೆ ಪ್ರವಾಹ ಸಂಭವಿಸುತ್ತಿದೆ.
ಕರೋನಾ ಸೋಂಕಿರಲಿ ಇಲ್ಲಿ ಸಂಜೆ ಮತ್ತು ತಡರಾತ್ರಿ ಸುಡುವ ಪ್ಲಾಸ್ಟಿಕ್‌ನಿಂದ ಬರುವ ವಿಷಕಾರಿ ಹೊಗೆಯಿಂದ ಕಂಬಿಪುರದ ಸುತ್ತಮುತ್ತಲಿನ ಜನರಿಗೆ ಇದೇ ದೊಡ್ಡ ಸಮಸ್ಯೆಯಾಗಿದೆ. “ಹೊಗೆ ಕಾಟ ಒಂದು ಕಡೆಯಾದರೆ ಕೆಮಿಕಲ್ ಫ್ಯಾಕ್ಟರಿಯ ಅಪಾಯಕಾರಿ ತ್ಯಾಜ್ಯ ದ್ರವವನ್ನು ರಾತ್ರೋ ರಾತ್ರಿ ಇಲ್ಲಿನ ವೃಷಭಾವತಿ ನದಿಗೆ ತಂದು ಸುರಿಯುತ್ತಿದ್ದಾರೆ. ಇದರಿಂದ ಇಲ್ಲಿನ ಪರಿಸರ ಹದಗೆಟ್ಟಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಹೇಳುತ್ತಾರೆ ಗುಡ್ ಅರ್ಥ್ ಮಲ್ಹಾರ್ ನಿವಾಸಿಗಳ ಒಕ್ಕೂಟದ ದೀಪಾ.
ಹೀಗಾಗಿ ಭೂಮಿಯ ಒಡಲಿಗೆ ವಿಷಕಾರಿ ತ್ಯಾಜ್ಯ ಸೇರಿ ಇಲ್ಲಿನ ಪರಿಸರ ದಿನೇ ದಿನೇ ಹಾಳಾಗುತ್ತಿದೆ. ಹೊಗೆ- ರಾಸಾಯನಿಕ ತ್ಯಾಜ್ಯ ಸುರಿಯುತ್ತಿರುವುದರಿಂದ ಇಲ್ಲಿ ವಾಸಿಸುತ್ತಿದ್ದ ವನ್ಯ ಪ್ರಾಣಿ ಪಕ್ಷಿ- ಹಾವುಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.
ಅಕ್ರಮ ಪ್ಲಾಸ್ಟಿಕ್ ಕಾರ್ಖಾನೆಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದಿರಾ ಅಂತ ಬೆಂಗಳೂರು ವೈರ್ ಕುಂಬಲಗೋಡು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಸವರಾಜ್ ಅವರನ್ನ ದೂರವಾಣಿ ಕರೆ ಮಾಡಿ ಪ್ರಶ್ನಿಸಿದರೆ, “ನಾನು ಕರೋನಾ ಕ್ವಾರಂಟೈನ್ ನಲ್ಲಿದಿನಿ” ಅಂತಷ್ಟೆ ಹೇಳಿ ಕರೆ ಕಡಿತ ಮಾಡಿದರು.
ಗುಡ್ ಅರ್ಥ್ ಮಲ್ಹಾರ್ ನಿವಾಸಿಗಳ ಒಕ್ಕೂಟ ಶುಕ್ರವಾರ ಕುಂಬಲಗೋಡು ಗ್ರಾಮಪಂಚಾಯ್ತಿ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ಪರಿಸರ ಅಧಿಕಾರಿಗಳು, ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಪೊಲೀಸ್ ಅಧಿಕಾರಿಗಳು ಹಾಗೂ ಒಕ್ಕೂಟದ ಪ್ರತಿನಿಧಿಗಳು ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ತ್ಯಾಜ್ಯ ತಂದು ಸುರಿಯುವ ಲಾರಿಗಳನ್ನು ನಿಯಂತ್ರಿಸುವ ಬಗ್ಗೆ, ಪ್ಲಾಸ್ಟಿಕ್ ತ್ಯಾಜ್ಯ ಸುರಿಯದಂತೆ ತಡೆಯುವ ಕುರಿತು, ವೃಷಭಾವತಿ ನದಿ ಪ್ರದೇಶದ ಆಯಕಟ್ಟಿನ ಸ್ಥಳದಲ್ಲಿ ಸಿಸಿಟಿವಿ ಅಳವಡಿಸುವಿಕೆ, ತ್ಯಾಜ್ಯ ಸುಡಲು ಅವಕಾಶ ನೀಡುವ ಜಮೀನು ಮಾಲೀಕರಿಗೆ ನೋಟಿಸ್ ನೀಡುವುದು ಸೇರಿದಂತೆ ಕೆಲವು ಪ್ರಮುಖ ನಿರ್ಣಯ ಕೈಗೊಂಡಿದ್ದಾರೆ. ಏಪ್ರಿಲ್ 17 ರಂದು ಈ ಸಂಬಂಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಒಟ್ಟಾರೆ ಕಂಬಿಪುರದ ನಿವಾಸಿಗಳ ಮಾಲಿನ್ಯದ ಗೋಳಿಗೆ ಸರ್ಕಾರ, ಸ್ಥಳೀಯ ಸಂಸ್ಥೆಗಳು ಇತಿಶ್ರೀ ಹಾಡಬೇಕಾಗಿದೆ ಎಂದು ನಾಗರೀಕರು ಅಭಿಪ್ರಾಯಪಟ್ಟಿದ್ದಾರೆ.