ಬೆಂಗಳೂರು : ರಾಜ್ಯದ ಎಲ್ಲ ಸಾರಿಗೆ ನಿಗಮಗಳ ನೌಕರರು ತಮ್ಮ ವಿವಿಧ ಬೇಡಿಕೆ ಏರಿಕೆಗಳಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿವೆ. ಇನ್ನೊಂದೆಡೆ ಬಸ್ ಪ್ರಯಾಣಿಕರ ವೇದಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಾರಿಗೆ ಸಚಿವರಿಗೆ, ಮುಷ್ಕರಕ್ಕೆ ಕಾರಣವಾದ ಅಂಶಗಳು ಮತ್ತು ಮುಷ್ಕರದಿಂದ ಆಗುವ ಸಮಸ್ಯೆ, ಅದಿಕ್ಕೆ ಇರುವ ಪರಿಹಾರಗಳನ್ನು ವಿವರಿಸಿ ಬಹಿರಂಗ ಪತ್ರವನ್ನು ಬರೆದಿದೆ.
ಅದರ ಮುಖ್ಯಾಂಶಗಳು ಹೀಗಿದೆ ;
- ಇಂದು ರಾಜ್ಯಾದ್ಯಂತ ಸಾಮಾನ್ಯ ಜನರು ತಮ್ಮ ದುಡಿಮೆಗಾಗಿ, ಶಿಕ್ಷಣಕ್ಕಾಗಿ, ಅಥವಾ ಒಟ್ಟಾರೆ ತಮ್ಮ ಚಲನವಲನಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಸಂಪೂರ್ಣವಾಗಿ ಅವಲಂಬಿಸಿದ್ದಾರೆ. ಅದರಲ್ಲೂ ಬೆಂಗಳೂರಿನಂತಹ ಮಹಾ ನಗರದಲ್ಲಿ ವಿದ್ಯಾರ್ಥಿಗಳು , ದುಡಿಯುವ ಜನರು, ಬಡವರು, ಕೂಲಿಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು , ಗೃಹ ಕಾರ್ಮಿಕರು , ಬೀದಿ ವ್ಯಾಪಾರಿಗಳು ಹೀಗೆ ಲಕ್ಷಾಂತರ ಜನ ಎಲ್ಲರೂ ತಮ್ಮ ಜೀವನೋಪಾಯಕ್ಕಾಗಿ ಬಸ್ ವ್ಯವಸ್ಥೆಯನ್ನೇ ಅವಲಂಬಿಸಿದ್ದಾರೆ. ಈ ಸಾರಿಗೆ ಸಂಸ್ಥೆಗಳು ರಾಜ್ಯದ ಜೀವನಾಡಿ ಆಗಿವೆ. ಜನ ಸಾಮಾನ್ಯರಿಗೆ ಅತಿ ಮುಖ್ಯವಾದ ಈ ಸಂಸ್ಥೆಗಳನ್ನು ಹಾಗು ಅದರ ಕಾರ್ಮಿಕರ ಹಿತದೃಷ್ಟಿಯನ್ನು ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ.
- ಸಾರಿಗೆ ಸಂಸ್ಥೆಯ ನೌಕರರು ತಮ್ಮ ಬಳಿ ಕೇಳಿಕೊಂಡಿರುವ ಬೇಡಿಕೆಗಳನ್ನು ಪರಿಶೀಲಿಸಿ, ಅದನ್ನು ಈಡೇರಿಸುವುದು ಸರ್ಕಾರದ ಆದ್ಯತೆಯಾಗಬೇಕು. ಕೋವಿಡ್ ಸಮಯದಲ್ಲೂ , ಜೀವ ಭಯವಿಲ್ಲದೆ ಈ ಸಂಸ್ಥೆಗಳ ಕಾರ್ಮಿಕರು ರಾಜ್ಯಕ್ಕೆ ಸೇವೆ ಸಲ್ಲಿಸಿದ್ದಾರೆ. ದಿನೇ ದಿನೇ ಅಗತ್ಯ ವಸ್ತುಗಳ ಬೆಳೆಗಳು ಗಗನಕ್ಕೆ ಏರುತ್ತಿದೆ , ಆದರೂ ನ್ಯಾಯುತವಾಗಿ ಏರಬೇಕಿದ್ದ ಅವರ ವೇತನ ಏರಿಲ್ಲ . ಕಾರ್ಮಿಕರಿಗೆ ಅತಿ ಹೆಚ್ಚು ಕಿರುಕುಳ ಉಳ್ಳ ಈ ಸಂಸ್ಥೆಗಳಲ್ಲಿ , ಕಳೆದ ಮುಷ್ಕರದ ನಂತರವೂ , ಈ ಕಿರುಕುಳವನ್ನು ತಪ್ಪಿಸಲು ಕಾರ್ಮಿಕ ಸ್ನೇಹಿ ವ್ಯವಸ್ಥೆ ಅಥವಾ ನಿಯಮಗಳು ಬಂದಿಲ್ಲ . ಆದ್ದರಿಂದ ಸಾರಿಗೆ ನೌಕರರ ವೇತನ, ಕಿರುಕುಳಮುಕ್ತ ವಾತಾವರಣ, ಹಾಗೂ ಸೌಲಭ್ಯಗಳಂತಹ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತಕ್ಷಣವೇ ಕ್ರಮ ಕೈ ಗೊಳ್ಳಬೇಕು.
- ಸಾರಿಗೆ ನೌಕರರ ಮುಷ್ಕರವನ್ನು ನೆಪವಾಗಿಟ್ಟುಕೊಂಡು ರಾಜ್ಯದ ಹೆಮ್ಮೆಯ 4 ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಯಾವುದೇ ಪ್ರಯತ್ನಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಮುಷ್ಕರದ ಸಮಯದಲ್ಲಿ ಖಾಸಗಿ ವಾಹನಗಿಗಳಿಗೆ ಪರ್ಮಿಟ್ ಕೊಡಲು ಹೊರಟಿರುವುದು ಖಾಸಗೀಕರಣಕ್ಕೆ ಮತ್ತೊಂದು ದಾರಿಯಷ್ಟೇ .
ಈಗಾಗಲೇ ತಮ್ಮ ಸರ್ಕಾರ 1,500 ಬಸ್‍ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಮುಂದಾಗಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಸರ್ಕಾರ ಕಳೆದ ವರ್ಷವೇ 1,500 ಬಸ್ ಕೊಳ್ಳುವುದಾಗಿ ಪ್ರಸ್ತಾಪಿಸಿದ್ದು ಈಗ ಅದನ್ನು ಕೈ ಬಿಟ್ಟು 1,500 ಬಸ್ ಗಳನ್ನೂ ಖಾಸಗಿ ಕಂಪನಿಗಳಿಂದ ಗುತ್ತಿಗೆ ತೆಗೆದುಕೊಳ್ಳುವದಕ್ಕೆ ಟೆಂಡರ್ ಕರೆದಿದ್ದೀರಿ (ಅದರಲ್ಲೂ ಈ ಯೋಜನೆಯಲ್ಲಿ ವಾಹನ ಚಾಲಕರು ಖಾಸಗಿ ಕಂಪನಿ ಕಡೆಯಿಂದ ಬರುತ್ತಾರೆ). ಇದನ್ನು ಕೈ ಬಿಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕಾರ್ಮಿಕ ಮುಷ್ಕರ ಪರಿಸ್ಥಿತಿಗೆ ಮೂಲ ಕಾರಣ ಏನು?
ಇಂದಿನ ಸಮಸ್ಯೆಗೆ ಮತ್ತೊಂದು ಮೂಲ ಕಾರಣ ಇಲ್ಲಿಯ ತನಕ ಎಲ್ಲಾ ಸರ್ಕಾರಗಳು ಬಸ್ ಪ್ರಯಾಣಿಕರನ್ನು ಹಾಗು ಸಾರಿಗೆ ಸಂಸ್ಥೆಗಳನ್ನು ಕಡೆಗಣಿಸುವುದು . ಉದಾಹರಣೆಗೆ ನಗರದ ಶ್ರೀಮಂತರು ಸುಗಮವಾಗಿ ಖಾಸಗಿ ವಾಹನಗಳಲ್ಲಿ ಓಡಾಡಲು ವರ್ತುಲ ರಸ್ತೆ, ಫ್ಲೈ ಓವರ್ , ಎಲಿವೇಟೆಡ್ ಕಾರಿಡಾರ್ – ಇವುಗಳಿಗೆಲ್ಲ ಸಾವಿರಾರು ಕೋಟಿ ಖರ್ಚು ಮಾಡುವ ಸರ್ಕಾರ 20 ಲಕ್ಷಕ್ಕೂ ಹೆಚ್ಚು (ಕೋವಿಡ್ ಗೆ ಮುನ್ನ 38 ಲಕ್ಷ) ಜನ ಕರೆದೊಯ್ಯುವ ಬಿ.ಎಂ.ಟಿ.ಸಿ. ಗೆ ಹಣ ಹೂಡಿಕೆ ಮಾಡಲು ಹಿಂದೇಟು ಹಾಕುವುದು ಏಕೆ ?
1.5 ಲಕ್ಷ (ಕೋವಿಡ್ ಗೆ ಮುನ್ನ 5 ಲಕ್ಷ ) ಜನ ಒದಾಡುವ ಮೆಟ್ರೋಗೆ ಸಾವಿರಾರು ಕೋಟಿ ಖರ್ಚು ಮಾಡುತ್ತೀರಿ , ಬಿ.ಎಂ.ಟಿ.ಸಿ ತನ್ನ ಪುನರುಜ್ಜೀವನಕ್ಕಾಗಿ 700 ಕೋಟಿ ಕೇಳಿದರೆ , ವಿದೇಶಿ ಬ್ಯಾಂಕ್ ಗಳಿಂದ ಸಾಲ ಪಡೆಯಲು ಹೇಳುತ್ತೀರಿ.
ಬಸ್ ವ್ಯವಸ್ಥೆ , ಸಾರಿಗೆ ನೌಕರರು ಹಾಗು ಬಸ್ ಪ್ರಯಾಣಿಕರನ್ನು ದಯವಿಟ್ಟು ಕಡೆಗಣಿಸಬೇಡಿ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಿ. ಜನಸಾಮಾನ್ಯರ ಸಂಚರಿಸುವ ಹಕ್ಕನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಜೊತೆಗೆ ಸಾರಿಗೆ ನೌಕರರ ತೊಂದರೆಗಳನ್ನು ಪರಿಹರಿಸಿ, ಅವರ ಬೇಡಿಕೆಗಳನ್ನು ಈಡೇರಿಸುವುದೂ ಸರ್ಕಾರದ ಹೊಣೆಗಾರಿಕೆಯಾಗಿದೆ.
ಸಾರಿಗೆ ಸಂಸ್ಥೆಯ ಎಲ್ಲಾ ಕಾರ್ಮಿಕ ಸಂಘಟನೆಗಳನ್ನು ಕರೆದು , ಪಾರದರ್ಶಕವಾಗಿ , ಪ್ರಜಾತಾಂತ್ರಿಕವಾಗಿ ಚರ್ಚೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ , ಅವರ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಿ . ಈ ಸಂದರ್ಭದ ಲಾಭ ಪಡೆದು ಸಾರಿಗೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಯೋಚನೆಯನ್ನು ಕೈ ಬಿಡಬೇಕೆಂದು, ಬೆಂಗಳೂರಿನ ಜನಸಾಮಾನ್ಯರಾದ ನಾವು ಈ ಮೂಲಕ ತಮ್ಮಲ್ಲಿ ಆಗ್ರಹಿಸುತ್ತಿದ್ದೇವೆ” ಎಂದು ಬಹಿರಂಗ ಪತ್ರದಲ್ಲಿ ತಿಳಿಸಲಾಗಿದೆ.
‘ಈ ಮನವಿಗೆ ಹಲವಾರು ಸಂಘಟನೆಗಳು ಹಾಗು ಆನ್ ಲೈನ್ ನಲ್ಲಿ ೧೫೦ಕ್ಕೂ ಹೆಚ್ಚು ಜನ ಸಹಿ ಹಾಕಿದ್ದಾರೆ .
ಇದರ ಬಗ್ಗೆ ತಾವು ಈ ತಕ್ಷಣ ಗಮನ ಕೊಟ್ಟು , ಬಸ್ ಪ್ರಯಾಣಿಕರ ಹಿತಕ್ಕಾಗಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುವುದಾಗಿ’ ಬಸ್ ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.