ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಸ್ಸನ್ನೆ ನಂಬಿಕೊಂಡು ದೈನಂದಿನ ಕೆಲಸ ಕಾರ್ಯಗಳಿಗೆ ಹೋಗುವವರು ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಉತ್ತಮ. ಏಕೆಂದರೆ ಆರನೇ ವೇತನ ಆಯೋಗದ ರೀತಿ ವೇತನ ಪರಿಷ್ಕರಣೆ ಸೇರಿದಂತೆ 9 ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯಾದ್ಯಂತ ಸಾರಿಗೆ ನೌಕರರು ಬುಧವಾರದಿಂದ (ಏ.7) ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ.
ಈ ಹಿನ್ನಲೆಯಲ್ಲಿ ಸರ್ಕಾರ ಮತ್ತು ಸಾರಿಗೆ ನಿಗಮಗಳು ಖಾಸಗಿ ಬಸ್, ಮೆಟ್ರೋ ನಿಗಮ, ಖಾಸಗಿ ಆಟೋ-ಕ್ಯಾಬ್ ಗಳ ಸಂಘಟನೆಗಳ ಜೊತೆ ಮಾತನಾಡಿದ್ದು, ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಂಡಿದ್ದರೂ ಸಾರ್ವಜನಿಕರ ದೈನಂದಿನ ಸುಗಮ ಓಡಾಟಕ್ಕೆ ಹೊಡೆತ ಬೀಳುವ ಸಾಧ್ಯತೆಯಿದೆ.
ಏಕೆಂದರೆ ರಾಜ್ಯಾದ್ಯಂತ ವಿವಿಧ ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1.40 ಲಕ್ಷ ಸಾರಿಗೆ ನೌಕರರ ಪೈಕಿ ಬಹುತೇಕ ಸಿಬ್ಬಂದಿ ಏ.7 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. 2020ರ ಡಿಸೆಂಬರ್ ನಲ್ಲಿ ಕರೋನಾ ಸಂಕಷ್ಟದ ಸಂದರ್ಭದಲ್ಲೂ 4 ದಿನ ಬಸ್ ಗಳನ್ನು ನಿಲ್ಲಿಸಿ ಸರ್ಕಾರಕ್ಕೆ 9 ವಿವಿಧ ಬೇಡಿಕೆಗಳನ್ನು ಇಟ್ಟಿದ್ದರು.
ಆ 9 ಬೇಡಿಕೆಗಳು ಯಾವುವು?
ಸಾರಿಗೆ ನೌಕರರಿಗೆ ಆರೋಗ್ಯ ವಿಮೆ, ಕೋವಿಡ್ ನಿಂದ ಸತ್ತ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ, ಅಂತರ್ ನಿಗಮ ವರ್ಗಾವಣೆ, ತರಬೇತಿ ನೌಕರರ ಅವಧಿ 2 ವರ್ಷದ ಬದಲು 1 ವರ್ಷಕ್ಕೆ ಇಳಿಕೆ ಮಾಡಬೇಕು, ಸಾರಿಗೆ ನಿಗಮಗಳಲ್ಲಿ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ಜಾರಿಗೆ ತರಬೇಕು, ನಿಗಮದ ನೌಕರರ ಮೇಲೆ ಕಿರುಕುಳ ತಪ್ಪಿಸಲು ಆಡಳಿತ ವ್ಯವಸ್ಥೆ ಬದಲಾಯಿಸಬೇಕು ಹಾಗೂ ಬಹು ಮುಖ್ಯವಾಗಿ 6ನೇ ವೇತನ ಆಯೋಗದ ರೀತಿ ಸಮಾನ ವೇತನ ಜಾರಿಗೆ ತರಬೇಕು ಎಂದು ಸಾರಿಗೆ ನಿಗಮದ ನೌಕರರು ಪಟ್ಟು ಹಿಡಿದು ಈ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ರಾಜ್ಯ ಸರ್ಕಾರ ಈ ಬಹುತೇಕ ಬೇಡಿಕೆಗಳನ್ನು ಈಡೇರಿಸಿದೆ ಎಂದು ಹೇಳಿದೆ.
ಆದರೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ನಿಗಮದ ನೌಕರರ ಬೇಡಿಕೆ ಈಡೇರಿಕೆ ಬಗ್ಗೆ ಸರ್ಕಾರಕ್ಕೆ ಮೂರ್ಲಾಲ್ಕು ಬಾರಿ ಮನವಿ ಮಾಡಿದ್ದರೂ ಅದಕ್ಕೆ ಸೂಕ್ತ ಸ್ಪಂದಿಸಿಲ್ಲ. ಹೀಗಾಗಿ ಸಾರಿಗೆ ನಿಗಮಗಳ ಬಸ್ ಓಡಾಟವನ್ನು ಸ್ಥಗಿತಗೊಳಿಸಿ ಮುಷ್ಕರ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಎಸ್ಮಾ ಜಾರಿ ಅಸ್ತ್ರ ಪ್ರಯೋಗಕ್ಕೆ ಮುಂದಾದ ಸರ್ಕಾರ
ಸಾರಿಗೆ ನಿಗಮದ ನೌಕರರ ಬೇಡಿಕೆಗಳನ್ನು ಸಂಧಾನ ಮುಖಾಂತರ ಈಡೇರಿಸುವ ಬದಲು, ಸರ್ಕಾರ ಮುಷ್ಕರದಲ್ಲಿ ನಿರತರಾಗುವ ನೌಕರರ ಮೇಲೆ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್ ಡಿಎಂಎ) ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಇನ್ನೊಂದೆಡೆ ಚುನಾವಣಾ ಆಯೋಗದ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ ಅದಾದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದೆ. ಆದರೂ ಸಾರಿಗೆ ನಿಗಮದ ಸಾವಿರಾರು ನೌಕರರು ತಮ್ಮ ಮೇಲೆ ಏನೇ ಕ್ರಮ ಕೈಗೊಂಡರು ಮುಷ್ಕರ ಕೈಬಿಡುವ ಮಾತೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭವಾಗುವ ಹಿನ್ನಲೆಯಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ಸಾರಿಗೆ ನೌಕರರು ಕೆಲಸಕ್ಕೆ ಗೈರು ಹಾಜರಾಗಿದ್ದರು. ಹೀಗಾಗಿ ಬೆಂಗಳೂರಿನ ಕೆಲವು ಡಿಪೋ, ಬಸ್ ನಿಲ್ದಾಣಗಳಲ್ಲಿ ಬಿಎಂಟಿಸಿ ಬಸ್ ಗಳಿಲ್ಲದೆ ಜನರು ಪರದಾಡುತ್ತಿದ್ದರು. ಈ ಬಾರಿ ಏ.7ರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮೊದಲು ಮುಷ್ಕರ ಪೂರ್ವ ಪ್ರತಿಭಟನಾ ಸಪ್ತಾಹದಲ್ಲಿ ಸಾರಿಗೆ ನೌಕರರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಣೆ, ಬಚ್ಚಿ-ಬೋಂಡಾ ತಯಾರಿಸಿ ಮಾರಾಟ, ಮಾನವ ಸರಪಳಿ ನಿರ್ಮಿಸಿ ಭಿತ್ತಿಪತ್ರ ಪ್ರದರ್ಶನ ಹಾಗೂ ಕರಪತ್ರ ಹಂಚಿಕೆ ಚಳವಳಿ ನಡೆಸಿದ್ದರು.
ಪರ್ಯಾಯ ವ್ಯವಸ್ಥೆ ಕಲ್ಪಿಸಿದ ರಾಜ್ಯ ಸರ್ಕಾರ
ಬುಧವಾರದಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರದ ಬಿಸಿ ಸಾಮಾನ್ಯ ಬಸ್ ಪ್ರಯಾಣಿಕರಿಗೆ ಅಷ್ಟಾಗಿ ಬಾಧಿಸದಂತೆ ನಿಯಂತ್ರಿಸಲು ಸರ್ಕಾರ ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ರಾಜ್ಯದಲ್ಲಿ 7 ಸಾವಿರ ಖಾಸಗಿ ಬಸ್ ಹಾಗೂ 2 ಸಾವಿರ ಸ್ಕೂಲ್ ಬಸ್ ಗಳನ್ನು ಈ ಅವಧಿಯಲ್ಲಿ ಪರ್ಮಿಟ್ ಇಲ್ಲದಿದ್ದರೂ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಟ್ಯಾಕ್ಸಿ, ಕ್ಯಾಬ್ ಸಂಘಟನೆಗಳೊಂದಿಗೆ ಈ ಸಂಬಂಧ ಮಾತುಕತೆ ನಡೆಸಿದೆ. ಹೆಚ್ಚುವರಿ ರೈಲು ಸಂಚಾರಕ್ಕೂ ರೈಲ್ವೆ ಇಲಾಖೆಗೆ ಮನವಿ ಮಾಡಿದೆ.
5 ನಿಮಿಷಕ್ಕೊಂದು ಮೆಟ್ರೊ ರೈಲು
ಬೆಂಗಳೂರಿನ ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಪ್ರತಿದಿನ ಒಟ್ಟು 248 ಟ್ರಿಪ್ ರೈಲು ಸಂಚಾರವಿರುತ್ತದೆ. ಬೆಳಗ್ಗೆ ಹಾಗೂ ಸಂಜೆ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚಾರ ಮಾಡುತ್ತಿತ್ತು. ಮಧ್ಯಾಹ್ನದ ವೇಳೆ 10 ನಿಮಿಷಕ್ಕೊಂದು ರೈಲು ಸಂಚಾರ ಸೇವೆ ನೀಡುತ್ತಿತ್ತು. ಆದ್ರೆ ಬಸ್ ಮುಷ್ಕರದ ಹಿನ್ನಲೆಯಲ್ಲಿ ಬೆಳಗ್ಗೆ 7 ರಿಂದ ರಾತ್ರಿ 9ರ ತನಕ 5 ನಿಮಿಷಕ್ಕೊಂದು ಮೆಟ್ರೊ ರೈಲು ಸಂಚಾರ ಲಭ್ಯವಿರಲಿದೆ ಎಂದು ಹೇಳಿದ್ದಾರೆ ಮೆಟ್ರೊ ನಿಗಮದ ಆಪರೇಷನ್ ವಿಭಾಗದ ಕಾರ್ಯಕಾರಿ ನಿರ್ದೇಶಕ ಶಂಕರ್.
ಸಾರಿಗೆ ನಿಗಮಗಳ ವಸ್ತುಸ್ಥಿತಿ ತೆರೆದಿಟ್ಟಿದ್ದ ಸಾರಿಗೆ ಸಚಿವ
ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಾರಿಗೆ ಸಚಿವ ಲಕ್ಷಣ ಸವದಿ, ‘ಮೇ.4ರ ನಂತರ ವೇತನ ಹೆಚ್ಚಳ ಮಾಡುತ್ತೇವೆ ಎಂಬ ಬಗ್ಗೆ ಸ್ಪಷ್ಟ ಭರವಸೆ ನೀಡುತ್ತೇನೆ. ಅಲ್ಲಿಯ ತನಕ ಮುಷ್ಕರ ಕೈಬಿಡುವಂತೆ ಮನವಿ ಮಾಡಿದ್ದರು. ಕರೋನಾ ಸೋಂಕು ಬಂದು ಒಂದು ವರ್ಷ ಕಳೆದಿದ್ದು, 4 ಸಾರಿಗೆ ನಿಗಮಗಳಲ್ಲಿ ಪ್ರತಿದಿನ ಸಂಚರಿಸುತ್ತಿದ್ದ ಪ್ರಯಾಣಿಕರ ಸಂಖ್ಯೆ 1 ಕೋಟಿಯಿಂದ 65 ಲಕ್ಷಕ್ಕೆ ಇಳಿದಿದೆ. ಬರುವ ಆದಾಯ ನಿಗಮಗಳ ಇಂಧನ ಹಾಗೂ ವೇತನ ನಿರ್ವಹಣೆಗೆ ಸಾಲುತ್ತಿಲ್ಲ. ನಮ್ಮಲ್ಲಿ 1.35 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಕರೋನಾ ಸಂದರ್ಭದಲ್ಲಿ ಬರೋಬ್ಬರಿ 3,200 ಕೋಟಿ ರೂ. ನಷ್ಠ ಅನುಭವಿಸಿದೆ. ಆದರೂ ಯಾವ ಸಿಬ್ಬಂದಿ ವೇತನ ಕಡಿತ ಮಾಡಿಲ್ಲ’ ಎಂದು ಹೇಳಿದ್ದರು.
ಒಟ್ಟಾರೆ ಸಾರಿಗೆ ನಿಗಮದ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದ ಪರಿಣಾಮ ಎಲ್ಲಿಗೆ ಹೋಗಿ ಮುಟ್ಟುವುದು ಎಂದು ಕಾದು ನೋಡಬೇಕಿದೆ.