ಬೆಂಗಳೂರು : ಬಿಡಿಎ ನಿರ್ಮಿಸಲು ಹೊರಟಿರುವ ಶಿವರಾಮಕಾರಂತ ಬಡಾವಣೆ ನಿರ್ಮಾಣ ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸುಪ್ರೀಂಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮತಿ ಸ್ಪಷ್ಟಪಡಿಸಿದೆ.
ಬಿಡಿಎ ಕೇಂದ್ರ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷರಾದ ನ್ಯಾ. ಎ.ವಿ.ಚಂದ್ರಶೇಖರ್, ಸುಪ್ರೀಂಕೋರ್ಟ್ ಆದೇಶದ ಅನ್ವಯ ಶಿವರಾಮಕಾರಂತ ಬಡಾವಣೆ ನಿರ್ಮಾಣ ಕಾರ್ಯ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
2018 ರ ಆಗಸ್ಟ್ 3 ಕ್ಕೆ ಮುಂಚೆ ಶಿವರಾಮಕಾರಂತ ಬಡಾವಣೆಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದ 3,546.12 ಎಕರೆ ಜಮೀನಿನಲ್ಲಿ ಕಟ್ಟಡ ಅಥವಾ ಮನೆ ನಿರ್ಮಿಸಿದವರು ಸೂಕ್ತ 17 ರೀತಿ ದಾಖಲೆ ನೀಡಲು ಏಪ್ರಿಲ್ 30 ರ ತನಕ ಅವಕಾಶವಿದೆ.
ಈತನಕ 350 ಮಂದಿ ಆನಲೈನ್ ನಲ್ಲಿ ಹಾಗೂ 1,500 ಜನ ಮೇಡಿ ಅಗ್ರಹಾರ, ಸೋಮಶೆಟ್ಟಿಹಳ್ಳಿ, ದೊಡ್ಡ ಬ್ಯಾಲಕೆರೆ ಹಾಗೂ ಸಿಂಗನಾಯಕನಹಳ್ಳಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದ ಸಹಾಯ ಕೇಂದ್ರದಲ್ಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಅವರು ವಿವರಿಸಿದರು.
ಶಿವರಾಮಕಾರಂತ ಅಧಿಸೂಚಿತ ಪ್ರದೇಶದಲ್ಲಿ 3.08.2018 ಕ್ಕೆ ಮೊದಲು ಒಟ್ಟು 7,500 ಕಟ್ಟಡ, ಮನೆಗಳಿರುವುದು ಇಮೇಜಿಂಗ್ ಸ್ಯಾಟಲೈಟ್ ಮೂಲಕ ತಿಳಿದುಬಂದಿದೆ. ಅದರಂತೆ ಇನ್ನು 6,000 ಕಟ್ಟಡ ನಿರ್ಮಿಸಿದವರು ಸೂಕ್ತ ದಾಖಲೆಗಳನ್ನು ನೀಡಲು ಏಪ್ರಿಲ್ 30 ರ ತನಕ ಕಾಲಾವಕಾಶ ನೀಡಲಾಗಿದೆ ಎಂದು ನ್ಯಾ.ಎ.ವಿ.ಚಂದ್ರಶೇಖರ್ ತಿಳಿಸಿದ್ದಾರೆ.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಶಿವರಾಮಕಾರಂತ ಬಡಾವಣೆ ನಿರ್ಮಾಣ ವಿಚಾರದಲ್ಲಿ ಗೊಂದಲಕಾರಿ ಹೇಳಿಕೆ ನೀಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಗೆ, ಪ್ರಾಧಿಕಾರದಿಂದ ಅನುಮತಿ ಪಡೆದು ಕಟ್ಟಡ ಕಟ್ಟಿದವರು ದಾಖಲೆ ಮತ್ತು ಮಾಹಿತಿ ನೀಡಲು ಹಿಂದೇಟು ಹಾಕುವಂತಾಗಿದೆ.
ಹೀಗಾಗಿ ಈ ಕುರಿತು ಸಮಾಜಾಯಿಷಿ ನೀಡುವಂತೆ ಕೋಡಿಹಳ್ಳಿ ಚಂದ್ರಶೇಖರ್ ಗೆ ಸಮಿತಿ ನೋಟಿಸ್ ನೀಡಿತ್ತು. ಆದರೆ ಆ ಬಗ್ಗೆ ಅವರು ನೋಟಿಸ್ ಗೆ ಉತ್ತರ ನೀಡಿರಲಿಲ್ಲ. ಈ ಸಂಬಂಧ ಸುಪ್ರೀಂಕೋರ್ಟಿಗೆ ಪತ್ರ ಬರೆಯಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಂದಾಯ ನಿವೇಶನ ಭೂಪರಿಹಾರ ಸಮಗ್ರ ಅಧ್ಯಯನ
ಸುಪ್ರೀಂಕೋರ್ಟ್ ಶಿವರಾಮ ಕಾರಂತ ಬಡಾವಣೆ ವಿಚಾರದಲ್ಲಿ ಈಗಾಗಲೇ ಹಲವಾರು ಕಂದಾಯ ನಿವೇಶನಗಳು ತಲೆ ಎತ್ತಿದೆ. ಆ ಮಾಹಿತಿಗಳನ್ನು ಸಮಗ್ರವಾಗಿ ಪರಿಶೀಲಿಸಿ ನಿವೇಶನ ಕಳೆದು ಕೊಳ್ಳುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ಅಥವಾ ಬದಲಿ ನಿವೇಶನ ನೀಡುವ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿದೆ.
ಹೀಗಾಗಿ ಈಗಾಗಲೇ ಬಿಡಿಎ ನಿರ್ಮಿಸಿರುವ ಬನಶಂಕರಿ, ಕೆಂಪೇಗೌಡ ಲೇಔಟ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ ನಿರ್ಮಾಣ ವೇಳೆ ನಿವೇಶನ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಿರುವ ಬಗ್ಗೆ ಅಧ್ಯಯನ ನಡೆಸಲು ಸಮಿತಿಗೆ ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.
ಇದಕ್ಕಾಗಿ ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಸಹಕಾರದೊಂದಿಗೆ 17 ಗ್ರಾಮಗಳಲ್ಲಿನ ರೆವೆನ್ಯೂ ಇನ್ಸ್ ಪೆಕ್ಟರ್, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ನಾಡ ಕಚೇರಿಗಳಲ್ಲಿನ ಸಿಬ್ಬಂದಿ ನೆರವು ಪಡೆಯಲಾಗುವುದು ಎಂದರು.