ಬೆಂಗಳೂರು : ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಮಿಲಿಟರಿ ಪೊಲೀಸರು ಕಠಿಣ ತರಬೇತಿ ಮುಗಿಸಿ ಮೇ ತಿಂಗಳಲ್ಲಿ ಭಾರತೀಯ ಸೇನೆ ಸೇರಲಿದ್ದಾರೆ. ಮೊದಲ ಬ್ಯಾಚಿನ ಸಿಪಾಯಿಗಳನ್ನು ಸೇನೆಗೆ ತಯಾರು ಮಾಡುತ್ತಿರುವ ಹೆಮ್ಮೆ ಬೆಂಗಳೂರಿನದು.
ನೀಲಸಂದ್ರದ ಕೋರ್ ಮಿಲಿಟರಿ ಪೊಲೀಸ್ (ಸಿಪಿಎಮ್) ನ 5 ಕಿಲೋ ಮೀಟರ್ ವಿಸ್ತೀರ್ಣದ ಕ್ಯಾಂಪಸ್ ನಲ್ಲಿ 100 ಯುವ ಮಹಿಳಾ ಅಭ್ಯರ್ಥಿಗಳಿಗೆ 2020 ರ ಜನವರಿಯಿಂದ ಮಿಲಿಟರಿ ಪೊಲೀಸ್ ತರಬೇತಿ ನೀಡಲಾಗುತ್ತಿದೆ.
100 ಹುದ್ದೆಗಳ ಪೈಕಿ 8 ಅಭ್ಯರ್ಥಿಗಳು ಕರ್ನಾಟಕಕ್ಕೆ ಸೇರಿದವರು ಅನ್ನೋದು ನಮಗೆಲ್ಲ ಹೆಮ್ಮೆಯ ವಿಚಾರ. ಅದರಲ್ಲೂ ಬೆಳಗಾವಿಯ ಇಸ್ಲಾಂಪುರ, ಖಾನಾಪುರ, ಕಾಗವಾಡ, ಬೈಲಹೊಂಗಲ, ವಾಗ್ವೇಡ, ಸಂಕೇಶ್ವರ ಹಾಗೂ ಧಾರವಾಡದ ಮದಿಕೊಪ್ಪದ ಮಹಿಳೆಯರು ಸದ್ಯದಲ್ಲೇ ದೇಶ ಸೇವೆಗೆ ಸೇರಲಿದ್ದಾರೆ.
ಈ ಬಗ್ಗೆ ಬೆಂಗಳೂರು ವೈರ್ ಜೊತೆ ಮಾತನಾಡಿರುವ ಜ್ಯೋತಿ, ” ತಮಗೆ ಎಸ್ ಎಸ್ ಎಲ್ ಸಿಯಿಂದಲೇ ಸೇನೆಗೆ ಸೇರುವ ಹಂಬಲವಿತ್ತು. ಡಿಗ್ರಿ ಓದುವಾಗಲೇ ಮಹಿಳಾ ಮಿಲಿಟರಿ ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ ಬಂದಾಗ, ಮಿಲಿಟರಿ ನರ್ಸಿಂಗ್ ಗೆ ಅವಕಾಶ ಸಿಗುತ್ತದೆ ಅಂತ ಅರ್ಜಿ ಹಾಕಿದೆ.”
“ಆದರೆ ಲಕ್ಷಾಂತರ ಮಹಿಳೆಯರು ಅರ್ಜಿ ಹಾಕಿದ್ದರೂ ತಮಗೆ ದೇಶ ಸೇವೆ ಮಾಡುವ ಅವಕಾಶ ದೊರೆತಿದೆ. ನಮ್ಮ ತಂದೆ ಮಾಜಿ ಸೈನಿಕರಾಗಿದ್ದರೂ ನಾನು ಸೇನೆಗೆ ಸೇರುವ ಬಗ್ಗೆ ಸ್ವಲ್ಪ ಹಿಂದೇಟು ಹಾಕಿದ್ದರು. ಆದರೆ ತಾಯಿಯವರು ಸೇನೆಗೆ ಸೇರಲು ಪ್ರೋತ್ಸಾಹ ನೀಡಿದರು. ಹಾಗಾಗಿ ಇಂದು ಬಹುತೇಕ ಮಿಲಿಟರಿ ಮಹಿಳಾ ಪೊಲೀಸ್ ತರಬೇತಿ ಪಡೆದುಕೊಂಡೆ. ಈಗ ದೇಶ ಸೇವೆಗೆ ಹೋಗುತ್ತಿರುವ ಬಗ್ಗೆ ಹೆಮ್ಮೆಯಾಗುತ್ತಿದೆ” ಎಂದು ಜ್ಯೋತಿ ಪ್ರತಿಕ್ರಿಯಿಸಿದ್ದಾರೆ.
61 ವಾರಗಳ ವಿಶೇಷ ಕಠಿಣ ತರಬೇತಿ
61 ವಾರಗಳ ತರಬೇತಿ ಅವಧಿಯಲ್ಲಿ 50 ಅಭ್ಯರ್ಥಿಗಳ ತಲಾ 2 ತಂಡಗಳಲ್ಲಿ ಮಹಿಳಾ ಸೈನಿಕರಿಗೆ ತರಬೇತಿ ನೀಡಲಾಗುತ್ತಿದೆ. ಪ್ರಾಥಮಿಕ 29 ವಾರಗಳ ತರಬೇತಿ , ನಂತರ 3 ವಾರ ರಜೆ. ಅದಾದ ನಂತರ 26 ವಾರಗಳ ಅಡ್ವಾನ್ಸ್ ಟ್ರೈನಿಂಗ್ ಹಾಗೂ ಅದಾದ ನಂತರ 3 ವಾರಗಳ ರಜೆ ಹೀಗೆ ತರಬೇತಿ ರಚನೆಯಿರುತ್ತದೆ.
ಈತನಕ ರಕ್ಷಣಾ ಪಡೆಯಲ್ಲಿ ಮಹಿಳಾ ಅಧಿಕಾರಿಗಳನ್ನು ಮಾತ್ರ ನೇಮಕಾತಿ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರಕ್ಷಣಾ ಇಲಾಖೆಯಲ್ಲಿ ಅಧಿಕಾರಿಗಳಿಗಿಂತ ಕಡಿಮೆ ದರ್ಜೆಯ ಮಹಿಳಾ ಸಿಪಾಯಿಗಳ ನೇಮಕಾತಿ ಭಾರತೀಯ ಸೇನೆಯ ಮಿಲಿಟರಿ ಪೊಲೀಸ್ ಮೂಲಕ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ ಕಮಾಂಡೆಂಟ್ ಸಿ.ದಯಾಳನ್.
“ಈಗಾಗಲೇ ಮೊದಲ ಬ್ಯಾಚಿನ 100 ಮಹಿಳಾ ಅಭ್ಯರ್ಥಿಗಳ ತರಬೇತಿ ಬಹುತೇಕ ಪೂರ್ಣಗೊಂಡು ಇದೇ ಏಪ್ರಿಲ್ ನಲ್ಲಿ ಭಾರತೀಯ ಸೇನೆ ಸೇರಲಿದ್ದಾರೆ. ದೇಶದ ವಿವಿಧೆಡೆ ಶೇ.60 ರಷ್ಟು ಪೊಲೀಸರು ಶಾಂತಿ ನೆಲೆಸಿರುವ ದೇಶದ ಆಂತರಿಕ ಸ್ಥಳದಲ್ಲಿ, ಶೇ.40 ಮಹಿಳಾ ಪೊಲೀಸರನ್ನು ಭಯೋತ್ಪಾದನೆ, ಅಶಾಂತಿ ನೆಲಸಿರುವ ಸ್ಥಳ, ದೇಶದ ಭಯೋತ್ಪಾದನಾ ಪೀಡಿತ ಗಡಿ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗುತ್ತದೆ” ಎಂದು ಹೇಳುತ್ತಾರೆ ಮಹಿಳಾ ಮಿಲಿಟರಿ ಪೊಲೀಸ್ ಕಮಾಂಡಿಂಗ್ ಆಫೀಸರ್ ಜ್ಯೂಲಿ.
“ಬೆಂಗಳೂರಿನ ಸಿಎಂಪಿ ತರಬೇತಿ ಕೇಂದ್ರದಲ್ಲಿ ಈ ಮಹಿಳೆಯರನ್ನು ಪುರುಷ ಸೈನಿಕರಿಗೆ ಸಮನಾಗಿ ಸಜ್ಜುಗೊಳಿಸುತ್ತಿದ್ದೇವೆ. ದೇಶಾದ್ಯಂತ ಕೋರ್ ಮಿಲಿಟರಿ ಪೊಲೀಸ್ ನ ಒಟ್ಟು 100 ಯೂನಿಟ್ ಗಳಿದ್ದು, ಒಂದೊಂದು ಯೂನಿಟ್ ನಲ್ಲಿ 39 ಸೈನಿಕರಿಂದ ಹಿಡಿದು 90 ಜನ ಸೈನಿಕರು ಇರುತ್ತಾರೆ. ಆ ಪೈಕಿ ಶೇ.20 ರಷ್ಟುಮಂದಿ ಮಹಿಳಾ ಮಿಲಿಟರಿ ಪೋಲಿಸ್ ಹೊಂದಿರಬೇಕು.”
“ಹಾಗಾಗಿ ಪ್ರತಿವರ್ಷ ತಲಾ 100 ಮಂದಿ ಮಹಿಳಾ ಪೊಲೀಸರಿಗೆ ತರಬೇತಿ ನೀಡಿ 2037 ರ ಇಸವಿ ವೇಳೆಗೆ ಒಟ್ಟು 1,700 ಮಹಿಳಾ ಮಿಲಿಟರಿ ಪೊಲೀಸರನ್ನು ಸಿಎಂಪಿಗೆ ಸೇರಿಸುವ ಉದ್ದೇಶ ಹೊಂದಿದೆ” ಎಂದು ಕಮಾಂಡಿಂಗ್ ಅಫೀಸರ್ ಜೂಲಿ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
2 ಲಕ್ಷ ಅರ್ಜಿಗಳಲ್ಲಿ 100 ಮಂದಿಯಷ್ಟೆ ಆಯ್ಕೆ
100 ಮಹಿಳಾ ಮಿಲಿಟರಿ ಪೊಲೀಸ್ ಹುದ್ದೆಗಾಗಿ ದೇಶಾದ್ಯಂತ 2 ಲಕ್ಷ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆ ಪೈಕಿ ದೈಹಿಕ ಸಾಮರ್ಥ್ಯ, ಲಿಖಿತ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಆಯ್ಕೆ ಮಾಡಲಾಗಿದೆ. ಡಬ್ಲ್ಯುಎಂಪಿ ಪೊಲೀಸರ ಹುದ್ದೆಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆಯಿದೆ. ಆದರೆ ಈ ತರಬೇತಿಗೆ 21 ಡಿಗ್ರಿ ಹಾಗೂ ಉಳಿದವರು ದ್ವಿತೀಯ ಪಿಯುಸಿ ತೇರ್ಗಡೆಯಾದವರು ಆಯ್ಕೆಯಾಗಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ಜೂಲಿ ಮಹಿಳಾ ಸೇನಾನಿಗಳ ಫೇವರೇಟ್
ಮೊದಲ ಬಾರಿಗೆ ಸೈನಿಕರಾಗಿ ತರಬೇತಿಗೆ ಸೇರಿದ ಮಹಿಳಾ ಸಿಪಾಯಿಗಳಿಗೆ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಜೂಲಿ ಅಂದರೆ ಎಲ್ಲಿಲ್ಲದ ಪ್ರೀತಿ. ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್ ಸೇರಿದಂತೆ ಭಯೋತ್ಪಾದನಾ ಪ್ರದೇಶಗಳಲ್ಲಿ ಕೆಲಸ ಮಾಡಿದ 16 ವರ್ಷಗಳ ಅಪಾರ ಅನುಭವವನ್ನು ತಾಳ್ಮೆಯಿಂದ ಬಾವಿ ಮಹಿಳಾ ಸಿಪಾಯಿಗಳಿಗೆ ಧಾರೆ ಎರೆಯುತ್ತಿದ್ದಾರೆ.
ಮಿಲಿಟರಿ ಪೊಲೀಸ್ ತರಬೇತಿ ಹೇಗಿರುತ್ತೆ?
ಪ್ರಾಥಮಿಕ ತರಬೇತಿ ಅವಧಿ 29 ವಾರಗಳು, ಸುಧಾರಿತ ತರಬೇತಿ ಅವಧಿ 26 ವಾರ ಹಾಗೂ 6 ವಾರಗಳ ರಜಾ ಅವಧಿ ಟ್ರೈನಿಂಗ್ ಮಾಡ್ಯುಲ್ ನಲ್ಲಿದೆ. ಪ್ರಾಥಮಿಕ ತರಬೇತಿಯಲ್ಲಿ ಭಾವಿ ಮಹಿಳಾ ಮಿಲಿಟರಿ ಪೊಲೀಸರಿಗೆ 5 ಕಿ.ಮೀ ಓಟ, ಡ್ರಿಲ್, ದೈಹಿಕ ಕಸರತ್ತು, ಬಂದೂಕಿನಂತಹ ಶಸ್ತ್ತಾಸ್ತ್ರ ಬಳಕೆ, 2.5 ಟನ್ ಸಾಮರ್ಥ್ಯದ ಟ್ರಕ್ ಡ್ರೈವಿಂಗ್, ದ್ವಿಚಕ್ರ ವಾಹನ ಚಾಲನೆ ತರಬೇತಿ, ಟ್ರಾಫಿಕ್ ಮತ್ತು ಯುದ್ಧ ಭೂಮಿಯಲ್ಲಿ ಸಂವಹನ ನಡೆಸುವ ಕೌಶಲ್ಯವನ್ನು ಇಲ್ಲಿ ಹೇಳಿಕೊಡಲಾಗುತ್ತಿದೆ.
ಅಲ್ಲದೆ ಸ್ವಿಮ್ಮಿಂಗ್, ಬಾಕ್ಸಿಂಗ್, ಹಾರಿಜಾಂಟಲ್ ಮತ್ತು ವರ್ಟಿಕಲ್ ಹಗ್ಗದಿಂದ ಸಾಗುವ ತರಬೇತಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ತನಿಖೆ, ಅತ್ಯಾಚಾರ, ಆತ್ಮಹತ್ಯೆ ಪ್ರಕರಣ ಬೇಧಿಸುವಿಕೆ, ಯುದ್ಧ ನಡೆಯುವ ಸಂದರ್ಭದಲ್ಲಿ ಕ್ಯಾಂಪ್ ಡೇರೆ ಸಿದ್ಧಪಡಿಸುವ ಟ್ರೈನಿಂಗ್, ವಿಧಿ ವಿಙ್ಞನದ ಕೌಶಲ್ಯಗಳನ್ನು 61 ವಾರಗಳ ತರಬೇತಿ ಅವಧಿಯಲ್ಲಿ ತಿಳಿಸಿಕೊಡಲಾಗುತ್ತದೆ.
ಒಟ್ಟಾರೆ ಭಾರತೀಯ ಸೇನೆಗೆ ನೀಲಸಂದ್ರದ ಕೋರ್ ಮಿಲಿಟರಿ ಪೊಲೀಸ್ ತರಬೇತಿ ಕೇಂದ್ರ ಸಶಕ್ತ ಮಹಿಳಾ ಮಿಲಿಟರಿ ಪೊಲೀಸರನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿರುವುದು ಬೆಂಗಳೂರಿಗಾದ ಎಲ್ಲರಿಗೂ ಹೆಮ್ಮೆ ಮತ್ತು ಅಭಿಮಾನದ ವಿಚಾರವಾಗಿದೆ.