ಬೆಂಗಳೂರು: ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬುಧವಾರ 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಬಿಬಿಎಂಪಿ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ವರ್ಗಾವಣೆಯಾಗಿದ್ದು, ನೂತನ ಆಯುಕ್ತರಾಗಿ ಆಡಳಿತಗಾರರಾಗಿದ್ದ 1990ನೇ ಬ್ಯಾಚಿನ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ರನ್ನು ನೇಮಕ ಮಾಡಿದೆ.
ಬಿಬಿಎಂಪಿ ನೂತನ ಆಡಳಿತಗಾರರಾಗಿ ರಾಕೇಶ್ ಸಿಂಗ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. 1989 ಇಸವಿಯ ಬ್ಯಾಚಿನ ಹಿರಿಯ ಐಎಎಸ್ ಅಧಿಕಾರಿಯಾಗಿರುವ ರಾಕೇಶ್ ಸಿಂಗ್ ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೂಡಾ ಆಗಿದ್ದಾರೆ.
ಮೂರನೇ ಬಾರಿಗೆ ಬಿಬಿಎಂಪಿ ಆಯುಕ್ತರಾಗಿದ್ದ 1994ನೆಯ ಬ್ಯಾಚಿನ ಮಂಜುನಾಥ್ ಪ್ರಸಾದ್, ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಅಲ್ಲದೆ ಕರೋನಾ ದಂತಹ ಸಂಕಷ್ಠ ಸ್ಥಿತಿಯಲ್ಲಿ ರಾಜ್ಯ ವಿಪತ್ತು ನಿರ್ವಹಣೆ, ಭೂಮಿಯಂತಹ ವಿಭಾಗದ ಉಸ್ತುವಾರಿ(ಪ್ರಧಾನ ಕಾರ್ಯದರ್ಶಿ ಹುದ್ದೆ) ಯನ್ನು ಸರ್ಕಾರ ವಹಿಸಿಕೊಟ್ಟಿದೆ.
1990 ನೇ ಬ್ಯಾಚಿನ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್ ಪ್ರಸ್ತುತ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರ ಜೊತೆಗೆ ಹೆಚ್ಚುವರಿಯಾಗಿ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೊಣೆಯನ್ನು ಸರ್ಕಾರ ನೀಡಿದೆ.