ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಮಾಡುತ್ತಾರೆಂಬ ವಿಚಾರದಲ್ಲಿನ ಗೊಂದಲಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೆರೆ ಎಳೆದಿದ್ದಾರೆ. ಲಾಕ್ ಡೌನ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಸಂಜೆ ಕೋವಿಡ್ ಸೋಂಕು ಹರಡದಂತೆ ನಿಯಂತ್ರಿಸಲು ಸಚಿವರು, ತಙ್ಞರು ಹಾಗೂ ಅಧಿಕಾರಿಗಳ ಜೊತೆ ಸುಧೀರ್ಘ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಕರೋನಾ ಎರಡನೇ ಅಲೆಯ ಭೀತಿ ಹಿನ್ನಲೆಯಲ್ಲಿ ನಾಳೆಯಿಂದ ಮಾಸ್ಕ್ ಖಡ್ಡಾಯ ಮಾಡಲಾಗಿದೆ. ಕೋವಿಡ್ ನಿಯಮಾವಳಿ ನಿರ್ಲಕ್ಷ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಆದರೆ ಲಾಕ್ ಡೌನ್ ಅಥವಾ ರಾತ್ರಿ ಕರ್ಫ್ಯೂ ಹೇರುವುದಿಲ್ಲ ಎಂದು ಹೇಳಿದ್ದಾರೆ.
15 ದಿನಗಳ ಕಾಲ ಧರಣಿ- ಸತ್ಯಾಗ್ರಹಗಳಿಗೆ ಅವಕಾಶವಿಲ್ಲ
ಮಹಾರಾಷ್ಟ್ರದಲ್ಲಿ ಒಂದೇ ದಿನಕ್ಕೆ 40 ಸಾವಿರ ಕರೋನಾ ಪ್ರಕರಣ ವರದಿಯಾಗಿದೆ. ಅಲ್ಲಿ ಕರೋನಾ ಸೋಂಕು ಹೆಚ್ಚಾಗುತ್ತಿದೆ. ನಮ್ಮ ರಾಜ್ಯದಲ್ಲಿ ಪ್ರತಿದಿನ ಸರಾಸರಿ 3 ಸಾವಿರ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಂದಿನ 15 ದಿನಗಳ ಕಾಲ ರಾಜ್ಯದಲ್ಲಿ ಪ್ರತಿಭಟನೆ, ಧರಣಿ ಸತ್ಯಾಗ್ರಹಕ್ಕೆ ಅವಕಾಶವಿಲ್ಲ. ಉಪಚುನಾವಣೆ ಪ್ರಚಾರದಲ್ಲಿ ಹೆಚ್ಚಿನ ಜನ ಸೇರುವಂತಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಕೋವಿಡ್ ಸೋಂಕು ನಿರ್ವಹಣೆಗೆ ಅನುದಾನದ ಕೊರತೆಯಿಲ್ಲ. ಈಗಾಗಲೇ 150 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಸೋಂಕು ನಿಯಂತ್ರಣಕ್ಕೆ ಜನರ ಸಹಕಾರ ಅಗತ್ಯವಾಗಿದೆ.
ಶಾಲಾ – ಕಾಲೇಜು ಬಂದ್ ಇಲ್ಲ
ಅಪಾರ್ಟ್‌ಮೆಂಟ್ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಅಲ್ಲದೆ ಅಪಾರ್ಟ್‌ಮೆಂಟ್‌ಗಳಲ್ಲಿ ಲಸಿಕೆ ನೀಡಲು ಪ್ರತ್ಯೇಕ ಕ್ರಮ ಕೈಗೊಳ್ಳಲಾಗುವುದು. ಶಾಲಾ- ಕಾಲೇಜುಗಳನ್ನು ಪುನಃ ಬಂದ್ ಮಾಡುವುದಿಲ್ಲ. ಮಕ್ಕಳಿಗೆ ಪರೀಕ್ಷೆಗಳು ಹತ್ತಿರದಲ್ಲಿದೆ. ಸ್ಕೂಲ್‌ಗಳಲ್ಲಿ ಖಡ್ಡಾಯವಾಗಿ ಕೋವಿಡ್ ನಿಯಮಾವಳಿ ಪಾಲಿಸಬೇಕು.
ಸಿನಿಮಾ ಹಾಲ್‌ಗಳಿಗೆ ಕೋವಿಡ್ ನಿಯಮಾವಳಿ ವಿನಾಯಿತಿಯಲ್ಲಿ ಯಾವುದೇ ಮಾರ್ಪಾಡು ಇಲ್ಲ. ಯಥಾಸ್ಥಿತಿ ಮುಂದುವರಿಕೆಯಾಗಲಿದೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ವಿಪಕ್ಷ ನಾಯಕ ಸಿದ್ಧರಾಮಯ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ, ಅದರಲ್ಲಿ ಸರ್ಕಾರ ವೈಜ್ಞಾನಿಕವಾಗಿ ನಡೆದುಕೊಳ್ಳಬೇಕು. ಸರ್ಕಾರ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದಿದ್ದಾರೆ. ಮಾಸ್ಕ್ ಕಡ್ಡಾಯ ಮಾಡಬೇಕು. ಲಾಕ್‌ಡೌನ್ ಬೇಡ ಎಂದಿದ್ದಾರೆ. ಅದನ್ನು ಪರಿಗಣಿಸುತ್ತೇವೆ. ವಿಪಕ್ಷ ನಾಯಕರ ಮಾತನ್ನು ಸಭೆಯಲ್ಲಿ ತಿಳಿಸಿದ್ದೇನೆ ಎಂದು ಅವರು ಹೇಳಿದರು.
ಕೋವಿಡ್ ನಿಯಮ ಉಲ್ಲಂಘಿಸಿದರೆ ಛತ್ರ ಬಂದ್
ಕೋವಿಡ್-19 ನಿಯಮ ಮದುವೆ ಮನೆಯಲ್ಲಿ ಉಲ್ಲಂಘಿಸಿದಲ್ಲಿ, ಮದುವೆಯ ಛತ್ರ 6 ತಿಂಗಳು ಬಂದ್ ಮಾಡಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ನುಡಿದಿದ್ದಾರೆ.
ಕೋವಿಡ್ ಬಗ್ಗೆ ಎಲ್ಲರೂ ಆದೇಶ ಹೊರಡಿಸುವಂತಿಲ್ಲ
ಇನ್ನೊಂದೆಡೆ ಕೋವಿಡ್ ಕಠಿಣ ಕಾನೂನು ಜಾರಿ, ನಿರ್ಬಂಧ ತೆರವು ಅಥವಾ ವಿಧಿಸುವಿಕೆಯನ್ನು ಯಾವ ಸಚಿವರು ಅಥವಾ ಇಲಾಖೆಗಳಾಗಲಿ ಆದೇಶ ಹೊರೆಡಿಸುವಂತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಪತ್ರ ಬರೆದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅನ್ವಯ ಆದೇಶ ಅಥವಾ ಮಾರ್ಗಸೂಚಿಗಳನ್ನು ಹೊರಡಿಸುತ್ತಿದೆ. ಕೋವಿಡ್ -19 ಕಾರ್ಯ ವಿಧಾನದಲ್ಲಿ ಏಕರೂಪತೆ ಹಾಗೂ ಧೃಢತೆಯನ್ನು ತರಲು ಇದೇ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸಿ ರಾಜ್ಯ ಕಂದಾಯ ಇಲಾಖೆಯ ವಿಪತ್ತಿ ನಿರ್ವಹಣಾ ಶಾಖೆಯಿಂದ ಹೊರಡಿಸಬೇಕು.
ರಾಜ್ಯ ಕೋವಿಡ್ ಕಾರ್ಯಕಾರಿ ಸಮತಿ ಅಧ್ಯಕ್ಷರಾದ ಮುಖ್ಯ ಕಾರ್ಯದರ್ಶಿಗಳು ಮುಖ್ಯಮಂತ್ರಿಗಳ ಅನುಮೋದನೆ ಬಳಿಕ ತಮ್ಮ ಸಹಿ ಹಾಕಿ ಅಂತಹ ಯಾವುದೇ ಸೂಚನೆ, ಮಾರ್ಗಸೂಚಿಯನ್ನು ಹೊರಡಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕಂಟೈನ್ ಮೆಂಟ್ ಜೋನ್ ಗಳು, ಜನ- ವಾಹನ ಸಂಚಾರ, ಗುಂಪು ಗೂಡುವಿಕೆಗೆ ನಿರ್ಬಂಧ, ಅನುಮತಿ ನೀಡಲಾಗುವ ಅಥವಾ ನೀಡಲಾಗದ ಚಟುವಟಿಕೆಗಳು ಸೇರಿದಂತೆ ಮತ್ತಿತರ ವಿಚಾರಗಳಲ್ಲಿ ವಿಪತ್ತು ನಿರ್ವಹಣಾ ಶಾಖೆ ಆದೇಶಗಳ ಬಗ್ಗೆ ವಿವರಣೆ ನೀಡಬಹುದೇ ಹೊರತು ಯಾವುದೇ ಸಚಿವರು ಅಥವಾ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸದಂತೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಇಂತಹ ಆದೇಶಗಳ ಆಧಾರದ ಮೇಲೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಅಥವಾ ಇತರೆ ಇಲಾಖೆಗಳು ನಿರ್ದಿಷ್ಟ ಕಾರ್ಯನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬಹುದೆಂದು ತಿಳಿಸಿದ್ದಾರೆ.