ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತಗಾರರಾದ ಗೌರವ ಗುಪ್ತಾ ನೇತೃತ್ವದಲ್ಲಿ ನೂತನ ಬಿಬಿಎಂಪಿ ಕಾಯಿದೆ-2020 ರ ಅನ್ವಯ 2021-22ನೇ ಸಾಲಿನ ಮೊದಲ ಬಜೆಟ್ ಶನಿವಾರ ಮಂಡನೆಯಾಗಿದೆ.
ಯಾವುದೇ ಹೊಸ ಕಾಮಗಾರಿ ಪ್ರಸ್ತಾವನೆಯಿಲ್ಲದ, ತೆರಿಗೆ ಹೆಚ್ಚಳವಿಲ್ಲದ, ಹೊಸ ತೆರಿಗೆ ಪ್ರಸ್ತಾಪವೂ ಇಲ್ಲದ, ಇರುವ ಹಳೆಯ ಯೋಜನೆಗಳನ್ನೇ ಮುಂದುವರೆಸುವ ಬಜೆಟ್ ಅನ್ನು ಹಣಕಾಸು ಇಲಾಖೆ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಬಜೆಟ್ ಭಾಷಣವನ್ನು ಓದಿ ಮುಗಿಸಿದರು.
ಪಾಲಿಕೆ ಬಜೆಟ್ ಒಳಗೊಂಡ 18 ಪುಟಗಳ ಭಾಷಣ ಪ್ರತಿ ಕನ್ನಡದಲ್ಲಿದ್ದು, ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಬಹಳ ತಡಬಡಾಯಿಸಿಕೊಂಡೇ ಓದಿ ಮುಗಿಸಿದರು. ಬಜೆಟ್ ಸಂಖ್ಯೆಗಳನ್ನು ತಿಳಿಸುವಾಗ ತೆಲಗು ಭಾಷೆಯ ಪ್ರಭಾವ ಎದ್ದು ಕಾಣುತ್ತಿತ್ತು.
ಬಿಬಿಎಂಪಿ ಕಾಯ್ದೆ 2020 ಜಾರಿಗೆ ಬಂದರೂ ಈತನಕ ಅದರ ನೀಲನಕ್ಷೆ ಮತ್ತು ಆ ಕಾಯ್ದೆಯಂತೆ ಯೋಜನೆ ಅನುಷ್ಠಾನ ಮಾಡುವ ಬಗ್ಗೆ ಬಜೆಟ್ ಭಾಷಣದಲ್ಲಿ ಯಾವುದೇ ಮಾರ್ಗಸೂಚಿ ಪ್ರಕಟಿಸಿಲ್ಲ.
ಬಜೆಟ್ ಭಾಷಣದ ಮುನ್ನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಚುನಾಯಿತ ಪ್ರತಿನಿಧಿಗಳು ಮಂಡಿಸುವ ಬಜೆಟ್ ಅವಾಸ್ತವಿಕವಾಗಿ ಕೂಡಿರುತ್ತದೆ ಎಂದು ಪರೋಕ್ಷವಾಗಿ ಹೇಳಿದರು. ಅವರು ಅವೈಙ್ಞನಿಕವಾಗಿ ಅನುದಾನವನ್ನು ವಲಯ ಮತ್ತು ವಾರ್ಡ್ ಗಳಿಗೆ ನಿಗಧಿಪಡಿಸುವುದರಿಂದ ಬಾಕಿ ಬಿಲ್ ಗಳ ಮೊತ್ತ ಏರುತ್ತಲೇ ಇದೆ.
ಈ ಬಾರಿ ಆಡಳಿತಗಾರರ ನೇತೃತ್ವದಲ್ಲಿ ಪಾಲಿಕೆಯು ಆದಾಯಕ್ಕೆ ತಕ್ಕಂತೆ ವಾಸ್ತವಿಕ ಬಜೆಟ್ ಹಾಗೂ ಜನಸ್ನೇಹಿ ಬಜೆಟ್ ಮಂಡಿಸಬಹುದು ಎನ್ನುವ ಅರ್ಥದಲ್ಲಿ ಅವರು ತಿಳಿಸಿದರು.
2021-22ನೇ ಸಾಲಿನ ಬಜೆಟ್ ನಲ್ಲಿ ಪಾಲಿಕೆ ಕೌನ್ಸಿಲರ್ ಗಳು ಅಧಿಕಾರದಲ್ಲಿಲ್ಲದ ಕಾರಣ, ಶಾಸಕರರೇ ಪರೋಕ್ಷವಾಗಿ ಬಿಬಿಎಂಪಿ ಬಜೆಟ್ ಅನುದಾನ ತಮ್ಮ ಮೂಗಿನ ನೇರಕ್ಕೆ ಹಂಚಿಕೆಯಾಗುವ ರೀತಿಯಲ್ಲಿ ಸಿದ್ದಪಡಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಕರೋನಾ ದಂತಹದ ಸಂಕಷ್ಠದ ಪರಿಸ್ಥಿತಿಯಲ್ಲೂ ಪಾಲಿಕೆ ಆರ್ಥಿಕ ಸಂಪನ್ಮೂಲದಿಂದ ನರಳುತ್ತಿರುವಾಗ ನಗರದ ತ್ಯಾಜ್ಯ ನಿರ್ವಹಣೆಗೆ ಬರೋಬ್ಬರಿ 1,622 ಕೋಟಿ ರೂ. ಮೀಸಲಿಡಲಾಗಿದೆ.
ನೂರಾರು ಕೋಟಿ ರೂ. ಆದಾಯ ಸಂಗ್ರಹಿಸಬಹುದಾದ ಒಎಫ್ ಸಿ ಕೇಬಲ್ ಅಳವಡಿಕೆ ಶುಲ್ಕದಿಂದ ಕೇವಲ 105 ಕೋಟಿ ರೂ. ಸಂಗ್ರಹಿಸಲು ಉದ್ದೇಶಿಸಲಾಗಿದೆ.
ಹೊಸದಾಗಿ ರಚಿತವಾಗಿರುವ ಬಿಬಿಎಂಪಿ ಕಾಯ್ದೆ 2020 ರಂತೆ ಪಾಲಿಕೆ ಸದಸ್ಯರ ಸಂಖ್ಯೆಯು 243ಕ್ಕೆ ಏರಿದೆ. ಈ ಹಿನ್ನಲೆಯಲ್ಲಿ ಒಟ್ಟು 330 ಸದಸ್ಯರ ಆಸನಗಳನ್ನು ಒಳಗೊಂಡ ಕೌನ್ಸಿಲ್ ಸಭಾಂಗಣ ನವೀಕರಿಸಲು 10 ಕೋಟಿ ರೂ. ಮೀಸಲಿಡಲಾಗಿದೆ. ಆದರೆ ಹಾಲಿ ಇರುವ ಕೌನ್ಸಿಲ್ ಸಭಾಂಗಣವನ್ನು ನವೀಕರಿಸಲು ಈ ಹಣ ಸಾಕಾಗುವುದಿಲ್ಲ ಎನ್ನಲಾಗಿದೆ.
ಕಳೆದ ಎರಡು ಬಜೆಟ್ ನಲ್ಲೂ ನಗರದಲ್ಲಿರುವ ಆಸ್ತಿಗಳ ಬಿ-ವಹಿಯಲ್ಲಿರುವ ಬಿ-ಖಾತೆ ಪದ್ಧತಿಯನ್ನು ಕೈಬಿಟ್ಟು ಸಂಪೂರ್ಣವಾಗಿ ಎ-ಖಾತಾ ಪದ್ಧತಿಯನ್ನು ಅನುಸರಿಸಲು ಕ್ರಮ ಕೈಗೊಳ್ಳಲಿದೆ ಎಂದು ಪಾಲಿಕೆ ಆಡಳಿತಗಾರರಾದ ಗೌರವ ಗುಪ್ತಾ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಆದರೆ ಎಷ್ಟರಮಟ್ಟಿಗೆ ಅದು ಜಾತಿಗೆ ಬರಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ನಗರದಲ್ಲಿ ಹೈಡೆನ್ಸಿಟಿ ಕಾರಿಡಾರ್ ಕಾಮಗಾರಿ, ಸ್ಮಾರ್ಟ್ ಸಿಟಿ ಕಾಮಗಾರಿ, ಮೆಟ್ರೋ ಕೆಲಸಗಳಿಂದ ವೈಟ್ ಟಾಪಿಂಗ್ ಕಾಮಗಾರಿ ಕಾಲಮಿತಿಯೊಳಗೆ ಪೂರ್ಣವಾಗಿಲ್ಲ. ಹೀಗಾಗಿ ಇಡೀ ಬೆಂಗಳೂರು ಧೂಳುಮಯವಾಗಿದೆ. ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್ ಕಂಡು ಬರುತ್ತಿದೆ. ಈ ಬಗ್ಗೆ ಸೂಕ್ತ ಕ್ರಮದ ಬಗ್ಗೆಯೂ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿಲ್ಲ.
ನಗರದಲ್ಲಿ 10 ಲಕ್ಷ ಸಸಿಗಳನ್ನು ವಿತರಿಸುತ್ತೇವೆ ಎಂದು ಭಾಷಣದಲ್ಲಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ. ಆದರೆ ಹಿಂದಿನ ಬಜೆಟ್ ನಲ್ಲಿ ಹಲವು ಬಾರಿ ನಗರದಲ್ಲಿ ಲಕ್ಷ ಲಕ್ಷ ಗಿಡ ನೆಡುವ ಯೋಜನೆ ಕೇವಲ ಬಜೆಟ್ ಭಾಷಣ ಮತ್ತು ಪುಸ್ತಕಕ್ಕೆ ಸೀಮಿತವಾಗಿದೆ. ಆದರೆ ನಗರ ಹಸಿರು ಹೊದಿಕೆ ಗಣನೀಯ ಕಡಿಮೆ ಆಗುತ್ತಿದೆ ಹೊರತು ಪಾಲಿಕೆ ಬೃಹತ್ ಮೊತ್ತದ ಯೋಜನೆಗಳು ಫಲಪ್ರದವಾಗುತ್ತಿಲ್ಲ.