ಬೆಂಗಳೂರು : ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನಿಂದ ಬೀದಿನಾಯಿ ಕಡಿತ ಪ್ರಕರಣ ಜನವರಿ 31 ರ ತನಕ 13 ತಿಂಗಳ ಅವಧಿಯಲ್ಲಿ ಶೇ.25 ರಿಂದ 30 ರಷ್ಟು ಕಡಿಮೆಯಾಗಿದೆ.
ಕೋವಿಡ್ ಹಾಗೂ ಲಾಕ್ ಡೌನ್ ನಿಂದಾಗಿ ಕಳೆದ ವರ್ಷ ಜನರು ಬಹುತೇಕ ಮನೆಯಲ್ಲಿಯೇ ಹೆಚ್ಚಾಗಿ ನೆಲೆಸಿದ್ದರು. ಶಾಲೆ- ಕಾಲೇಜುಗಳಿಗೆ ರಜೆಯಿದ್ದ ಕಾರಣ, ಕೋವಿಡ್ ಸೋಂಕಿನ ಭಯದಿಂದಾಗಿ ಪೋಷಕರು ಮಕ್ಕಳನ್ನು ಹೆಚ್ಚಾಗಿ ಹೊರಗೆ ಕಳುಹಿಸುತ್ತಿರಲಿಲ್ಲ. ಅಲ್ಲದೆ ನಗರದಲ್ಲಿದ್ದ ಕೆಲಸ ಅರಸಿ ಬಂದ ಅನೇಕರು ತಮ್ಮ ಊರಿಗೆ ಗುಳೆ ಹೋಗಿದ್ದರು. ಹಲವರು ಮನೆಯಿಂದಲೇ ಹೆಚ್ಚಾಗಿ ಕೆಲಸ ನಿರ್ವಹಿಸುತ್ತಿದ್ದರು.
ಬಹಳ ದಿನಗಳ ಕಾಲ ರಾತ್ರಿ ಕರ್ಫ್ಯೂ ನಗರದಲ್ಲಿ ಜಾರಿಯಲ್ಲಿತ್ತು. ಹೀಗಾಗಿ ರಾಜಧಾನಿಯ ಪ್ರಮುಖ ರಸ್ತೆ, ಬಡಾವಣೆಗಳಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುವ ನಾಯಿಗಳಿಂದ ನಾಗರೀಕರು ದಾಳಿಗೊಳಗಾಗಿ ಕಡಿತ ಪ್ರಕರಣಗಳು ಕಡಿಮೆಯಾಗಿದೆ ಎಂದು ಆರೋಗ್ಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
2019 ರಲ್ಲಿ ನಗರದಲ್ಲಿ ಒಟ್ಟಾರೆ 8,799 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದರೆ, 2020ರ ಡಿಸೆಂಬರ್ ತನಕ 6,606 ಪ್ರಕರಣಗಳಷ್ಟೆ ವರದಿಯಾಗಿತ್ತು. ಈ ಜನವರಿ 31 ರ ಒಂದು ತಿಂಗಳಲ್ಲಿ 602 ನಾಯಿ ಕಡಿತ ಪ್ರಕರಣಗಳು ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸುತ್ತಿದೆ.
ರೇಬಿಸ್ ನಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಇಳಿಕೆ
10 ವರ್ಷಗಳಿಗೆ ಮುಂಚೆ ಪ್ರತಿ ತಿಂಗಳು ರೇಬಿಸ್ ಪೀಡಿತ ನಾಯಿ ಕಡಿತದಿಂದ 5 ರಿಂದ 8 ಮಂದಿ ಸಾವನ್ನಪ್ಪುತ್ತಿದ್ದರು. ಆದರೆ ಈಗ ಅವುಗಳ ಸಂಖ್ಯೆ 2 ರಿಂದ 3ಕ್ಕೆ ಇಳಿದಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ ಜನರ ಓಡಾಟ ಕಡಿಮೆಯಾಗಿ ನಾಯಿ ಕಡಿತ ಪ್ರಕರಣವೂ ಕಡಿಮೆಯಾಗಿದೆ.
ಅದೇ ರೀತಿ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಯಲ್ಲಿ ವರ್ಷಕ್ಕೆ 24 ರಿಂದ 36 ಮಂದಿ ರೇಬಿಸ್ ನಿಂದ ಸಾವನ್ನಪ್ಪತ್ತಿದ್ದರು. 2020 ರಲ್ಲಿ ಆ ಪ್ರಮಾಣ 15 ರಿಂದ 20 ಮಂದಿಗೆ ಇಳಿದಿದೆ.
ನಾಯಿ ಕಡಿತದ ಬಗ್ಗೆ ನಿರ್ಲಕ್ಷ್ಯ ಬೇಡ !!
‘ನಾಯಿ ಕಚ್ಚಿದ ಕೂಡಲೇ ಜನರು ಅದನ್ನು ನಿರ್ಲಕ್ಷ್ಯ ಮಾಡದೆ ಕೂಡಲೇ ನಾಯಿ ಕಚ್ಚಿದ ಸ್ಥಳವನ್ನು ಮೊದಲು ಶುದ್ಧ ನೀರಿನಿಂದ ತೊಳೆಯಬೇಕು. ಸಾಬೂನಿನಿಂದ ಗಾಯವನ್ನು ತೊಳೆಯಬೇಕು. ಹಾಗೆ ಮಾಡಿದಾಗ ಕಚ್ಚಿದ ನಾಯಿಗೆ ರೇಬಿಸ್ ಸೋಂಕಿದ್ದಲ್ಲಿ ಆ ಸೋಂಕು ದೇಹದೊಳಗಿನ ನರವ್ಯೂಹ ಸೇರುವುದನ್ನು ತಡೆಯಬಹುದು. ಆನಂತರ ಹತ್ತಿರದ ಆಸ್ಪತ್ರೆಗೆ ತೆರಳಿ ರೇಬಿಸ್ ರೋಗ ನಿರೋಧಕ ಚುಚ್ಚುಮದ್ದು ಪಡೆಯಬೇಕು. ಇದು ಅತ್ಯಗತ್ಯ ಎಂದು ಬಿಬಿಎಂಪಿ ಪಶುವೈದ್ಯಕೀಯ ವಿಭಾಗದ ಪ್ರಭಾರಿ ಜಂಟಿ ನಿರ್ದೇಶಕ ಡಾ.ಲಕ್ಷ್ಮಿನಾರಾಯಣ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ನಗರದ ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳು ಹಾಗೂ ಎಲ್ಲಾ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ರೇಬಿಸ್ ರೋಗನಿರೋಧಕ ಇಂಜಕ್ಷನ್ ಲಭ್ಯವಾಗುತ್ತದೆ.
“ನಾಯಿ ಕಡಿತದ ಗಾಯ ದೊಡ್ಡದಾಗಿದ್ದರೆ ಅಥವಾ ಜಾಸ್ತಿ ರಕ್ತಸೋರಿಕೆಯಾಗಿದ್ದರೆ ಶುದ್ಧ ಬಟ್ಟೆ ಕಟ್ಟಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಮುಖ, ಕತ್ತು, ಎದೆ ಭಾಗದಲ್ಲಿ ನಾಯಿ ಕಡಿತವಾದಲ್ಲಿ ಅಥವಾ ಕೈ- ಕಾಲುಗಳಲ್ಲಿ ಅತಿ ಆಳವಾದ ನಾಯಿ ಕಡಿತದ ಗಾಯವಾದಲ್ಲಿ ರೇಬಿಸ್ ರೋಗ ನಿರೋಧಕ ಚುಚ್ಚುಮದ್ದು ಜೊತೆಗೆ ರಿಗ್ ಇಂಜೆಕ್ಷನ್ (ರೇಬಿಸ್ ಇಮ್ಯುನೊಗ್ಲೋಬಿನ್ ಚುಚ್ಚಮದ್ದು) ನೀಡಲಾಗುತ್ತದೆ ಎಂದು ಹೇಳುತ್ತಾರೆ ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯ ಅಧೀಕ್ಷಕ ಡಾ.ಅನ್ಸರ್ ಅಹಮದ್.
“ನಗರದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಹಳೆ ಮದ್ರಾಸು ರಸ್ತೆಯ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗಳಲ್ಲಿ ರಿಗ್ ಇಂಜೆಕ್ಷನ್ ಲಭ್ಯವಿರುತ್ತದೆ. ಈ ಇಂಜಕ್ಷನ್ ಪಡೆಯುವವರಿಗೆ ಕೆಲವೊಮ್ಮೆ ಪ್ರತಿಯೊಬ್ಬರ ದೇಹ ಪರಿಸ್ಥಿತಿಗೆ ಅನುಗುಣವಾಗಿ ಚುಚ್ಚುಮದ್ದು ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗಳು ಇಂತಹ ಇಂಜೆಕ್ಷನ್ ಅನ್ನು ರೋಗಿಗಳಿಗೆ ನೀಡಲು ಹಿಂದೇಟು ಹಾಕುತ್ತಾರೆ.”
“ನಾಯಿ ಕಡಿತ ಪ್ರಕರಣದಿಂದ ಜನರು ಸಾಯಬಾರದು. ಪೋಲಿಯೋನಂತೆ ರೇಬಿಸ್ ಕಾಯಿಲೆ ಮೂಲೋತ್ಪಾಟನೆಗೆ ಸರ್ಕಾರ ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯ” ಎಂದು ಅವರು ಮನವಿ ಮಾಡಿದ್ದಾರೆ.
ರೇಬಿಸ್ ಸೋಂಕು ನಿರ್ಲಕ್ಷಿಸಿದರೆ ಮಾರಣಾಂತಿಕ. ಆದರೆ ಈ ಗಂಭೀರ ಕಾಯಿಲೆಯನ್ನು ಜಾಗೃತೆ ವಹಿಸಿದರೆ ಶೇಕಡ 100 ಕ್ಕೆ ನೂರರಷ್ಟು ನಿಯಂತ್ರಿಸಬಹುದು ಎನ್ನುತ್ತಾರೆ ವೈದ್ಯರು. ಬೆಂಗಳೂರಿನ ವ್ಯಾಪ್ತಿಯಲ್ಲಿ, ನಿಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ರೇಬಿಸ್ ಸೋಂಕು ಪೀಡಿತ ನಾಯಿಗಳಿವೆ ಎಂದು ಗಮನಕ್ಕೆ ಬಂದಲ್ಲಿ ಬಿಬಿಎಂಪಿಯ ರೇಬಿಸ್ ಹೆಲ್ಪ್ ಲೈನ್ 6364893322 ಗೆ ಕರೆ ಮಾಡಿ ವಿಷಯ ತಿಳಿಸಬಹುದು.