ಬೆಂಗಳೂರು : ನೂರಾರು ಕೋಟಿ ರೂ. ಆದಾಯ ಸಂಗ್ರಹವಾಗುವ ಬಿಬಿಎಂಪಿ ನಗರ ಯೋಜನೆ ವಿಭಾಗದಲ್ಲಿ ಕೋಟಿ ಕೋಟಿ ಲಂಚದ ಹಣದ ಕಾರಣಕ್ಕಾಗಿ ತುಂಬಿ ತುಳುಕುತ್ತಿದೆ.
ಹತ್ತಾರು ಕೋಟಿ ರೂಪಾಯಿ ಕಮಾಯಿ ಆಗೋ ಆಯಕಟ್ಟಿನ ಜಾಗಕ್ಕೆ ಇಲ್ಲಿ ಸಖತ್ ಡಿಮ್ಯಾಂಡೋ ಡಿಮ್ಯಾಂಡ್. ಹೀಗಾಗಿ ಇಲ್ಲಿ ಬಿಬಿಎಂಪಿ ಕಮಿಷನರ್ ವರ್ಗಾವಣೆ ಮಾಡಿದ್ರೂ ಆ ಸ್ಥಾನದಿಂದ ಎಂಜಿನಿಯರ್ ಗಳು ರಿಲೀವ್ ಆಗಲ್ಲ. ರಿಲೀವ್ ಆದ್ರೂ ಪುನಃ ಹಿಂಬಾಗಲಿನಿಂದ ವಾಪಸ್ ಬರುತ್ತಾರೆ.
21 ಎಂಜಿನಿಯರ್ ಗಳು ಹೆಚ್ಚುವರಿಯಾಗಿ ಕಾರ್ಯನಿರ್ವಹಣೆ
ನಗರ ಯೋಜನೆ ವಿಭಾಗದಲ್ಲಿ ಕೇಂದ್ರ ಕಚೇರಿ, ಜೆಡಿಟಿಪಿ ಉತ್ತರ ಹಾಗೂ ದಕ್ಷಿಣ ಮತ್ತು 8 ಜೋನ್ ಗಳಲ್ಲಿ ಕೇವಲ 7 ನಗರ ಯೋಜನೆ ಸಹಾಯಕ ನಿರ್ದೇಶಕರ (ಎಡಿಟಿಪಿ) ಹುದ್ದೆ ಮಂಜೂರಾಗಿದೆ. ಆದರೆ ಹೆಚ್ಚುವರಿಯಾಗಿ 16 ಎಂಜಿನಿಯರ್ ಗಳು ಇನ್ನೂ ಎಡಿಟಿಪಿ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಅದೇ ರೀತಿ ಕೇವಲ 2 ಉಪನಿರ್ದೇಶಕ ಹುದ್ದೆ ಮಂಜೂರಾತಿ ಆಗಿದ್ದರೂ 5 ಮಂದಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಟೌನ್ ಪ್ಲಾನಿಂಗ್ ಇಲಾಖೆ ಬಿಳಿ ಆನೆ ಸಾಕಿದಂತೆ
ವರ್ಷಂಪ್ರತಿ ಟೌನ್ ಪ್ಲಾನಿಂಗ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ – ಅಧಿಕಾರಿಗಳ ವೇತನ ಭತ್ಯೆಗಾಗಿ ಕಳೆದ ಮೂರು ವರ್ಷದಿಂದ ಪಾಲಿಕೆ ಸರಾಸರಿ 5 ಕೋಟಿ ರೂಪಾಯಿ ಕರ್ಚು ಮಾಡುತ್ತಿದೆ. ಹೆಚ್ಚುವರಿ ಹುದ್ದೆಗಳಿಂದ ಪಾಲಿಕೆಗೆ ಅನಗತ್ಯವಾಗಿ ಹೆಚ್ಚು ಹೊರೆ ಬೀಳುತ್ತಿದೆ. ಯಾರು ಎಷ್ಟೇ ಪ್ರಶ್ನೆ ಮಾಡಿದರೂ ಈ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗಿಲ್ಲ ಏಕೆ? ಎಂಬುದು ಇನ್ನೂ ಯಕ್ಷಪ್ರಶ್ನೆಯಾಗಿ ಉಳಿದಿದೆ.
ಎಸಿಬಿ ದಾಳಿಯ ಬಳಿಕ 41 ಮಂದಿ ಟ್ರಾನ್ಸ್ ಫರ್
ಬೊಮ್ಮನಹಳ್ಳಿ ವಲಯದಲ್ಲಿ ಎಡಿಟಿಪಿಯಾಗಿದ್ದ ದೇವೇಂದ್ರಪ್ಪ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಫೆಬ್ರವರಿ 5 ರಂದು ದಾಳಿ ನಡೆಸಿದಾಗ ಬಿಬಿಎಂಪಿ ನಗರ ಯೋಜನೆ ವಿಭಾಗಕ್ಕೆ ಸೇರಿದ 400ಕ್ಕೂ ಹೆಚ್ಚು ಫೈಲ್ ಗಳು, ಕಚೇರಿ ಸೀಲು ಹಾಗೂ ಲಕ್ಷಾಂತರ ರೂಪಾಯಿ ನಗದು ಹಣ ಪತ್ತೆಯಾಗಿತ್ತು.
ಇದರಿಂದ ಎಚ್ಚೆತ್ತುಕೊಂಡ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಫೆಬ್ರವರಿ 10 ರಂದು ಜಂಟಿ ನಿರ್ದೇಶಕರ ಉತ್ತರ ಮತ್ತು ದಕ್ಷಿಣ ಕಚೇರಿ, 8 ವಲಯಗಳ ಪೈಕಿ ದಕ್ಷಿಣ ವಲಯ ಹೊರತುಪಡಿಸಿ 7 ವಲಯಗಳಲ್ಲಿನ 41 ಎಡಿಟಿಪಿ, ಎಇ, ನಗರ ಯೋಜಕರು ಮತ್ತಿತರರನ್ನು ವರ್ಗಾವಣೆ ಮಾಡಿದ್ದರು.
ದಕ್ಷಿಣ ವಲಯದಲ್ಲಿ ಪ್ರಭಾವಿ ರಾಜಕಾರಣಿಗಳ ಕೃಪಾ ಕಟಾಕ್ಷ ಹಾಗೂ ಒತ್ತಡದ ಕಾರಣದಿಂದ ಒಬ್ಬನೇ ಒಬ್ಬ ಎಂಜಿನಿಯರ್ ಅನ್ನು ಆಯುಕ್ತರು ವರ್ಗಾವಣೆ ಮಾಡಲು ಸಾಧ್ಯವಾಗಲಿಲ್ಲ.
ಬಿಬಿಎಂಪಿ ನಗರ ಯೋಜನೆ ವಿಭಾಗದಲ್ಲಿ ಫೆಬ್ರವರಿ 10ಕ್ಕೆ ಮುಂಚೆ 54 ಹುದ್ದೆಗಳು ಮಂಜೂರಾತಿಯಿದ್ದರೆ ಬರೋಬ್ಬರಿ 77 ಜನ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಪಿಡಬ್ಲ್ಯುಡಿ, ರಾಜ್ಯ ನಗರ ಯೋಜನಾ ಇಲಾಖೆ, ಬಿಡಬ್ಲ್ಯುಎಸ್ ಎಸ್ ಬಿ, ಕೆಪಿಟಿಸಿಎಲ್ ಹಾಗೂ ಸಹಕಾರ ಇಲಾಖೆಯ ಬರೋಬ್ಬರಿ 47 ಎಂಜಿನಿಯರ್ ಗಳು ಪಾಲಿಕೆಗೆ ತಮ್ಮ ಪ್ರಭಾವ ಬಳಸಿ, ದುಬಾರಿ ಹಣ ತೆತ್ತು ಇಲ್ಲಿಗೆ ಪೋಸ್ಟಿಂಗ್ ಪಡೆದುಕೊಂಡಿದ್ದರು.
ಆಯುಕ್ತರ ವರ್ಗಾವಣೆ ಕ್ರಮದಿಂದಾಗಿ ಈಗ ಟೌನ್ ಪ್ಲಾನಿಂಗ್ ನಲ್ಲಿ ಹೊರಗಿನ ಇಲಾಖೆಯ ಎಂಜಿನಿಯರ್ ಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಆದರೆ ಮಂಜೂರಾತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಎಂಜಿನಿಯರ್ ಗಳು ಈಗಲೂ ಕೆಲಸ ಮಾಡುತ್ತಿದ್ದಾರೆ.
ನಗರ ಯೋಜನಾ ಇಲಾಖೆಯ ಸಮೃದ್ಧ ಸ್ಥಳಗಳು :
(2018 ರಿಂದ 2021 ಜ.31 ತನಕ ಶುಲ್ಕ ಸಂಗ್ರಹ ವಿವರ)
ಉತ್ತರ ಜಂಟಿ ನಿರ್ದೇಶಕರ ಕಚೇರಿ – 543.73 ಕೋಟಿ ರೂ.
ದಕ್ಷಿಣ ಜಂಟಿ ನಿರ್ದೇಶಕರ ಕಚೇರಿ – 220.52 ಕೋಟಿ ರೂ.
ಮಹದೇವಪುರ ವಲಯ – 85.22 ಕೋಟಿ ರೂ.
ಬೊಮ್ಮನಹಳ್ಳಿ ವಲಯ – 84 ಕೋಟಿ ರೂ.
ಬೆಂಗಳೂರು ದಕ್ಷಿಣ ವಲಯ – 64.68 ಕೋಟಿ ರೂ.
ಎಸಿಬಿ ದಾಳಿ ಇಲ್ಲಿ ಕಾಮನ್ !!
ಬೊಮ್ಮನಹಳ್ಳಿ ಎಡಿಟಿಪಿ ದೇವೇಂದ್ರಪ್ಪ ಎಸಿಬಿ ದಾಳಿಯಲ್ಲಿ ಸಿಕ್ಕಿಹಾಕಿಕೊಂಡ ಬಳಿಕ 41 ಎಂಜಿನಿಯರ್ ಗಳ ವರ್ಗಾವಣೆ ಪಟ್ಟಿಯಲ್ಲಿದ್ದ ಯಲಹಂಕ ಟೌನ್ ಪ್ಲಾನಿಂಗ್ ಎಇ ಕೆ.ಸುಬ್ರಮಣ್ಯ ಮನೆ ಮೇಲೆಯೂ ಮಾರ್ಚ್ 9ರಂದು ಎಸಿಬಿ ದಾಳಿ ನಡೆದಿತ್ತು.
ಆಗ ಅವರ ಬಳಿ ಬಲ್ಲ ಎಲ್ಲ ಮೂಲಗಳಿಂದ ಶೇ.364 ಪಟ್ಟು ಹೆಚ್ಚಿನ ಚರ- ಸ್ಥಿರಾಸ್ಥಿ ಇರುವುದು ಕಂಡು ಬಂದಿತ್ತು. ಇದು ನಗರ ಯೋಜನಾ ವಿಭಾಗದಲ್ಲಿ ಹಣದ ಗಣಿಗಾರಿಕೆ ಎಷ್ಟು ನಡೆಯಬಹುದು ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ.
ಒಂದು ಕಡೆಯಿಂದ ಟ್ರಾನ್ಸ್ ಫರ್ ಮಾಡುತ್ತಿದ್ದರೂ ಮತ್ತೊಂದು ಕಡೆಯಿಂದ ಬೇರೆ ಬೇರೆ ಇಲಾಖೆಯಿಂದ ಇಂತಹ ಲಾಭದಾಯಕ ಹಾಗೂ ಆಯಕಟ್ಟಿನ ಹುದ್ದೆಗೆ ಎಡತಾಗುವುದು ನಿತ್ಯ ನಿರಂತರವಾಗಿದೆ. ಈ ಬಗ್ಗೆ ಆಡಳಿತಗಾರರು, ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.