ಬೆಂಗಳೂರು : ಖಾಸಗಿ ಶಾಲೆಗಳ ನೆರವಿಗೆ ಬಾರದ ಶಿಕ್ಷಣ ಇಲಾಖೆ ಧೋರಣೆ ಖಂಡಿಸಿ ರುಪ್ಸಾ ಕರ್ನಾಟಕ ಮತ್ತೆ ಸಿಡಿದೆದ್ದಿದೆ.
ಮೊದಲ ಹಂತವಾಗಿ ಶಿಕ್ಷಣ ಸಚಿವರ ಮನೆ ಮುಂದೆ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಮಾ.23ರೊಳಗೆ ಬೇಡಿಕೆ ಈಡೇರದೇ ಹೋದಲ್ಲಿ ಖಾಸಗಿ ಶಾಲೆ ಬಂದ್ ಮಾಡುವ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಮಾ.14 ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಖಾಸಗಿ ಶಾಲೆಗಳ ಸಂಕಷ್ಟ, ಸರ್ಕಾರ ಸ್ಪಂದಿಸದೇ ಇರುವುದರ ಬಗ್ಗೆ ಸುದೀರ್ಘವಾಗಿ ಚರ್ಚೆಯಾಯಿತು. ಈ ಮೊದಲು ಭರವಸೆ ನೀಡಿದಂತೆ ಆರು ಬೇಡಿಕೆಗಳು ಈಗಲೂ ಈಡೇರದೇ ಇರುವ ಹಿನ್ನೆಲೆ ಮತ್ತೆ ರಸ್ತೆಗಿಳಿದು ಹೋರಾಟ ಮಾಡಲು ನಿರ್ಧರಿಸಿವೆ.
ಸರ್ಕಾರ ಆದೇಶದಂತೆ ಶೇ.70ರಷ್ಟು ಟ್ಯುಷನ್ ಫೀಸು ಕೂಡ ಪೋಷಕರು ಕಟ್ಟುತ್ತಿಲ್ಲ. ಇದರಿಂದ ಶಾಲೆ ನಡೆಸುವುದು ಕಷ್ಟವಾಗಿದೆ. ಇದು ಸೇರಿದಂತೆ ಉಳಿದ ಐದು ಬೇಡಿಕೆ ಈಡೇರಿಸಲು ಮಾ.23ರವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದೇವೆ ಎಂದು ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.
ಸರ್ಕಾರ ಇದಕ್ಕೆ ಸ್ಪಂದಿಸದೇ ಹೋದಲ್ಲಿ ಶಾಲೆ ತೆರೆಯೆಬೇಕೋ ಬಂದ್ ಮಾಡಬೇಕೋ ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಕೊರೊನಾ ಕಾರಣ ಈ ಶೈಕ್ಷಣಿಕ ವರ್ಷ ಪೋಷಕರಿಗೂ, ಶಾಲೆಗಳಿಗೂ ಸಂಕಷ್ಟವಿದೆ. ಈ ಬಗ್ಗೆ ಗಮನಹರಿಸಬೇಕಾದ ಶಿಕ್ಷಣ ಇಲಾಖೆ ಬೇಡಿಕೆ ಈಡೇರಿಸುತ್ತೇನೆ ಎಂದು ಹೇಳಿ ಭರವಸೆ ಮಾತ್ರ ನೀಡುತ್ತಿದೆ. ಆದರೆ ಇವು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ರುಪ್ಸಾ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ ತಿಳಿಸಿದೆ.
ರುಪ್ಸಾ ಕರ್ನಾಟಕದ ಪ್ರಮುಖ 6 ಬೇಡಿಕೆಗಳು
- ಈ ವರುಷದ ಶೇ.70 ರಷ್ಟು ಬೋಧನಾ ಶುಲ್ಕ ಕಟ್ಟುವಂತೆ ಪೋಷಕರಿಗೆ ಸೂಚನೆ ನೀಡಬೇಕು.
- 1995 ರಿಂದ 2005ರವರೆಗೆ ಕನ್ನಡ ಮಾಧ್ಯಮ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು.
- ಕಟ್ಟಡ ಸುರಕ್ಷತಾ ಪ್ರಮಾಣ ಪತ್ರದ ವಿಷಯದಲ್ಲಿ ಹತ್ತು ಸಾವಿರ ಶಾಲೆಗಳು ಬಂದ್ ಆಗಲಿವೆ. ಈ ವಿಚಾರದಲ್ಲಿ ಸರ್ಕಾರ ಪರಿಶೀಲಿಸುವುದು.
- ಶಿಕ್ಷಕರ ಕಲ್ಯಾಣ ನಿಧಿಯಿಂದ ಖಾಸಗಿ ಶಾಲಾ ಶಿಕ್ಷಕರಿಗೂ ಪರಿಹಾರ ಸಿಗುವಂತೆ ಮಾಡುವುದು.
- ಬಿಸಿಯೂಟ ಕಾರ್ಯಕ್ರಮವನ್ನ ಅನುದಾನರಹಿತ ಶಾಲಾ ಮಕ್ಕಳಿಗೂ ಯೋಜನೆ ವಿಸ್ತರಿಸಬೇಕು.
- ಕರ್ನಾಟಕ ಖಾಸಗಿ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು.
ಇನ್ನು ಸಭೆಯಲ್ಲಿ ಪ್ರಮುಖವಾಗಿ ರಾಜ್ಯದಲ್ಲಿರುವ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು ಎಂಬ ವಿಚಾರ ಚರ್ಚೆಯಾಯಿತು. ಕೆಲ ತಾಂತ್ರಿಕ ಕಾರಣದಿಂದಾಗಿ ಕಾನೂನು ರೀತಿ ಹೋರಾಟಕ್ಕೆ ರುಪ್ಸಾ ಕರ್ನಾಟಕ ಎಂಬ ಹೆಸರಿನೊಂದಿಗೆ ಹೊಸದಾಗಿ ನೊಂದಣಿ ಮಾಡಿಕೊಂಡು ಹೋರಾಟಕ್ಕೆ ಮುಂದಾಗಿದೆ.
ಕನ್ನಡ ಮಾಧ್ಯಮಗಳ ಖಾಸಗಿ ಶಾಲೆಗಳು ತಮಗೂ ಅನುದಾನ ನೀಡಬೇಕೆಂದು ಒತ್ತಾಯಿಸಿ, ಮಾ.23ರಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡಲು ನಿರ್ಧರಿಸಲಾಯಿತು.
ಶುಲ್ಕ ನಿಗದಿ ವಿಚಾರವಾಗಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ರುಪ್ಸಾ ಇದೀಗ ತನ್ನ ಇತರೆ ಬೇಡಿಕೆ ಈಡೇರಿಸುವಂತೆ ಮಾ.23ರ ಗಡುವು ನೀಡಿದೆ. ಇದಕ್ಕೆ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂದು ರುಪ್ಸಾ ಸದ್ಯ ಕಾದು ನೋಡುವ ತಂತ್ರ ಅನುಸರಿಸಲು ಮುಂದಾಗಿದೆ.