ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ಐದು ತಿಂಗಳಿಂದ ಸದ್ದಿಲ್ಲದೆ 106 ವರ್ಷಗಳ ಪಾರಂಪರಿಕ ಕಟ್ಟಡವೊಂದು ಮಲ್ಲೇಶ್ವರದಲ್ಲಿ ಜೀರ್ಣೋದ್ಧಾರವಾಗುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹಾಗೂ ಮೈಸೂರು ಸಂಸ್ಥಾನದಲ್ಲಿ ಹಂಗಾಮಿ ದಿವಾನರಾಗಿದ್ದ ಎಚ್.ವಿ.ನಂಜುಂಡಯ್ಯ ಅವರು ವಾಸವಿದ್ದ ಬಂಗಲೆಯನ್ನು ಬಿಬಿಎಂಪಿಯು ಎರಡು ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ನಗರದ ಪ್ರಮುಖ ಪಾರಂಪರಿಕ ಕಟ್ಟಡವಾಗಿರುವ ಈ ಭಂಗಲೆಯಲ್ಲಿ ನಂಜುಂಡಯ್ಯ ಅವರು ವಾಸವಿದ್ದರು. 1915ರಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಇದು ʼಎಚ್ವಿಎನ್ ಭಂಗಲೆʼ ಎಂದೇ ಪ್ರಖ್ಯಾತಿಯಾಗಿದೆ. ಕಟ್ಟಡ ಹಳತಾದಂತೆಲ್ಲ ಅದಕ್ಕೆ ಅಲ್ಲಲ್ಲಿ ಧಕ್ಕೆ ಉಂಟಾಗಿತ್ತು. ಇದನ್ನು ಗಮನಿಸಿದ್ದ ಮಲ್ಲೇಶ್ವರದ ಶಾಸಕರೂ ಆಗಿರುವ ಡಾ.ಅಶ್ವತ್ಥನಾರಾಯಣ ಒತ್ತಾಸೆಯ ಮೇರೆಗೆ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದೆ.
ಎಸ್ತೆಟಿಕ್ ಆರ್ಕಿಟೆಕ್ಟ್ ಸಂಸ್ಥೆಗೆ ಎಚ್ ವಿಎನ್ ಭಂಗಲೆಯನ್ನು ಜೀರ್ಣೋದ್ಧಾರ ಮಾಡುವ ಜವಾಬ್ದಾರಿ ನೀಡಲಾಗಿದೆ.
ಡಿಸಿಎಂ ಅವರು ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿಯನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ, ಬೆಂಗಳೂರು ನಗರದಲ್ಲಿರುವ ಜರ್ಮನ್ ರಾಯಭಾರ ಕಚೇರಿಯ ಕಾನ್ಸುಲೇಟ್ ಜನರಲ್ ಆಕ್ಚಿಮ್ ಬರ್ಕಾರ್ಟ್ ಹಾಗೂ ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣರಾಜೇಂದ್ರ ಒಡೆಯರ್ ಸ್ಥಳಕ್ಕೆ ಆಗಮಿಸಿದ್ದರು. ಭಂಗಲೆಯಲ್ಲಿ ನಡೆಯುತ್ತಿರುವ ಕೆಲಸವನ್ನು ವೀಕ್ಷಣೆ ಮಾಡಿ ಸಂತೋಷ ವ್ಯಕ್ತಪಡಿಸಿದರು. ಇಲ್ಲಿನ ನಿರ್ಮಾಣ ಶೈಲಿಯನ್ನು ಕಂಡು ಚಕಿತರಾದರು.
“ಇಡೀ ನಗರಕ್ಕೆ ಹೆಮ್ಮೆ ತರುವ ಕಟ್ಟಡ ಇದಾಗಿದೆ. ಮಲ್ಲೇಶ್ವರದಲ್ಲಿ ಇದು ಇರುವುದು ನಮ್ಮ ಭಾಗ್ಯವೇ ಸರಿ. ಇದನ್ನ ಉಳಿಸಿ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ. ಎಸ್ತೆಟಿಕ್ ಆರ್ಕಿಟೆಕ್ಟ್ ಸಂಸ್ಥೆಯವರು ಜೀರ್ಣೋದ್ಧಾರ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಬಿಬಿಎಂಪಿ 2 ಕೋಟಿ ರೂ. ಅನುದಾನ ನೀಡಿದ್ದು, ಕೆಲಸ ಭರದಿಂದ ಸಾಗುತ್ತಿದೆ” ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಈ ವರ್ಷಾಂತ್ಯಕ್ಕೆ ಪಾರಂಪರಿಕ ಬಂಗಲೆ ಸಿದ್ಧ
“ಈ ವರ್ಷಾಂತ್ಯಕ್ಕೆ ಕಾಮಗಾರಿ ಮುಗಿಯುತ್ತದೆ. ಈ ಕಟ್ಟಡ ರಿಪೇರಿ ಮಾಡುತ್ತಿರುವುದು ನಮಗೆ ಹೆಮ್ಮೆಯ ಸಂಗತಿ. ಕಾಮಗಾರಿ ಮುಗಿದ ಮೇಲೆ ಇಡೀ ಮಲ್ಲೇಶ್ವರವನ್ನು ಪ್ರತಿಬಿಂಬಿಸುವ ಮ್ಯೂಸಿಯಂ ರೀತಿಯಲ್ಲಿ ಇದನ್ನು ಅಭಿವೃದ್ಧಿ ಮಾಡಲಾಗುವುದು. ಆ ಮೂಲಕ ನಂಜುಂಡಯ್ಯ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲಾಗುವುದು” ಎಂದು ಡಿಸಿಎಂ ತಿಳಿಸಿದರು.
ಭವ್ಯ ಕಟ್ಟಡದ ವಿನ್ಯಾಸ ಕಂಡು ಪುಳಕಿದರಾದ ಜರ್ಮನ್ ರಾಜತಾಂತ್ರಿಕರು
ಎಚ್ ವಿಎನ್ ಭಂಗಲೆಯಲ್ಲಿ ಆ ಕಾಲಕ್ಕೆ ಬೃಹತ್ ಗಾತ್ರದ ಸೋನಾ ಬಾತ್ ವ್ಯವಸ್ಥೆ ನಿರ್ಮಾಣ ಮಾಡಲಾಗಿದೆ. ಕಟ್ಟಡದ ವಿನ್ಯಾಸ, ಗಾಳಿ-ಬೆಳಕಿನ ವ್ಯವಸ್ಥೆ, ಕಲ್ಲು ಮತ್ತು ಮರದ ಕೆತ್ತನೆ ಇತ್ಯಾದಿಗಳನ್ನು ಕಂಡು ಜರ್ಮನ್ ಕಾನ್ಸುಲೇಟ್ ಜನರಲ್ ಆಕ್ಚಿಮ್ ಬರ್ಕಾರ್ಟ್ ಹರ್ಷ ವ್ಯಕ್ತಪಡಿಸಿದರು.
“ಕಳೆದ ವರ್ಷದ ನವೆಂಬರ್ನಲ್ಲಿ ಜೀರ್ಣೋದ್ಧಾರ ಕೆಲಸ ಶುರುವಾಗಿದೆ. ಕೆಲಸ ಆರಂಭಿಸುವ ಮುನ್ನ ವ್ಯಾಪಕ ಅಧ್ಯಯನ-ಸಂಶೋಧನೆ ಮಾಡಲಾಗಿದೆ. ಎಲ್ಲಿಯೂ ಮೂಲ ಸ್ವರೂಪಕ್ಕೆ ಧಕ್ಕೆ ಇಲ್ಲದೆ ಇಡೀ ಕಟ್ಟಡವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಅಲ್ಲಲ್ಲಿ ಶಿಥಿಲಗೊಂಡಿರುವ ಕಂಬಗಳು, ಮರದ ಕೆತ್ತನೆ, ಹಲಗೆಗಳು ಇತ್ಯಾದಿಗಳನ್ನು ಅತ್ಯಂತ ಜತನದಿಂದ ರಿಪೇರಿ ಮಾಡುವ ಅಥವಾ ಅದೇ ಶೈಲಿಯಲ್ಲಿ ಬದಲಿಸುವ ಕೆಲಸ ನಡೆಯುತ್ತಿದೆ” ಎಂದು ಎಸ್ತೆಟಿಕ್ ಆರ್ಕಿಟೆಕ್ಟ್ ಸಂಸ್ಥೆಯ ಸಂಸ್ಥಾಪಕಿ ಯಶಸ್ವಿನಿ ಶರ್ಮ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಎಚ್.ವಿ. ನಂಜುಂಡಯ್ಯ ಅವರ ಕುಟುಂಬದವರು ಉಪಸ್ಥಿತರಿದ್ದು, ಜೀರ್ಣೋದ್ಧಾರ ಕೆಲಸಗಳನ್ನು ವೀಕ್ಷಣೆ ಮಾಡಿದರು.