ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿಭಾಗದಲ್ಲಿ ಹಾಡಹಗಲೇ ಅಧಿಕಾರಿ ಹಾಗೂ ಗುತ್ತಿಗೆದಾರರ ಮಧ್ಯೆ ಫೈಟಿಂಗ್, ಪರಸ್ಪರ ಮಾತಿನ ಚಕಮಕಿ ನಡೆದಿರೋದು ತಡವಾಗಿ ಬೆಳಕಿಗೆ ಬಂದಿದೆ.
ಹಳೆ ದ್ವೇಷದ ಹಿನ್ನಲೆಯಲ್ಲಿ ಬಿಬಿಎಂಪಿ ಅರಣ್ಯ ಇಲಾಖೆ ಮೂವರು ಗುತ್ತಿಗೆದಾರರು ಹಾಗೂ ಅರಣ್ಯ ಅಧಿಕಾರಿ ನಡುವೆ ಸಾರ್ವಜನಿಕರ ಮಧ್ಯೆಯೇ ಜಗಳ ನಡೆದಿದೆ. ಪರಸ್ಪರರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಸಬಂಧ ಎಫ್ ಐಆರ್ ದಾಖಲಾಗಿದೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಾರ್ಚ್ 4 ರಂದು ಮಧ್ಯಾಹ್ನ ನಡೆದ ಈ ಎಳೆದಾಟ, ಪರಸ್ಪರರನ್ನು ನಿಂದಿಸಿರುವ ಧ್ವನಿ ಮತ್ತು ದೃಶ್ಯಾವಳಿಗಳು ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರ ಎಕ್ಸ್ ಕ್ಲೂಸಿವ್ ದೃಶ್ಯಗಳು ಬೆಂಗಳೂರು ವೈರ್ ಗೆ ಲಭ್ಯವಾಗಿದೆ.
ಮಾ.4ರಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ದಾಸರಹಳ್ಳಿ ವಿಭಾಗದ ವಲಯ ಅರಣ್ಯಾಧಿಕಾರಿ ಕೆ.ಎನ್.ರಾಜಪ್ಪ ಕೆಲಕ್ಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಬಂದಿದ್ದಾಗ ಅರಣ್ಯ ಗುತ್ತಿಗೆದಾರರಾದ ಶ್ರೀನಿವಾಸ್, ಗೋವಿಂದಪ್ಪ, ಚೆನ್ನಪ್ಪ ಅವರುಗಳು ಮಧ್ಯೆ ಜಗಳ ನಡೆದು, ಎಳೆದಾಟ- ಹೊಡೆದಾಟ ನಡೆದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರುಗಳು- ಪ್ರತಿದೂರು ದಾಖಲಾಗಿದೆ. ಅರಣ್ಯ ಗುತ್ತಿಗೆದಾರರಾದ ಶ್ರೀನಿವಾಸ್ ಡಿಆರ್ ಎಫ್ ಒ ರಾಜಪ್ಪ ವಿರುದ್ಧ ಪ್ರತ್ಯೇಕವಾಗಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.
ರಾಜಪ್ಪ ಹಲಸೂರು ಗೇಟ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ, “ಮಾ.4ರಂದು ಬಿಬಿಎಂಪಿ ಕೇಂದ್ರ ಕಚೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣವೊಂದರ ಸಂಬಂಧ ಕಡತದೊಂದಿಗೆ ಪ್ರಥಮ ದರ್ಜೆ ಸಹಾಯಕ ಕೊಠಡಿಗೆ ಬಂದಿದ್ದೆ. ಈ ಸಂದರ್ಭದಲ್ಲಿ ಶ್ರೀನಿವಾಸ್, ಗೋಪಾಲಪ್ಪ ಹಾಗೂ ಚೆನ್ನಪ್ಪನವರು ತಮ್ಮಿಂದಾಗಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಹಳೆ ಪ್ರಕರಣವೊಂದರ ಸಂಬಂಧ ಮೂವರ ವಿರುದ್ಧ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಈ ಕೇಸಿನ ಸಂಬಂಧ ವಕೀಲರು ಹಾಗೂ ಪ್ರಕರಣದ ಕರ್ಚಿಗೆ ಹಣ ನೀಡುವಂತೆ ಕೇಳಿದ್ದರು.”
“ಇದಕ್ಕೆ ನಾನು ಒಪ್ಪದಿದ್ದಾಗ ನಿಮ್ಮ ಮೇಲೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸುತ್ತೇನೆಂದು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದರು. ಸಾರ್ವಜನಿಕರ ಮುಂದೆಯೇ ಗಲಾಟೆ ಮಾಡಿ, ಎಳೆದಾಡಿ ಹೊಡೆಯಲು ಮುಂದೆ ಬಂದಿದ್ದರು. ಅಲ್ಲದೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದರು. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ” ಎಂದು ಡಿಆರ್ ಎಫ್ ಒ ರಾಜಪ್ಪ ಲಿಖಿತ ದೂರು ನೀಡಿದ್ದಾರೆ.
ಅಲ್ಲದೆ ಫೆಬ್ರವರಿ 10ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರಿನ ಪ್ರಕರಣದ ಸಂಬಂಧ ನ್ಯಾಯಾಲಯದ ಕರ್ಚಿಗೆ ಹಣ ನೀಡುವಂತೆ ಕರೆ ಮಾಡಿ ಒತ್ತಾಯಿಸಿದ್ದರು. ಹಣ ನೀಡದಿದ್ದಲ್ಲಿ ಜಾತಿನಿಂದನೆ ಕೇಸ್ ದಾಖಲಿಸುವುದಾಗಿ ಬೆದರಿಸಿದ್ದರು. ಈ ಕುರಿತ ಕರೆ ಸಂಭಾಷಣೆಯ ವಾಯ್ಸ್ ರೆಕಾರ್ಡ್ ಸಾಕ್ಷಿಯನ್ನು ದೂರಿನೊಂದಿಗೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಗುತ್ತಿಗೆದಾರ ಶ್ರೀನಿವಾಸ್ ಕೂಡ ಡಿಆರ್ ಎಫ್ಒ ರಾಜಪ್ಪ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಪ್ರತ್ಯೇಕವಾಗಿ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ.
ಡಿಶುಂ ಡಿಶುಂ ಪ್ರಕರಣದ ಹಿನ್ನಲೆ :
ಪ್ರಕರಣದ ಬಗ್ಗೆ ಶ್ರೀನಿವಾಸ್ ಅವರನ್ನು ಬೆಂಗಳೂರು ವೈರ್ ಸಂಪರ್ಕಿಸಿ ಕೇಳಿದಾಗ ಅವರು ಹೇಳಿದ್ದು ಹೀಗೆ, “ಈ ಹಿಂದೆ ಬೆಂಗಳೂರು ನಗರ ಜಿಲ್ಲೆ ಅರಣ್ಯ ಇಲಾಖೆಯಲ್ಲಿ ಕೆಂಗೇರಿ ನರ್ಸರಿ ಕಾವಲುಗಾರನಾಗಿದ್ದ ಸಂಜೀವಯ್ಯ ವಿರುದ್ಧ ದ್ವೇಷ ಹೊಂದಿದ್ದ ರಾಜಪ್ಪ, ಅವರನ್ನು ಎತ್ತಂಗಡಿ ಮಾಡಿಸಲು ಸ್ವತಃ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬೆಂಗಳೂರು ನಗರ ಜಿಲ್ಲೆ ಡಿಎಫ್ ಒ ದೀಪಿಕಾ ಬಾಚಪೇಯಿ ಅವರಿಗೆ, ಸಂಜೀವಯ್ಯ ವರ್ಗಾವಣೆ ಕೋರಿ ಪತ್ರ ಬರೆದಿರುವಂತೆ ನಕಲಿ ಪತ್ರ ಬರೆದಿದ್ದರು. ರಾಜಪ್ಪ ನಕಲಿ ವರ್ಗಾವಣೆ ಪತ್ರ ಬರೆದ ವಿಚಾರ ತಿಳಿದ ಡಿಎಫ್ ಒ ಆಗಿದ್ದ ದೀಪಿಕಾ ಆತನ ವಿರುದ್ಧ ಕುಂಬಲಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು”.
“ದೀಪಿಕಾ ಬಾಜಪೇಯಿ ವಿರುದ್ಧ ಸೇಡು ತೀರಿಸಿಕೊಳ್ಳಲು ಹಾಗೂ ಅವರ ವಿರುದ್ಧ ಗಲಾಟೆ ಮಾಡಲು ನನ್ನನ್ನು ಹಾಗೂ ಗುತ್ತಿಗೆದಾರರಾದ ಗೋವಿಂದಪ್ಪ ಹಾಗೂ ಚೆನ್ನಪ್ಪ ಅವರನ್ನು ದಾಳವಾಗಿ ಬಳಸಿಕೊಂಡರು. ಇದರಿಂದಾಗಿ ಆಗಿನ ಡಿಎಪ್ ಒ ದೀಪಿಕಾ ಬಾಜಪೇಯಿ 2016ರಲ್ಲಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ನೀಡಿದ ದೂರಿಗೆ ತಮ್ಮ ಮೂವರ ವಿರುದ್ಧ ಪ್ರಕರಣ ದಾಖಲಾಯ್ತು.” ಎಂದು ಕಾಂಟ್ರಾಕ್ಟರ್ ಶ್ರೀನಿವಾಸ್ ಹೇಳಿದ್ದಾರೆ.
“ಅಲ್ಲಿಂದ ಇಲ್ಲಿಯ ತನಕ ಕೋರ್ಟ್ ಕಚೇರಿ, ಪೊಲೀಸ್ ಠಾಣೆ, ಜಾಮೀನು ಪಡೆಯಲು ಇತ್ಯಾದಿ ಕಾರಣಗಳಿಗಾಗಿ ಸಾಕಷ್ಟು ಹಣ ಕರ್ಚಾಯಿತು. ಡಿಆರ್ ಎಫ್ ರಾಜಪ್ಪನ ಕುಮ್ಮಕ್ಕಿನಿಂದ ಬಲಿಪಶುಗಳಾದ ನಾವು ಸಾಕಷ್ಟು ಬಾರಿ ನ್ಯಾಯಲಯ, ಪ್ರಕರಣ ಕರ್ಚಿಗೆ ಹಣ ಕೇಳಿದರೂ ನಮಗೆ ಸಹಾಯ ಮಾಡಲಿಲ್ಲ. ವಕೀಲರ ಫೀಸ್ ಕಟ್ಟಲು ತೊಂದರೆಯಾಗಿತ್ತು.”
“ಇದೇ ವಿಚಾರಕ್ಕೆ ಮಾರ್ಚ್ 4 ರಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ತಮಗಾದ ಅನ್ಯಾಯದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ತಮ್ಮ ಮೇಲೆ ರಾಜಪ್ಪ ಕೈಮಾಡಿದ್ದು ಕಪಾಳ ಮತ್ತು ತಮ್ಮ ಕಿವಿಗೆ ಏಟಾಗಿದೆ. ಈ ಬಗ್ಗೆ ವೈದ್ಯಕೀಯ ವರದಿಯನ್ನು ಪೊಲೀಸರಿಗೆ ನೀಡಿದ್ದೇನೆ. ತಮ್ಮ ಜಾತಿ ನಿಂದನೆ ಮಾಡಿದ ರಾಜಪ್ಪ ವಿರುದ್ಧ ಜಾತಿ ನಿಂದನೆ ಮೊಕದ್ದಮೆ ಕೂಡ ದಾಖಲಿಸಿದ್ದೇನೆ” ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿ ಒಪ್ಪಿಸಿದ ಬಿಬಿಎಂಪಿ
ಇನ್ನು ಇದೇ ಪ್ರಕರಣದ ಬಗ್ಗೆ ಪಾಲಿಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಂಗನಾಥ್ ಬೆಂಗಳೂರು ವೈರ್ ಜೊತೆ ಮಾತನಾಡುತ್ತಾ, “ಮಾ.4ರಂದು ಮೂವರು ಗುತ್ತಿಗೆದಾರರು ತಮ್ಮ ಕಚೇರಿಗೆ ಮಧ್ಯಾಹ್ನ ಬಂದು, ಡಿಆರ್ ಎಫ್ ಒ ರಾಜಪ್ಪ ಗೆ ಹೊಡೆದು, ಅವ್ಯಾಚ್ಯವಾಗಿ ನಿಂದಿಸಿ, ದೌರ್ಜನ್ಯ ನಡೆಸಿರುವುದು ತಪ್ಪು. ಹಳೇ ವೈಷ್ಯಮದ ಹಿನ್ನಲೆಯಲ್ಲಿ ಈ ಘಟನೆ ನಡೆದಿರುವುದು ತಮ್ಮ ಗಮನಕ್ಕೆ ಬಂದಿದೆ.”
“ಹಾಡ ಹಗಲೇ ನಡೆದ ಈ ಘಟನೆಯ ಧ್ವನಿಸಹಿತ ಸಿಸಿಟಿವಿ ದೃಶ್ಯಾವಳಿಗಳನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಈಗಾಗಲೇ ನೀಡಿದ್ದೇವೆ. ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಈ ರೀತಿ ಏಕಾಏಕಿ ಹೊಡೆಯೋದು, ಗಲಾಟೆ ಮಾಡಿದ್ದು ಸರಿಯಲ್ಲ. ಅಗತ್ಯವಾದರೆ ಪೊಲೀಸರ ತನಿಖೆಗೆ ಸಹಕಾರ ಕೂಡುತ್ತೇನೆ.” ಎಂದು ಹೇಳಿದ್ದಾರೆ.
ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಲು ಬಿಬಿಎಂಪಿ ಸಿಬ್ಬಂದಿ, ಅಧಿಕಾರಿಗಳಿಗೆ ನೂರು ಕಾರಣ ಸಿಗುತ್ತೆ. ಕಚೇರಿಗೆ ಅಲೆದೂ ಅಲೆದೂ ನಾಗರೀಕರು ರೋಸಿ ಹೋಗಿದ್ದಾರೆ. ತಂತ್ರಜ್ಞಾನವನ್ನು ಅಳವಡಿಸಿಕೊಂಡರೂ ಬಿಬಿಎಂಪಿಯಲ್ಲಿ ಮಾತ್ರ ನಿಧಾನಗತಿಯ ಧೋರಣೆ ಮುಂದುವರೆದಿದೆ.
ಈ ಮಧ್ಯೆ ಅಧಿಕಾರಿಗಳು- ಗುತ್ತಿಗೆದಾರರ ಅಪವಿತ್ರ ಮೈತ್ರಿಯ ಕಾರಣಗಳಿಂದ ಆಗಾಗ್ಗೆ ಒಳಗಿಂದೊಳಗೆ ಜಗಳ ನಡೆದು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗೋದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಇದಕ್ಕೆ ಬಿಬಿಎಂಪಿ ಆಯುಕ್ತರು ಲಗಾಮು ಹಾಕಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.