ಬೆಂಗಳೂರು : ಬಿಬಿಎಂಪಿಯ ಇಬ್ಬರು ಅಧಿಕಾರಿಗಳು ಸೇರಿದಂತೆ ರಾಜ್ಯಾದ್ಯಂತ ಒಟ್ಟು 9 ಭ್ರಷ್ಟ ಅಧಿಕಾರಿಗಳ 11 ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದರಿಂದಾಗಿ ಭ್ರಷ್ಟ ಅಧಿಕಾರಿಗಳು ಏಕಾ ಏಕಿ ದಾಳಿಯಿಂದ ಬೆಳಗ್ಗೆಯೇ ಶಾಕ್ ಗೆ ಒಳಗಾಗಿದ್ದಾರೆ. ಆದಾಯಕ್ಕೆ ಮೀರಿ ಆಸ್ತಿ ಗಳಿಕೆ ಹಿನ್ನೆಲೆ ಎಸಿಬಿ ಪೊಲೀಸ್ ಅಧಿಕಾರಿಗಳು ಈ ದಾಳಿ ಮಾಡಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ಮೈಸೂರು, ಮಂಗಳೂರು, ಉಡುಪಿ, ದಾವಣಗೆರೆ, ಬೆಳಗಾವಿ, ಯಾದಗಿರಿ ಜಿಲ್ಲೆಗಳಲ್ಲಿ ಎಸಿಬಿ ಪೋಲಿಸ್ ಅಧಿಕಾರಿಗಳು ವಿವಿಧ ತಂಡಗಳಲ್ಲಿ ದಾಳಿ ನಡೆಸಿದ್ದಾರೆ.
ಬಿಬಿಎಂಪಿ ಪರಮ ಭ್ರಷ್ಟ ಇಲಾಖೆಯಾದ ನಗರ ಯೋಜನೆಯಲ್ಲಿನ ಯಲಹಂಕ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಹಾಯಕ ಎಂಜಿನಿಯರ್ ಸುಬ್ರಮಣಿ ಮನೆ ಮೇಲೆ ದಾಳಿ ನಡೆದಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಪಾಲಿಕೆ ನಗರ ಯೋಜನೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು 41 ಎಇಇ, ಎಇ ಹಾಗೂ ಟೌನ್ ಪ್ಲಾನರ್ ಗಳನ್ನು ಅದೇ ಇಲಾಖೆಯ ಬೇರೆ ಸ್ಥಳಗಳಿಗೆ ತಕ್ಷಣದಿಂದ ಸೇವೆಯಿಂದ ಬಿಡುಗಡೆ ಆಗುವಂತೆ ಫೆ.10ರಂದು ಆದೇಶ ಹೊರಡಿಸಿದ್ದರು. ಆದರೆ ಸುಬ್ರಮಣ್ಯ ಕೆಎಟಿ ಆದೇಶದ ಮೇರೆಗೆ ಮತ್ತೆ ಅದೇ ಸ್ಥಳದಲ್ಲಿ ಮುಂದುವರೆದಿದ್ದರು. ಸದ್ಯದಲ್ಲೆ ಅವರು ನಿವೃತ್ತಿ ಹೊಂದುವವರಿದ್ದರು ಎನ್ನಲಾಗಿದೆ.
ಈಗ ಆದಾಯಕ್ಕೂ ಮೀರಿ ಆಸ್ತಿ ಗಳಿಗೆ ಆರೋಪದಲ್ಲಿ ಎಸಿಬಿ ದಾಳಿ ನಡೆದಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಬಿಎಂಟಿಎಫ್ ಪೊಲೀಸ್ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಮನೆ ಮೇಲೂ ದಾಳಿ ನಡೆಸಲಾಗಿದೆ.
ಕಸವನಹಳ್ಳಿ ಮನೆ ಮೇಲೆ ದಾಳಿ ವೇಳೆ ಮದ್ಯ ಬಾಟಲ್, ನಗದು ಹಣ ಸಿಕ್ಕಿದೆ. ದಾಖಲೆಗಳ ಪರಿಶೀಲನೆ ಮುಂದುವರೆದಿದೆ. ಎಸಿಬಿ ಎಸ್ಪಿ ಕುಲದೀಪ್ ಜೈನ್ ನೇತೃತ್ವದಲ್ಲಿ ದಾಳಿ ನಡೆಸಲಾಗುತ್ತಿದೆ. ಹಲವು ದಿನಗಳಿಂದ ಎಸಿಬಿಗೆ ಸಾಕಷ್ಟು ದೂರು ಬಂದ ಹಿನ್ನಲೆ ದಾಳಿ ಮಾಡಲಾಗಿದೆ.
ವಿಕ್ಟರ್ ಸೈಮನ್ ಮನೆ,ಕಾರು ,ಅವರ ತಂದೆ ಮನೆ ,ಮಾವನ ಮನೆ ಎಲ್ಲಾ ಕಡೆ ದಾಳಿ ನಡೆಸಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ.
ದಾಳಿಗೊಳಗಾದ ಅಧಿಕಾರಿಗಳ ಹೆಸರು, ಹುದ್ದೆ, ದಾಳಿ ನಡೆದ ಸ್ಥಳಗಳು ಈ ಕೆಳಕಂಡಂತಿದೆ ;
- ಕೃಷ್ಣೆಗೌಡ ಪ್ರಾಜೆಕ್ಟ್ ಡೈರೆಕ್ಟರ್ ನಿರ್ಮಿತಿ ಕೇಂದ್ರ ಚಿಕ್ಕಬಳ್ಳಾಪುರ.
ಕೋಲಾರದ ಮನೆ, ಚಿಕ್ಕಬಳ್ಳಾಪುರದ ಕಚೇರಿ, ಸಹೋದರರ ಮನೆಗಳಲ್ಲಿ ಶೋಧ.
ಎಸ್ ಪಿ ಕಲಾ ಕೃಷ್ಣಮೂರ್ತಿ ನೇತೃತ್ವದಲ್ಲಿ ದಾಳಿ ಪರಿಶೀಲನೆ.
- ಹನಮಂತ ಶಿವಪ್ಪ ಚಿಕ್ಕಣ್ಣನವರ,
ಡೆಪ್ಯುಟಿ ಚೀಫ್ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ಬೆಳಗಾವಿ.
ಆಧಿಕಾರಿಯ ಮನೆ, ಅಂಕೋಲಾ, ಬೆಳಗಾವಿ ಕಚೇರಿ, ಜಮಖಂಡಿಯ ಹುಟ್ಟೂರು, ಬೆಳಗಾವಿಯ ಫ್ಲಾಟ್ ಗಳ ಮೇಲೆ ದಾಳಿ. ಎಸ್ ಪಿ ನ್ಯಾಮಗೌಡ ನೇತೃತ್ವದಲ್ಲಿ ಎಸಿಬಿ ದಾಳಿ ಪರಿಶೀಲನೆ.
- ಸುಬ್ರಹ್ಮಣ್ಯ ಕೆ ವಡ್ಡರ್, ಜಂಟಿ ನಿರ್ದೇಶಕರು, ಟೌನ್ ಆಂಡ್ ಕಂಟ್ರಿ ಫ್ಲಾನಿಂಗ್ ಮೈಸೂರು.
ಉಡುಪಿಯ ಮನೆ, ಕಾರವಾರದ ತಾಯಿ ಮನೆ, ಮೈಸೂರಿನ ಬಾಡಿಗೆ ಮನೆ ಕಚೇರಿ ಮೇಲೆ ದಾಳಿ.
ಎಸ್ ಪಿ ಬೋಪಯ್ಯ ನೇತೃತ್ವದ ಎಸಿಬಿ ತಂಡದಿಂದ ದಾಳಿ ಪರಿಶೀಲನೆ. ಆದಾಯಕ್ಕು ಮೀರಿ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ.
- ಮುನಿ ಗೋಪಾಲರಾಜು, ಸೂಪರಿಂಟೆಂಡೆಂಟ್ ಇಂಜಿನಿಯರ್ ಚೆಸ್ಕಾಂ ಮೈಸೂರು.
ಮೈಸೂರು ಕುವೆಂಪುನಗರದ ಚೆಸ್ಕಾಂ ಕಚೇರಿ, ಗೋಕುಲಂನ ನಿವಾಸ, ಕನಕಪುರದ ಹುಟ್ಟೂರಿನ ಮನೆ ಮೇಲೆ ದಾಳಿ.
- ಚನ್ನವೀರಪ್ಪ, ಎಫ್‌ಡಿಎ ಆರ್ ಟಿಒ ಮೈಸೂರು.
ಮಂಡ್ಯದ ಕುವೆಂಪುನಗರ ಮನೆ, ಹುಟ್ಟೂರು ಹಲಕೆರೆಯ ಮನೆ, ಮೈಸೂರು ಲಕ್ಷ್ಮೀಪುರಂ ಕಚೇರಿ ಮೇಲೆ ದಾಳಿ.
6.ರಾಜು ಫತ್ತರ್, ಅಕೌಂಟ್ ಅಪೀಸರ್ ಜೆಸ್ಕಾಂ ಯಾದಗಿರಿ.
ಯಾದಗಿರಿ ಮನೆ ಹಾಗೂ ಕಚೇರಿ ಮೇಲೆ ದಾಳಿ ಪರಿಶೀಲನೆ
- ವಿಕ್ಟರ್ ಸೈಮನ್, ಪೊಲೀಸ್ ಇನ್ಸ್‌ಪೆಕ್ಟರ್ ಬಿಎಂಟಿಎಫ್.
ಬೆಂಗಳೂರಿನ ಕಸವನಹಳ್ಳಿಯ ಮನೆ, ಮೈಸೂರಿನ ತಂದೆಯ ಹಾಗೂ ಮಾವನ ಮನೆ ಮತ್ತು ಬೆಂಗಳೂರಿನ ಬಿಎಂಟಿಎಫ್ ಕಚೇರಿ ಮೇಲೆ ದಾಳಿ ಪರಿಶೀಲನೆ.
- ಕೆ ಸುಬ್ರಹ್ಮಣ್ಯಂ, ಜೂನಿಯರ್ ಇಂಜಿನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಟೌನ್ ಫ್ಲಾನಿಂಗ್ ಅಫೀಸ್ ಬಿಬಿಎಂಪಿ.
ಸಹಕಾರನಗರ ನಿವಾಸ ಮತ್ತು ಯಲಹಂಕ ಕಚೇರಿ ಮೇಲೆ ದಾಳಿ ಪರಿಶೀಲನೆ.
- ಕೆ ಎಂ ಪ್ರಥಮ್, ಡೆಪ್ಯುಟಿ ಡೈರೆಕ್ಟರ್ ಪ್ಯಾಕ್ಟರಿಸ್ ಆಂಡ್ ಬಾಯ್ಲರೀಸ್ ದಾವಣಗೆರೆ.
ಬೆಂಗಳೂರಿನ ಸಂಜಯನಗರ ಬಳಿಯ ನಾಗಶೆಟ್ಟಿಹಳ್ಳಿ ಮನೆ, ಸಂಜಯನಗರದ ಸಹೋದರನ ಮನೆ, ದಾವಣಗೆರೆಯ ಕಚೇರಿ ಮೇಲೆ ದಾಳಿ ಪರಿಶೀಲನೆ.