ಬೆಂಗಳೂರು : ಏನು ಮಾಡಿದ್ರೂ ನಡೆಯುತ್ತೆ. ಹೇಳೋರಿಲ್ಲ ಕೇಳೋರಿಲ್ಲ ಅನ್ನುವಂತಾಗಿದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ.
ಭ್ರಷ್ಟಾಚಾರ ಮತ್ತು ಹಣದ ಹೊಳೆಯೇ ಹರಿಯುವ ಪಾಲಿಕೆ ನಗರ ಯೋಜನೆಯಲ್ಲಿ ಬರೋಬ್ಬರಿ 41 ಜನ ಎಂಜಿನಿಯರ್ ಗಳನ್ನು ಫೆಬ್ರವರಿ 10 ರಂದು ಆಯುಕ್ತರು ಟ್ರಾನ್ಸ್ ಫರ್ ಮಾಡಿದ್ರೂ ಹಲವು ಅಧಿಕಾರಿಗಳಿನ್ನು ಸ್ಥಳ ಬಿಟ್ಟು ಕದಲಲಿಲ್ಲ. ಕೆಲವರು ವರ್ಗಾವಣೆಯಾಗಿ ಮತ್ತೆ ಅದೇ ಸ್ಥಳಕ್ಕೆ ಬಂದು ಕೂತಿದ್ದಾರೆ.
ಒಟ್ಟು ಒಬ್ಬರು ಉಪನಿರ್ದೇಶಕ ಹುದ್ದೆ, ನಗರ ಯೋಜನೆ ಸಹಾಯಕ ನಿರ್ದೇಶಕ ಹುದ್ದೆಯ 20 ಜನರು ಹಾಗೂ 17 ಜನ ಸಹಾಯಕ ಎಂಜಿನಿಯರ್ ಗಳನ್ನು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಟ್ರಾನ್ಸ್ ಫರ್ ಮಾಡಿ ಆದೇಶಿಸಿದ್ದರು.
ಆದರೇ ಆ ಪೈಕಿ 4 ಜನ ಎಡಿಟಿಪಿಗಳು ಆಯುಕ್ತರ ಆದೇಶದ ಹೊರತಾಗಿಯೂ ತಮ್ಮ ಹುದ್ದೆಯಿಂದ ಬಿಡುಗಡೆಗೊಂಡು ನಿಗಧಿಪಡಿಸಿದ ಸ್ಥಳಕ್ಕೆ ವರದಿ ಮಾಡಿಕೊಂಡಿಲ್ಲ. ಅಲ್ಲದೆ ಮೂವರು ಎಇಗಳ ಪೈಕಿ ನಿವೃತ್ತಿ ಹಂತದಲ್ಲಿರುವ ಯಲಹಂಕ ವಲಯ ನಗರ ಯೋಜನೆ ವಿಭಾಗದ ಎಇ ಸುಬ್ರಮಣ್ಯ, ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಿಂದ ವರ್ಗಾವಣೆಗೆ ತಡೆ ತಂದು ಅದೇ ಸ್ಥಳದಲ್ಲಿ ಮುಂದುರೆದಿದ್ದಾರೆ.
ಇನ್ನು ಮಹದೇವಪುರ ವಲಯದ ಟೌನ್ ಪ್ಲಾನಿಂಗ್
ವಿಭಾಗದ ಎಇ ಬೀರೇಶ್ ಆಯುಕ್ತರ ಆದೇಶದ ಹೊರತಾಗಿಯೂ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ.
ಟ್ರಾನ್ಸ ಫರ್ ಮಾಡಿದ ಆಯುಕ್ತರಿಂದಲೇ ಎಇಗೆ ಮರು ಆದೇಶ ?
ಆಶ್ಚರ್ಯ ಅಂದ್ರೆ ನಗರ ಯೋಜನೆ ದಕ್ಷಿಣ ವಿಭಾಗದ ಜಂಟಿ ನಿರ್ದೇಶಕ ಕಚೇರಿಯಲ್ಲಿ ಎಇ ಆಗಿದ್ದ ಎಚ್.ಕೆ.ತಿಪ್ಪೇಶ್ ಕೂಡ 41 ಮಂದಿಯಂತೆ ಫೆಬ್ರವರಿ 10ರಂದು ವರ್ಗಾವಣೆ ಪಟ್ಟಿಯಲ್ಲಿದ್ದರು. ಆದ್ರೆ ಕೇವಲ 21 ದಿನದಲ್ಲೇ ಅದೇ ಸ್ಥಳಕ್ಕೆ ಆಯುಕ್ತರಿಂದ ಮರು ಆದೇಶ ಮಾಡಿಕೊಂಡು ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಲವು ದಿನಗಳಿಂದ ಒಂದೇ ಸ್ಥಳದಲ್ಲಿ ಬೀಡುಬಿಟ್ಟಿದ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದರು. ಅದರಂತೆ ಫೆಬ್ರವರಿ 10ನೇ ತಾರೀಖಿನಂದು ನಗರ ಯೋಜನೆ ವಿಭಾಗದಿಂದ ಓರ್ವ ಉಪ ನಿರ್ದೇಶಕ, 20 ಎಇಇ, 17 ಎಇ ಹಾಗೂ 3 ನಗರ ಯೋಜಕರು ಸೇರಿದಂತೆ ಒಟ್ಟು 41 ಮಂದಿಯನ್ನು ಅದೇ ಇಲಾಖೆಯ ಬೇರೆಡೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಬಿಡುಗಡೆಗೊಳ್ಳುವಂತೆ ಆದೇಶಿಸಿದ್ದರು.
ಬಟವಾಡೆ ಅಧಿಕಾರಿಗಳು ಕೂಡಲೇ ಅವರನ್ನು ರಿಲೀವ್ ಮಾಡುವಂತೆಯೂ ಸೂಚಿಸಿದ್ದಾರೆ. ಆದರೆ ಅಧಿಕಾರಿಗಳು ಆಯುಕ್ತರ ಆದೇಶಕ್ಕೆ ಕ್ಯಾರೇ ಅಂದಿಲ್ಲ.
ಲಂಚದ ಹಣ ಕೊಡಲು- ಪಡೆಯಲು ವ್ಯವಸ್ಥಿತ ಜಾಲ
ಪ್ರತಿ ಬಾರಿಯೂ, ಲಾಭದಾಯಕವಾಗಿರುವ ನಗರ ಯೋಜನೆ ಹುದ್ದೆಗೆ ನಿಗಧಿಪಡಿಸಿದಕ್ಕಿಂತ ಹೆಚ್ಚಾಗಿ ಅಧಿಕಾರಿಗಳು ಲಕ್ಷ ಲಕ್ಷ ರೂಪಾಯಿ ಲಂಚದ ಹಣ, ರಾಜಕೀಯ ಪ್ರಭಾವ ಬಳಸಿ ಆ ವಿಭಾಗಕ್ಕೆ ಬರುತ್ತಾರೆ. ಬಂದವರು ಹಾಗೇ ಕುಳಿತುಕೊಳ್ಳಲು ಸಾಧ್ಯವೇ? ಕಟ್ಟಡ ಕಟ್ಟುಲು ನಾಗರೀಕರಿಕೆ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣಪತ್ರ, ಸ್ವಾಧೀನ ಪ್ರಮಾಣಪತ್ರ ಹೀಗೆ ಮೊದಲಾದ ಕೆಲಸಗಳಿಗೆ ಲಂಚದ ಹಣವಿಲ್ಲದೆ ಒಂದು ಫೈಲ್ ಕೂಡ ಮುಂದೆ ಹೋಗಲು ಬಿಡಲ್ಲ.
ಅಷ್ಟರಮಟ್ಟಿಗೆ ವ್ಯವಸ್ಥಿತವಾಗಿ ಕೆಲಸ ಮಾಡುತ್ತಾರೆ. ಲಂಚದ ಹಣ ಪಡೆಯಲು ತನ್ನದೇ ಜಾಲವನ್ನು ನಗರ ಯೋಜನೆ ವಿಭಾಗದಲ್ಲಿ ಹೊಂದಿರುವುದು, ಅದನ್ನು ಹತ್ತಿರದಿಂದ ನೋಡಿದವರೆಲ್ಲರಿಗೂ ಗೊತ್ತಿದೆ.
ಇನ್ನೂ ಸೇವೆಯಿಂದ ಬಿಡಗಡೆಯಾಗದ ಎಡಿಟಿಪಿಗಳ ವಿವರ ಹೀಗಿದೆ
ಹೆಸರು —- ವಲಯ
ಪ್ರಕಾಶ್ —- ಮಹದೇವಪುರ ವಲಯ
ಕೇಶವಮೂರ್ತಿ — ಪಶ್ಚಿಮ ವಲಯ
ಶಾನು —— ರಾಜರಾಜೇಶ್ವರಿ ನಗರ ವಲಯ
ಗುರುಪ್ರಸಾದ್ —— ರಾಜರಾಜೇಶ್ವರಿ ನಗರ ವಲಯ
ನಿಮ್ಮ ವಲಯದಲ್ಲಿನ ಇಬ್ಬರು ನಗರ ಯೋಜನೆ ಎಂಜಿನಿಯರ್ ಗಳನ್ನು ಯಾಕೆ ಇನ್ನೂ ಬಿಡುಗಡೆಗೊಳಿಸಿಲ್ಲ ಎಂದು ಮಹದೇವಪುರ ಜಂಟಿ ಆಯುಕ್ತ ವೆಂಕಟಾಚಲಪತಿಯವರನ್ನುಕೇಳಿದರೆ, “ಒಂದೇ ಒಂದು ನಿಮಿಷ ಚೆಕ್ ಮಾಡ್ತೀನಿ” ಅಂದವರು ನಂತರ “ತಾವು ಮೀಟಿಂಗ್ ನಲ್ಲಿ ಬ್ಯುಸಿ” ಎಂದಷ್ಟೇ ಹೇಳಿ ಕರೆ ಕಟ್ ಮಾಡಿದರು.
ಒಂದು ವಲಯದ ಜಂಟಿ ಆಯುಕ್ತರಿಗೆ ತಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಪ್ರಮುಖ ಹುದ್ದೆಯಲ್ಲಿದ್ದವರ ವರ್ಗಾವಣೆ ಬಗ್ಗೆ ತಿಳಿದಿರಲ್ವಾ?
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿ ಇನ್ನು ಇಬ್ಬರು ಎಡಿಟಿಪಿ ಅಧಿಕಾರಿಗಳು ಸೇವೆಯಿಂದ ಬಿಡುಗಡೆಗೊಂಡಿಲ್ವಾ ಅಂತ ರಾಜರಾಜೇಶ್ವರಿ ನಗರ ವಲಯ ಜಂಟಿ ಆಯುಕ್ತ ನಾಗರಾಜ್ ಅವರನ್ನು ಕೇಳಿದಾಗ, “ಆ ಇಬ್ಬರು ಅವರೇ ರಿಲೀವ್ ಆಗಬೇಕಿತ್ತು. ನಾವು ಸೇವೆಯಿಂದ ಬಿಡುಗಡೆ ಮಾಡುವ ಮುಂಚೆ. ಅವರು ಸೇವೆಯಿಂದ ಬಿಡುಗಡೆಯಾಗಿಲ್ಲ ಅಂದರೆ ಅಮಾನತು ಮಾಡಬೇಕಾಗುತ್ತದೆ. ತಾವೀಗ ಮೀಟಿಂಗ್ ನಲ್ಲಿದ್ದೇನೆ” ಎಂದಷ್ಟೇ ಪ್ರತಿಕ್ರಿಯಿಸಿದರು.
ಬಿಬಿಎಂಪಿ ಆಯುಕ್ತರ ಕಚೇರಿ ಆದೇಶದಲ್ಲಿಯೇ ಅಷ್ಟು ಸ್ಪಷ್ಟವಾಗಿದೆ. ವರ್ಗಾವಣೆ ಮಾಡಿರುವ ಅಧಿಕಾರಿಗಳು ಕೂಡಲೇ ತಮ್ಮ ಹುದ್ದೆಯಿಂದ ರಿಲೀವ್ ಆಗಬೇಕು. ಇಲ್ಲವಾದಲ್ಲಿ ಸಂಬಳ ನೀಡುವ ಬಟವಾಡೆ ಅಧಿಕಾರಿಗಳು ಆ ನೌಕರ ಅಥವಾ ಅಧಿಕಾರಿಯನ್ನು ಸೇವೆಯಿಂದ ಬಿಡುಗಡೆ ಮಾಡಬೇಕು ಅಂತ. ಯಾರೂ ಸಹ ಬಿಬಿಎಂಪಿ ಆಯುಕ್ತರ ಆದೇಶವನ್ನು ಸರಿಯಾಗಿ ಪಾಲಿಸಲು ಆಸಕ್ತಿ ತೋರಿಲ್ಲ ಎಂಬುದು ಇದರಿಂದ ವೇದ್ಯವಾಗುತ್ತಿದೆ.
ಇದಕ್ಕೆಲ್ಲ ಬಿಬಿಎಂಪಿ ಆಯುಕ್ತರು ಇತಿಶ್ರೀ ಹಾಡಬೇಕಿದೆ.