ಬೆಂಗಳೂರು : ಇಂದಿನಿಂದ ಖ್ಯಾತ ನಟ ದರ್ಶನ್ ರಾಜ್ಯದ ಕೃಷಿ ಇಲಾಖೆಯ ಅಧಿಕೃತ ರಾಯಭಾರಿ. ಯಾವುದೇ ಸಂಭಾವನೆ ಪಡೆಯದೆ ಕೃಷಿ ಇಲಾಖೆಯ ರಾಯಭಾರಿಯಾಗಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ನಡೆದ “ಕೃಷಿ ಕಾಯಕದ ರಾಯಭಾರಿ” ಸ್ವೀಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದರ್ಶನ್, ಪೊಲೀಸ್ ಇಲಾಖೆಯಿಂದ, ಸಿನಿಮಾರಂಗಕ್ಕೆ ಬಂದ ಬಿ.ಸಿ.ಪಾಟೀಲ್ ಈಗ ಕೃಷಿ ಸಚಿವರಾಗಿದ್ದಾರೆ.
ನಾನು ಸರ್ಕಾರದ ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ಪ್ರಚುರ ಪಡಿಸುತ್ತೇನೆ. ರೈತರಿಗೂ ಜನರಿಗೂ ಇರುವುದು ರಕ್ತ ಸಂಬಂಧ. ಇದಕ್ಕೆ ನಾನು ಶ್ರಮಿಸುತ್ತೇನೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಅಪರೂಪದ ವಿಶೇಷ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಡಿದ್ದಾರೆ. ಚಲನಚಿತ್ರ ರಂಗದಲ್ಲಿ ಎತ್ತರಕ್ಕೆ ಬೆಳೆದಿರುವ ದರ್ಶನ್ ನಟನೆಯ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಯಾವುದೇ ಸಂಭಾವನೆಯಿಲ್ಲದೇ ಕೃಷಿ ಇಲಾಖೆಯ ರಾಯಭಾರಿಯಾಗಿರುವುದು ಹೆಮ್ಮೆಯ ವಿಚಾರ. ರೈತರ ಪರವಾಗಿ ದರ್ಶನ್‌ಗೆ ಅಭಿನಂದನೆಗಳು ಎಂದು ಹೇಳಿದರು.
ನಟ ದರ್ಶನ್ ಎತ್ತರವಿರುವಷ್ಟೇ ಹೃದಯ ವೈಶಾಲ್ಯತೆಯಿದೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಎತ್ತರವಿರುವಷ್ಟು ಅವರ ಹೃದಯವೂ ಅಷ್ಟೇ ವಿಶಾಲವಾಗಿದೆ. ಅವರಿಗೆ ರೈತರ ಪರ ಕಳಕಳಿಯಿದೆ. “ದರ್ಶನ್ ಫಾರ್ಮ್” ಎನ್ನುವುದು ಸಣ್ಣ ಝೂ ಇದ್ದಂತಿದೆ. ಇವರೇ ಸ್ವತಃ ಕೃಷಿ ಚಟುವಟಿಕೆಯನ್ನೂ ಮಾಡುತ್ತಾರೆ. ಅಲ್ಲದೇ ದರ್ಶನ್ ನಟನೆಯಲ್ಲದೆ, ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದಿರುವುದು ಖುಷಿಯ ವಿಚಾರ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಕೆಲ ಸೂಪರ್ ಸ್ಟಾರ್‌ಗಳು ಸಂಭಾವನೆ ಪಡೆದು ದೊಡ್ಡದೊಡ್ಡ ಕಂಪೆನಿ ಕಾರ್ಯಕ್ರಮಗಳಿಗೆ ರಾಯಭಾರಿಯಾಗುತ್ತಾರೆ. ಆದರೆ ದರ್ಶನ್ ಕೃಷಿ ಇಲಾಖೆಗೆ ಯಾವುದೇ ಸಂಭಾವನೆ ಪಡೆಯದೇ ರಾಯಭಾರಿಯಾಗಿರುವುದು ದರ್ಶನ್ ಅವರಲ್ಲಿ ಕೃಷಿ ಬಗ್ಗೆ ಇರುವ ಉತ್ಸಾಹ, ರೈತ ಪರ ಕಾಳಜಿಯನ್ನು ತೋರಿಸುತ್ತದೆ ಎಂದರು.
ನಾನು ಸಹ ರಾಬರ್ಟ್ ಫಿಲಂ ನೋಡುತ್ತೇನೆಂದ ಬಿ.ಸಿ.ಪಾಟೀಲ್
ದರ್ಶನ್ ನಟನೆಯ “ರಾಬರ್ಟ್” ಚಿತ್ರ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಸ್ವತಃ ಸ್ಫೂರ್ತಿಯಿಂದ ಅಭಿಮಾನಿಗಳು ಜನರು ಸೇರಿರುವುದು ನೋಡಿದರೆ ಅವರಿಗೆ ಜನರ ಅಭಿಮಾನ ಎಷ್ಟಿದೆ ಎಂದು ಎದ್ದು ತೋರಿಸುತ್ತದೆ. ನಾನು ಸಹ ದರ್ಶನ್ ಅವರ “ರಾಬರ್ಟ್” ಚಿತ್ರವನ್ನು ನೋಡುತ್ತೇನೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸಂಗೋಳ್ಳಿ ರಾಯಣ್ಣ ಪಾತ್ರಕ್ಕೂ ಸೈ, ಇತರೆ ಎಲ್ಲಾ ಪಾತ್ರಗಳಿಗೂ ನಾನು ಅಧುನಿಕ ಕೌರವನಾಗಿ ನಟನೆ ಮಾಡಿದ್ದೆ. ಆದರೆ ಪೌರಾಣಿಕವಾಗಿ ನಟನೆಯಲ್ಲಿ ದರ್ಶನ್ ಕೌರವನಾಗಿ ನಟಿಸಿದ್ದಾರೆ. ಮಾರ್ಚ್ 11 ರಂದು “ರಾಬರ್ಟ್” ಚಿತ್ರ ರಿಲೀಸ್ ಆಗಲಿದ್ದು ಚಿತ್ರ ಸೂಪರ್ ಸೂಪರ್ ಹಿಟ್ ಆಗಲಿ ಎಂದು ಬಿ.ಸಿ.ಪಾಟೀಲ್ ಹಾರೈಸಿದರು.
ಕಾರ್ಯಕ್ರಮದಲ್ಲಿ ” ಕೃಷಿ ಕೈಪಿಡಿ-2021″ಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಇಲಾಖೆಯ ನಿರ್ದೇಶಕ ಶ್ರೀನಿವಾಸ್, ಮೇಲ್ಮನೆ ಸದಸ್ಯ ಸಂದೇಶ್ ನಾಗರಾಜ್, ಸೇರಿದಂತೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.