ಬೆಂಗಳೂರು : ವಿದೇಶಿ ಡ್ರಗ್ ಪೆಡ್ಲರ್ ಒಬ್ಬರನ್ನು ಬಂಧಿಸಿರುವ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಆತನಿಂದ 40 ಲಕ್ಷ ಮೌಲ್ಯದ ಎಂಡಿಎಂಎ ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಾವೇರಿನಗರದಲ್ಲಿ ವಾಸವಿದ್ದ 34 ವರ್ಷ ವಯಸ್ಸಿನ ಯುಗೊಚಿಕ್ವು ವೆಕ್ಟರ್ ಎಂಬಾತನೇ ಅಕ್ರಮವಾಗಿ ನಗರದಲ್ಲಿ ಎಂಡಿಎಂಎ ಮಾದಕದ್ರವ್ಯವನ್ನು ಮಾರುತ್ತಿದ್ದ.
ಈತನನ್ನು ಬಂಧಿಸಿರುವ ಸಿಸಿಬಿ ಪೊಲೀಸರ ತಂಡ 500 ಗ್ರಾಮ್ ಮಾದಕ ವಸ್ತು, ಕೃತ್ಯಕ್ಕೆ ಬಳಸುತ್ತಿದ್ದ 2 ಮೊಬೈಲ್ ಫೋನ್ ಗಳನ್ನು ಹಾಗೂ ಒಂದು ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.
ಯುಗೊಚಿಕ್ವು ವೆಕ್ಟರ್ ವಿದ್ಯಾರ್ಥಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದು ಪಾಸ್ ಪೋರ್ಟ್, ವೀಸಾ ನಿಯಮಾವಳಿಗಳನ್ನು ಉಲ್ಲಂಘಿಸಿ ನಗರದಲ್ಲಿ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಈತ ಮುಂಬೈನಲ್ಲಿರುವ ಡ್ರಗ್ ಪೆಡ್ಲರ್ ಮೈಕಲ್ ನಿಂದ ಡ್ರಗ್ಸ್ ಗಳನ್ನು ಅಕ್ರಮವಾಗಿ ತರಿಸಿಕೊಂಡು ಬೆಂಗಳೂರಿನಲ್ಲಿ ಅವುಗಳನ್ನು ಮಾರುತ್ತಿದ್ದ. ಪ್ರಾಥಮಿಕ ತನಿಖೆಯಿಂದ ಈತನ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಎಂಡಿಎಂಎ ಎಂದರೇನು?
ಮಿಥಿಲಿನೆಡಿಯಾಕ್ಸಿ ಮೆಥಾ ಪೆಂಟಮೈನ್ ಸಂಕ್ಷಿಪ್ತವಾಗಿ ಎಂಡಿಎಂಎ ಎನ್ನಲಾಗುತ್ತದೆ. ಇದೊಂದು ಸಿಂಥೆಟಿಕ್ ಡ್ರಗ್. ಈ ವಸ್ತು ಫಿನೈಲೆಥೈಲಮೈನ್ ಗುಂಪಿಗೆ ಸೇರಿದ ಆಂಫೆಟಮೈನ್ ಸರಣಿಯ ಅರೆ-ಸಂಶ್ಲೇಷಿತ ಸೈಕೋ ಆಕ್ಟಿವ್ ಸಂಯುಕ್ತ. ಇದನ್ನು ಸಾಮಾನ್ಯವಾಗಿ ಆಡುಭಾಷೆಯಲ್ಲಿ ಭಾವಪರವಶತೆ ಎಂದು ಕರೆಯಲಾಗುತ್ತದೆ.
ಎಂಡಿಎಂಎ ವಿಶಿಷ್ಟ ಮನೋಭಾವದ ಗುಣಲಕ್ಷಣಗಳನ್ನು ಹೊಂದಿದೆ. ಏಕೆಂದರೆ ಅದು ಅನ್ಯೋನ್ಯತೆ ಮತ್ತು ಇತರರಲ್ಲಿ ನಂಬಿಕೆಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಮನಸ್ಸಿನಲ್ಲಿನ ಭಯ ಮತ್ತು ಆತಂಕದ ಭಾವನೆಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.
ಎಂಡಿಎಂಎ ತಯಾರಿಕೆ, ಸಂಗ್ರಹಣೆ, ಸಾಗಣೆ ಮತ್ತು ವಿತರಣೆ ವಿಶ್ವದ ಹೆಚ್ಚಿನ ದೇಶಗಳಲ್ಲಿ ಅಪರಾಧವಾಗಿರುತ್ತದೆ. ಎಂಡಿಎಂಎ ನಿಷೇಧದ ಮೊದಲು, ಮನರಂಜನಾ ಬಳಕೆಯ ಜೊತೆಗೆ, ಮಾನಸಿಕ ಚಿಕಿತ್ಸೆಯಲ್ಲಿ ಸಹಾಯಕವಾಗಿ ಸಕ್ರಿಯವಾಗಿ ಬಳಸಲಾಗುತ್ತಿತ್ತು.